ಬೆಂಗಳೂರು: ‘ಕೋವಿಡ್ ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಜೂನ್ 7ರವರೆಗೆ ಜಾರಿಯಲ್ಲಿರುವ ಲಾಕ್‌ಡೌನ್ ವಿಸ್ತರಿಸಬೇಕೇ, ಬೇಡವೇ ಎಂಬ ಬಗ್ಗೆ ಸಚಿವ ಸಂಪುಟದ ಸಹೋದ್ಯೋಗಿಗಳ ಜೊತೆ ಚರ್ಚಿಸಿದ ಬಳಿಕ ಅಂತಿಮ ನಿರ್ಧಾರವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಕಟಿಸುವ ಸಾಧ್ಯತೆ ಇದೆ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೋವಿಡ್ ಸಾಂಕ್ರಾಮಿಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಜೂನ್ 30ರವರೆಗೆ ಕಠಿಣವಾದ ಕ್ರಮಗಳನ್ನು ಕೈಗೊಳ್ಳಬೇಕೆಂದು ಕೇಂದ್ರ ಗೃಹ ಇಲಾಖೆ ಹೊರಡಿಸಿರುವ ಸುತ್ತೋಲೆಯಲ್ಲಿ ಹೇಳಲಾಗಿದೆ. ಇದನ್ನು ಯಾವ ರೀತಿ ಜಾರಿ ಮಾಡಬೇಕು ಎಂಬ ಕುರಿತು ಸಚಿವರ ಸಭೆಯಲ್ಲಿ ಮುಖ್ಯಮಂತ್ರಿ ಅಂತಿಮ ನಿರ್ಧಾರ ಕೈಗೊಳ್ಳತ್ತಾರೆ’ ಎಂದು ಹೇಳಿದರು.
ಇದನ್ನು ಓದಿ: ಸಮಸ್ಯೆಗಳು ವ್ಯಾಪಕಗೊಂಡಿದ್ದರೂ ಪ್ರಶ್ನೆ ಮಾಡಬಾರದೇ: ಪ್ರಿಯಾಂಕ ಖರ್ಗೆ
‘ಕೋವಿಡ್ ದೃಢಿಕೃತ ಪ್ರಕರಣ ಪ್ರಮಾಣ ಇನ್ನೂ ಕಡಿಮೆ ಆಗಿಲ್ಲ. ಅದು ಶೇ 10ಕ್ಕಿಂತ ಕಡಿಮೆ ಆಗಬೇಕಾಗಿದೆ. ಗ್ರಾಮೀಣ ಪ್ರದೇಶದಲ್ಲಿಯೂ ಸೋಂಕು ಪ್ರಮಾಣ ಮತ್ತು ಸಾವುಗಳ ಸಂಖ್ಯೆ ನಿಯಂತ್ರಣಕ್ಕೆ ಬರಬೇಕಿದೆ. ಆಗ ಮಾತ್ರ ಕೋವಿಡ್ ಹತೋಟಿಗೆ ಬರಲು ಸಾಧ್ಯ. ಆಗ ರಾಜ್ಯದಲ್ಲಿರುವ ಆಸ್ಪತ್ರೆಗಳಲ್ಲಿನ ಮೂಲಸೌಕರ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು, ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ’ ಎಂದು ಅವರು ತಿಳಿಸಿದರು.
‘ಕರ್ನಾಟಕ ರಾಜ್ಯಕ್ಕೆ ಕೇಂದ್ರ ಸರಕಾರದಿಂದ ಬರಬೇಕಾಗಿರುವ ₹ 11 ಸಾವಿರ ಕೋಟಿ ಜಿಎಸ್‌ಟಿ ಪರಿಹಾರ ನೀಡಬೇಕೆಂದು ನೆನ್ನೆ ನಡೆದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಒತ್ತಾಯ ಮಾಡಲಾಗಿದೆ. ಈ ವರ್ಷ ಮತ್ತೆ ಕೋವಿಡ್ ಬಂದಿದೆ. ಆರು ತಿಂಗಳ ಅವಧಿಯಲ್ಲಿ ರಾಜ್ಯದ ಆರ್ಥಿಕತೆ ಚೇತರಿಸಿಕೊಂಡಿತ್ತು. ಆದರೆ, ಈಗ ಮತ್ತೆ ಲಾಕ್ ಡೌನ್ ಜಾರಿಯಲ್ಲಿದೆ. ಹೀಗಾಗಿ ಈ ಬಾರಿ 2 – 3 ತಿಂಗಳು ಜಿಎಸ್‌ಟಿ ಸಂಗ್ರಹ ಕಡಿಮೆಯಾಗುತ್ತದೆ. ಲಾಕ್‌ಡೌನ್ ಅವಧಿಯಲ್ಲಿ ಕಡಿಮೆಯಾಗುವ ಜಿಎಸ್‌ಟಿ ಪರಿಹಾರವನ್ನು ತುಂಬಿಕೊಡುವಂತೆಯೂ ಎಲ್ಲ ರಾಜ್ಯಗಳು ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಒತ್ತಾಯ ಮಾಡಿವೆ’ ಎಂದರು.
ಇದನ್ನು ಓದಿ: ಯಡಿಯೂರಪ್ಪ ಘೋಷಿಸಿದ್ದು ಕೇವಲ ರೂ. 483.44 ಕೋಟಿ ಪರಿಹಾರ
‘ಕರ್ನಾಟಕದಿಂದ ಸಭೆಯಲ್ಲಿ ಭಾಗವಹಿಸಿದ್ದ ನಾನು ಕೂಡ ಇದೇ ಒತ್ತಾಯ ಮಾಡಿದ್ದೇನೆ. ಅದಕ್ಕೆ ಅವರು ಒಪ್ಪಿಕೊಂಡಿದ್ದಾರೆ. ಜಿಎಸ್‌ಟಿಯಿಂದ ಎಷ್ಟು ಪರಿಹಾರ ಕೊಡಬೇಕು, ಸಾಲ ಪಡೆಯಲು ಅನುಮತಿ ನೀಡಬೇಕೇ ಎಂಬುವುದನ್ನು ಹೊರತುಪಡಿಸಿ ಉಳಿದ ಪರಿಹಾರ ಹಣವನ್ನು ಯಾವ ರೂಪದಲ್ಲಿ ನೀಡಲು ಸಾಧ್ಯ ಎಂಬುದರ ಕುರಿತು ಕ್ರಮಕೈಗೊಳ್ಳಲಾಗುವುದು ಎಂದು ಸಭೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ’ ಎಂದು ಬೊಮ್ಮಾಯಿ ಹೇಳಿದರು.