1871ರಲ್ಲಿ 72 ದಿನಗಳ ಕಾಲ, ಪ್ಯಾರಿಸಿನ ಕಾರ್ಮಿಕರು “ಸ್ವರ್ಗದ ಬಾಗಿಲು ತೆರೆದಿದ್ದರು”. ಪ್ರಷ್ಯಾದ (ಈಗಿನ ಜರ್ಮನಿಯ ಭಾಗ) ಜತೆ ಅನಗತ್ಯ ಅನರ್ಥಕಾರಿ ಯುದ್ಧ ಹೂಡಿ ಸೋತಿದ್ದ ಬೂರ್ಶ್ವಾ ಸರಕಾರವನ್ನು ಉರುಳಿಸಿ ಕಾರ್ಮಿಕರು ತಮ್ಮದೇ ಸರಕಾರ ಸ್ಥಾಪಿಸಿದರು. ಇದು ಅತ್ಯಂತ ನೈಜವಾದ ಆಳವಾದ ಮತ್ತು ನೇರ ಪ್ರಜಾಸತ್ತೆಯ ಸ್ಫೂರ್ತಿದಾಯಕ ಪ್ರಯೋಗವಾಗಿತ್ತು. ಅದನ್ನು ಅವರು ‘ಪ್ಯಾರಿಸ್ ಕಮ್ಯೂನ್’ ಎಂದು ಕರೆದರು. ಈ ವರ್ಷ ಅದರ 150ನೇ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ “ಪ್ಯಾರಿಸ್ ಕಮ್ಯೂನ್ 150” ಕನ್ನಡ ಪುಸ್ತಕ ಜೂನ್ 5 ರಂದು ಸಂಜೆ 5 ಗಂಟೆಗೆ ಜೂ಼ಮ್ ಸಭೆಯಲ್ಲಿ ಬಿಡುಗಡೆಯಾಗಲಿದೆ.
150 ವರ್ಷಗಳ ಹಿಂದೆ ಅಂದರೆ 1871ರಲ್ಲಿ 72 ದಿನಗಳ ಕಾಲ, ಪ್ಯಾರಿಸಿನ ಕಾರ್ಮಿಕರು “ಸ್ವರ್ಗದ ಬಾಗಿಲು ತೆರೆದಿದ್ದರು”. ಪ್ರಷ್ಯಾದ (ಈಗಿನ ಜರ್ಮನಿಯ ಭಾಗ) ಜತೆ ಅನಗತ್ಯ ಅನರ್ಥಕಾರಿ ಯುದ್ಧ ಹೂಡಿ ಸೋತಿದ್ದ ಬೂರ್ಶ್ವಾ ಸರಕಾರವನ್ನು ಉರುಳಿಸಿ ಕಾರ್ಮಿಕರು ತಮ್ಮದೇ ಸರಕಾರ ಸ್ಥಾಪಿಸಿದರು. ತಡೆಗೋಡೆಗಳಿಂದ ತಮ್ಮನ್ನು ರಕ್ಷಿಸಿಕೊಂಡರು, ತಮ್ಮದೇ ಆದ ಪ್ರ‍್ರಜಾಪ್ರಭುತ್ವ ನೀತಿಗಳ ತಮ್ಮದೇ ಸರಕಾರವನ್ನು ಸ್ಥಾಪಿಸಿದರು, ಮತ್ತು ಆಳುವ ವರ್ಗಗಳು ಸೃಷ್ಟಿಸಿದ್ದ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಿದರು. ಫ್ರಾನ್ಸಿನ ಪ್ರಾಂತ್ಯಗಳ ರೈತರೊಂದಿಗೆ ಸಖ್ಯ ಬೆಳೆಸಿ ಎಲ್ಲಾ ಕಡೆ ಇಂತಹ ‘ಕಮ್ಯೂನ್’ಗಳನ್ನು ರಚಿಸಿ ಈ ಪ್ರಯೋಗವನ್ನು ದೇಶದಾದ್ಯಂತ ವಿಸ್ತರಿಸಲು ಬಯಸಿದ್ದರು
ಇದು ಅತ್ಯಂತ ನೈಜವಾದ ಆಳವಾದ ಮತ್ತು ನೇರ ಪ್ರಜಾಸತ್ತೆಯ ಸ್ಫೂರ್ತಿದಾಯಕ ಪ್ರಯೋಗವಾಗಿತ್ತು. ಅದನ್ನು ಅವರು ‘ಪ್ಯಾರಿಸ್ ಕಮ್ಯೂನ್’ ಎಂದು ಕರೆದರು. ಅದನ್ನು ಜಗತ್ತಿನ ಮೊದಲ ಕಾರ್ಮಿಕ ಕ್ರಾಂತಿ ಮತ್ತು ಪ್ರಭುತ್ವ ಎಂದು ಪರಿಗಣಿಸಲಾಗಿದೆ. ಪ್ಯಾರಿಸ್ ಕಮ್ಯೂನ್ (ಮೇ 28, 1871ರಂದು ಪತನವಾಗುವ ಮೊದಲು) ಕೇವಲ 72 ದಿನಗಳ ಕಾಲ ಮಾತ್ರ ಬಾಳಿತಾದರೂ, ಅದು ತನ್ನ ಸಾಧನೆ-ವೈಫಲ್ಯಗಳು ಬಲ-ದೌರ್ಬಲ್ಯಗಳು ಎರಡರಿಂದಾಗಿಯೂ ಆ ನಂತರದ ಕಾರ್ಮಿಕ ಪ್ರಭುತ್ವ ಮತ್ತು ಕ್ರಾಂತಿಗಳಿಗೆ ಸ್ಫೂರ್ತಿಯ ಚಿಲುಮೆಯೂ ದಾರಿದೀವಿಗೆಯೂ ಆಯಿತು.
ಈ ವರ್ಷ ಅದರ 150ನೇ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಕರ್ನಾಟಕದ ಕ್ರಿಯಾ ಮಾಧ್ಯಮ ಸೇರಿದಂತೆ ಜಗತ್ತಿನ 15 ದೇಶಗಳ ಮತ್ತು ಹಲವು ಪ್ರದೇಶಗಳ ಭಾಷೆಗಳ, 27 ಪ್ರಗತಿಪರ ಪ್ರಕಾಶನಗಳು ಜಂಟಿಯಾಗಿ “ಪ್ಯಾರಿಸ್ ಕಮ್ಯೂನ್ 150” ಎಂಬ ಒಂದೇ ಪುಸ್ತಕವನ್ನು 18 ಭಾಷೆಗಳಲ್ಲಿ ಒಂದೇ ಡಿಸೈನಿನ ಕವರ್ ಪುಟಗಳೊಂದಿಗೆ ಪ್ರಕಟಿಸುತ್ತಿವೆ. “ಪ್ಯಾರಿಸ್ ಕಮ್ಯೂನ್ 150” ಕನ್ನಡ ಪುಸ್ತಕ ಜೂನ್ 5 ರಂದು ಸಂಜೆ 5 ಗಂಟೆಗೆ ಜೂ಼ಮ್ ಸಭೆಯಲ್ಲಿ ಬಿಡುಗಡೆಯಾಗಲಿದೆ.
ನಾಡಿನ ಪ್ರಮುಖ ಕಾರ್ಮಿಕ ನಾಯಕ ಮತ್ತು ಸಿಐಟಿಯು ಕರ್ನಾಟಕದ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿಸುಂದರಂ ಅವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಚಿಂತಕ-ಲೇಖಕ ಡಾ.ಬಿ.ಆರ್.ಮಂಜುನಾಥ ಪುಸ್ತಕದ ಕುರಿತು ಮಾತನಾಡಲಿದ್ದಾರೆ. ಕಮ್ಯುನಾರ್ಡರ ಕುರಿತು ಬ್ರೆಕ್ಟ್ ಬರೆದ ಕವನವನ್ನು ಅನುವಾದಿಸಿ ಬಿ ಪೀರ್ ಬಾಷ ವಾಚಿಸಲಿದ್ದಾರೆ. ಪ್ಯಾರಿಸ್ ಕಮ್ಯೂನ್ ಸ್ಫೂರ್ತಿಯಿಂದ ರಚಿತವಾದ ದುಡಿಯುವ ಜನರ ಮತ್ತು ಸೋಶಲಿಸ್ಟ್/ಕಮ್ಯುನಿಸ್ಟ್ ಚಳುವಳಿಯ ಜಾಗತಿಕ ‘ನಾಡಗೀತೆ’ ಎಂದೇ ಪ್ರಸಿದ್ಧವಾದ ‘ಇಂಟರ್ ನ್ಯಾಶನಲ್’ ಗೀತೆಯನ್ನು ಕೆ.ನೀಲಾ ಅನುವಾದಿಸಿದ್ದು ಚಿಂತನ್ ವಿಕಾಸ್ ಹಾಡಲಿದ್ದಾರೆ. ಇವೆರಡೂ ಪುಸ್ತಕದಲ್ಲಿ ಇವೆ.
ಪ್ಯಾರಿಸ್ ಕಮ್ಯೂನಿನ ನೆನಪಿನ ಈ ಪುಸ್ತಕದಲ್ಲಿ ಅದರ ಪತನದ ಎರಡು ದಿನಗಳಲ್ಲಿ (ಮೇ 30, 1871ರಂದು) ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆಯ ಜನರಲ್ ಕೌನ್ಸಿಲ್ ನಲ್ಲಿ ಮಾರ್ಕ್ಸ್ ಮಾಡಿದ ಪ್ರಸಿದ್ಧ ಭಾಷಣದ ಅನುವಾದವಿದೆ. ಇದರಲ್ಲಿ ಕಮ್ಯೂನ್ ಉದಯವಾದ ಹಿನ್ನೆಲೆ, ಅದರ ಸಾಧನೆಗಳು-ವೈಫಲ್ಯಗಳು, ಅದು ಪತನ ಹೊಂದಲು ಕಾರಣಗಳು, ಅದರ ಮಹತ್ವ, ಅದರಿಂದ ಮುಂದಿನ ಕಾರ್ಮಿಕ ಕ್ರಾಂತಿಗಳು ಕಲಿಯಬೇಕಾದ ಪಾಠಗಳು, ಬೂರ್ಜ್ವಾ ಹಾಗೂ ಕಾರ್ಮಿಕ ಪ್ರಭುತ್ವದ ಸ್ವರೂಪಗಳ ಸೈದ್ಧಾಂತಿಕ ಗ್ರಹಿಕೆ – ಇತ್ಯಾದಿಗಳಿರುವ ಸಮಗ್ರ ಉಜ್ವಲ ವಿಶ್ಲೇಷಣೆಯಿದೆ. ಇದು ಆನಂತರ ‘ಫ್ರಾನ್ಸಿನಲ್ಲಿ ಅಂತರ್ಯುದ್ಧ’ ಎಂಬ ಹೆಸರಿನಲ್ಲಿ ಪ್ರಕಟವಾದ ಪುಸ್ತಕದ ಒಂದು ಅಧ್ಯಾಯ.
ಈ ಪುಸ್ತಕದಲ್ಲಿ ಕಮ್ಯೂನ್ ಕುರಿತು ಲೆನಿನ್ ತಮ್ಮ ‘ಪ್ರಭುತ್ವ ಮತ್ತು ಕ್ರಾಂತಿ’ ಪುಸ್ತಕದಲ್ಲಿ ಬರೆದ ಭಾಗ (ಅಧ್ಯಾಯ-3)ವನ್ನೂ ಕೊಡಲಾಗಿದೆ. ಮಾರ್ಕ್ಸ್ ಅವರ ಕಮ್ಯೂನಿನ ಉಜ್ವಲ ವಿಶ್ಲೇಷಣೆಯ ಪ್ರಮುಖ ಅಂಶಗಳ ಸಾರಾಂಶವನ್ನು ಮತ್ತೆ ಒತ್ತಿ ಹೇಳಿ, ಅದನ್ನು ವಿಕೃತಗೊಳಿಸಲು ಪ್ರಯತ್ನಿಸಿದ ಪಾರ್ಲಿಮೆಂಟರಿವಾದಿ ಪರಿಷ್ಕರಣವಾದಿಗಳ ಕಟು ವಿಮರ್ಶೆ ಮಾಡಿದ, ಆ ನಂತರದ ಕಾರ್ಮಿಕ ಚಳುವಳಿಯ ಅನುಭವ ಮತ್ತು ಅದರ ಆಧಾರದ ಮೇಲೆ ಸಮಕಾಲೀನಗೊಳಿಸಿದ ಕಮ್ಯೂನಿನ ಪಾಠಗಳ ಪ್ರಸ್ತುತತೆ – ಇವೆಲ್ಲದರ ಸಮಗ್ರ ನೋಟ ಇದರಲ್ಲಿದೆ.
‘ಸ್ವರ್ಗದ ಬಾಗಿಲು ತೆರೆದ’ ಪ್ಯಾರಿಸ್ ಕಮ್ಯೂನ್ ಕುರಿತು ಮಾರ್ಕ್ಸ್ ಮತ್ತು ಲೆನಿನ್ ವಿಶ್ಲೇಷಣೆಯನ್ನು ನೆನಪು ಮಾಡಿಕೊಳ್ಳುತ್ತಾ ಇಂದಿನ ಪ್ರಸ್ತುತತೆ ಕುರಿತು ವಿಜಯ ಪ್ರಶಾದ್ ಅವರ ದೀರ್ಘ ಪ್ರಸ್ತಾವನೆಯೂ ಇದೆ.
ಇವಲ್ಲದೆ ಪ್ಯಾರಿಸ್ ಕಮ್ಯೂನಿನ ಮತ್ತು ಅದರ ಕುರಿತು ಹೊಮ್ಮಿದ ಸಾಂಸ್ಕೃತಿಕ ಅಭಿವ್ಯಕ್ತಿಯನ್ನು ಈ ಪುಸ್ತಕ ಒಳಗೊಂಡಿದೆ. ಕಮ್ಯೂನಿನ ಭಾಗವಾಗಿದ್ದು, ಅದರ ಸಾಂಸ್ಕೃತಿಕ ನೀತಿಯನ್ನು ಮತ್ತು ಜನತಾ ಕಲೆಯ ಪರಿಕಲ್ಪನೆಯನ್ನು ರೂಪಿಸುವಲ್ಲಿ ಮುಂಚೂಣಿಯಲ್ಲಿದ್ದ, ಕಲಾವಿದರ ಫೆಡರೇಶನ್ನಿನ ಕೆಲಸ ಮತ್ತು ಕೊಡುಗೆಗಳ ಕುರಿತು ತಿಂಗ್ಸ್ ಚಾಕ್ ಬರೆದಿದ್ದಾರೆ. ಕಲಾವಿದರ ಫೆಡರೇಶನ್ನಿನ ಪ್ರಣಾಳಿಕೆಯೂ ಇದೆ.
ಪ್ರಸಿದ್ಧ ಕ್ರಾಂತಿಕಾರಿ ನಾಟಕಕಾರ, ಕವಿ ಬೆಟ್ರೊಲ್ಟ್ ಬ್ರೆಕ್ಟ್ ಬರೆದ ‘ಕಮ್ಯೂನ್ ಧೀರರ ಸಂಕಲ್ಪ’ದ ಕುರಿತ ಮಾರ್ಮಿಕ ಕವನದ ಕನ್ನಡ ಅನುವಾದ ಇಲ್ಲಿದೆ. ‘ಇಂಟರ್ ನ್ಯಾಸನಾಲ್’ ಎಂದು ಪ್ರಸಿದ್ಧವಾದ ಜಗತ್ತಿನ ದುಡಿಯುವ ಜನರ, ಚಳುವಳಿಗಳ, ಕಮ್ಯುನಿಸ್ಟರ ‘ನಾಡಗೀತೆ’ಯ ಬಹುಶಃ ಮೊದಲ ಕನ್ನಡ ಅನುವಾದವೂ ಇಲ್ಲಿದೆ. ‘ಇಂಟರ್ ನ್ಯಾಸನಾಲ್’ ಬರೆದ ಯುಜಿನ್ ಪೊಟಿಯೆರ್ ಒಬ್ಬ ಕಮ್ಯೂನ್ ಧೀರನಾಗಿದ್ದ. ಅವನ ಮತ್ತು ಅವನ ಪ್ರಸಿದ್ಧ ಹಾಡಿನ ಕುರಿತೂ ಇಲ್ಲಿದೆ. ಜತೆಗೆ ಪುಸ್ತಕದ ಉದ್ದಕ್ಕೂ ‘ಇಂಟರ್ ನ್ಯಾಸನಾಲ್’ ಸಂಗೀತ ಪಠ್ಯವನ್ನು ವಿವಿಧ ಭಾಷೆಗಳಲ್ಲಿ ಈ ಹಾಡಿನ ಒಂದು ಸಾಲಿನ ಜೊತೆ ಕೊಡಲಾಗಿದೆ. ಬ್ರೆಕ್ಟ್ ಕವನವನ್ನು ಬಿ.ಪೀರ್ ಬಾಷ ಮತ್ತು ‘ಇಂಟರ್ ನ್ಯಾಸನಾಲ್” ಕೆ.ನೀಲಾ ಅನುವಾದಿಸಿದ್ದಾರೆ.