ಜಿಂದಾಲ್‌ಗೆ ಭೂಮಿ: ವಿರೋಧಿಸಿದವರೆ ಇಂದು ಅದೇ ಜಾಗವನ್ನು ಜಿಂದಾಲ್‌ಗೆ ಮಾರಿದ್ದಾರೆ- ಹೆಚ್‌ಡಿಕೆ

ಬೆಂಗಳೂರು: ‘ಬಿಎಸ್‌ವೈ ಅಹೋರಾತ್ರಿ ಧರಣಿ, ಬಿಜೆಪಿ ಯುವ ಮೋರ್ಚಾದಿಂದ ವಿಧಾನಸೌಧ ಮುತ್ತಿಗೆ, ಮೈತ್ರಿ ಸರ್ಕಾರದ ಮೇಲೆ ಕಿಕ್‌ ಬ್ಯಾಕ್‌ ಆರೋಪ…’ ಜಿಂದಾಲ್‌ಗೆ 3677 ಎಕರೆ ಭೂಮಿ ಮಾರಾಟ ಮಾಡಲು ನಿರ್ಧರಿಸಿದ್ದ ಹಿಂದಿನ ಮೈತ್ರಿ ಸರ್ಕಾರದ ವಿರುದ್ಧ ಭಾರತೀಯ ಜನತಾ ಪಕ್ಷ(ಬಿಜೆಪಿ) ಹೋರಾಟ ನಡೆಸಿದ್ದವು. ಆದರೆ ಇಂದು ಅದೇ ಬಿಜೆಪಿ ಪಕ್ಷ ಜಿಂದಾಲ್‌ಗೆ ಅದೇ ಭೂಮಿಯನ್ನು ಸದ್ದಿಲ್ಲದೇ ಮಾರಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ಬಿಜೆಪಿ ವಿರುದ್ಧ ಆರೋಪ ಮಾಡಿದ್ದಾರೆ.

ಇದನ್ನು ಓದಿ: ಊರಿನತ್ತ ಹೊರಟ ಜನ : ವಸೂಲಿಗಿಳಿದ ಖಾಸಗಿ ಬಸ್ ಗಳು

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ವಿರೋಧಕ್ಕಾಗಿಯೇ ವಿರೋಧ ಮಾಡುವುದು, ವಿರೋಧ ಪಕ್ಷದಲ್ಲಿದ್ದಾಗ ವಿರೋಧಿಸಿದ್ದನ್ನೇ ಆಡಳಿತಕ್ಕೆ ಬಂದಾಗ ಕದ್ದು ಮುಚ್ಚಿ ಮಾಡುವುದು ಬಿಜೆಪಿಯ ‘ಸಂಸ್ಕೃತಿ’ಯಾಗಿದೆ. ಜಿಂದಾಲ್‌ಗೆ ಭೂಮಿ ನೀಡುವ ವಿಚಾರದಲ್ಲಿ ಅಂದು ನನ್ನ ಸರ್ಕಾರದ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದ್ದ ಬಿಎಸ್‌ವೈ ಇಂದು ಅದೇ ಆರೋಪಗಳನ್ನು ತಮ್ಮ ಮೇಲೆ ಹೊತ್ತುಕೊಳ್ಳುವರೇ? ಎಂದು ಪ್ರಶ್ನಿಸಿದ್ದಾರೆ.

”ಆಗ ಕಾಂಗ್ರೆಸ್‌ ಶಾಸಕರಾಗಿದ್ದ, ಈಗ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿರುವ ಆನಂದ್‌ ಸಿಂಗ್‌ ಜಿಂದಾಲ್‌ ಅನ್ನು’ಈಸ್ಟ್‌ ಇಂಡಿಯಾ ಕಂಪನಿ’ ಎಂದಿದ್ದರು. ಜಿಂದಾಲ್‌ ವಿರುದ್ಧ ಅಂದಿನ ಗೃಹ ಸಚಿವರಿಗೆ ಪತ್ರ ಬರೆದಿದ್ದರು. ಅವರೇ ಇರುವ ಈಗಿನ ಸಂಪುಟ ಸಭೆ ಜಿಂದಾಲ್‌ಗೆ ಭೂಮಿ ನೀಡಿದೆ. ಆನಂದ್‌ ಸಿಂಗ್‌ ಈಗ ಈಸ್ಟ್‌ ಇಂಡಿಯಾ ಕಂಪನಿ ಪರವಾಗಿದ್ದಾರಾ?” ಎಂದು ಟ್ವಿಟ್ಟರ್‌ ನಲ್ಲಿ ಆನಂದ್‌ ಸಿಂಗ್‌ ನಡೆಯ ಬಗ್ಗೆ ವಿವರಿಸಿದ್ದಾರೆ.

ಇದನ್ನು ಓದಿ: ಉಚಿತ ಕೊರೊನಾ ಲಸಿಕೆ ಘೋಷಿಸಿದ ಕರ್ನಾಟಕ ಸರ್ಕಾರ

ಜಿಂದಾಲ್‌ಗೆ ಭೂಮಿ ನೀಡುವುದಕ್ಕೆ ಸಂಬಂಧಿಸಿದಂತೆ ಅಂದು ಮೈತ್ರಿ ಸರ್ಕಾರದ ಭಾಗವಾಗಿದ್ದುಕೊಂಡೇ ಟೀಕೆ ಮಾಡಿದ್ದ, ದಾಖಲೆ, ಪತ್ರಗಳನ್ನು ಬಿಡುಗಡೆ ಮಾಡಿದ್ದ ಕಾಂಗ್ರೆಸ್‌ ಪಕ್ಷದ ನಾಯಕ ಎಚ್‌.ಕೆ ಪಾಟೀಲ್‌ ಅವರು ಈಗ ಏನು ಮಾಡುತ್ತಿದ್ದಾರೆ. ಅವರ ದಾಖಲೆ ಪತ್ರಗಳೆಲ್ಲವೂ ಎಲ್ಲಿ ಅಡಗಿಕೊಂಡಿವೆ? ಈಗ ಅವುಗಳನ್ನು ಮತ್ತೊಮ್ಮೆ ಬಿಡುಗಡೆ ಮಾಡಲು ಯಾರು ಅಡ್ಡ ಇದ್ದಾರೆ? ಎಂದು ಅವರು ಪ್ರಶ್ನಿಸಿದ್ದಾರೆ.

”ಜಿಂದಾಲ್‌ ಕಂಪನಿಗೆ 3,667 ಎಕರೆ ಭೂಮಿ ಮಾರಾಟ ಮಾಡಲು ಬಿಜೆಪಿ ಸರ್ಕಾರದ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಆದರೆ, ಎಕರೆವಾರು ಶುದ್ಧ ಕ್ರಯಕ್ಕೆ ನಿಗದಿ ಮಾಡಿದ ಮೊತ್ತವೆಷ್ಟು ಎಂಬ ಪ್ರಶ್ನೆಗೆ ಗೃಹ ಸಚಿವರೇ ‘ಗೊತ್ತಿಲ್ಲ’ ಎಂಬ ಉತ್ತರ ನೀಡಿದ್ದಾರೆ. ಸ್ವತಃ ಗೃಹ ಸಚಿವರಿಗೇ ಮಾಹಿತಿ ಇಲ್ಲ ಎಂದರೆ ಏನು ಅರ್ಥ? ಇದನ್ನು ನಂಬಲು ಸಾಧ್ಯವೇ” ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ವಿರುದ್ಧ ಕುಮಾರಸ್ವಾಮಿ ಆರೋಪಿಸಿದ್ದಾರೆ.

ಇದನ್ನು ಓದಿ: ನಾಳೆಯಿಂದ ಕರ್ನಾಟಕ್‌ ʼಲಾಕ್ʼ : ಸಂಪುಟ ಸಭೆ ತೀರ್ಮಾನ

ಲೀಸ್‌ ಕಂ ಸೇಲ್‌ ಆಧಾರದ ಭೂಮಿಯನ್ನು ಶುದ್ಧ ಕ್ರಯ ಮಾಡಿಕೊಡಬೇಕಾದ್ದು ಕಾನೂನು. ಅದನ್ನೇ ಹಿಂದೆ ನಾನು ಮುಖ್ಯಮಂತ್ರಿಯಾಗಿದ್ದ ಮೈತ್ರಿ ಸರ್ಕಾರ ಮಾಡಲು ಹೊರಟಿತ್ತು. ಆದರೆ ಬಿಜೆಪಿ ಪಕ್ಷವು ಕಿತಾಪತಿ ಮಾಡಿತ್ತು. ಜನರಲ್ಲಿ ಮೂಡಬಹುದಾದ ಸಂಶಯ ನಿವಾರಣೆ ಮಾಡಿ ನಂತರ ಭೂಮಿ ನೀಡುವ ನಿರ್ಧಾರಕ್ಕೆ ಬಂದ ನನ್ನ ಸರ್ಕಾರ ಮಾರಾಟ ಪ್ರಕ್ರಿಯೆಯನ್ನು ನಿಲ್ಲಿಸಿತ್ತು. ಬಿಜೆಪಿಗೆ ಈಗ ಜ್ಞಾನೋದಯವಾಗಿದೆ ಎಂದು ಟೀಕಿಸಿದ್ದಾರೆ.

ಬಿಜೆಪಿ ಸರ್ಕಾರ ಜಿಂದಾಲ್‌ ಮುಂದೆ ಏಕಾಏಕಿ ಮಂಡಿಯೂರಲೂ ಒಂದು ಕಾರಣವಿದೆ. ಅದೇನೆಂದು ಯಡಿಯೂರಪ್ಪರಿಗೆ ಚನ್ನಾಗಿ ಗೊತ್ತಿದೆ. ಅದನ್ನು ಅವರೇ ಬಹಿರಂಗಪಡಿಸಲಿ. ಲೀಸ್‌ ಕಂ ಸೇಲ್‌ ಆಧಾರದ ಭೂಮಿಯನ್ನು ಅಂತಿಮವಾಗಿ ಕ್ರಯ ಮಾಡಿಕೊಡಲೇಬೇಕಾದ ಕಾನೂನು ಬಿಜೆಪಿಗೆ ಈಗಲಾದರೂ ಅರಿವಿಗೆ ಬಂದಿದ್ದರೆ ಸಾಕು. ಇನ್ನಾದರೂ ಬಿಜೆಪಿ ಸಲ್ಲದ ಕಿತಾಪತಿ ಮಾಡದಿರಲಿ ಎಂದು  ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *