ಸ್ಯಾನ್ ಫ್ರಾನ್ಸಿಸ್ಕೋ: ಭಾರತದಲ್ಲಿ ಆಡಳಿತದಲ್ಲಿರುವ ಪಕ್ಷಗಳು, ತಮ್ಮ ಪ್ರತಿ ಕ್ರಮಗಳನ್ನು ನ್ಯಾಯಾಂಗ ಬೆಂಬಲಿಸಬೇಕು ಎಂದು ಬಯಸುತ್ತಿದ್ದಾರೆ. ಇನ್ನೊಂದೆಡೆ ವಿರೋಧ ಪಕ್ಷಗಳೂ ಕೂಡ ತಮ್ಮ ರಾಜಕೀಯ ಅಜೆಂಡಾ ಮುಂದುವರಿಸಲು ನ್ಯಾಯಾಂಗದ ಬೆಂಬಲ ಅಗತ್ಯವಿದೆ ಎಂದು ನಿರೀಕ್ಷೆಯಲ್ಲಿರುತ್ತದೆ. ಆದರೆ, ನ್ಯಾಯಾಂಗ ಕೇವಲ ದೇಶದ ಸಂವಿಧಾನಕ್ಕೆ ಉತ್ತರದಾಯಿತ್ವವಾಗಿರುತ್ತದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಹೇಳಿದ್ದಾರೆ.
ಅಮೆರಿಕ ಪ್ರವಾಸದಲ್ಲಿರುವ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ, ಕ್ಯಾಲಿಫೋರ್ನಿಯಾದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಅಸೋಸಿಯೇಷನ್ ಆಫ್ ಇಂಡೋ-ಅಮೇರಿಕನ್ಸ್ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ದೇಶದ ರಾಜಕೀಯ ವ್ಯವಸ್ಥೆಯ ಬಗ್ಗೆ ತಿಳಿಸಿದರು.
ನಾವು ನಮ್ಮ ಸ್ವಾತಂತ್ರ್ಯದ 75ನೇ ವರ್ಷ ಮತ್ತು ಗಣತಂತ್ರದ 72ನೇ ವರ್ಷಾಚರಣೆಯ ಈ ಸಂದರ್ಭದಲ್ಲಿ ಸ್ವಲ್ಪ ವಿಷಾದದಿಂದ ಹೀಗೆ ಹೇಳಬೇಕಿದೆ. ಪ್ರತಿಯೊಂದು ಸಂಸ್ಥೆಗೆ ಸಂವಿಧಾನ ವಹಿಸಿದ ಪಾತ್ರಗಳು ಮತ್ತು ಜವಾಬ್ದಾರಿಗಳು ಸರಿಯಾಗಿ ಅರ್ಥೈಸಿಕೊಂಡಿಲ್ಲ. ಹೀಗಾಗಿ ಪ್ರತಿಯೊಂದು ಪಕ್ಷವು ತಮ್ಮ ಅಜೆಂಡಾಗಳನ್ನು ನ್ಯಾಯಾಂಗ ಅನುಮೋದಿಸಬೇಕೆಂದು ಬಯಸುತ್ತಿವೆ. ಸಂವಿಧಾನ ಮತ್ತು ಪ್ರಜಾಸತ್ತಾತ್ಮಕ ಸಂಸ್ಥೆಗಳ ಕುರಿತು ಜನರಿಗೆ ಸರಿಯಾದ ತಿಳುವಳಿಕೆಯ ಕೊರತೆ ಇರುವುದರಿಂದ ಇಂಥ ದೋಷಪೂರಿತ ಚಿಂತನೆಯು ಮೇಲ್ಪಂಕ್ತಿಗೆ ಬರುತ್ತದೆ ಎಂದು ಎನ್ ವಿ ರಮಣ ಅವರು ಹೇಳಿದರು.
ಸಾರ್ವಜನಿಕರಲ್ಲಿ ತೀವ್ರವಾಗಿ ಪ್ರಚಾರ ಮಾಡಲಾದ ಅಜ್ಞಾನದಿಂದಾಗಿ ಅಂತಹ ಆಲೋಚನೆಗಳು ಮೂಡಿಬರಲಿದೆ. ಅವರ ಏಕೈಕ ಗುರಿಯು ಸ್ವತಂತ್ರ ಅಂಗವನ್ನು ಧಮನ ಮಾಡುವುದಾಗಿದೆ, ಅಂದರೆ, ನ್ಯಾಯಾಂಗ. ನಾನು ಸ್ಪಷ್ಟಪಡಿಸುತ್ತೇನೆ. ನಾವು ಸಂವಿಧಾನ ಮತ್ತು ಸಂವಿಧಾನಕ್ಕೆ ಮಾತ್ರ ಜವಾಬ್ದಾರರಾಗಿದ್ದೇವೆ ಎಂದರು.
ಇದೇ ವೇಳೆ ಎನ್ ವಿ ರಮಣ ಅವರು, ಗ್ರಾಮದಲ್ಲಿ ವಾಸಿಸುವ ಜನರನ್ನು ಶ್ಲಾಘಿಸಿದರು, ಭಾರತದ ಗ್ರಾಮೀಣ ಜನರು ಇಲ್ಲಿಯವರೆಗೆ ತಮ್ಮ ಕೆಲಸವನ್ನು ಗಮನಾರ್ಹವಾಗಿ ಮಾಡಿದ್ದಾರೆ ಎಂದ ಅವರು, ನಮ್ಮ ಜನರ ಸಾಮೂಹಿಕ ಬುದ್ಧಿವಂತಿಕೆಯನ್ನು ಅನುಮಾನಿಸಲು ನನಗೆ ಯಾವುದೇ ಕಾರಣವಿಲ್ಲ. ಮುಖ್ಯವಾಗಿ, ಗ್ರಾಮೀಣ ಭಾರತದ ಮತದಾರರು ತಮ್ಮ ನಗರ, ವಿದ್ಯಾವಂತ ಮತ್ತು ಶ್ರೀಮಂತ ನಾಗರೀಕರಿಗಿಂತ ಈ ಕಾರ್ಯವನ್ನು ಕೈಗೊಳ್ಳುವಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಭಾರತ ಮತ್ತು ಅಮೆರಿಕ ಎರಡೂ ತಮ್ಮ ವೈವಿಧ್ಯತೆಗೆ ಹೆಸರುವಾಸಿಯಾಗಿದ್ದು, ಇದನ್ನು ವಿಶ್ವದ ಎಲ್ಲೆಡೆ ಗೌರವಿಸಬೇಕು ಮತ್ತು ಬೆಳೆಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಹೇಳಿದ್ದಾರೆ.
ಅರ್ಹ ಪ್ರತಿಭೆಗಳನ್ನು ಗೌರವಿಸುವುದು ಅಗತ್ಯ
ವಿವಿಧ ಹಿನ್ನೆಲೆಯ ಅರ್ಹ ಪ್ರತಿಭೆಗಳನ್ನು ಗೌರವಿಸುವ ಮೂಲಕ ಸಮಾಜದ ಎಲ್ಲ ವರ್ಗದವರಿಗೂ ವ್ಯವಸ್ಥೆಯಲ್ಲಿನ ನಂಬಿಕೆಯನ್ನು ಎತ್ತಿ ಹಿಡಿಯಲು ಸಾಧ್ಯವಾಗಬೇಕಿದೆ ಎಂದರು. ಅಮೆರಿಕದಲ್ಲಿರುವ ಭಾರತೀಯ ಮೂಲದ ಜನರು ಸಾಧಾರಣ ಆರಂಭದಿಂದಲೂ ಆಧುನಿಕ ಅಮೆರಿಕವನ್ನು ನಿರ್ಮಿಸುವಲ್ಲಿ ಸಕ್ರಿಯ ಪಾತ್ರ ವಹಿಸಿದ್ದಾರೆ. ಅವರು ತಮ್ಮ ಗುರುತನ್ನು ಮಾತ್ರವಲ್ಲದೆ ಈ ದೇಶದ ಮುಖವನ್ನೂ ಬದಲಾಯಿಸಿದ್ದಾರೆ ಎಂದು ಹೇಳಿದರು.