ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನ ಜುಲೈ 18 ರಿಂದ ಆಗಸ್ಟ್ 12 ರವರೆಗೆ ನಡೆಯಲಿದೆ ಎಂದು ಲೋಕಸಭೆ ಸಚಿವಾಲಯ ತಿಳಿಸಿದೆ.
ಲೋಕಸಭೆ ಸಚಿವಾಲಯ ಅಸಂಸದೀಯ ಪದಗಳ ಪಟ್ಟಿ ಬಿಡುಗಡೆ ಮಾಡಿದ್ದು, ಸಂಸದರು ಅಸಂಸದೀಯ ಪದಗಳನ್ನ ಬಳಸಿದರೆ ಕಲಾಪದಿಂದ ಹೊರ ಹಾಕುವ ಎಚ್ಚರಿಕೆ ನೀಡಲಾಗಿದೆ. ಪಟ್ಟಿಯಲ್ಲಿರುವ ಪದಗಳು ಹೀಗಿವೆ; ಜುಮ್ಲಜೀವಿ, ಬಾಲ್ ಬುದ್ಧಿ, ಕೋವಿಡ್ ಸ್ಪ್ರೆಡ್ಡರ್, ಸ್ನೂಪ್ಗೇಟ್, ಅರಾಜಕತಾವಾದಿ, ಶಕುನಿ, ಸರ್ವಾಧಿಕಾರಿ, ನಾಚಿಕೆಗೇಡು, ಭ್ರಷ್ಟ, ಅಸಮರ್ಥ, ತಾನಶಾ, ತಾನಶಾಹಿ, ಜೈಚಂದ್, ವಿನಾಶ್ ಪುರುಷ, ಖಾಲಿಸ್ತಾನಿ, ಖೂನ್ ಸೆ ಖೇತಿ, ದೋಹ್ರಾ ಚರಿತ್ರ, ನಿಕಮ್ಮ, ನೌಟಂಕಿ, ದಿಂಡೋರಾ ಪೀಟ್ನಾ, ಬೆಹ್ರಿ ಸರ್ಕಾರ್ ಸೇರಿ ಹಲವು ಪದಗಳನ್ನು ಬಳಕೆ ಮಾಡುವಂತಿಲ್ಲ ಎಂದು ತಿಳಿಸಲಾಗಿದೆ.
ಅಸಂಸದೀಯವೆಂದು ಪಟ್ಟಿ ಮಾಡಿರುವ ಇಂಗ್ಲಿಷ್ ಪದಗಳಲ್ಲಿ ಬ್ಲಡ್ಶೆಡ್, ಬ್ಲೆಡಿ, ಬಿಟ್ರೇಡ್, ಶೇಮ್ಡ್, ಅಬ್ಯುಸ್ಡ್, ಚೀಟೆಡ್, ಚಾಮ್ಚಾ, ಚಮಚ್ಗಿರಿ, ಚೇಲಾಸ್, ಭ್ರಷ್ಟ, ಕೋವಾರ್ಡ್, ಕ್ರಿಮಿನಲ್ ಮತ್ತು ಕ್ರೊಕೊಡೈಲ್ ಟಿಯರ್ಸ್ ಅನ್ನು ಉಲ್ಲೇಖಿಸಲಾಗಿದೆ.
ಪಟ್ಟಿ ಮಾಡಿರುವ ಪದಗಳನ್ನು ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಬಳಸುವಂತಿಲ್ಲ. ಲೋಕಸಭೆಯಲ್ಲಿನ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮ 380 ರ ಪ್ರಕಾರ, ಕಲಾಪದ ಸಂದರ್ಭದಲ್ಲಿ ಅಸಂಸದೀಯ ಪದಗಳನ್ನು ಬಳಸಿದರೆ ರಾಜ್ಯಸಭಾ ಅಧ್ಯಕ್ಷರು ಅಥವಾ ಲೋಕಸಭಾದ್ಯಕ್ಷರು ಅಂಥವರನ್ನು ಕಲಾಪದಿಂದ ಹೊರ ಹಾಕುತ್ತಾರೆ. ಈ ಬಗ್ಗೆ ಬಿಡುಗಡೆಯಾಗಿರುವ ಟಿಪ್ಪಣಿಯಲ್ಲಿ ಸೇರಿಸಲಾಗಿದೆ. ಹೀಗೆ ಶಾಸಕಾಂಗ ಸಂಸ್ಥೆಗಳಲ್ಲಿ ಕಾಲಕಾಲಕ್ಕೆ ಕೆಲವು ಪದಗಳನ್ನ ಅಸಂಸದೀಯವೆಂದು ಘೋಷಣೆ ಮಾಡಲಾಗುತ್ತದೆ.
ಪುಸ್ತಕದಲ್ಲಿ ಅಸಂಸದೀಯ ಎಂದು ಗುರುತಿಸಲಾದ ಪದಗಳಲ್ಲಿ ರಕ್ತಪಾತ, ರಕ್ತಸಿಕ್ತ, ದ್ರೋಹ, ವಂಚನೆ, ಚಮ್ಚಾ, ಚಮ್ಚಾಗಿರಿ, ಚೇಲಾಸ್, ಬಾಲಿಶ, ಹೇಡಿ, ಕ್ರಿಮಿನಲ್, ಮೊಸಳೆ ಕಣ್ಣೀರು ಸೇರಿದೆ. ಇವುಗಳ ಹೊರತಾಗಿ ಅವಮಾನ, ಕತ್ತೆ, ನಾಟಕ, ಕಣ್ಣೊರೆಸುವ ತಂತ್ರ, ಗೂಂಡಾಗಿರಿ, ಅಸಮರ್ಥ, ಸುಳ್ಳು, ಗದ್ದಾರ್, ಗಿರ್ಗಿಟ್, ಗಢಿಯಾಲಿ ಆಂಸು, ಅಪಮಾನ್, ಅಸತ್ಯ, ಅಹಂಕಾರ್, ಕಾಲಾ ದಿನ್, ಕಾಲಾ ಬಜಾರ್, ದಂಗ, ದಲಾಲ್, ದಾದಾಗಿರಿ, ಬೆಚಾರ, ಬಾಯ್‌ಕಟ್. ಲಾಲಿಪಾಪ್, ಸಂವೇದನಾಹೀನ್, ಲೈಂಗಿಕ ಕಿರುಕುಳ ಪದಗಳನ್ನೂ ಅಸಂಸದೀಯ ಎಂದು ಪರಿಗಣಿಸಲಾಗುವುದು ಎಂದು ಉಲ್ಲೇಖಿಸಲಾಗಿದೆ.
11ನೇ ರಾಷ್ಟ್ರಪತಿ ಆಯ್ಕೆ ಚುನಾವಣೆ ಪ್ರಕ್ರಿಯೆಯು ಮುಂಗಾರು ಅಧಿವೇಶನದ ಮೊದಲ ದಿನ ನಡೆಯಲಿದೆ, ನಂತರ ಜುಲೈ 21 ರಂದು ಮತ ಎಣಿಕೆ ನಡೆಯಲಿದೆ. ಜುಲೈ 25 ರಂದು ಸಂಸತ್ತಿನ ಕೇಂದ್ರೀಯ ಸಭಾಂಗಣದಲ್ಲಿ ನೂತನ ರಾಷ್ಟ್ರಪತಿಗಳ ಪ್ರಮಾಣ ವಚನ ಬೋಧಿಸಲಿದ್ದಾರೆ.
ಈ ಕುರಿತು ಕಾಂಗ್ರೆಸ್ ಸಂಸದ ಅಭಿಷೇಕ್ ಮನು ಸಿಂಘ್ವಿ ಟ್ವೀಟ್ ಮಾಡಿದ್ದು, ನಿಮ್ಮ ಟೀಕೆಗಳು ಸೃಜನಶೀಲವಾಗಿರಬೇಕು. ಇಲ್ಲದಿದ್ದರೆ ಸಂಸತ್ತಿನ ಅಧಿವೇಶನ ಪ್ರಯೋಜನವಾಗದು. ಜುಮ್ಲಾಜೀವಿ ಅನ್ನು ಜುಮ್ಲಾಜೀವಿ ಅನ್ನದೇ ಮತ್ತೆ ಇನ್ನೇನು ಹೇಳಬೇಕು? ಇಂತಹ ಪದಗಳನ್ನು ನಿಷೇಧಿಸುವುದು ಅನಿವಾರ್ಯವೇ ಎಂದು ಪ್ರಶ್ನಿಸಿದ್ದಾರೆ.
ತೃಣಮೂಲ ಕಾಂಗ್ರೆಸ್ ಸಂಸದೆ ಮೆಹುವಾ ಮೊಯಿತ್ರಾ ಸಹ ಟ್ವೀಟ್ ಮಾಡಿದ್ದು, ಬಿಜೆಪಿ ಭಾರತವನ್ನು ಹೇಗೆ ನಾಶಪಡಿಸುತ್ತದೆ ಎಂಬುದು ಗೊತ್ತಾಗುತ್ತಿದೆ. ಅದಕ್ಕಾಗಿ ಪ್ರತಿ ಪಕ್ಷಗಳು ಬಳಸುವ ಪದಗಳನ್ನು ಆಯ್ಕೆ ಮಾಡಿ ನಿಷೇಧಿಸಿದೆ. ಇದು ನಾಚಿಗೇಡಿನ ಸಂಗತಿ. ದುರ್ಬಳಕೆ, ದ್ರೋಹ, ಭ್ರಷ್ಟ, ಬೂಟಾಟಿಕೆ, ಅಸಮರ್ಥ ಎಂಬ ಪದಗಳನ್ನು ನಾನು ಬಳಸುತ್ತೇನೆ, ನನ್ನನ್ನೂ ಬೇಕಿದ್ದರೆ ಅಮಾನತು ಮಾಡಿ. ಆದರೆ ನಾನು ಪ್ರಜಾಪ್ರಭುತ್ವಕ್ಕಾಗಿ ಹೋರಾಟ ಮಾಡುತ್ತೇನೆ ಎಂದು ಸವಾಲು ಹಾಕಿದ್ದಾರೆ.