ಬೆಂಗಳೂರು: ಜನ ಸಾಮಾನ್ಯರಿಗೆ ಬೆಲೆಗಳು ಏರಿಕೆಯಿಂದ ಸಾಕಷ್ಟು ಹೊರೆಯಾಗುತ್ತಿದೆ. ಈಗ ಮತ್ತೆ ವಿದ್ಯುತ್ ಶುಲ್ಕ ಏರಿಕೆ ಮಾಡಲಾಗಿದೆ. ಈ ನಿಟ್ಟಿನಲ್ಲಿ, ಕಲ್ಲಿದ್ದಲು ಖರೀದಿ ವೆಚ್ಚವನ್ನು ಭರಿಸುವ ನಿಟ್ಟಿನಲ್ಲಿ ಹೆಚ್ಚುವರಿ ಶುಲ್ಕ ವಿಧಿಸುವ ವಿದ್ಯುತ್ ಸರಬರಾಜು ಸಂಸ್ಥೆಗಳ ಪ್ರಸ್ತಾಪಕ್ಕೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಅನುಮೋದಿಸಿದೆ.
ಪರಿಷ್ಕೃತ ದರವು ಜುಲೈ 1ರಿಂದಲೇ ಅನ್ವಯವಾಗುವಂತೆ ಜಾರಿಯಾಗಲಿದೆ ಎಂದು ತಿಳಿಸಿರುವ ವಿದ್ಯುತ್ ಸಂಸ್ಥೆ, ಪ್ರತಿದಿನ 100 ಯೂನಿಟ್ ಬಳಸುವ ಗ್ರಾಹಕರು ಹೆಚ್ಚುವರಿಯಾಗಿ 19 ರೂಪಾಯಿಯಿಂದ 31 ರೂಪಾಯಿವರೆಗೆ ಪಾವತಿಸಬೇಕು.
2021-22ನೇ ಸಾಲಿನ ಕೊನೆಯ ಎರಡು ತಿಂಗಳಲ್ಲಿ ಕಲ್ಲಿದ್ದಲು ದರ ಹೆಚ್ಚಳವಾಗಿದೆ. ಅದರಂತೆ ವಿದ್ಯುತ್ ಉತ್ಪಾದನೆಗೆ ಅವಶ್ಯಕವಾಗಿರುವ ಕಲ್ಲಿದ್ದಲು ಖರೀದಿಗೆ ವಿದ್ಯುತ್ ಸಂಸ್ಥೆಗಳು ಹೆಚ್ಚುವರಿ ವೆಚ್ಚವನ್ನು ಭರಿಸಿವೆ. ಈ ಹೆಚ್ಚುವರಿ ಶುಲ್ಕವನ್ನು ಗ್ರಾಹಕರಿಂದಲೇ ಭರಿಸುವ ನಿಟ್ಟಿನಲ್ಲಿ ರಾಜ್ಯದ ಎಸ್ಕಾಂಗಳು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಮುಂದೆ ಪ್ರಸ್ತಾಪ ಇಟ್ಟಿತ್ತು.
ಪ್ರಸ್ತಾಪದಲ್ಲಿ ಬೆಸ್ಕಾಂ 55.28 ರೂ., ಮೆಸ್ಕಾಂ 38.98 ರೂ., ಸೆಸ್ಕ್ 40.47 ರೂ., ಹೆಸ್ಕಾಂ 49.54 ರೂ., ಗೆಸ್ಕಾಂ 39.36 ರೂ. ವಿಧಿಸುವಂತೆ ಕೋರಿದ್ದವು. ಸದ್ಯ ಪ್ರಸ್ತಾವನೆ ಒಪ್ಪಿರುವ ಆಯೋಗ ಪ್ರಸ್ತಾಪಿತ ದರಗಳಲ್ಲಿ ಕೊಂಚ ಬದಲಾವಣೆ ಮಾಡಿದ್ದು, ಅದರಂತೆ ಪ್ರತಿತಿಂಗಳು 100 ಯೂನಿಟ್ ಬಳಸುವ ಗ್ರಾಹಕರು ಹೆಚ್ಚುವರಿಯಾಗಿ 19-31 ರೂಪಾಯಿ ಅವರೆಗೆ ಪಾವತಿಸಬೇಕಾಗುತ್ತದೆ.
ವೆಚ್ಚ ಹೊಂದಾಣಿಕೆಗೆ ಕಾಲಾವಕಾಶ
ಕಲ್ಲಿದ್ದಲು ಬೆಲೆ ಹೆಚ್ಚಾದ ಪರಿಣಾಮ ಇದರ ಖರೀದಿಗಾಗಿ ಭರಿಸಿದ ವೆಚ್ಚವನ್ನು ಹೊಂದಾಣಿಕೆ ಮಾಡಿಕೊಳ್ಳಲು ಆಯೋಗವು 2022ರ ಜುಲೈ 1ರಿಂದ ಡಿಸೆಂಬರ್ 31ರ ವರೆಗೆ ಅವಕಾಶ ನೀಡಿದೆ. ಎಸ್ಕಾಂಗಳ ನಷ್ಟದ ಪ್ರಮಾಣವನ್ನು ಪರಿಗಣಿಸಿ ಇಂಧನ ವೆಚ್ಚ ಹೊಂದಾಣಿಕೆ ಶುಲ್ಕ ವಸೂಲಿಗೆ ಅವಕಾಶ ಕಲ್ಪಿಸಲಾಗಿದೆ. ಇದು ತಾತ್ಕಾಲಿಕವಾಗಿದ್ದು, ನಂತರ ಬೆಲೆಗಳು ಯಥಾಸ್ಥಿತಿಗೆ ಮರಳಲಿದೆ ಎಂದು ಕೆಇಆರ್ಸಿ ಅಧ್ಯಕ್ಷ ಪಿ.ರವಿಕುಮಾರ್ ಹೇಳಿದ್ದಾರೆ.
ಇಂಧನ ವೆಚ್ಚ ಹೊಂದಾಣಿಕೆ ಶುಲ್ಕವು ವಿಶೇಷ ಆರ್ಥಿಕ ವಲಯಕ್ಕೆ ಅನ್ವಯವಾಗುತ್ತದೆ ಎಂದು ಕೆಇಆರ್ಸಿ ಹೇಳಿದೆ. ಮೆಸ್ಕಾಂ ವಿಧಿಸುವ ಹೆಚ್ಚುವರಿ ಶುಲ್ಕವು ವಿಶೇಷ ಆರ್ಥಿಕ ವಲಯಕ್ಕೆ ಅನ್ವಯವಾಗಲಿದ್ದು, ಹೆಸ್ಕಾಂ ಪಡೆಯುವ ಶುಲ್ಕಗಳು ಹುಕ್ಕೇರಿ ಆರ್ಇಸಿಎಸ್ ಮತ್ತು ಏಕಸ್ ವಿಶೇಷ ಆರ್ಥಿಕ ವಲಯಕ್ಕೆ ಅನ್ವಯವಾಗಲಿದೆ.
- ಬೆಸ್ಕಾಂ- 31 (ಪ್ರತಿ ಯೂನಿಟ್ಗೆ ಪೈಸೆಯಲ್ಲಿ)
- ಮೆಸ್ಕಾಂ- 21 (ಪ್ರತಿ ಯೂನಿಟ್ಗೆ ಪೈಸೆಯಲ್ಲಿ)
- ಸೆಸ್ಕ್- 19 (ಪ್ರತಿ ಯೂನಿಟ್ಗೆ ಪೈಸೆಯಲ್ಲಿ)
- ಹೆಸ್ಕಾಂ- 27 (ಪ್ರತಿ ಯೂನಿಟ್ಗೆ ಪೈಸೆಯಲ್ಲಿ)
- ಗೆಸ್ಕಾಂ- 26 (ಪ್ರತಿ ಯೂನಿಟ್ಗೆ ಪೈಸೆಯಲ್ಲಿ)
ವಿದ್ಯುತ್ ಆಯೋಗವು ಏಪ್ರಿಲ್ 1ರಿಂದ ಪ್ರತಿ ಯೂನಿಟ್ ಬೆಲೆಯನ್ನು 35 ಪೈಸೆ ಹೆಚ್ಚಳ ಮಾಡಿತ್ತು. ಇದರ ಜೊತೆಗೆ ವಿದ್ಯುತ್ ನಿಗದಿತ ಶುಲ್ಕವನ್ನು 10ರಿಂದ 30ರೂಪಾಯಿಯಷ್ಟು ಹೆಚ್ಚಳ ಮಾಡಿತ್ತು. ಇದೀಗ ಮತ್ತೆ ಬೆಲೆ ಏರಿಕೆಗೊಳಿಸುವ ಮೂಲಕ ಜನರಿಗೆ ಹೊರ ಬೀಳಲಿದೆ.