ಮಂಗಳೂರು: ಧರ್ಮಸ್ಥಳದ ಅಸಹಜ ಸಾವು ಪ್ರಕರಣಕ್ಕೆ ಸಂಬಂಧಿಸಿದ ತನಿಖೆ ದಿನದಿಂದ ದಿನಕ್ಕೆ ರೋಚಕ ತಿರುವು ಪಡೆಯುತ್ತಿದೆ. ಈ ಪ್ರಕರಣದಲ್ಲಿ ನ್ಯಾಯಾಧೀಶ ವಿಜಯಕುಮಾರ್ ರೈ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಮತ್ತು ಡಿ. ಹರ್ಷೇಂದ್ರ ಕುಮಾರ್ ರಿಗೆ ಸಂಬಂಧಿಸಿದ ಯಾವುದೇ ಮಾನಹಾನಿಕರ ವಿಷಯವನ್ನು ಪ್ರಕಟಿಸದಂತೆ ನಿರ್ದೇಶಿಸಲು ಸಂಬಂಧಿಸಿದ ದಾವೆಯನ್ನು ಬೇರೊಂದು ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಮನವಿ ಮಾಡಿದ್ದಾರೆ.
ಡಿ. ಹರ್ಷೇಂದ್ರ ಕುಮಾರ್ ಧರ್ಮಸ್ಥಳದ ಅಸಹಜ ಸಾವುಗಳ ಬಗ್ಗೆ ಮಾಧ್ಯಮಗಳು ತಮ್ಮ ಕುಟುಂಬವನ್ನು ಎಳೆಯುತ್ತಿವೆ ಎಂದು ಆರೋಪಿಸಿ, ಯಾವುದೇ ವಿಷಯವನ್ನು ಪ್ರಕಟಿಸದಂತೆ ನಿರ್ಬಂಧಕಾಜ್ಞೆ ಕೋರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್‌ಗೆ ಜುಲೈ 18ರಂದು ದಾವೆ ಸಲ್ಲಿಸಿದ್ದರು.
ಈ ದಾವೆಯ ವಿಚಾರಣೆಯನ್ನು ನಡೆಸಿದ ನ್ಯಾಯಾಧೀಶ ವಿಜಯಕುಮಾರ್ ರೈ ಅವರು ಮಾಧ್ಯಮಗಳ ವಿರುದ್ಧ ಏಕಪಕ್ಷೀಯ ನಿರ್ಬಂಧಕಾಜ್ಞೆಯನ್ನು ಹೊರಡಿಸಿದ್ದರು. ಆದರೆ, ಪತ್ರಕರ್ತ ನವೀನ್ ಸೂರಿಂಜೆ, ಸಾಮಾಜಿಕ ಕಾರ್ಯಕರ್ತರಾದ ಮುನೀರ್ ಕಾಟಿಪಳ್ಳ ಮತ್ತು ಬೈರಪ್ಪ ಹರೀಶ್ ಕುಮಾರ್ ಅವರು ಸಲ್ಲಿಸಿದ ಮಧ್ಯಂತರ ಮೆಮೊದಲ್ಲಿ, ನ್ಯಾಯಾಧೀಶರ ಈ ಆದೇಶವನ್ನು ಪ್ರಶ್ನಿಸಲಾಗಿತ್ತು.
ಇದನ್ನೂ ಓದಿ: ಸಾರಿಗೆ ನೌಕರರ ಸಂಘಟನೆಯ ಮುಖಂಡರ ಜತೆ ಸಿಎಂ ಸಿದ್ದರಾಮಯ್ಯ ಸಭೆ ವಿಫಲ; ಆಗಸ್ಟ್ 5ರಂದು ಮುಷ್ಕರ
ನ್ಯಾಯಾಧೀಶ ವಿಜಯಕುಮಾರ್ ರೈ ಅವರು ತಾವು 25 ವರ್ಷಗಳ ಹಿಂದೆ ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥ ಕಾನೂನು ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದವರು ಮತ್ತು ಹೆಗ್ಗಡೆ ಕುಟುಂಬದ ಸಂಸ್ಥೆಯೊಂದಿಗೆ ಸಂಬಂಧ ಹೊಂದಿದ್ದವರು ಎಂದು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ, ತಾವು ಈ ಪ್ರಕರಣದ ವಿಚಾರಣೆಯನ್ನು ನಡೆಸಿದರೆ ಜನರು ತೀರ್ಪಿನ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡಬಹುದು ಎಂದು ಆತಂಕ ವ್ಯಕ್ತಪಡಿಸಿದ ಅವರು, ಈ ದಾವೆಯನ್ನು ಬೇರೊಂದು ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಮನವಿ ಮಾಡಿದ್ದಾರೆ.
ಇದೇ ವೇಳೆ, ಧರ್ಮಸ್ಥಳದ ಸುತ್ತಲಿನ ಕಾಡಿನಲ್ಲಿ ನೂರಾರು ಶವಗಳನ್ನು ಹೂತಿಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ) ತನ್ನ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ.
ಬಂಗ್ಲೆಗುಡ್ಡೆ ಎಂಬ ಸ್ಥಳದಲ್ಲಿ ದೂರುದಾರನ ಸೂಚನೆಯಂತೆ ನಡೆಸಿದ ಉತ್ಖನನದಲ್ಲಿ ಹಲವಾರು ಅಸ್ಥಿಪಂಜರಗಳು, ಕೆಲವು ಮೂಳೆಗಳು, ಕಟ್ಟಿದ ಸೀರೆ, ಮತ್ತು ಪುರುಷರ ಚಪ್ಪಲಿಗಳು ಸಿಕ್ಕಿವೆ. ಈ ಶೋಧ ಕಾರ್ಯವು ಆಗಸ್ಟ್ 4ರಂದು ನಡೆದಿದ್ದು, 11ನೇ ಸ್ಥಳದ ಉತ್ಖನನವನ್ನು ಸ್ಥಗಿತಗೊಳಿಸಿ, ಹೊಸದಾಗಿ ಗುರುತಿಸಲಾದ ಸ್ಥಳಕ್ಕೆ ಗಮನ ಹರಿಸಲಾಗಿದೆ.
ಶನಿವಾರ (ಆಗಸ್ಟ್ 2, 2025) ದಕ್ಷಿಣ ಕನ್ನಡ ಜಿಲ್ಲೆಯ ಇಚಿಲಂಪಾಡಿ ನಿವಾಸಿಯಾದ ಜಯಂತ್ ಎಂಬುವವರು ಎಸ್‌ಐಟಿ ಕಚೇರಿಗೆ ಆಗಮಿಸಿ, 15 ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ಒಬ್ಬ ಬಾಲಕಿಯ ಶವವನ್ನು ಹೂತಿಡಲಾಗಿದೆ ಎಂದು ತಾವು ಪ್ರತ್ಯಕ್ಷ ಸಾಕ್ಷಿಯಾಗಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ.
ಈ ಆಧಾರದ ಮೇಲೆ ಎಸ್‌ಐಟಿ ಅವರನ್ನು ಮತ್ತೆ ವಿಚಾರಣೆಗೆ ಕರೆದಿದ್ದು, ತನಿಖೆ ತೀವ್ರಗೊಂಡಿದೆ. ಈಗಾಗಲೇ 6ನೇ ಸ್ಥಳದ ಉತ್ಖನನದಲ್ಲಿ 25 ಮೂಳೆಗಳನ್ನು ಕಂಡುಹಿಡಿಯಲಾಗಿದ್ದು, ಇವುಗಳನ್ನು ಫಾರೆನ್ಸಿಕ್ ವಿಶ್ಲೇಷಣೆಗೆ ಕಳುಹಿಸಲಾಗಿದೆ.
ಇದನ್ನೂ ನೋಡಿ: ಧರ್ಮಸ್ಥಳದ ಕೊಲೆ ಪ್ರಕರಣ | ಉಗ್ರಪ್ಪ ಸಮಿತಿಯಲ್ಲಿ ಏನಿತ್ತು? ವಿ.ಎಸ್. ಉಗ್ರಪ್ಪ ಜೊತೆ ಮಾತುಕತೆJanashakthi Media
