“ಜ್ಯೋತಿ ಬಸು” ಕೇವಲ ಹೆಸರಲ್ಲ ಇದೊಂದು ವಿದ್ಯಮಾನ

ಎಚ್.ಆರ್.ನವೀನ್‌ಕುಮಾರ್, ಹಾಸನ

ಜ್ಯೋತಿಬಸುರವರು ಇಂದಿಗೆ 107 ವರ್ಷಗಳನ್ನ ಪೂರೈಸಿದ್ದಾರೆ. 8 ಜುಲೈ 1914ರಂದು ಜನಿಸಿದ ಇವರು ದೇಶ ಕಂಡ ಅಪರೂಪದ ಮುತ್ಸದ್ಧಿ ರಾಜಕಾರಣಿ. ಅಪ್ರತಿಮ ಕಮ್ಯೂನಿಸ್ಟ್, ದೇಶದಲ್ಲಿ ದುಡಿಯುವ ವರ್ಗದ ಕಮ್ಯೂನಿಸ್ಟ್ ಚಳುವಳಿಯನ್ನು ಕಟ್ಟುವಲ್ಲಿ ಇವರ ಕೊಡುಗೆ ಅಪಾರ. ಇವರು ಪಶ್ಚಿಮ ಬಂಗಾಳದಲ್ಲಿ ದೀರ್ಘಕಾಲ (23 ವರ್ಷ) ಎಡರಂಗ ಸರ್ಕಾರದ ನೇತೃತ್ವದಲ್ಲಿ ಮುಖ್ಯಮಂತ್ರಿಗಳಾಗಿ ದೇಶಕ್ಕೆ ಮಾದರಿಯಾಗುವಂತ ಕೆಲಸಗಳನ್ನು ಮಾಡಿದ್ದಾರೆ. ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಸ್ಥಾಪನೆಯ ನವರತ್ನಗಳಲ್ಲಿ ಇವರೂ ಒಬ್ಬರು.

ಜ್ಯೋತಿಬಸು ಎಂಬ ಹೆಸರು ನಮ್ಮ ಸಮಕಾಲೀನ ಭಾರತದಲ್ಲಿ ಒಬ್ಬ ವ್ಯಕ್ತಿಯನ್ನು ಸೂಚಿಸುವುದಕ್ಕಿಂತಲೂ ಒಂದು ವಿದ್ಯಮಾನವನ್ನು ಸಂಕೇತಿಸುತ್ತದೆ ಎಂದೇ ಹೇಳಬೇಕು. ಹೌದು, ಜ್ಯೋತಿಬಸು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)ದ ಒಬ್ಬ ನೇತಾರರಾಗಿ ಒಂದು ವಿದ್ಯಮಾನವನ್ನೇ ಧ್ವನಿಸುತ್ತಿದ್ದರು. ಪವಾಡವನ್ನು ಧಿಕ್ಕರಿಸಿದ ಪವಾಡ ಸದೃಶವಾದ ವ್ಯಕ್ತಿತ್ವ ಅವರದು. ಅವರು ಸಮಕಾಲೀನ ಭಾರತದ, ಅದರಲ್ಲಿಯೂ ವಿಶೇಷವಾಗಿ, ಭಾರತದ ಉಳಿದ ಭಾಗಗಳಿಗಿಂತಲೂ ಯಾವಾಗಲೂ ಐವತ್ತು ವರ್ಷಗಳಷ್ಟು ಮುಂದಿರುವ ಪಶ್ಚಿಮ ಬಂಗಾಳದ ಮನೆಮಾತಾಗಿರುವುದು ಸೋಜಿಗವಾದರೂ ಸತ್ಯಸ್ಯಸತ್ಯ. ಇಡೀ ಪ್ರಪಂಚದಾದ್ಯಂತ ಸಮಾಜವಾದಿ ವ್ಯವಸ್ಥೆಗೆ ಅಪೂರ್ವ ಹಿನ್ನಡೆ ಉಂಟಾದಾಗಲೂ ಸಮಸ್ತ ಬಂಗಾಲಿಗರು ಕಮ್ಯುನಿಸ್ಟ್ ತತ್ವ ಮತ್ತು ವ್ಯವಸ್ಥೆಯಲ್ಲಿ ವಿಶ್ವಾಸ ಕಳೆದುಕೊಳ್ಳದಂತೆ ಬಹು ಜಾಗರೂಕತೆಯಿಂದ ಮುನ್ನಡೆಸಿದ ಧೀಮಂತ ನಾಯಕರು, ಬಸು.

“ಭಾರತದ ರಾಜಕೀಯ ಚರಿತ್ರೆಯಲ್ಲಿ ಜ್ಯೋತಿಬಸು ತಮ್ಮಷ್ಟಕ್ಕೆ ತಾವು ಒಂದು ವಿಶಿಷ್ಟ ವಿದ್ಯಮಾನ. ಯಾವೊಬ್ಬ ಮಾರ್ಕ್ಸ್‌ವಾದಿ ಮುಖಂಡರೂ ಇಷ್ಟು ದೀರ್ಘ ಕಾಲ ಅಧಿಕಾರದ ತುದಿಯಲ್ಲಿದ್ದ ಉದಾಹರಣೆಯಿಲ್ಲ. ಇದಕ್ಕೆ ಹಲವಾರು ಕಾರಣಗಳುಂಟು. ಅದರಲ್ಲಿ ಬಹುಮುಖ್ಯವಾದುದ್ದೆಂದರೆ, ಅವರು ಬದಲಾಗುವ ವಾಸ್ತವಗಳ ಹೊಳಹೊಕ್ಕು, ಆಂತರ್ಯ ಅರಿತು, ಪರಿಸ್ಥಿತಿ-ಪರಿಸರಕ್ಕೆ ತಕ್ಕಂತೆ ಪರಿವರ್ತನಶೀಲತೆಯನ್ನು ಮೈಗೂಡಿಸಿಕೊಳ್ಳುವ ಕಲೆಯನ್ನು ಕರಗತ ಮಾಡಿಕೊಂಡದ್ದು; ಪ್ರತಿಯೊಂದು ಅನುಭವದಿಂದಲೂ ಹೊಸ ಪಾಠ ಕಲಿತದ್ದು.”

ತಮ್ಮ ಅಧಿಕೃತ ಜೀವನ ಚರಿತ್ರೆಯಲ್ಲಿ ಜ್ಯೋತಿಬಸು ಮಾರ್ಕ್ಸ್‌ವಾದ ಮತ್ತು ಕಾರ್ಲ್‌ಮಾರ್ಕ್ಸ್‌ ಕುರಿತು ಹೀಗೆ ಹೇಳಿದ್ದಾರೆ “ನನ್ನ ದೃಷ್ಟಿಯಲ್ಲಿ ಮಾರ್ಕ್ಸ್‌ವಾದ ಕಂದಾಚಾರದ ಒಂದು ಕಂತೆಯಲ್ಲ. ಮಾರ್ಕ್ಸ್‌ವಾದಿಗಳಾದ ನಾವು ಮಾರ್ಕ್ಸ್‌ನನ್ನು ದೈವೀಕರಿಸಬಾರದು. ಅವನನ್ನು ಅಟ್ಟದ ಮೇಲಿಟ್ಟು ಆರಾಧಿಸಬಾರದು. ಅವನೊಬ್ಬ ಮಹಾಮಾನವ, ಅಪ್ರತಿಮ ಪ್ರತಿಭಾವಂತ, ಬಂಡವಾಳಶಾಹಿ ಸಮಾಜದ ಪ್ರಧಾನ ನಿಯಮಗಳನ್ನು ಸೂತ್ರೀಕರಿಸಿದ ಮೇಧಾವಿ. ಆದರೆ ಆತನ ನಿರೀಕ್ಷಣೆಗೆ ದಕ್ಕಿದ್ದು ಇವತ್ತಿನಷ್ಟು ಪ್ರಬುದ್ಧವಾದ ಬಂಡವಾಳಶಾಹಿ ವ್ಯವಸ್ಥೆಯಲ್ಲ. ಆಗಿನ್ನೂ ಅದು ಅಪಕ್ವ ಸ್ಥಿತಿಯಲ್ಲಿತ್ತು. ಆದರೂ ಆತನೊಬ್ಬ ದೇವನಲ್ಲ, ಮೇಲಾಗಿ, ತನ್ನನ್ನು ಯಾರೂ ಪ್ರಶ್ನಿಸದೆ ಮನ್ನಣೆ ನೀಡಬೇಕೆಂದು ಬಯಸುತ್ತಿದ್ದ ನಿರಂಕುಶ ಬುದ್ಧಿಜೀವಿಯೂ ಅಲ್ಲ. ಸಮಕಾಲೀನ ವಾಸ್ತವದ ಪರಿಸ್ಥಿತಿ, ಪರಿಸರಗಳನ್ನು ಗಮನಿಸದೆ, ಮಾರ್ಕ್ಸ್‌ನ ಸಿದ್ದಾಂತಗಳನ್ನು ಯಾಂತ್ರಿಕವಾಗಿ ಓದುವ, ಅನ್ವಯಿಸುವ ಕೆಲಸ ಮಾರ್ಕ್ಸ್‌ವಾದಕ್ಕೆ ಅಪಚಾರ ಬಗೆದಂತೆಯೇ ಸರಿ… ನಮಗೆ ಎದುರಾಗುವ ಸಮಕಾಲೀನ ಸಮಸ್ಯೆಗಳಿಗೆ ಮಾರ್ಕ್ಸ್‌ನ ವಿಧಾನಗಳಾದ ಚಾರಿತ್ರಿಕ ಭೌತವಾದ ಮತ್ತು ಗತಿತಾರ್ಕಿಕ ಭೌತವಾದದ ವಿಧಾನಗಳನ್ನು ತುಂಬಾ ಸೃಜನಶೀಲತೆಯಿಂದ ಅರ್ಥಪೂರ್ಣವಾಗಿ ಅನ್ವಯಿಸಿ ಆಚರಿಸಲು ಯತ್ನಿಸಬೇಕು. ಈ ಮೂಲಕ ಹೊಸ ಹೊಸ ವೈಜ್ಞಾನಿಕ ಒಲವು ನಿಲುವುಗಳನ್ನು ಸಂಸ್ಥಾಪಿಸಬೇಕು. ಸ್ವತಃ ಕಾರ್ಲ್ ಮಾರ್ಕ್ಸ್ ಮುಂಗಾಣದ ಅನೇಕ ಸಂಗತಿಗಳು ಇಂದು ಕಾಣಿಸಿಕೊಂಡಿವೆ. ಅಂಥ ಹೊಸ ಹೊಸ ಬೆಳವಣಿಗೆಗಳ ಸಂದರ್ಭದಲ್ಲಿ ಎದುರಾಗುವ ಮೂರ್ತ ಸಮಸ್ಯೆಗಳಿಗೆ ಮಾರ್ಕ್ಸ್‌ವಾದವನ್ನು ಅತ್ಯಂತ ಸೃಜನಶೀಲತೆಯೊಂದಿಗೆ ಅನ್ವಯಿಸಬೇಕಾಗಿದೆ. ಆದರೆ ಹಾಗೆ ಮಾಡುವಾಗ ಮಾರ್ಕ್ಸ್‌ನ ಚಿಂತನೆಯ ಮೂಲ ಬೇರಿಗೆ ಎರವಾಗದಂತೆ ಎಚ್ಚರಿಕೆವಹಿಸಬೇಕು. ಸೃಜನಶೀಲ ಅನ್ವಯದ ನೆಪದಲ್ಲಿ ಪರಿಷ್ಕರಣವಾದಕ್ಕೆ ಅವಕಾಶ ನೀಡಬಾರದು.”

ಜ್ಯೋತಿಬಸು ಅವರ ಜೀವನ ಚರಿತ್ರೆಯನ್ನ ಕನ್ನಡಿಗರಿಗೆ ಪರಿಚಯಿಸಲೆಂದು ‘ಚಿಂತನ ಪುಸ್ತಕ’ ಸುರಭಿ ಬ್ಯಾನರ್ಜಿಯವರು ಇಂಗ್ಲೀಷ್‌ನಲ್ಲಿ ಬರೆದಿರುವ “ಜ್ಯೋತಿಬಸು ಅಧಿಕೃತ ಜೀವನ ಚರಿತ್ರೆ” ಪುಸ್ತಕವನ್ನು ಕನ್ನಡದಲ್ಲಿ ಪ್ರಕಟಿಸಿದೆ. ಇದನ್ನು ರಾಹು ಅತ್ಯಂತ ಸುಂದರವಾಗಿ ಕನ್ನಡೀಕರಿಸಿದ್ದಾರೆ.

ಈ ಕೃತಿಗೆ ಮುನ್ನುಡಿಯನ್ನು ಬರೆದಿರುವ ನಾಡೋಜ ಪ್ರೊ. ಬರಗೂರು ರಾಮಚಂದ್ರಪ್ಪನವರು ಹೀಗೆ ಹೇಳುತ್ತಾರೆ. “ಜ್ಯೋತಿಬಸು ಅವರು ನಮ್ಮ ದೇಶದ ಸಂಸದೀಯ ಪ್ರಜಾಪ್ರಭುತ್ವದಲ್ಲಿ ವಿಶಿಷ್ಟ ವ್ಯಕ್ತಿತ್ವವಾಗಿ ಬೆಳೆದು ನಿಂತವರು. ಈ ಬಸು ಅವರ ಪಬುದ್ಧ ಬೆಳವಣಿಗೆಯನ್ನು ಸುರಭಿ ಬ್ಯಾನರ್ಜಿಯವರು ಈ ಪುಸ್ತಕದಲ್ಲಿ ಸಾರ್ಥಕ ರೀತಿಯಲ್ಲಿ ನಿರೂಪಿಸಿದ್ದಾರೆ. ಇಲ್ಲಿ ಜ್ಯೋತಿ ಬಸು ಅವರ ಬೆಳವಣಿಗೆಯಷ್ಟೇ ಇಲ್ಲ; ಭಾರತದ ಕಮ್ಯುನಿಸ್ಟ್ ಚಳುವಳಿಯ ಬೆಳವಣಿಗೆಯೂ ಹಿನ್ನೆಲೆಯಲ್ಲಿ ಹರಿಯುತ್ತದೆ. ಈ ಹರಿವಿನ ಮೇಲೆ ಜ್ಯೋತಿಬಸು ಅವರ ಹಾಯಿದೋಣಿ ಸಾಗುತ್ತದೆ…. ಜೀವನ ಚರಿತ್ರೆಯು ಸಂಬಂಧಪಟ್ಟ ವ್ಯಕ್ತಿಯ ಜೀವನ ಮತ್ತು ಆ ಕಾಲದ ಚರಿತ್ರೆ – ಎರಡನ್ನೂ ಒಳಗೊಂಡಿದ್ದರೆ ಉತ್ತಮವಾದ ಕೊಡುಗೆಯಾಗುತ್ತದೆ. ಯಾರ ಜೀವನ ಚರಿತೆಯನ್ನು ಬರೆಯಲಾಗುತ್ತಿದೆಯೋ ಅವರ ಕೌಟುಂಬಿಕ ಸನ್ನಿವೇಶದ ಜೊತೆಗೆ ಒಟ್ಟು ಸಾಮಾಜಿಕ ಸಂದರ್ಭವನ್ನು ಗ್ರಹಿಸಿ ಅರ್ಥೈಸಿಕೊಳ್ಳುವ ರಚನೆಗಳಲ್ಲಿ ಜೀವನವೂ ಇರುತ್ತದೆ; ಚರಿತ್ರೆಯೂ ಇರುತ್ತದೆ. ಇಂತಹ ಪ್ರಾಮಾಣಿಕ ಮತ್ತು ಪಕ್ವಗೊಂಡ ಪ್ರಯತ್ನವನ್ನು ಸುರಭಿ ಬ್ಯಾನರ್ಜಿಯವರು ಮಾಡಿದ್ದಾರೆ. ರಾಹು ಅವರು ಅಷ್ಟೇ ಪ್ರಾಮಾಣಿಕತೆಯಿಂದ ಕನ್ನಡಕ್ಕೆ ತಂದಿದ್ದಾರೆ. ಇಲ್ಲಿ ನಾನು ಪ್ರಾಮಾಣಿಕತೆಯೆಂಬ ಪದವನ್ನು ಪ್ರಶಂಸೆಯ ಒಂದು ವಿಶೇಷಣ ಮಾತವಾಗಿ ಬಳಸಿಲ್ಲ, ಜ್ಯೋತಿಬಸು ಅವರ ರಾಜಕೀಯ ಸಿದ್ದಾಂತದ ಸಮೀಪಕ್ಕೆ – ಸಾಧ್ಯವಾದರೆ ಒಳಗೆ ಪ್ರೀತಿಯಿಂದ ಪ್ರವೇಶಿಸಿದವರಿಗೆ ಮಾತ್ರ ಪ್ರಾಮಾಣಿಕತೆಯೆನ್ನುವುದು ಅದರ ಅರ್ಥಪೂರ್ಣತೆಯೊಂದಿಗೆ ಅನ್ವಯಿಸುತ್ತದೆ. ಜ್ಯೋತಿಬಸು ಅವರ ಜೀವನ ಚರಿತೆಯ ಓದು ನನಗಂತೂ ಉಪಯುಕ್ತವೆನಿಸಿದೆ. ಈ ಪುಸ್ತಕದ ಓದಿನಿಂದ ವ್ಯಕ್ತಿಗತವೊಂದರ ಪ್ರಬುದ್ಧ ಪರಿಚಯದ ಜೊತೆಗೆ ಅರ್ಥಪೂರ್ಣ ಸಂವಾದವೊಂದು ಸಾಧ್ಯವಾಗುತ್ತದೆ. ಇದು ಎಲ್ಲ ಎಡಪಂಥೀಯ ಹಾಗೂ ಪ್ರಗತಿಪರ ವಿಚಾರಧಾರೆಯವರು ಅನುಸಂಧಾನಿಸಲು ಯೋಗ್ಯವಾದ ಒಂದು ಕೃತಿಯಾಗಿದೆ.

Donate Janashakthi Media

Leave a Reply

Your email address will not be published. Required fields are marked *