ನವದೆಹಲಿ : ಜವಾಹರಲಾಲ್ ನೆಹರೂ ವಿಶ್ವಾವಿದ್ಯಾಲಯ(ಜೆಎನ್‌ಯು) ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಆಯೀಷೆ ಘೋಷ್ ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆಸುತ್ತಿದ್ದಾರೆ.
ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)–ಸಿಪಿಐ(ಎಂ) ಪಕ್ಷದ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತಿರುವ 26 ವರ್ಷದ ಆಯೀಷೆ ಘೋಷ್ ಎಸ್‌ಎಫ್‌ಐ ವಿದ್ಯಾರ್ಥಿ ಸಂಘಟನೆ ಸದಸ್ಯರು. ಬರ್ದ್ವಾನ್ ಜಿಲ್ಲೆಯ ಜಮುರಿಯಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆಗೆ ಇಳಿದಿದ್ದಾರೆ.
ಆಯೀಷೆ ಘೋಷ್ ದೆಹಲಿಯ ದೌಲತ್ ರಾಮ್ ಕಾಲೇಜಿನಲ್ಲಿ ರಾಜಕೀಯ ಶಾಸ್ತ್ರ ವಿಭಾಗದಲ್ಲಿ ಪದವಿಯನ್ನು ಮುಗಿಸಿ ಎಂಫಿಲ್ ಪಿಎಚ್‍ಡಿ ಪದವಿ ಅಭ್ಯಾಸಕ್ಕಾಗಿ ಜೆಎನ್‌ಯುನಲ್ಲಿ ಶಿಕ್ಷಣ ಮುಂದುವರೆಸುತ್ತಿದ್ದಾರೆ.
ವಿಶ್ವವಿದ್ಯಾಲಯದಲ್ಲಿ ಶುಲ್ಕ ಹೆಚ್ಚಳ ವಿರೋಧಿಸಿ ನಡೆದ ಚಳವಳಿಯ ಸಂದರ್ಭದಲ್ಲಿ 2020ರ ಜನವರಿ 5ರಂದು ಜೆಎನ್‌ಯುನಲ್ಲಿ ನಡೆದ ಹಿಂಸಾಚಾರ ನಡೆದಿತ್ತು.
ಆಗ ಆಯೀಷೆ ಘೋಷ್ ತಲೆ ಮತ್ತು ಕೈಗೆ ಸಾಕಷ್ಟು ಪೆಟ್ಟು ಉಂಟಾಗಿತ್ತು. ಅಹಿತಕರ ಘಟನೆ ಮಾಡಿದ ವ್ಯಕ್ತಿಗಳಿಗೆ ಸೂಕ್ತಕ್ರಮ ಕೈಗೊಳ್ಳಬೇಕೆಂದು ವಿಶ್ವವಿದ್ಯಾಯದ ವಿದ್ಯಾರ್ಥಿಗಳು ಹಾಗೂ ಹಲವು ಪ್ರಾಧ್ಯಾಪಕರು ದೃಢವಾಗಿ ನಿಂತು ಪ್ರತಿಭಟಿಸಿದ್ದರು. ಈ ಹಿಂಸಾಚಾರಕ್ಕೆ ದೇಶಾದ್ಯಂತ ಹಾಗೂ ಅಂತರರಾಷ್ಟ್ರೀಯವಾಗಿಯೂ ಸಾಕಷ್ಟು ಪ್ರತಿರೋಧ ವ್ಯಕ್ತವಾಗಿದ್ದವು.
ಜೆಎನ್‌ಯುಎಸ್‌ಯುನ ಹಾಲಿ ಅಧ್ಯಕ್ಷೆಯಾಗಿದ್ದುಕೊಂಡು ಚುನಾವಣಾ ಕಣಕ್ಕೆ ಇಳಿಯುತ್ತಿರುವುದು ಇದೇ ಮೊದಲು. ಪಶ್ಚಿಮ ಬಂಗಾಳ ರಾಜಕೀಯ ಚಳುವಳಿಗೆ ವಿದ್ಯಾರ್ಥಿಗಳ ಕೊಡುಗೆಯನ್ನು ಗಮನಿಸಬಹುದು.
ಆಯೀಷಾ ಘೋಷ್ ಅವರ ಇಡೀ ಕುಟುಂಬ ಜನ ಚಳುವಳಿಯೊಂದಿಗೆ ಗುರುತಿಸಿಕೊಂಡವರು. ತಂದೆ ದೇಬಾಶಿಶ್ ಘೋಷ್ ಸಹ ಕಾರ್ಮಿಕ ಚಳುವಳಿಯೊಂದಿಗೆ ಸಕ್ರಿಯವಾಗಿರುವ ಕಾರ್ಯಕರ್ತರು. ಪ್ರಸಕ್ತ ದಾಮೋದರ್ ವ್ಯಾಲಿ ಕಾಪೋರೇಷನ್ ನಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ.
ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿರುವ ಸಿಪಿಐ(ಎಂ) ಪಕ್ಷವು ಹಲವು ವಿದ್ಯಾರ್ಥಿ ಯುವಜನ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಕಾರ್ಯಕರ್ತರನ್ನು ಕಣಕ್ಕೆ ಇಳಿಸಿದ್ದಾರೆ.
ರಾಜ್ಯ ಚುನಾವಣೆಯಲ್ಲಿ ಅತ್ಯಂತ ಪ್ರಮುಖ ಕ್ಷೇತ್ರಗಳಲ್ಲೊಂದಾದ ನಂದಿಗ್ರಾಮ ಕ್ಷೇತ್ರದಿಂದ ಎಸ್‌ಎಫ್‌ಐ ರಾಜ್ಯ ಅಧ್ಯಕ್ಷ ಮೀನಾಕ್ಷಿ ಮುಖರ್ಜಿ ಸಿಪಿಐ(ಎಂ) ಪಕ್ಷದ ಅಭ್ಯರ್ಥಿಯಾಗಿದ್ದಾರೆ. ಇಲ್ಲಿ ಟಿಎಂಸಿಯಿಂದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಬಿಜೆಪಿಯಿಂದ ಸುವೆಂದು ಅಧಿಕಾರಿ ಕಣಕ್ಕೆ ಇಳಿದಿದ್ದಾರೆ.
ರಾಜ್ಯ ಕಾರ್ಯದರ್ಶಿ ಶ್ರೀಜನ್ ಭಟ್ಟಾಚಾರ್ಜಿ ಹೂಗ್ಲಿ ಜಿಲ್ಲೆಯ ಸಿಂಗೂರ್ ಕ್ಷೇತ್ರದ ಅಭ್ಯರ್ಥಿ. ಈ ಕ್ಷೇತ್ರ ಟಿಎಂಸಿ ಹಾಗೂ ಬಿಜೆಪಿ ಪಕ್ಷಗಳಿಗೆ ಅತ್ಯಂತ ಪ್ರತಿಷ್ಠೆಯ ಕ್ಷೇತ್ರವಾಗಿದೆ.