ನವದೆಹಲಿ : ಅನಾರೋಗ್ಯದಿಂದ ಅಪೊಲೋ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಿರಿಯ ಪತ್ರಕರ್ತ ವಿನೋದ್ ದುವಾ ಶನಿವಾರ ನಿಧನರಾಗಿದ್ದಾರೆ. ಅವರಿಗೆ 67 ವರ್ಷ ವಯಸ್ಸಾಗಿತ್ತು.
ಭಾರತದಲ್ಲಿ ಟಿವಿ ಪತ್ರಿಕೋದ್ಯಮದ ಪ್ರವರ್ತಕರು ಎನಿಸಿದ್ದ ವಿನೋದ್ ದುವಾ ದೂರದರ್ಶನ ಮತ್ತು ಎನ್‌ಡಿಟಿವಿಯೊಂದಿಗೆ ಇತರ ಟಿವಿ ಚಾನೆಲ್‌ಗಳು ಮತ್ತು ಆನ್‌ಲೈನ್ ಪೋರ್ಟಲ್‌ಗಳಲ್ಲಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದರು. ಆ ಮೂಲಕ ಪತ್ರಿಕೋದ್ಯಮಕ್ಕಾಗಿ ತಮ್ಮ ಜೀವನದ ಹೆಚ್ಚಿನ ಭಾಗವನ್ನು ಅರ್ಪಿಸಿದ್ದರು.
ಖ್ಯಾತ ಪತ್ರಕರ್ತರಾಗಿದ್ದ ವಿನೋದ್ ದುವಾ ಅವರಿಗೆ ಇದೇ ವರ್ಷದ ಆರಂಭದಲ್ಲಿ ಕೋವಿಡ್-19 ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ರೇಡಿಯಾಲಜಿಸ್ಟ್ ಆಗಿದ್ದ ಅವರ ಪತ್ನಿ ಪದ್ಮಾವತಿ ಕೂಡಾ ಕೊರೋನಾದಿಂದ ಜೂನ್ ನಲ್ಲಿ ನಿಧನರಾಗಿದ್ದರು.
ನವದೆಹಲಿಯ ಲೋಧಿ ಸ್ಮಶಾನದಲ್ಲಿ ಭಾನುವಾರ ವಿನೋದ್ ದುವಾ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರ ಪುತ್ರಿ ಮಲ್ಲಿಕಾ ದುವಾ ತಿಳಿಸಿದ್ದಾರೆ.
“ನಮ್ಮ ಪೂಜ್ಯ, ನಿರ್ಭೀತ ಮತ್ತು ಅಸಾಧಾರಣವಾಗಿದ್ದ ತಂದೆ, ವಿನೋದ್ ದುವಾ ನಿಧನರಾಗಿದ್ದಾರೆ. ಅವರು ಅಪ್ರತಿಮ ಜೀವನವನ್ನು ನಡೆಸಿದರು, 42 ವರ್ಷಗಳ ಕಾಲ ಪತ್ರಿಕೋದ್ಯಮದ ಉತ್ತುಂಗದ ಶಿಖರಕ್ಕೆ ಏರಿದ್ದರು. ಯಾವಾಗಲೂ, ಯಾವಾಗಲೂ ಅಧಿಕಾರದ ಸತ್ಯವನ್ನು ಮಾತನಾಡುತ್ತಿದ್ದರು. ಅವರು ಈಗ ನಮ್ಮ ತಾಯಿ ಹಾಗೂ ಅವರ ಪ್ರೀತಿಯ ಪತ್ನಿ ಚಿನ್ನಾರೊಂದಿಗೆ ಸ್ವರ್ಗದಲ್ಲಿದ್ದಾರೆ. ಅಲ್ಲಿ ಅವರು ಹಾಡುತ್ತಾ, ಅಡುಗೆ ಮಾಡುತ್ತಾ, ಪರಸ್ಪರ ಡ್ರೈವಿಂಗ್ ಮಾಡುತ್ತಾ ಪ್ರಯಾಣಿಸುತ್ತಿದ್ದಾರೆ,” ಎಂದು ಹಿರಿಯ ಪತ್ರಕರ್ತ ವಿನೋದ್ ದುವಾ ಅವರ ಪುತ್ರಿ ಮಲ್ಲಿಕಾ ದುವಾ ಬರೆದುಕೊಂಡಿದ್ದಾರೆ.