ಬಾಬರಿ ಮಸೀದಿ ಪ್ರಕರಣದ ತೀರ್ಪು ನೀಡಿದ್ದ 5 ನ್ಯಾಯಮೂರ್ತಿಗಳಿಗೆ ರಾಮಮಂದಿರ ಉದ್ಘಾಟನೆಗೆ ಆಹ್ವಾನ!

ನವದೆಹಲಿ: ನಾಲ್ಕು ವರ್ಷಗಳ ಹಿಂದೆ ಬಾಬರಿ ಮಸೀದಿ ಪ್ರಕರಣದ ತೀರ್ಪು ನೀಡಿದ ಭಾರತದ ಪ್ರಸ್ತುತ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೇರಿದಂತೆ ಐವರು ನ್ಯಾಯಮೂರ್ತಿಗಳನ್ನು ಜನವರಿ 22 ರಂದು ಅಯೋಧ್ಯೆಯ ಮಸೀದಿ ಒಡೆದ ಜಾಗದಲ್ಲಿ ಕಟ್ಟಿರುವ ಕಟ್ಟಡದ ಉದ್ಘಾಟನೆಗೆ ಆಹ್ವಾನಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಮಾಜಿ ಮುಖ್ಯ ನ್ಯಾಯಮೂರ್ತಿಗಳು, ನ್ಯಾಯಾಧೀಶರು ಮತ್ತು ವಕೀಲರು ಸೇರಿದಂತೆ 50 ಕ್ಕೂ ಹೆಚ್ಚು ನ್ಯಾಯಶಾಸ್ತ್ರಜ್ಞರಿಗೆ ಆಹ್ವಾನ ನೀಡಲಾಗಿದೆ ಎಂದು ವರದಿ ಹೇಳಿದೆ.

ಆಗಿನ ಸಿಜೆಐ ಆಗಿದ್ದ ರಂಜನ್ ಗೊಗೊಯ್, ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಬೋಬ್ಡೆ, ಹಾಲಿ ಸಿಜೆಐ ಡಿ.ವೈ. ಚಂದ್ರಚೂಡ್ ಮತ್ತು ಮಾಜಿ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ ಮತ್ತು ಎಸ್. ಅಬ್ದುಲ್ ನಜೀರ್ ಅವರನ್ನೊಳಗೊಂಡ ಐವರು ನ್ಯಾಯಮೂರ್ತಿಗಳ ಪೀಠವು ಬಾಬರಿ ಮಸೀದಿ ಪ್ರಕರಣದಲ್ಲಿ ಮಂದಿರ ನಿರ್ಮಾಣದ ಪರವಾಗಿ ತೀರ್ಪು ನೀಡಿತ್ತು.

ಇದನ್ನೂ ಓದಿ: ಭಾರತ್ ಜೋಡೋ ನ್ಯಾಯ್ ಯಾತ್ರೆ | ಮಾರ್ಗ ಬದಲಿಸಿದ ಕಾರಣ ನೀಡಿ ಎಫ್‌ಐಆರ್‌ ದಾಖಲಿಸಿದ ಅಸ್ಸಾಂನ ಬಿಜೆಪಿ ಸರ್ಕಾರ!

ಸುನ್ನಿ ವಕ್ಫ್ ಬೋರ್ಡ್, ನಿರ್ಮೋಹಿ ಅಖಾಡ ಮತ್ತು ರಾಮ್ ಲಲ್ಲಾ ವಿರಾಜಮಾನ್ ಎಂಬ ಮೂರು ಕಕ್ಷಿದಾರರ ನಡುವಿನ ವಿವಾದದಲ್ಲಿ, ವಿವಾದಿತ ಭೂಮಿಯನ್ನು ಷರತ್ತುಗಳಿಗೆ ಒಳಪಟ್ಟು ಹಿಂದೂಗಳು ಪಡೆಯಬೇಕೆಂದು ನ್ಯಾಯಾಲಯವು ಅಂದು ಹೇಳಿತ್ತು. ಒಳ ಮತ್ತು ಹೊರ ಪ್ರಾಂಗಣಗಳನ್ನು ಕೇಂದ್ರದ ನೇತೃತ್ವದ ಟ್ರಸ್ಟ್‌ಗೆ ಹಸ್ತಾಂತರಿಸಲಾಗುವುದು ಮತ್ತು 5 ಎಕರೆ ಅಳತೆಯ ಸೂಕ್ತ ಜಮೀನನ್ನು ಸುನ್ನಿ ವಕ್ಫ್ ಮಂಡಳಿಗೆ ನೀಡಲಾಗುವುದು ಎಂದು ಐವರ ನ್ಯಾಯಪೀಠ ಹೇಳಿತ್ತು. ಬಾಬರಿ ಮಸೀದಿ

ಮಾಜಿ ಸಿಜೆಐ ಗೊಗೊಯ್ ಅವರು ಪ್ರಸ್ತುತ ರಾಜ್ಯಸಭೆಯಲ್ಲಿ ಸಂಸತ್ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಾಜಿ ನ್ಯಾಯಮೂರ್ತಿ ಬೋಬ್ಡೆ ಅವರು ಗೊಗೊಯ್ ಅವರ ನಂತರ 47 ನೇ ಸಿಜೆಐ ಆಗಿ ನವೆಂಬರ್ 2019 ರಿಂದ ಏಪ್ರಿಲ್ 2021 ರವರೆಗೆ ಸೇವೆ ಸಲ್ಲಿಸಿದ್ದರು. ನ್ಯಾಯಮೂರ್ತಿ ಅಶೋಕ್ ಭೂಷಣ್ ಅವರು 2021ರ ಜುಲೈನಲ್ಲಿ ಸುಪ್ರೀಂಕೋರ್ಟ್ ನ್ಯಾಯಾಮೂರ್ತಿಯಾಗಿ ನಿವೃತ್ತರಾದರು ಮತ್ತು ನ್ಯಾಯಮೂರ್ತಿ ನಜೀರ್ ಪ್ರಸ್ತುತ ಆಂಧ್ರಪ್ರದೇಶದ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಬರಿ ಮಸೀದಿ

ಪ್ರಾಣ ಪ್ರತಿಷ್ಠೆ ಎಂದು ಕರೆಯಲ್ಪಡುವ ರಾಮ ಮಂದಿರದ ಪ್ರತಿಷ್ಠಾಪನೆ ಸಮಾರಂಭವನ್ನು ಜನವರಿ 22 ರಂದು ಮಧ್ಯಾಹ್ನ 12:30 ಕ್ಕೆ ನಿಗದಿಪಡಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ, ವಿವಿಧ ಗಣ್ಯರು ಸಮಾರಂಭದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಸಮಾರಂಭದ ಹಿಂದಿನ ಧಾರ್ಮಿಕ ಕ್ರಿಯೆಗಳು ಈಗಾಗಲೇ ದೇವಾಲಯದಲ್ಲಿ ಪ್ರಾರಂಭವಾಗಿದ್ದು, ಜನವರಿ 22 ರಂದು ಪ್ರಾಣ ಪ್ರತಿಷ್ಠಾ ಸಮಾರಂಭದೊಂದಿಗೆ ಮುಕ್ತಾಯಗೊಳ್ಳಲಿದೆ. ಭಾರತ ಮತ್ತು ವಿದೇಶಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ದೊಡ್ಡ ಪರದೆಯ ಮೇಲೆ ಸಮಾರಂಭದ ನೇರ ಪ್ರದರ್ಶನಕ್ಕೂ ವ್ಯವಸ್ಥೆ ಮಾಡಲಾಗಿದೆ.

ಈ ಆಹ್ವಾನವನ್ನು ನ್ಯಾಯಮೂರ್ತಿಗಳು ತಿರಸ್ಕರಿಸಬೇಕು, ಇದು ನ್ಯಾಯಾಂಗದ ದುರುಪಯೋಗಕ್ಕೆ ದಾರಿ ಮಾಡಿಕೊಡುತ್ತದೆ ಎಂಬ ಚರ್ಚೆಗಳು ಇದೇ ವೇಳೆ ಕೇಳಿ ಬರುತ್ತಿವೆ.

ವಿಡಿಯೊ ನೋಡಿ: ಸಂಯುಕ್ತ ಹೋರಾಟ ಕರ್ನಾಟಕ ನಾಯಕರ ಜೊತೆ ಸಿಎಂ ಮಾತುಕತೆ : ಸಿಎಂ ನೀಡಿದ ಭರವಸೆಗಳೇನು? Janashakthi Media

Donate Janashakthi Media

Leave a Reply

Your email address will not be published. Required fields are marked *