ಬೆಂಗಳೂರು: ಕರ್ನಾಟಕಕ್ಕೆ ಒಂದು ದಿನದ ಮಟ್ಟಿಗೆ ಪ್ರವಾಸ ಕೈಗೊಂಡಿರುವ ತೆಲಂಗಾಣ ಮುಖ್ಯಮಂತ್ರಿ ಮತ್ತು ತೆಲಂಗಾಣ ರಾಷ್ಟ್ರೀಯ ಸಮಿತಿ(ಟಿಆರ್ಎಸ್) ಅಧ್ಯಕ್ಷ ಕೆ ಚಂದ್ರಶೇಖರ್ ರಾವ್ ಇಂದು (ಮೇ 26) ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರನ್ನು ಭೇಟಿಯಾಗಿದ್ದಾರೆ.
ಪದ್ಮನಾಭ ನಗರದಲ್ಲಿರುವ ಜೆಡಿಎಸ್ ಪಕ್ಷದ ರಾಷ್ಟ್ರೀಯ ನಾಯಕ ಹೆಚ್.ಡಿ. ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿದ್ದಾರೆ. ಸುಮಾರು ಎರಡೂವರೆ ಗಂಟೆಗಳಿಗೂ ಹೆಚ್ಚು ಕಾಲ ಇಬ್ಬರು ನಾಯಕರು ಚರ್ಚೆ ನಡೆಸಿದರು.
ಈ ವೇಳೆ ಪ್ರಸಕ್ತ ರಾಜಕೀಯ ವಿದ್ಯಮಾನಗಳು ಮತ್ತು ಮುಂಬರುವ ಸಾರ್ವತ್ರಿಕ ಚುನಾವಣೆಗಳ ಬಗ್ಗೆ ಹಾಗೂ ಬಿಜೆಪಿ ಪಕ್ಷವನ್ನು ಅಧಿಕಾರದಿಂದ ದೂರವಿಡುವ ಕುರಿತು ಕೈಗೊಳ್ಳಬೇಕಾದ ರಾಜಕೀಯ ಕಾರ್ಯಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ.
ಕೆ. ಚಂದ್ರಶೇಖರರಾವ್ ಟಿಆರ್ಎಸ್ ಪಕ್ಷದ ಹಿರಿಯ ನಾಯಕರು ಮತ್ತು ಸಚಿವರೊಂದಿಗೆ ಬೆಂಗಳೂರಿಗೆ ಆಗಮಿಸಿದ್ದರು. ರಾಷ್ಟ್ರೀಯ ರಾಜಕೀಯ, ದೇಶಕ್ಕೆ ಪರ್ಯಾಯ ಅಜೆಂಡಾ ಮತ್ತು ಮುಂಬರುವ ರಾಷ್ಟ್ರಪತಿ ಚುನಾವಣೆ ಕುರಿತು ಜೆಡಿಎಸ್ ನೊಂದಿಗೆ ಚರ್ಚೆಸಲು ಆಗಮಿಸಿದ್ದರು.
ಬಿಜೆಪಿ ಪಕ್ಷವು ಹಲವು ರಾಜ್ಯಗಳಲ್ಲಿ ತನ್ನ ಅನೈತಿಕ ಕಾರ್ಯತಂತ್ರಗಳನ್ನು ಹೆಣೆಯುವ ಮೂಲಕ ಅಧಿಕಾರದ ಲಾಲಸೆಗೆ ಗಂಟು ಬಿದ್ದು, ಪ್ರತಿಪಕ್ಷಗಳ ಮೇಲೆ ದಾಳಿ ಮಾಡುತ್ತಿವೆ. ಎಂದು ತೆಲಂಗಾಣ ರಾಷ್ಟ್ರ ಸಮಿತಿ ಮೂಲಗಳು ತಿಳಿಸಿವೆ.
ಈ ಬಗ್ಗೆ ಚಂದ್ರಶೇಖರ್ ರಾವ್ ಅವರು, ದೇಶದ ಆರ್ಥಿಕ ವ್ಯವಸ್ಥೆ ಹದಗೆಟ್ಟಿದೆ. ಇವತ್ತಿಗೂ ಹಲವು ಸಮಸ್ಯೆ ಬಗ್ಗೆ ಚರ್ಚೆಯಾಗಿಲ್ಲ. ಈ ಬಗ್ಗೆ ಚರ್ಚೆ ಮಾಡಲಾಗಿದೆ. ದೇಶದಲ್ಲಿ ರೈತರು, ದಲಿತರು, ಆದಿವಾಸಿಗಳು ಕಷ್ಟದಲ್ಲಿ ಇದ್ದಾರೆ. ಭರವಸೆಗಳನ್ನ ಸಾಕಷ್ಟು ಕೊಡಬಹುದು. ಆದರೆ ಯಾವ ಕ್ರಮ ತೆಗೆದುಕೊಳ್ಳಲಾಗಿದೆ ಅನ್ನುವುದು ಮುಖ್ಯ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.
ಕಾಂಗ್ರೆಸ್-ಬಿಜೆಪಿ ಸರ್ಕಾರ ಮಾಡೋದು ಮುಖ್ಯ ಅಲ್ಲ. ಉಜ್ವಲ ಭಾರತ ಆಗೋದು ನಮಗೆ ಮುಖ್ಯ. ಈ ನಿಟ್ಟಿನಲ್ಲಿ ನಾವು ಕೆಲಸ ಮಾಡ್ತಿದ್ದೇವೆ. ಮಾಧ್ಯಮಗಳು ಈ ನಿಟ್ಟಿನಲ್ಲಿ ನಮ್ಮ ಜೊತೆ ಸಹಕಾರ ಕೊಡಿ ಎಂದಿದ್ದಾರೆ.
ಕಳೆದ ವಾರ ಕೆ. ಚಂದ್ರಶೇಖರರಾವ್ ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಭೇಟಿಯಾಗಿ ಬಿಜೆಪಿ ವಿರುದ್ಧ ಒಗ್ಗಟ್ಟಿನ ಹೋರಾಟದ ಅಗತ್ಯತೆಯ ಬಗ್ಗೆ ಚರ್ಚಿಸಿದ್ದರು. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜೊತೆ ದೆಹಲಿ ಮತ್ತು ಚಂಡೀಗಢದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು.
ಕರ್ನಾಟಕ ಪ್ರವಾದ ನಂತರ, ಕೆ. ಚಂದ್ರಶೇಖರ್ರಾವ್ ಮಹಾರಾಷ್ಟ್ರಕ್ಕೆ ತೆರಳುವರು. ಮೇ 29ರಂದು ಮಹಾರಾಷ್ಟ್ರ ಪ್ರವಾಸದಿಂದ ಹಿಂದಿರುಗಿದ ನಂತರ ಬಿಹಾರ ಮತ್ತು ಪಶ್ಚಿಮ ಬಂಗಾಳ ಪ್ರವಾಸ ಮಾಡಲಿದ್ದಾರೆ.