ಬೆಂಗಳೂರು: ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಕನ್ನಡ ಪತ್ರಿಕೋದ್ಯಮದಲ್ಲಿ ಅನುಪಮ ಸೇವೆ ಸಲ್ಲಿಸಿದ ಪತ್ರಕರ್ತರಿಗೆ ನೀಡುವ ಟಿ.ಎಸ್. ರಾಮಚಂದ್ರರಾವ್ (ಟಿಎಸ್ಆರ್) ಪತ್ರಿಕೋದ್ಯಮ ಪ್ರಶಸ್ತಿ ಹಾಗೂ ಕನ್ನಡ ಪತ್ರಿಕೆ ಅಥವಾ ಪತ್ರಿಕಾ ಸಮೂಹವನ್ನು ಕಟ್ಟಿ ಬೆಳೆಸಿದ ಪತ್ರಕರ್ತರ ಸಾಧನೆ ಗುರುತಿಸಿ ನೀಡುವ ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಮೊಹರೆ
ಕೋವಿಡ್ ಸೇರಿ ನಾನಾ ಕಾರಣಗಳಿಂದ ವಿಳಂಬವಾಗಿದ್ದ 2019 ರಿಂದ 2023ನೇ ಸಾಲಿನ ಒಟ್ಟು 5 ವರ್ಷಗಳ ಅವಧಿಯ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ಹೈ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಪಿ.ಎನ್.ದೇಸಾಯಿ ಅಧ್ಯಕ್ಷತೆಯ ರಚಿತವಾದ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಹಿರಿಯ ಪತ್ರಕರ್ತರಾದ ಡಾ.ಈಶ್ವರ ದೈತೋಟ, ಶಾಂತಲಾ ಧರ್ಮರಾಜ್, ಎಂ.ಎಸ್.ಮಣಿ ಹಾಗೂ ಸದಸ್ಯ ಕಾರ್ಯದರ್ಶಿಗಳಾದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಹೇಮಂತ್ ಎಂ.ನಿಂಬಾಳ್ಕರ್ ಅವರಿದ್ದರು. ಈ ಸಮಿತಿಯ ಶಿಫಾರಸ್ಸುಗಳನ್ನು ಸರಕಾರ ಅನುಮೋದಿಸಿ ಪ್ರಶಸ್ತಿ ಘೋಷಿಸಿದೆ. ಮೊಹರೆ
ಟಿ.ಎಸ್. ರಾಮಚಂದ್ರರಾವ್ ಪತ್ರಿಕೋದ್ಯಮ ಪ್ರಶಸ್ತಿ
ಕನ್ನಡ ಪತ್ರಿಕೋದ್ಯಮವನ್ನು ಹೊಸ ಎತ್ತರಕ್ಕೊಯ್ದ ದಿಗ್ಗಜ ದಿ. ಶ್ರೀ ಟಿ.ಎಸ್. ರಾಮಚಂದ್ರರಾವ್. ಸಮಾಜ, ರಾಜಕಾರಣದ ಓರೆ ಕೋರೆಗಳಿಗೆ ಇವರ ‘ಛೂ ಬಾಣ’ದ ಮೂಲಕ ಪತ್ರಿಕಾ ಭಾಷೆಗೆ ಹೊಸ ರೂಪ ನೀಡಿದವರು. ಇಂಗ್ಲಿ ನಿಯತಕಾಲಿಕವೊಂದನ್ನು ಸಂಪಾದಿಸುತ್ತಿದ್ದ ಟೀಯೆಸ್ಸಾರ್ ಮೊನಚು ಬರಹಗಳಿಂದಲೇ ಓದುಗರ ಹೃದಯ ಗೆದ್ದವರು. ಮೊಹರೆ
ನಂತರ ಪ್ರಜಾವಾಣಿಯ ಮೂಲಕ ಕನ್ನಡ ಪತ್ರಿಕೋದ್ಯಮಕ್ಕೂ ಈ ಶೈಲಿಯ ಪರಿಚಯ. ಕನ್ನಡ ಪತ್ರಿಕೋದ್ಯಮದಲ್ಲಿ ಅನುಪಮ ಸೇವೆ ಸಲ್ಲಿಸುವ ಪತ್ರಕರ್ತರೊಬ್ಬರಿಗೆ ಅವರ ನೆನಪಿನಲ್ಲಿ 1993ರಿಂದ ಕರ್ನಾಟಕ ಸರ್ಕಾರ ಪ್ರತಿ ವರ್ಷ “ಟಿಯೆಸ್ಸಾರ್ ಪತ್ರಿಕೋದ್ಯಮ ಪ್ರಶಸ್ತಿ’ ನೀಡುತ್ತದೆ. ಈ ಪ್ರಶಸ್ತಿ ಮೊತ್ತ 2 ಲಕ್ಷ ರೂಪಾಯಿಗಳು ನಗದು ಹಾಗೂ ಸ್ಮರಣಿಕೆಗಳನ್ನು ಒಳಗೊಂಡಿದೆ. 2018 ರವರೆಗೆ 26 ಜನ ಹಿರಿಯ ಪತ್ರಕರ್ತರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 2019 ರಿಂದ 2023 ರವರೆಗಿನ 5 ವರ್ಷಗಳ ಅವಧಿಯ ಪ್ರಶಸ್ತಿಗಳನ್ನು ಇದೀಗ ಸರ್ಕಾರ ಪ್ರಕಟಿಸಿದೆ. ಮೊಹರೆ
2019ನೇ ಸಾಲಿಗೆ ಶಿವಾಜಿ ಎಸ್ ಗಣೇಶನ್:
1978ರಿಂದ ಪ್ರಜಾವಾಣಿ ಕನ್ನಡ ದಿನಪತ್ರಿಕೆಯ ವಿವಿಧ ಹುದ್ದೆಗಳಲ್ಲಿ ಸುಮಾರು 33 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ತುಮಕೂರು, ನವದೆಹಲಿ ಸೇರಿದಂತೆ ವಿವಿಧೆಡೆ ವರದಿಗಾರರಾಗಿ ಮಹತ್ವಪೂರ್ಣ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಆಂದೋಲನ ದಿನಪತ್ರಿಕೆಯಲ್ಲಿ ಅಂಕಣ ಬರಹ ಮುಂದುವರಿಸಿರುವ ಶಿವಾಜಿ ಗಣೇಶನ್ ಅವರು 2015ರಲ್ಲಿ ಸರಕಾರ ನಿಯೋಜಿಸಿದ್ದ “ಕರ್ನಾಟಕದಲ್ಲಿ ಜೀತಪದ್ದತಿ ಪರಿಶೀಲನಾ ಸಮಿತಿ” ಅಧ್ಯಕ್ಷರಾಗಿ 2 ವರ್ಷಗಳ ಕಾಲ ಅಧ್ಯಯನ ಮಾಡಿ ನೀಡಿದ ವರದಿಯ ಕೆಲ ಶಿಫಾರಸ್ಸುಗಳನ್ನು ಸರಕಾರ ಜಾರಿಗೊಳಿಸಿದೆ. ಕರ್ನಾಟಕದಲ್ಲಿ ದಲಿತ ಚಳವಳಿಯ ಹೆಜ್ಜೆಗಳು, ದೇವೇಗೌಡರ ಪ್ರಧಾನಿಯ ದಿನಗಳು ಸೇರಿದಂತೆ ಅನೇಕ ಕೃತಿಗಳನ್ನು ಪ್ರಕಟಿಸಿದ್ದಾರೆ.
2020ನೇ ಸಾಲಿಗೆ ಶ್ರೀಕಾಂತಾಚಾರ್ಯ.ಆರ್.ಮಣೂರ:
1973ರಿಂದ ಸಂಯುಕ್ತ ಕರ್ನಾಟಕದಲ್ಲಿ ಸೇವೆ ಆರಂಭಿಸಿದ ಇವರು ಇದೇ ಪತ್ರಿಕೆಯ ವಿವಿಧ ಹುದ್ದೆಗಳಲ್ಲಿ 44 ವರ್ಷಗಳ ಸೇವೆ ಸಲ್ಲಿಸಿ ಕಲಬುರಗಿ ಆವೃತ್ತಿಯ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾಗಿದ್ದಾರೆ. ಕಲಬುರಗಿ-ವಿಜಯಪುರ ಜಿಲ್ಲೆಗಳಿಗೆ ಸಂಬಂಧಿಸಿದಂತೆ ಕೃಷ್ಣೆ-ಭೀಮೆ ನದಿಗಳ ಯೋಜನೆಗಳು ಹಾಗೂ 371ಜೆ ಸೌಲಭ್ಯ ಕುರಿತು ಅಗ್ರ ಲೇಖನಗಳನ್ನು ಬರೆದಿದ್ದಾರೆ.
ಹೈದರಾಬಾದ್ ಕರ್ನಾಟಕ ವಿಮೋಚನೆ ಕುರಿತು ಪುಸ್ತಿಕೆ,ಸಂವಿಧಾನ ತಿದ್ದುಪಡಿ 371(ಜೆ)ಕುರಿತು ಪುಸ್ತಕಗಳನ್ನು ರಚಿಸಿದ್ದಾರೆ.
2021ನೇ ಸಾಲಿಗೆ ಡಾ.ಆರ್.ಪೂರ್ಣಿಮಾ:
1981ರಿಂದ ವೃತ್ತಿ ಆರಂಭಿಸಿದ ಅವರು ಪ್ರಜಾವಾಣಿ,ಉದಯವಾಣಿಯಲ್ಲಿ ಸುದೀರ್ಘ ಸೇವೆ ಸಲ್ಲಿಸಿರುವ ಇವರು ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಕನ್ನಡದ ಪ್ರಮುಖ ದಿನಪತ್ರಿಕೆಯ ಸಂಪಾದಕ ಸ್ಥಾನದ ಜವಾಬ್ದಾರಿ ಹೊತ್ತ ಪ್ರಥಮ ಮಹಿಳೆ ಎಂಬ ಹಿರಿಮೆ ಇವರದ್ದು. ಹೆಸರಾಂತ ಪತ್ರಕರ್ತ ಕುಲದೀಪ್ ನಯ್ಯರ್ ಆತ್ಮಕಥೆ “ಒಂದು ಜೀವನ ಸಾಲದು” ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ.
ನಾಡಿನ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
2022ನೇ ಸಾಲಿಗೆ ಡಾ.ಪದ್ಮರಾಜ ದಂಡಾವತಿ:
ಮೂಲತಃ ವಿಜಯಪರು ಜಿಲ್ಲೆಯ ಮುದ್ದೆಬಿಹಾಳದವರಾದ ಪದ್ಮರಾಜ ದಂಡಾವತಿ ಇವರು 1982ರಲ್ಲಿ ಪ್ರಜಾವಾಣಿಗೆ ಸೇರಿ 36 ವರ್ಷಗಳಿಗೂ ಹೆಚ್ಚು ಕಾಲ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾಗಿದ್ದಾರೆ. ಕನ್ನಡ ಪತ್ರಿಕೋದ್ಯಮ 30 ವರ್ಷ ಎಂಬ ಪ್ರಬಂಧಕ್ಕೆ ಹಂಪಿಯ ಕನ್ನಡ ವಿವಿಯು ಡಿ.ಲಿಟ್ ಪದವಿ ನೀಡಿದೆ. ಪತ್ರಿಕಾ ಭಾಷೆ, ರಿಪೋರ್ಟಿಂಗ್, ಅವಲೋಕನ ಸೇರಿದಂತೆ ವಿವಿಧ ಕೃತಿಗಳು ಹೊರಬಂದಿವೆ. ಇವರ ಪ್ರಸಿದ್ಧ ಅಂಕಣ ನಾಲ್ಕನೇ ಆಯಾಮದ ಸಂಕಲನವು 6 ಸಂಪುಟಗಳಲ್ಲಿ ಪ್ರಕಟವಾಗಿದೆ. ಸೀತಾರಾಮಾಯಣ:ಸಚಿತ್ರ ಮರುಕಥನ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ.
2023ನೇ ಸಾಲಿಗೆ ಡಾ.ಸರಜೂ ಕಾಟ್ಕರ್:
ಬೆಳಗಾವಿಯವರಾದ ಇವರು ಸಂಯುಕ್ತ ಕರ್ನಾಟಕ, ಕನ್ನಡಪ್ರಭ, ದಿ ಇಂಡಿಯನ್ ಎಕ್ಸಪ್ರೆಸ್ ಸೇರಿದಂತೆ ವಿವಿಧ ಪತ್ರಿಕೆಗಳಲ್ಲಿ 45 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. 15 ಕವನ ಸಂಕಲನಗಳು, 4 ಅನುವಾದಿತ ಕೃತಿಗಳು ಸೇರಿದಂತೆ ಪಾಟೀಲ್ ಪುಟ್ಟನವರ ಆತ್ಮಕಥೆ ನಿರೂಪಣೆ, ಹಲವು ವ್ಯಕ್ತಿಚಿತ್ರಗಳನ್ನು ಪ್ರಕಟಿಸಿದ್ದಾರೆ. ಇವರ ಕವನ,ಲೇಖನ,ಕಥೆ-ಕಾದಂಬರಿಗಳು ಕರ್ನಾಟಕ,ಮಹಾರಾಷ್ಟ್ರ ಹಾಗೂ ನೇಪಾಳದ ಹಲವಾರು ವಿಶ್ವವಿದ್ಯಾಲಯಗಳು,ಶಾಲಾ-ಕಾಲೇಜುಗಳಿಗೆ ಪಠ್ಯಗಳಾಗಿರುವುದು ವಿಶೇಷ.
ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿ:
ಕನ್ನಡ ಪತ್ರಿಕಾ ರಂಗದ ಭೀಷ್ಮ ಎಂದೇ ಹೆಸರಾದ ಮೊಹರೆ ಹಣಮಂತರಾಯರು 1892 ರ ನವೆಂಬರ್ 12 ರಂದು ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿಯಲ್ಲಿ ಜನಿಸಿದರು. ವಿಜಯಪುರದಲ್ಲೇ ಶಿಕ್ಷಣ ಪೂರೈಸಿದ ಅವರು, ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಸೆರೆಮನೆವಾಸವನ್ನೂ ಅನುಭವಿಸಿದವರು. ನಿಷ್ಠುರ ಪತ್ರಿಕೋದ್ಯಮಕ್ಕೆ ಹೆಸರಾದವರು.
ವಿಜಯಪುರದಲ್ಲಿ ಪ್ರಕಟವಾಗುತ್ತಿದ್ದ ‘ಕರ್ನಾಟಕ ವೈಭವ’ ವಾರ ಪತ್ರಿಕೆಯ ಉಪ ಸಂಪಾದಕ, ಸಂಪಾದಕರಾಗಿ ಕಾರ್ಯನಿರ್ವಹಿಸಿದ ಬಳಿಕ, 1934ರಲ್ಲಿ ಆಗ ಬೆಳಗಾವಿಯಲ್ಲಿ ಪ್ರಕಟವಾಗುತ್ತಿದ್ದ ಸಂಯುಕ್ತ ಕರ್ನಾಟಕ ಪತ್ರಿಕೆಯ ಸಂಪಾದಕರಾಗಿ, ವ್ಯವಸ್ಥಾಪಕ ಸಂಪಾದಕರಾಗಿ ಕಾರ್ಯನಿರ್ವಹಿಸಿದರು. ನಂತರ ಕರ್ಮವೀರ ವಾರ ಪತ್ರಿಕೆಯನ್ನು ಪ್ರಾರಂಭಿಸಿದರು. 1956ರ ಸೆಪ್ಟೆಂಬರ್ನಲ್ಲಿ ಕನ್ನಡದ ಪ್ರಥಮ ಡೈಜೆಸ್ಟ್ ‘ಕಸ್ತೂರಿ’ ಮಾಸಿಕವನ್ನು ಲೋಕ ಶಿಕ್ಷಣ ಟ್ರಸ್ಟ್ ಪರವಾಗಿ ಪ್ರಾರಂಭಿಸಿದರು. 1958ರಲ್ಲಿ ನಿವೃತ್ತಿ ಹೊಂದಿದ ಮೊಹರೆ ಹಣಮಂತರಾಯರು 1960 ರ ಜುಲೈ 27 ರಂದು ಇಹಲೋಕ ತ್ಯಜಿಸಿದರು.
ಇದನ್ನೂ ಓದಿ: ಅತ್ಯಾಚಾರ ಪ್ರಕರಣ; ಬಿಜೆಪಿ ಶಾಸಕ ಮುನಿರತ್ನ 14 ದಿನಗಳ ನ್ಯಾಯಾಂಗ ವಶಕ್ಕೆ
ಕನ್ನಡ ಪತ್ರಿಕೆ ಅಥವಾ ಪತ್ರಿಕಾ ಸಮೂಹವನ್ನು ಕಟ್ಟಿ ಬೆಳೆಸಿದ ಪತ್ರಕರ್ತರ ಸಾಧನೆಯನ್ನು ಗುರುತಿಸಿ. ಇವರ ಸ್ಮರಣಾರ್ಥ ‘ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿ’ಯನ್ನು ಕರ್ನಾಟಕ ಸರ್ಕಾರವು 2010ರಿಂದ ಪ್ರತಿ ವರ್ಷ ನೀಡುತ್ತಿದೆ. ಈ ಪ್ರಶಸ್ತಿಯು 2 ಲಕ್ಷ ರೂ. ನಗದು ಪುರಸ್ಕಾರವನ್ನು ಒಳಗೊಂಡಿದೆ. ಈ ವರೆಗೆ 09 ಪತ್ರಕರ್ತರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. 2019 ರಿಂದ 2023 ರವರೆಗಿನ 5 ವರ್ಷಗಳ ಅವಧಿಯ ಪ್ರಶಸ್ತಿಗಳನ್ನು ಇದೀಗ ಸರ್ಕಾರ ಪ್ರಕಟಿಸಿದೆ.
2019ನೇ ಸಾಲಿಗೆ ರಾಜೀವ್ ಕಿದಿಯೂರ:
ಗದಗ-ಬೆಟಗೇರಿ ಅವಳಿ ನಗರದಿಂದ ಮುದ್ರಣಗೊಳ್ಳುವ ನವೋದಯ ಕನ್ನಡ ದಿನಪತ್ರಿಕೆಯು ಕಿತ್ತೂರು ಹಾಗೂ ಕಲ್ಯಾಣ ಕರ್ನಾಟಕ ಭಾಗದ ಅನೇಕ ಜಿಲ್ಲೆಗಳಲ್ಲಿ 5 ದಶಕಗಳಿಂದ ಜನಪ್ರಿಯತೆ ಹೊಂದಿದೆ. ರಾಜೀವ್ ಕಿದಿಯೂರ ಅವರು 1989ರಿಂದ ಪತ್ರಿಕೆಯ ಸಂಪಾದಕ ಜವಾಬ್ದಾರಿ ವಹಿಸಿಕೊಂಡು ಮುನ್ನಡೆಸುತ್ತಿದ್ದಾರೆ. ನಿಷ್ಪಕ್ಷಪಾತವಾದ ವಸ್ತುನಿಷ್ಠವಾದ ವರದಿಗಳಿಗೆ ಈ ಪತ್ರಿಕೆಯು ಹೆಸರಾಗಿದೆ.
2020ನೇ ಸಾಲಿಗೆ ಇಂದೂಧರ ಹೊನ್ನಾಪುರ:
1975-76ರಿಂದ ವಿದ್ಯಾರ್ಥಿ ದೆಸೆಯಲ್ಲಿಯೇ ಶೋಷಿತ ಹಾಗೂ ಪಂಚಮ ಪತ್ರಿಕೆಗಳನ್ನು ಸ್ಥಾಪಿಸಿ ಮುನ್ನಡೆಸಿದರು.ಮೈಸೂರಿನ ಆಂದೋಲನ,ಪ್ರಜಾವಾಣಿ ದಿನಪತ್ರಿಕೆಗಳ ವರದಿಗಾರರಾಗಿ ಸೇವೆ. 1984ರಲ್ಲಿ ಮುಂಗಾರು ದಿನಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾಗಿ,1985ರಲ್ಲಿ ಸುದ್ದಿಸಂಗಾತಿ ವಾರಪತ್ರಿಕೆಯ ಸ್ಥಾಪಕ ಸಂಪಾದಕರಾಗಿ,2002ರಿಂದ ಸಂವಾದ ಮಾಸಪತ್ರಿಕೆಯ ಸಂಪಾದಕರಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಬಂಡಾಯ ಕವನ ಸಂಕಲನ, ಹೊಸದಿಕ್ಕು ಲೇಖನಗಳ ಸಂಕಲನ, ಬಿದಿರುಕೋಲು, ಉಳಿದದ್ದು ಸಂವಿಧಾನ ಸೇರಿದಂತೆ ಅನೇಕ ಕೃತಿಗಳು ಪ್ರಕಟಿಸಿದ್ದಾರೆ;ಇವರ ಕೃತಿಗಳು ನಾಡಿನ ಅನೇಕ ವಿಶ್ವವಿದ್ಯಾಲಯಗಳಿಗೆ ಪಠ್ಯವಾಗಿವೆ.
2021ನೇ ಸಾಲಿಗೆ ಎನ್.ಮಂಜುನಾಥ:
ಶಿವಮೊಗ್ಗದ ಕ್ರಾಂತಿದೀಪ ಕನ್ನಡ ದಿನಪತ್ರಿಕೆಯನ್ನು 1985 ಆಗಸ್ಟ್ 15ರಿಂದ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಅಚ್ಚುಮೊಳೆಯ ಮುದ್ರಣದಲ್ಲಿ ಪತ್ರಿಕೆಯನ್ನು ಪ್ರಾರಂಭಿಸಿದ ಇವರು ಕಾಲಕ್ಕನುಗುಣವಾಗಿ ಹೊಸಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಮಲೆನಾಡು-ಬಯಲುಸೀಮೆ ಜಿಲ್ಲೆಗಳಲ್ಲಿ ಪತ್ರಿಕೆಯನ್ನು ಜನಪ್ರಿಯಗೊಳಿಸಿದ್ದಾರೆ. ಹೊಸ ಪತ್ರಕರ್ತರಿಗೆ ಇವರ ದಿನಪತ್ರಿಕೆಯುತರಬೇತಿ ಶಾಲೆಯಂತೆ ಕೆಲಸ ಮಾಡಿದೆ;ಈ ಪತ್ರಿಕೆಯಲ್ಲಿ ವೃತ್ತಿ ಅನುಭವ ಹೊಂದಿದ ಯುವಕರು ನಾಡಿನ ಪ್ರಮುಖ ಮಾಧ್ಯಮಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
2022ನೇ ಸಾಲಿಗೆ ಚಂದ್ರಶೇಖರ್ ಪಾಲೆತ್ತಾಡಿ:
ದಕ್ಷಿಣ ಕನ್ನಡ ಜಿಲ್ಲೆಯ ಪಾಲೆತ್ತಾಡಿಯವರಾದ ಚಂದ್ರಶೇಖರ ಇವರು ಮುಂಬೈಯಲ್ಲಿ ನೆಲೆಸಿದ್ದು,1992ರಿಂದ ಅನೇಕ ಸವಾಲುಗಳ ಮಧ್ಯೆಯೂ ಕರ್ನಾಟಕ ಮಲ್ಲ ಕನ್ನಡ ದಿನಪತ್ರಿಕೆಯನ್ನು ಹೊರನಾಡಿನಿಂದ ಪ್ರಕಟಿಸುತ್ತಿರುವುದು ವಿಶೇಷ. ಮುಂಬೈಯಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕøತಿಕ ಚಟುವಟಿಕೆಗಳಿಗೆ ಇವರ ಕೊಡುಗೆ ಅಮೂಲ್ಯವಾಗಿದೆ.
2023ನೇ ಸಾಲಿಗೆ ಶಿವಲಿಂಗಪ್ಪ ದೊಡ್ಡಮನಿ:
ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಗೌರಾ(ಬಿ)ದವರಾದ ಶಿವಲಿಂಗಪ್ಪ ದೊಡ್ಡಮನಿ ಅವರು ಕರ್ನಾಟಕ ಸಂಧ್ಯಾಕಾಲ ಸಂಜೆ ದಿನ ಪತ್ರಿಕೆಯನ್ನು 2000ರಿಂದ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಅದಕ್ಕೂ ಮುನ್ನ ಸರಕಾರಿ ಸೇವೆಯಲ್ಲಿದ್ದ ಇವರು ಪತ್ರಿಕೋದ್ಯಮ ಸೆಳೆತಕ್ಕೆ ಒಳಗಾಗಿ ಮಾಧ್ಯಮ ರಂಗಕ್ಕೆ ಕಾಲಿಟ್ಟ ಇವರು ನಾಡಿನ ವಿವಿಧ ಪತ್ರಿಕೆಗಳಲ್ಲಿ ಕೆಲಸ ನಿರ್ವಹಿಸಿದ್ದಾರೆ. ಪ್ರಶಸ್ತಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಶೀಘ್ರದಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಇಲಾಖೆಯ ಆಯುಕ್ತರಾದ ಹೇಮಂತ್ ಎಂ.ನಿಂಬಾಳ್ಕರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ನೋಡಿ: ಸತ್ತವರ ಹೆಸರಲ್ಲಿ ಭೂಮಿ ಕಬಳಿಸಿದ ಕುಮಾರಸ್ವಾಮಿ, ಯಡಿಯೂರಪ್ಪ – ಕೃಷ್ಣ ಬೈರೇಗೌಡ ಆರೋಪ