ಮುಖ್ಯ ನ್ಯಾಯಮೂರ್ತಿಯಾಗಿ ಎನ್ ವಿ ರಮಣ: ರಾಷ್ಟ್ರಪತಿಗಳಿಂದ ಅಂಕಿತ

‌ನವ ದೆಹಲಿ: ಸುಪ್ರೀಂ ಕೋರ್ಟ್‌ನ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ಎನ್‌.ವಿ.ರಮಣ ಅವರ ನೇಮಕಕ್ಕೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ಅಂಕಿತ ಹಾಕಿದ್ದಾರೆ.

ಹಾಲಿ ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ಅವರು ಏಪ್ರಿಲ್ 23ರಂದು ನಿವೃತ್ತರಾಗಲಿದ್ದು, ರಮಣ ಅವರು ಏ.24ರಿಂದ ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಸಿಜೆಐಗಳನ್ನು ನೇಮಕ ಮಾಡುವಲ್ಲಿ ಸುಪ್ರೀಂ ಕೋರ್ಟ್ ಅನುಸರಿಸಿದ ಹಿರಿತನದ ಮಾನದಂಡಕ್ಕೆ ಅನುಗುಣವಾಗಿ ದೇಶದ ಅತ್ಯುನ್ನತ ನ್ಯಾಯಾಂಗ ಹುದ್ದೆ ಅಲಂಕರಿಸಲು ನ್ಯಾ. ರಮಣ ಅವರ ಹೆಸರನ್ನು ಈಗಿನ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಶಿಫಾರಸು ಮಾಡಿದ್ದರು.

ಇದನ್ನು ಓದಿ : ಚುನಾವಣಾ ಬಾಂಡ್ ಬಗ್ಗೆ ಸುಪ್ರಿಂ ಕೋರ್ಟ್: ವಾಸ್ತವ ಪ್ರಶ್ನೆಯಿಂದ ನುಣುಚಿಕೊಳ್ಳುವ ಕ್ರಮ

ಸುಪ್ರೀಂ ಕೋರ್ಟ್‌ನ 48ನೇ ಮುಖ್ಯ ನ್ಯಾಯಮೂರ್ತಿಯಾಗುವ ಎನ್‌.ವಿ. ರಮಣ ಅವರು 2014 ರ ಫೆಬ್ರವರಿ 17 ರಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು.

2022 ಆಗಸ್ಟ್‌ 26ರಂದು ನಿವೃತ್ತಿಯಾಗಲಿರುವ ನ್ಯಾ. ರಮಣ ಅವರು ಮುಖ್ಯ ನ್ಯಾಯಮೂರ್ತಿಗಳಾಗಿ 16 ತಿಂಗಳ ಕಾಲ ಸೇವೆ ಸಲ್ಲಿಸಲಿದ್ದಾರೆ. ಅತಿ ದೀರ್ಘಕಾಲ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಳ್ಳುವ ಅಗ್ಗಳಿಕೆ ಅವರದ್ದಾಗಲಿದೆ. ದಿವಂಗತ ನ್ಯಾಯಮೂರ್ತಿ ಎಸ್‌ ಎಚ್‌ ಕಪಾಡಿಯಾ ಅವರು ಮೇ 2010 ರಿಂದ ಸೆಪ್ಟೆಂಬರ್ 2012ರವರೆಗೆ ದೀರ್ಘಾವಧಿಯವರೆಗೆ ಮುಖ್ಯ ನ್ಯಾಯಮೂರ್ತಿಯಾಗಿದ್ದರು.

ಆಗಸ್ಟ್ 27, 1957 ರಂದು ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ಕೃಷಿ ಕುಟುಂಬದಲ್ಲಿ ಜನಿಸಿದ ನ್ಯಾಯಮೂರ್ತಿ ರಮಣ ಅವರು ಆಂಧ್ರಪ್ರದೇಶದಿಂದ ಭಾರತದ ಎರಡನೇ ಮುಖ್ಯ ನ್ಯಾಯಮೂರ್ತಿಯಾಗಲಿದ್ದಾರೆ. ನ್ಯಾಯಮೂರ್ತಿ ಕೆ.ಸುಬ್ಬರಾವ್ ಅವರು 1966-67ರವರೆಗೆ ಭಾರತದ ಒಂಬತ್ತನೇ ಮುಖ್ಯ ನ್ಯಾಯಮೂರ್ತಿಯಾಗಿದ್ದರು.

ಇದನ್ನು ಓದಿ : ಶ್ರೀಮಂತರ ಮೇಲೆ ಸಂಪತ್ತು ತೆರಿಗೆಯ ಬದಲು ಸಾರ್ವಜನಿಕ ಉದ್ದಿಮೆಗಳನ್ನು ಮಾರುವುದೇಕೆ?

ಸುಮಾರು ನಾಲ್ಕು ದಶಕಗಳ ಸುದೀರ್ಘ ವೃತ್ತಿಜೀವನದಲ್ಲಿ, ನ್ಯಾಯಮೂರ್ತಿ ರಮಣ “ಆಂಧ್ರಪ್ರದೇಶದ ಹೈಕೋರ್ಟ್, ಕೇಂದ್ರ ಮತ್ತು ಆಂಧ್ರಪ್ರದೇಶದ ಆಡಳಿತ ನ್ಯಾಯಮಂಡಳಿಗಳು ಮತ್ತು ಭಾರತದ ಸುಪ್ರೀಂ ಕೋರ್ಟ್ ನಲ್ಲಿ ನಾಗರಿಕ, ಅಪರಾಧ, ಸಾಂವಿಧಾನಿಕ, ಕಾರ್ಮಿಕ, ಸೇವೆ ಮತ್ತು ಚುನಾವಣಾ ವಿಷಯಗಳಲ್ಲಿ ಅವರು ಹೆಚ್ಚಿನ ಅಭ್ಯಾಸ ಮಾಡಿದ್ದಾರೆ.

ಜೂನ್ 27, 2000 ರಂದು ಆಂಧ್ರಪ್ರದೇಶದ ಹೈಕೋರ್ಟ್‌ನ ಖಾಯಂ ನ್ಯಾಯಾಧೀಶರನ್ನಾಗಿ ನೇಮಿಕಗೊಂಡ ಎನ್‌ ವಿ ರಮಣ ಅವರು ಮಾರ್ಚ್ 10, 2013 ರಿಂದ ಮೇ 20, 2013 ರವರೆಗೆ ಆಂಧ್ರಪ್ರದೇಶದ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಿದರು.

ಅಮರಾವತಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ. ಎಸ್ ಜಗನ್ ಮೋಹನ್ ರೆಡ್ಡಿ ಅವರು ನ್ಯಾ. ರಮಣ ಅವರ ಬಗ್ಗೆ ದೂರು ನೀಡಿ ಸಿಜೆಐ ಬೊಬ್ಡೆ ಅವರಿಗೆ ಪತ್ರ ಬರೆದಿದ್ದರು. ಆದರೆ ಸ್ವಯಂ ತನಿಖೆ ನಡೆಸಿದ್ದ ಸುಪ್ರೀಂಕೋರ್ಟ್‌ ಅವರ ವಿರುದ್ಧದ ಆರೋಪಗಳನ್ನು ತಳ್ಳಿಹಾಕಿತ್ತು.

ಜಮ್ಮು ಮತ್ತು ಕಾಶ್ಮೀರದಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸುವುದನ್ನು ತಕ್ಷಣ ಪರಿಶೀಲಿಸಬೇಕು ಎಂದು ತೀರ್ಪು ನೀಡಿದ ನ್ಯಾಯಮೂರ್ತಿ ರಮಣ ಅವರು ನ್ಯಾಯಪೀಠದ ಭಾಗವಾಗಿದ್ದರು. ಅವರು ನ್ಯಾಯಾಧೀಶರ ಸಮಿತಿಯ ಭಾಗವಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಮುಖ್ಯ ನ್ಯಾಯಾಧೀಶರ ಕಚೇರಿ ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆಯ ವ್ಯಾಪ್ತಿಗೆ ಬರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *