ಶ್ರಮಿಕ ವರ್ಗಕ್ಕೆ ನ್ಯಾಯ ಕೊಡಿಸಲು ಬದುಕನ್ನೇ ಮುಡುಪಾಗಿಸಿದ ಹಿರಿಯ ನ್ಯಾಯವಾದಿ ಕೆ.ಸುಬ್ಬರಾವ್ ಇನ್ನಿಲ್ಲ

ಹಿರಿಯ ನ್ಯಾಯವಾದಿ ಕೆ. ಸುಬ್ಬರಾವ್ ಅವರು ಇಂದು ಬೆಳಿಗ್ಗೆ 6.30ಕ್ಕೆ ನಿಧನರಾದರು ಅವರಿಗೆ 92 ವರ್ಷ ವಯಸ್ಸಾಗಿತ್ತು. ಅವರು ಕರ್ನಾಟಕ ಕಂಡ ಶ್ರೇಷ್ಟ ನ್ಯಾಯವಾದಿಗಳಲ್ಲೊಬ್ಬರೂ, ಬದುಕಿನುದ್ದಕ್ಕೂ ಕಾರ್ಮಿಕರ ಹಿತಕ್ಕೆ ಬದ್ಧರಾಗಿ ಲಕ್ಷಾಂತರ ಕಾರ್ಮಿಕರ ಹಕ್ಕುಗಳನ್ನು, ಬದುಕನ್ನು ನ್ಯಾಯಾಲಯದ ಒಳಗೂ ,ಹೊರಗೂ ಸಂರಕ್ಷಿಸಲು ಅರವತ್ತು ವರ್ಷಗಳಷ್ಡು ಸುದೀರ್ಘ ಕಾಲ ಹಗಲಿರುಳೂ ಶ್ರಮಿಸಿದ ಅಪರೂಪದ ಹಿರಿಯ ನ್ಯಾಯವಾದಿಗಳಾಗಿದ್ದರು.

ಅವರು ಹೆಂಡತಿ ಶ್ರೀಮತಿ ಸುಶೀಲರಾವ್ ಹಾಗೂ ಮಗಳು ಶ್ರೀಮತಿ ಮಾಯರಾವ್ ಹಾಗೂ ಅಪಾರ ಬಂಧು ಮತ್ತು ಬಳಗವನ್ನು ಆಗಲಿದ್ದಾರೆ.   ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಮಣಿಲ ಗ್ರಾಮದ ಕುಟುಂಬದಲ್ಲಿ 1931 ಜೂನ್ 15 ರಂದು ಕಡಂದೇಲು ಗಣೇಶ್‌ರಾವ್ ಮತ್ತು ಕಡಂದೇಲು ಸರಸ್ವತಿ ಯವರ ಸುಪುತ್ರನಾಗಿ ಸುಬ್ಬರಾವ್ ಜನಿಸಿದರು.   ಸ್ವಗ್ರಾಮದ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಗಡಿಯಲ್ಲಿರುವ ನಿಲೇಶ್ವರದ ಹೈಸ್ಕೂಲು, ಮಂಗಳೂರು, ಮದ್ರಾಸ್, ಪೂನಾದಲ್ಲಿ ಕಾನೂನು ಪದವಿ ಹೀಗೆ ವ್ಯಾಸಂಗ ನಡೆಸಿದರು.

ಕಲಿಕೆಯ ಚಲನೆಯಲ್ಲಿ ಲೋಕಜ್ಞಾನದ ಕಣಜ ತುಂಬಿದ ಮಾನವೀಯತೆ ಅವರದಾಗಿತ್ತು. ಅಸಮಾನತೆಯನ್ನು ತೊಲಗಿಸುವ ತುಡಿತ ಹೊಂದಿದ್ದ ಸಾರ್ಥಕತೆಯ ಬದುಕು ಅವರದಾಗಿತ್ತು. ತಾತ್ವಿಕವಾಗಿ ಮಾರ್ಕ್ಸ್ ವಾದದ ಮೇರು ವ್ಯಕ್ತಿತ್ವ ಹೊಂದಿದ್ದರು.

ಉನ್ನತ ವ್ಯಾಸಂಗ, ಕಾನೂನಿನ ಅಧ್ಯಯನ…. ವ್ಯವಸ್ಥೆಯ ವಾಸ್ತವಗಳನ್ನು ಮತ್ತಷ್ಟು ಮನಗಾಣಿಸಿ ಸಮಾಜದ ಬದಲಾವಣೆಗೆ ಹೋರಾಟದ ಹಾದಿಯನ್ನು ತೋರಿದವು. ನ್ಯಾಯಶಾಸ್ತ್ರದಲ್ಲಿ ಕಲಿತು ವಕೀಲನಾಗಬೇಕೆಂಬ ನಿರ್ಧಾರದಿಂದಾಗಿ ನಾಡು ಒಬ್ಬ ಅತ್ಯುತ್ತಮ ನ್ಯಾಯವಾದಿಯನ್ನು ಪಡೆಯಿತು.

ಪೂನಾದಲ್ಲಿ ಕಲಿಯುವಾಗಲೇ ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾಗುವ ಮೂಲಕ ಸಹಜ ನಾಯಕನಾಗಿ ಹೊರಹೊಮ್ಮಿದ್ದರು. ಆಗಲೇ ಭಾರತದ ಶ್ರೇಷ್ಟ ನಾಯಕರಲ್ಲೊಬ್ಬರಾದ, ಭಾರತದ ಪ್ರಥಮ ವಿರೋಧ ಪಕ್ಷದ ನಾಯಕರೂ ಆಗಿದ್ದ ಎ.ಕೆ. ಗೋಪಾಲನ್ ರವರನ್ನು ಆಹ್ವಾನಿಸಿ ಸಾಮಾಜಿಕ ಚಿಂತನೆಯನ್ನು ಪ್ರದರ್ಶಿಸಿದ್ದರು.

1958 ಜನವರಿ 30 ರಂದು ಕೇರಳದ ತಲ್ಲಿಶ್ಶೇರಿಯಲ್ಲಿ ಸುಶೀಲ ಅವರನ್ನು ಉಪ ನೊಂದಾವಣಾ ಕಛೇರಿಯಲ್ಲಿ ಸರಳ ವಿವಾಹವಾಗಿ ಮಾದರಿಯಾದರು. ಕುಟುಂಬದಲ್ಲಿನ ಜೀವನ, ವೃತ್ತಿ-ಪ್ರವೃತ್ತಿಗಳಿಗೆ ಸಹಮತ, ಸಹಬಾಳ್ವೆ ಉಲ್ಲೇಖನೀಯವಾಗಿದ್ದರು.

ಜೂನ್ 4, 1956 ರಂದು ಬೆಂಗಳೂರು ಬಾರ್ ಕೌನ್ಸಿಲ್ ಗೆ ಆಯ್ಕೆಯಾಗಿ ಬಳಿಕ ಕರ್ನಾಟಕ ಉಚ್ಛ ನ್ಯಾಯಾಲಯಕ್ಕೆ 1999 ರಲ್ಲಿ ನಿಯೋಜಿತ ಹಿರಿಯ ನ್ಯಾಯವಾದಿಗಳೆಂದು ನೇಮಕವಾದರು.  ಹಿರಿಯ ಸ್ವಾತಂತ್ರ್ಯ ಹೋರಾಟಗಾರರೂ ಕಾರ್ಮಿಕ ಮುಖಂಡರೂ ಆದ ಎನ್.ಎಲ್.ಉಪಾಧ್ಯಾಯರು, ಎಸ್. ಸೂರ್ಯನಾರಾಯಣ ರಾವ್, ಎಂ.ಎಸ್. ಕೃಷ್ಣನ್, ಎಂ.ಸಿ.ನರಸಿಹನ್ ರವರ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ಹೋರಾಟ ಮಾಡಿ ಬಿಡುಗಡೆಗೊಳಿಸಿ ಸ್ವಾತಂತ್ರ್ಯ ಕಾಲದ ಸಾರ್ವಜನಿಕ ನ್ಯಾಯದ ಮಾದರಿಯನ್ನು ಮುಂದುವರಿಸಿದರು.

1975ರಲ್ಲಿ ಆಂತರಿಕ ತುರ್ತು ಪರಿಸ್ಥಿತಿ ಹೇರಿದ ಸರ್ವಾಧಿಕಾರದ ವಿರುದ್ಧವೂ ಪ್ರಜಾಪ್ರಭುತ್ವದ ಉಳಿವಿಗಾಗಿ ನ್ಯಾಯಾಂಗ ಹೋರಾಟವನ್ನು ಮುನ್ನಡೆಸಿದ ಅವರು 1975 ರ ತುರ್ತುಸ್ಥಿತಿಯಲ್ಲಿ ಹಿರಿಯ ಹೋರಾಟಗಾರರು ನಿಗೂಢವಾಗಿ ಬಂಧನಕ್ಕೊಳಗಾಗಿದ್ದಾಗ ಹೇಬಿಯೆಸ್ ಕಾರ್ಪಸ್ ಮೂಲಕ ಪ್ರಕರಣವನ್ನು ಬಯಲಿಗೆಳೆದರು. ನ್ಯಾಯಾಂಗದ ಒಳಗೆ, ಹೊರಗೆ ಕ್ರಿಯಾಶೀಲರಾಗಿ ಶ್ರಮಿಕರ ಪ್ರಾಣಮಿತ್ರನಾದರು.

ಪರಿಣಾಮವಾಗಿ 1964 ರಲ್ಲಿ ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ ಕಾರ್ಮಿಕರ ಸಂಘದ ಕಾನೂನು ಸಲಹೆಗಾರರಾಗಿ, ನಂತರ ಹೆಚ್.ಎಂ.ಟಿ, ಬಿ.ಇ.ಎಲ್, ಎಚ್.ಎ.ಎಲ್, ಐ.ಟಿ.ಐ ನಂತಹ ಬೃಹತ್ ಸಾರ್ವಜನಿಕ ಉದ್ದಿಮೆಗಳ ಕಾರ್ಮಿಕರಿಗೆ ನೆರವಾದರು. ಇಂಡಿಯನ್ ಕಾಫಿ ವರ್ಕರ್ಸ್ ಕೋ-ಆಪರೇಟಿವ್ ಯೂನಿಯನ್, ಮೈಸೂರು ಕಮರ್ಷಿಯಲ್ ಎಂಪ್ಲಾಯಿಸ್ ಯೂನಿಯನ್, ಬಿನ್ನಿಮಿಲ್ ಕಾರ್ಮಿಕರ ಸಂಘ, ವೆಸ್ಟ್ ಕೋಸ್ಟ್ ಪೇಪರ್ ಮಿಲ್ಸ್ ಅಸೋಶಿಯೇಶನ್ ಅಧ್ಯಕ್ಷರಾಗಿ ನೇತೃತ್ವ ನೀಡಿದ್ದರು.

ಹಲವಾರು ಕಿರಿಯ ನ್ಯಾಯವಾದಿಗಳಿಗೆ ಸೂಕ್ತ ಮಾರ್ಗದರ್ಶನ, ತರಬೇತಿ ನೀಡಿ ಬೆಳೆಸಿದ್ದಾರೆ. ಅಂತಹ ತಂಡದಲ್ಲಿದ್ದ ವಿ.ಗೋಪಾಲಗೌಡ ರಂಥವರು ಭಾರತದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿಯೂ ಬೆಳೆದು ಅನುಪಮ ಸೇವೆ ಸಲ್ಲಿಸಿರುವುದು ಗಮನಾರ್ಹ. ಅವರ ಬಳಿ ತರಬೇತಿ ಪಡೆದ ಹಲವರು ಸುಪ್ರೀಂ ಕೋರ್ಟಿನ ವರೆಗೆ ವಿವಿಧ ಕೋರ್ಟುಗಳಲ್ಲಿ ನ್ಯಾಯಾಧೀಶರಾದರೂ, ಸುಬ್ಬರಾವ್ ಅವರು ನ್ಯಾಯವಾದಿಗಳಾಗಿ ಉಳಿಯುವ ನಿರ್ಧಾರ ಕೈಗೊಂಡಿದ್ದರು.

ಅವರು ಅಮೇರಿಕಾ, ಚೀನಾ, ಜಪಾನ್, ಹಾಗೂ ಭಾರತದ ವಿಸ್ತೃತ ಪ್ರವಾಸದಿಂದ ಅಪಾರ ಅನುಭವಗಳನ್ನು, ಜಾಗತಿಕ ವ್ಯಾಪ್ತಿಯ ಒಳನೋಟಗಳನ್ನು ಪಡೆದು 1986 ರಲ್ಲಿ ನ್ಯೂಯಾರ್ಕ್ ನಲ್ಲಿ ನಡೆದ ‘ಅಂತರಾಷ್ಟ್ರೀಯ ಕಾನೂನು ಸಮ್ಮೇಳನ’ದಲ್ಲಿ ಭಾರತವನ್ನು ಪ್ರತಿನಿಧಿಸಿ ಭಾಗವಹಿಸಿದ್ದರು.

ಕಾಸರಗೋಡಿನ ಗ್ರಾಮವೊಂದರಲ್ಲಿ ಕನ್ನಡ ಶಾಲೆ ಸ್ಥಾಪಿಸಿ ಕನ್ನಡ ಭಾಷೆಯ ಬೆಳವಣಿಗೆಗೆ ಕೊಡುಗೆ ನೀಡಿದ್ದಾರೆ ಅಲ್ಲಿಯೇ ಸಾಮಾಜಿಕ ಬದಲಾವಣೆಯ ಕೇಂದ್ರವನ್ನು ಸ್ಥಾಪಿಸಲು ಅವರ ಇಳಿವಯಸ್ಸಿನಲ್ಲೂ ತೋರುತ್ತಿರುವ ಆಸಕ್ತಿ ದಲಿತ, ಆದಿವಾಸಿ, ಹಿಂದುಳಿದ, ಅಲ್ಪ ಸಂಖ್ಯಾತ ಸಮುದಾಯಗಳ ಬಗ್ಗೆ ಇರುವ ಅವರು ಕಾಳಜಿಯ ದ್ಯೋತಕ. ಅದಕ್ಕಾಗಿ ತಮ್ಮ ಭೂಮಿಯನ್ನು ದಾನ ಮಾಡಿ ,ಟ್ರಸ್ಟ್ ಒಂದನ್ನು ಸ್ಥಾಪಿಸಿ ಮಾದರಿಯಾಗಿದ್ದಾರೆ.

ತಮ್ಮ ಜೀವನದ ಅಮೂಲ್ಯ ಸಮಯ, ಸಂಪನ್ಮೂಲಗಳನ್ನು ಜನತೆಗಾಗಿ ಸಮರ್ಪಿಸಿದ, ಮಾದರಿ ವ್ಯಕ್ತಿತ್ವದ ಹಿರಿಯ ಚೇತನವಾಗಿರುವ ಅವರು ‘ಅಖಿಲ ಭಾರತ ವಕೀಲರ ಸಂಘ’ (ಎ.ಐ.ಎಲ್.ಯು) ಕರ್ನಾಟಕ ಘಟಕದ ಸಂಸ್ಥಾಪಕ ಅಧ್ಯಕ್ಷರಾಗಿದ್ದರು. AILU ಕರ್ನಾಟಕ ರಾಜ್ಯ ಸಮಿತಿಯಲ್ಲಿ ಎರಡು ಅವಧಿಗೆ ಗೌರವಾಧ್ಯಕ್ಷರಾಗಿಯೂ ವಕೀಲರನ್ನು ಸಂಘಟಿಸುವಲ್ಲಿ ಹಾಗೂ ವಕೀಲರನ್ನು ಸಮಾಜಮುಖಿಯಾಗಿಸುವಲ್ಲಿ ಕೊಡುಗೆ ನೀಡಿದ್ದಾರೆ.

ಅವರು ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ 17ನೆಯ ಸಿಐಟಿಯು ಅಖಿಲ ಭಾರತ ಸಮ್ಮೇಳನದ ಸ್ವಾಗತ ಸಮಿತಿಯ ಗೌರವ ಅಧ್ಯಕ್ಷರಾಗಿ ಸಮ್ಮೇಳನದ ಸ್ವಾಗತ ಭಾಷಣ ಮಾಡಿದ್ದರು.

ನಿರಂತರ ಪರಿಶ್ರಮ, ವಯೋಸಹಜ ಕಾಯಿಲೆಗಳಿಂದ ಅನಾರೋಗ್ಯ ಪೀಡಿತರಾದರೂ ಇಂದಿಗೂ ಶ್ರಮಿಕರ, ಜನಸಾಮಾನ್ಯರ ಪರವಾಗಿ ಸದಾ ಕ್ರಿಯಾಶೀಲರಾಗಿ ಮುಂದಡಿ ಇಡುತ್ತಿರುವ ಅವರ ಬದ್ಧತೆ, ಹೋರಾಟದ ಚೈತನ್ಯ ಅತ್ಯಂತ ಸ್ಫೂರ್ತಿದಾಯಕವಾಗಿತ್ತು.

ಸಿಐಟಿಯು ರಾಜ್ಯ ಪ್ರಧಾನ‌ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ಮತ್ತು ಇತರ ಕಾರ್ಮಿಕ ಮುಖಂಡರು ಅಗಲಿದ ಕೆ.ಸುಬ್ಬರಾವ್ ಅವರ ಮನೆಗೆ ತೆರಳಿ ಗೌರವ ನಮನ‌ ಸಲ್ಲಿಸಿದರು.

ಕಾರ್ಮಿಕ ವರ್ಗಕ್ಕಾಗಿ ಅವಿರತವಾಗಿ ಶ್ರಮಿಸಿದ ಹಿರಿಯ ಚೇತನ ಕೆ.ಸುಬ್ಬರಾವ್‌ ಅವರ ನಿಧನಕ್ಕೆ ಸಿಐಟಿಯು ಕರ್ನಾಟಕ ರಾಜ್ಯ ಸಮಿತಿಯು ಶ್ರದ್ಧಾಂಜಲಿ ಸಲ್ಲಿಸಿದೆ.

 

 

Donate Janashakthi Media

Leave a Reply

Your email address will not be published. Required fields are marked *