ದ್ವೇಷ ಭಾಷಣಗಳನ್ನು ಮುಖ್ಯವಾಹಿನಿಗೆ ತಂದವರು ತಪ್ಪಿಸಿಕೊಳ್ಳಲು ಬಿಡಬೇಕೇ?

ಜಾನ್ ಬ್ರಿಟ್ಟಾಸ್

ಭಾರತೀಯ ಮಾಧ್ಯಮಗಳು – ನಿರ್ದಿಷ್ಟವಾಗಿ ಟಿವಿ ಮಾಧ್ಯಮ – 2014 ರಿಂದ ದ್ವೇಷ ಭಾಷಣ ಮತ್ತು ವಿಭಜನಕಾರೀ ರಾಷ್ಟ್ರವಾದವನ್ನು ಮುಖ್ಯವಾಹಿನಿಗೆ ತರುವಲ್ಲಿ ವಹಿಸಿದ ಪಾತ್ರಕ್ಕೆ ಅವುಗಳನ್ನು ಹೊಣೆಗಾರರಾಗಿಸಬೇಕಾಗಿದೆ ಎನ್ನುತ್ತಾರೆ ಸಿಪಿಐ(ಎಂ)ನ ರಾಜ್ಯಸಭಾ ಸದಸ್ಯರು. ಮೂಲ ಲೇಖನ ಕೃಪೆ: ‘ಇಂಡಿಯನ್ ಎಕ್ಸ್‌ಪ್ರೆಸ್, ಜೂನ್9 ಅನು: ಕೆ.ವಿ.

ಪ್ರವಾದಿ ಮೊಹಮ್ಮದ್ ಮತ್ತು ಇಸ್ಲಾಂ ಬಗ್ಗೆ ಅವಹೇಳನಕಾರಿ ಟಿಪ್ಪಣಿಗಳ ನಂತರ ಬೆಳೆಯುತ್ತಿರುವ ಅಪಸ್ವರಗಳ ನಡುವೆ, ಈ ವಿಷಯದಲ್ಲಿ ಅತ್ಯಂತ ದೊಡ್ಡ ಅಪರಾಧಿಗಳಲ್ಲಿ ಒಂದಾದ ಮಾಧ್ಯಮವು ನಿರ್ಭಯದಿಂದ ಪಾರಾಗುತ್ತಿದೆ. ರಂಪಾಟ ನಡೆಸಿದವರಿಗೆ ಪಿಟೀಲು ನುಡಿಸಿದ ಮಾಧ್ಯಮಗಳು ಯಾವುದೇ ಆತ್ಮಾವಲೋಕನವಿಲ್ಲದೆ ಅದೇ ಪಥದಲ್ಲಿ ಮುಂದುವರಿಯುತ್ತಿವೆ.

ಭಾರತೀಯ ಮಾಧ್ಯಮಗಳು – ನಿರ್ದಿಷ್ಟವಾಗಿ ಟಿವಿ ಮಾಧ್ಯಮ – 2014 ರಿಂದ ದ್ವೇಷ ಭಾಷಣಗಳು ಮತ್ತು ವಿಭಜನಕಾರೀ ರಾಷ್ಟ್ರವಾದವನ್ನು ಮುಖ್ಯವಾಹಿನಿಗೆ ತರುವಲ್ಲಿ ವಹಿಸಿದ ಪಾತ್ರದ ಬಗ್ಗೆ ಒಂದು ದೊಡ್ಡ ಅಧ್ಯಯನವೇ ನಡೆಯಬೇಕಾಗಿದೆ. ನಿಸ್ಸಂದೇಹವಾಗಿ, ಬಲಪಂಥೀಯ ಸಂಘಟನೆಗಳು ಮತ್ತು ಅಂಚಿನಲ್ಲಿದ್ದವರು ಪ್ರತಿಪಾದಿಸುತ್ತಿದ್ದ ಬಹುಸಂಖ್ಯಾತವಾದೀ ಸಿದ್ಧಾಂತವು ಸಮಾಜದಲ್ಲಿ ಬಿರುಕುಗಳನ್ನು ಸೃಷ್ಟಿಸುವ ವಿಷಯಗಳನ್ನು ಕೆರಳಿಸುವಲ್ಲಿ ಮೂಲಭೂತ ಪಾತ್ರವನ್ನು ವಹಿಸಿದೆ. ಆದರೆ ಟಿವಿ ಮಾಧ್ಯಮ ಅದನ್ನು ಪ್ರತಿಯೊಬ್ಬರ ಮನೆಗೆ ತರುವ ಮೂಲಕ ಮುಖ್ಯವಾಹಿನಿಗೆ ತಂದಿತು. ಕಥನಗಳನ್ನು ರೂಪಿಸಲು ಪ್ರತಿದಿನ ವಿಷಯಗಳಲ್ಲದ ವಿಷಯಗಳ ಬಗ್ಗೆ ಬೊಬ್ಬೆ ಎಬ್ಬಿಸಲಾಗುತ್ತಿದೆ- ಹಲಾಲ್, ಹಿಜಾಬ್, ನಮಾಜ್, ದೇಶದ್ರೋಹ, ಜೆಎನ್‌ಯು, ಮಾಂಸಾಹಾರ, ಮುಸ್ಲಿಂ ಎನಿಸುವ ಸ್ಥಳನಾಮಗಳು, ರಸ್ತೆಗಳ ಹೆಸರುಗಳು, ಮೊಘಲ್ ವಾಸ್ತುಶಿಲ್ಪ ಮತ್ತು ಮಸೀದಿಗಳು- ಇವೆಲ್ಲ ಟೆಲಿವಿಷನ್ ಸ್ಟುಡಿಯೋಗಳಲ್ಲಿ  ಕೂಗಾಡಿದ ಹತ್ತು ಹಲವು  ವಿಷಯಗಳು. ಪ್ರಾರ್ಥನಾ ಟೋಪಿಗಳು ಮತ್ತು ಉದ್ದನೆಯ ಗಡ್ಡಗಳನ್ನು ಭಾವೋದ್ರೇಕ ಉಂಟುಮಾಡಲು ಉದ್ದೇಶಪೂರ್ವಕವಾಗಿ ಪ್ರದರ್ಶಿಸಲಾಯಿತು. ಒಂದು ಸಂದರ್ಭದಲ್ಲಿ, ಬುಲ್ಡೋಜರ್‌ಗಳು ರಾಷ್ಟ್ರ ರಾಜಧಾನಿಯಲ್ಲಿ ಬಡವರ ಅರೆಬರೆ ಮನೆಗಳನ್ನು ಕೆಡವುತ್ತಿದ್ದಾಗ – ಒಂದು ಪ್ರಮುಖ ಇಂಗ್ಲಿಷ್ ಸುದ್ದಿ ವಾಹಿನಿ, ಅವರನ್ನು ಗಲಭೆಕೋರರು ಎಂದು ಹೆಸರಿಸಿತು, ಮತ್ತು  #ಬುಲ್‌ಡೋಜರ್‌ರ್‌ನ್ಯಾಯ ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಪ್ರೈಮ್ ಟೈಮ್ ಚರ್ಚೆಯನ್ನು ನಡೆಸಿತು!

ಇದೇ ನೂಪುರ್ ಶರ್ಮಾ ಎಂಬ ಜಾಢ್ಯಕ್ಕೆ ಜನ್ಮ ನೀಡಿದ ಪರಿವೇಶ. ಈ ಹಿಂದೆ, ಮಾಧ್ಯಮಗಳು ತಮ್ಮ ಮತೀಯ ಒಲವುಗಳನ್ನು ಪ್ರದರ್ಶಿಸಲು ಹಿಂಜರಿಯುತ್ತಿದ್ದವು ಮತ್ತು ಅದರ ಅನೇಕ ಬಳಸುದಾರಿಗಳು ಅಗ್ರಾಹ್ಯವಾಗಿದ್ದವು. ಆದರೆ ಸಂಘ ಪರಿವಾರದ ಸಂಘಟನೆಗಳ ನೇತೃತ್ವದ ರಾಮಜನ್ಮಭೂಮಿ ಆಂದೋಲನವು ಮಾಧ್ಯಮ ದೃಶ್ಯವನ್ನು ತೀವ್ರವಾಗಿ ಬದಲಾಯಿಸಿತು. ಹಿಂದಿ ಮಾಧ್ಯಮಗಳು ಪ್ರದರ್ಶಿಸಿದ ಉದ್ಧಟತನ ದೇಶವನ್ನು ಆವರಿಸಲಿದ್ದ ಪ್ರವೃತ್ತಿಯ ಆರಂಭಿಕ ಅಭಿವ್ಯಕ್ತಿಯಾಗಿತ್ತು. ಪ್ರೆಸ್ ಕೌನ್ಸಿಲ್ ಮತ್ತು ಇತರ ಸ್ವತಂತ್ರ ಗುಂಪುಗಳು ನಡೆಸಿದ ಅಧ್ಯಯನಗಳು ಕೋಮು ಉನ್ಮಾದವನ್ನು ಹುಟ್ಟುಹಾಕುವ ಏಕೈಕ ಉದ್ದೇಶವನ್ನು ಹೊಂದಿರುವಂತೆ ತೋರುತ್ತಿದ್ದ ವರದಿಗಾಗಿ ಅನೇಕ ಹಿಂದಿ ಪತ್ರಿಕೆಗಳನ್ನು ದೂಷಿಸಿದವು. ಆದರೆ ಈ ಭ್ರಮಣೆ ಈಗ ರೂಢ ಸಂಗತಿಯಾಗಿದೆ, ಅನೇಕ ಟಿವಿ ವಾಹಿನಿಗಳು ಈ ರೂಪಾಂತರ ವಿಜಯದ ದ್ಯೋತಕ ಎಂದು ಭಾವಿಸಿವೆ.

ನಿಮ್ಮ ಪ್ರಾಥಮಿಕ ಆದಾಯವು ಸರ್ಕಾರಿ ಜಾಹೀರಾತುಗಳು ಮತ್ತು ಸರ್ಕಾರದ-ನೇತೃತ್ವದ ಈವೆಂಟ್‌ಗಳಿಂದ ಬರುತ್ತಿರುವಾಗ ನೀವು ರಾಜಕೀಯವಾಗಿ ಪ್ರಸಕ್ತ ಆಡಳಿತಗಾರರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದು ಒಂದು ವಿಷಯ. ಆದರೆ ದ್ವೇಷದ ಸಗಟು ವಿತರಕರಾಗಿ ಸೇವೆ ಸಲ್ಲಿಸುವುದು ಒಟ್ಟಾರೆಯಾಗಿ ಬೇರೆಯೇ ಸಂಗತಿಯಾಗುತ್ತದೆ. ಭವಿಷ್ಯದ ಪೀಳಿಗೆಗಳು ಇದಕ್ಕೆ ನಿಮ್ಮನ್ನು ಕ್ಷಮಿಸದಿರಬಹುದು. ಹಲವು ಬಾರಿ ನ್ಯೂಸ್‌ರೂಮ್‌ಗಳು ಅಂಚಿನಲ್ಲಿರುವವರ ಗಿಳಿಪಾಟವನ್ನು ಸಲ್ಲಿಸುವ ಗೂಡುಗಳಾಗಿ ಬಿಡುತ್ತವೆ ಎಂದು ಹೇಳಲಾಗಿದೆ. ಏಕೆಂದರೆ ಅದು ಅವರಿಗೆ ವೀಕ್ಷಣೆಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ. ಇದು ಭಾರತೀಯ ಸಾರ್ವಜನಿಕರ ಬುದ್ಧಿವಂತಿಕೆ ಮತ್ತು ಭಾರತೀಯ ಗಣರಾಜ್ಯದ ನೀತಿಯನ್ನು ಅವಮಾನಿಸುವ ಒಂದು ಪ್ರಮೇಯ.

ಸಂಘಪರಿವಾರದ ಸಂಘಟನೆಗಳು ಅಧಿಕಾರಕ್ಕಾಗಿ ಮಾತ್ರ ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಭಾಗವಹಿಸುವುದಿಲ್ಲ. ಭಾರತೀಯ ಸಮಾಜವನ್ನು ಬುಡಮೇಲು ಮಾಡುವುದು, ಅವರು ಕಲ್ಪಿಸಿಕೊಂಡಂತೆ ಅದರ ಇತಿಹಾಸವನ್ನು ಮರುಶೋಧಿಸುವುದು ಮತ್ತು ರಾಷ್ಟ್ರದ ಜಾತ್ಯತೀತ ರಾಜಕೀಯ ಸಂಸ್ಕೃತಿಯನ್ನು ವಿರೂಪಗೊಳಿಸುವುದು ಅವರ ಪ್ರಮುಖ ಕಾರ್ಯಸೂಚಿಯಾಗಿದೆ. ಈ ಪ್ರಕ್ರಿಯೆಯಲ್ಲಿ ಒಂದು ಹೊಸ ರೀತಿಯ ರಾಷ್ಟ್ರವಾದ ಅವರ ಸಾಧನವಾಗಿದೆ. ಇದು ಎಲ್ಲರನ್ನು ಒಳಗೊಳ್ಳುವ ಬದಲು ಕೆಲವರನ್ನು ಹೊರಗಿಡುವ ರಾಷ್ಟ್ರವಾದ. ಈ ರಾಷ್ಟ್ರವಾದದ ಒಂದು ಮುಖ್ಯ ಲಕ್ಷಣವೆಂದರೆ ಅದು ಹಿಂದೂ ಧರ್ಮ ಮತ್ತು ಹಿಂದುತ್ವ ಹಾಗೂ ರಾಷ್ಟ್ರ ಮತ್ತು ಪ್ರಸಕ್ತ ಸರ್ಕಾರ ಇವುಗಳ  ನಡುವಿನ ಎಲ್ಲೆಗುರುತುಗಳನ್ನು ಅಳಿಸಲು ಪ್ರಯತ್ನಿಸುತ್ತದೆ. ಆದ್ದರಿಂದ, ಉಗ್ರ ಹಿಂದುತ್ವದ ಯಾವುದೇ ಟೀಕೆಯನ್ನು ಹಿಂದೂ ಧರ್ಮದ ಕಲ್ಪನೆಯ ಮೇಲಿನ ಆಕ್ರಮಣ ಎಂದು ವ್ಯಾಖ್ಯಾನಿಸಲಾಗುತ್ತದೆ ಮತ್ತು ಪ್ರಸಕ್ತ ಸರ್ಕಾರದ ಮೇಲೆ ಮಾಡಿದ ಯಾವುದೇ ಟೀಕೆಯನ್ನು ಭಾರತದ ಕಲ್ಪನೆಯ ಮೇಲಿನ ದಾಳಿ ಎಂದು ಪರಿಗಣಿಸಲಾಗುತ್ತದೆ. ಮತು ಇಂತಹ ಯೋಚನಾ ಪ್ರಕ್ರಿಯೆಯನ್ನು ಆವಿಷ್ಕರಿಸುವ ಯೋಜನೆಯಲ್ಲಿ ಟಿವಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಮಾಧ್ಯಮವು ಬೌದ್ಧಿಕ ಉದ್ಯಮವಾಗಿರುವುದರಿಂದ, ಐತಿಹಾಸಿಕ ಸತ್ಯ ಮತ್ತು ಕಲ್ಪಿತ ವಾಸ್ತವವನ್ನು ಆರಿಸಿಕೊಂಡು ಮಾಡುವ ಆಯ್ಕೆಯು ಒಂದು ದಹನಕಾರೀ ಜಾಡನ್ನು ತನ್ನ ಹಿಂದೆ ಬಿಟ್ಟು ಹೋಗುತ್ತದೆ. ಹೀಗೆ ದ್ವೇಷಭಾಷಣ ಸಾಮಾನ್ಯ ಸಂಗತಿಯಾಗುತ್ತದೆ ಮತ್ತು ಸಾರ್ವಜನಿಕ ಚಿಂತಕರಿಗೆ ರಾಷ್ಟ್ರವಿರೋಧಿಗಳೆಂಬ ಬಣ್ಣ ಹಚ್ಚಲಾಗುತ್ತದೆ.

ಈ ಸಂಸ್ಕೃತಿಯು ನಮ್ಮ ಸಮಾಜದ ಎಲ್ಲಾ ಆಯಾಮಗಳನ್ನು ಶಾಲಾ ಪಠ್ಯಕ್ರಮದಿಂದ ಬಾಲಿವುಡ್‌ವರೆಗೆ ಎಲ್ಲವನ್ನೂ ಕಲುಷಿತಗೊಳಿಸಿದೆ. ದಿ ಕಾಶ್ಮೀರ್ ಫೈಲ್ಸ್ ನಂತಹ ಚಲನಚಿತ್ರಗಳ ಮೇಲೆ ಎಬ್ಬಿಸಿದ ಗುಲ್ಲು ಇದಕ್ಕೊಂದು ಉದಾಹರಣೆ. ಈ ರಾಷ್ಟ್ರವಾದವು ಅಲ್ಪಸಂಖ್ಯಾತರ ಒಂದು ಸಿದ್ಧಮಾದರಿಯ ಚಿತ್ರಣವನ್ನು ಮಾಡಿಕೊಂಡಿದೆ. ಅದನ್ನು ಪ್ರದರ್ಶಿಸುವ ಐತಿಹಾಸಿಕ ಚಲನಚಿತ್ರಗಳೆಂದು ಕರೆಯಲ್ಪಡುವವುಗಳು ಪುಷ್ಕಳವಾಗಿ ಬಾಲಿವುಡ್‌ನಿಂದ ಬರುತ್ತಿರುವುದು ಈ ಕಾರಣದಿಂದಲೇ. ಭಾರತದ ವಿಭಜನೆ ಬಿಟ್ಟು ಹೋಗಿರುವ ವೈಮನಸ್ಯಗಳ ಮೇಲೆ ಆಟವಾಡುವ ಪ್ರೈಮ್ ಟೈಮ್ ಸುದ್ದಿ ಚರ್ಚೆಗಳು ಮನೆಗಳಲ್ಲಿ ಟಿವಿ ಮುಂದೆ ಕೂತಿರುವ ಮಂದಿ ಅಲ್ಲಿಗೆ ಹೋಗಿ “ಗೋಲಿ ಮಾರೋ ಸಾಲೋಂ ಕೋ” ಎಂದು ಉದ್ರೇಕಿಸುತ್ತವೆ.

ಸರ್, ಇಂತವರನ್ನು ನೀವು ಸಸ್ಪೆಂಡ್ ಮಾಡಿದರೆ ನಾವು ಡಿಬೇಟ್ ನಡೆಸುದಾದರೂ ಹೇಗೆ?
(ವ್ಯಂಗ್ಯಚಿತ್ರ: ಅಲೋಕ್ ನಿರಂತರ್)

Donate Janashakthi Media

Leave a Reply

Your email address will not be published. Required fields are marked *