ಕಬ್ಬು ಬೆಳೆಗಾರರಿಗೆ ವಂಚನೆ-ಜುಲೈ 11ಕ್ಕೆ ಮುಖ್ಯಮಂತ್ರಿ ನಿವಾಸ ಮುತ್ತಿಗೆ: ಕರ್ನಾಟಕ ರಾಜ್ಯ ರೈತ ಸಂಘ

ಬೆಂಗಳೂರು: ಕಬ್ಬಿನ ಬೆಳೆಗೆ ಕನಿಷ್ಠ ಬೆಲೆ ನಿಗದಿ ಮಾಡಬೇಕು. ಬಾಕಿ ಉಳಿಸಿಕೊಂಡಿರುವ ಮೊತ್ತವನ್ನು ಪಾವತಿ ಮಾಡಬೇಕು. ಕಬ್ಬು ಬೆಳೆಗಾರರಿಗೆ ಆಗುತ್ತಿರುವ ಬೆಲೆ ಮೋಸ, ತೂಕದಲ್ಲಿ ವಂಚನೆ, ಬಾಕಿ ಪಾವತಿಯಲ್ಲಿ ವಿಳಂಬ ನೀತಿ ಖಂಡಿಸಿ, ಇನ್ನೂ ಹತ್ತಾರು ಸಂಕಷ್ಟಗಳನ್ನು ಕೂಡಲೇ ಪರಿಹರಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಪ್ರತಿಭಟನೆಗೆ ಮುಂದಾಗಿದೆ.

ಈ ಬಗ್ಗೆ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಸೋಮವಾರ (ಜುಲೈ 11)  ಬೆಳಿಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನೆಗೆ ಕಬ್ಬು ಬೆಳೆಗಾರರು ಮುತ್ತಿಗೆ ಹಾಕಲು ನಿರ್ಧರಿಸಿದ್ದೇವೆ ಎಂದು ಕರೆ ನೀಡಿದರು.

ಉತ್ತರ ಕರ್ನಾಟಕದಲ್ಲಿ ಕಬ್ಬು ಬೆಳೆಗಾರರಿಂದ ಅತ್ಯಂತ ಕಡಿಮೆ ಬೆಲೆಯಲ್ಲಿ ಕಬ್ಬನ್ನು ಕೊಂಡು ಶೋಷಣೆ ಮಾಡಲಾಗುತ್ತಿದೆ. ಎಸ್ಎಪಿಯನ್ನು ಸರ್ಕಾರ ನಾಲ್ಕು ವರ್ಷದಿಂದ ಕಬ್ಬು ಬೆಳೆಗಾರರಿಗೆ ಕೊಟ್ಟಿಲ್ಲ. ರೈತರು ಸಕ್ಕರೆ ಕಾರ್ಖಾನೆ ಗಳಿಗೆ ಸರಬರಾಜು ಮಾಡಿದ ಸಾವಿರಾರು ಟನ್‌ ಕಬ್ಬಿಗೆ ನೂರಾರು ಕೋಟಿ ರೂ.ಬಾಕಿ ಬರಬೇಕಿದೆ. ಇದಕ್ಕೆ ಕಾರಣ ಬಹುತೇಕ ಕಬ್ಬಿನ ಕಾರ್ಖಾನೆಗಳನ್ನು ಬಿಜೆಪಿ, ಕಾಂಗ್ರೆಸ್, ಜನತಾದಳದಲ್ಲಿರುವ ರಾಜಕಾರಣಿಗಳೇ ನಡೆಸುತ್ತಿದ್ದು, ಸರಕಾರದಲ್ಲಿ ಮಂತ್ರಿಗಳಾಗಿಯೂ ಕೂಡ ಕಾರ್ಯಭಾರ ನಡೆಸುತ್ತಿದ್ದಾರೆ. ರಾಜ್ಯ ಕಬ್ಬು ಬೆಳೆಗಾರರಿಗೆ ನ್ಯಾಯ ಒದಗಿಸಬೇಕೆಂದು ಎಂದು ಆಗ್ರಹಿಸಲಾಗುತ್ತಿದೆ ಎಂದು ಬಡಗಲಪುರ ನಾಗೇಂದ್ರ ಹೇಳಿದರು.

ಕೇಂದ್ರ ಸರಕಾರ ಕಬ್ಬಿನ ಬೆಲೆ ನಿಗದಿ ಮಾಡಲು ಶೇ 10ರಷ್ಟು ಇಳುವರಿಯ ಮಾನದಂಡ ವಿಧಿಸಿ ಕಾರ್ಖಾನೆಗೆ ಅನುಕೂಲ ಮಾಡಿಕೊಟ್ಟಿದೆ ಇದರಿಂದ ರಾಜ್ಯದಲ್ಲಿ ಕಬ್ಬು ಬೆಳೆಗಾರರು ಸಂಕಷ್ಟಕ್ಕೆ ಈಡಾಗಿದ್ದಾರೆ. ಫೆಬ್ರವರಿ 2022ರ ಹೊತ್ತಿಗೆ ರೈತರ ಆದಾಯ ದ್ವಿಗುಣಗೊಳಿಸುವುದಾಗಿ ಕೇಂದ್ರ ಸರಕಾರ ಹೇಳಿಕೆ ನೀಡಿತ್ತು. ಆದರೆ ರಸಗೊಬ್ಬರ ಮತ್ತು ಕೃಷಿಯ ಇತರೆ ಒಳಸುಳಿಗಳ ಬೆಲೆ ಗಗನಕ್ಕೇರಿಸಿ ವ್ಯವಸಾಯದ ಉತ್ಪಾದನಾ ವೆಚ್ಚವು ದ್ವಿಗುಣಗೊಂಡಿದೆ. ಇದರ ಪರಿಣಾಮ ರೈತನ ಆದಾಯದಲ್ಲಿ ನಷ್ಟ ಉಂಟಾಗಿದೆ ಎಂದು ಸರಕಾರವನ್ನು ತರಾಟೆಗೆ ತೆಗೆದುಕೊಂಡರು.

ಪ್ರೋ ಎಂ ಡಿ ನಂಜುಡ ಸ್ವಾಮಿ ಅವರು ಇದ್ದಾಗ ವಿದ್ಯುತ್ ತಾರತಮ್ಯದ ವಿರುದ್ಧ ಕರ ನಿರಾಕರಣೆ ಚಳುವಳಿಗೆ ಕರೆ ನೀಡಿದ್ದರು. ಅಂದು ರಾಜ್ಯದ ಸಾವಿರಾರು ರೈತರು ವಿದ್ಯುತ್ ಶುಲ್ಕ ಪಾವತಿ ಮಾಡಿರಲಿಲ್ಲ. 2017ರಲ್ಲಿ ರಾಜ್ಯ ಸರ್ಕಾರ ಹಳೆ ಬಾಕಿ ಮೊತ್ತ ಮನ್ನಾ ಮಾಡುತ್ತೇವೆ. ಹೊಸ ಮೀಟರ್ ಹಾಕುತ್ತೇವೆ ಹೊಸ ದರ ಪಾವತಿ ಮಾಡಿ ಎಂದು ಸೂಚನೆ ನೀಡಿದರು. ಈಗ ಸರ್ಕಾರ ಹಳೆಯ ಬಾಕಿ ಮೊತ್ತವನ್ನು ವಸೂಲಿ ಮಾಡಲು ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಕರಾ ನಿರಾಕರಣೆ ಚಳುವಳಿಯಲ್ಲಿ ಹಳೆಯ ಬಾಕಿ ಮೊತ್ತ ಮನ್ನಾ ಮಾಡಬೇಕು, ಕಬ್ಬು ಬೆಳೆಗಾರರಿಗೆ ನ್ಯಾಯ ಸಿಗಬೇಕೆಂದು ಸೋಮವಾರ ರಾಜ್ಯದ ರೈತರು ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ ಹಾಕಲು ರೈತ ಸಂಘ ತೀರ್ಮಾನ ಮಾಡಿದೆ. ಇದಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ರೈತರು ರಾಜಧಾನಿಗೆ ಬರುತ್ತಾರೆ. ನ್ಯಾಯ ಸಿಗುವವರೆಗೂ ನಾವು ವಾಪಸ್ಸು ಹೋಗುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಸಂಘದ ಮುಖಂಡ ಪಿ.ಗೋಪಾಲ್ ಮಾತನಾಡಿ, ಸರಕಾರ ಹಳೇ ವಿದ್ಯುತ್ ಬಾಕಿಯನ್ನು ಪಾವತಿ ಮಾಡದೆ ವಸೂಲಿ ಮಾಡಲು ಬಲಾತ್ಕಾರ ಕ್ರಮ ಜರುಗಿಸುತ್ತಿದೆ. ಇದರೊಂದಿಗೆ, ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ ಅವರ ಕುಟುಂಬದ ಬೆಳಕನ್ನು ನಂದಿಸುತ್ತಿದೆ. ಕೃಷಿ ಸಂಬಂಧಿತ ಉತ್ಪನ್ನಗಳ ಮೇಲೆ ದುಬಾರಿ ಜಿಎಸ್‍ಟಿ ವಿಧಿಸುವ ವಂಚನೆ ಮಾಡಲು ಮುಂದಾಗಿರುವುದನ್ನು ಖಂಡಿಸಿದರು.

ಗೋಷ್ಠಿಯಲ್ಲಿ ಸಂಘದ ರವಿಕಿರಣ್ ಪೂರ್ಣಚ್ಚ, ಚಂದ್ರಶೇಖರ್ ಗೌಡ, ಗಂಗಣ್ಣ, ಕುಮಾರ್ ಆರ್.ಎಸ್. ಉಪಸ್ಥಿತರಿದ್ದರು.

Donate Janashakthi Media

Leave a Reply

Your email address will not be published. Required fields are marked *