ಗುರುರಾಜ ದೇಸಾಯಿ
ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯ (ಜೆಎನ್‌ಯು) 2024–25ರ ವಿದ್ಯಾರ್ಥಿ ಸಂಘದ ಚುನಾವಣೆಗೆ ಅಧಿಕೃತವಾಗಿ ವೇದಿಕೆಯನ್ನು ಸಿದ್ಧಪಡಿಸಿದೆ, ಏಪ್ರಿಲ್ 25 ರಂದು ಮತದಾನ ಮತ್ತು ಅದೇ ಸಂಜೆ ಮತ ಎಣಿಕೆ ಪ್ರಾರಂಭವಾಗಲಿದೆ. ಶುಕ್ರವಾರ ಜೆಎನ್‌ಯು ವಿದ್ಯಾರ್ಥಿ ಒಕ್ಕೂಟ (ಜೆಎನ್‌ಯುಎಸ್‌ಯು) ಚುನಾವಣಾ ಸಮಿತಿ ಹೊರಡಿಸಿದ ಸೂಚನೆಯ ಪ್ರಕಾರ, ಅಂತಿಮ ಫಲಿತಾಂಶವನ್ನು ಏಪ್ರಿಲ್ 28 ರೊಳಗೆ ಪ್ರಕಟಿಸಲಿದೆ. ಜೆಎನ್‌ಯು
ಏಪ್ರಿಲ್ 25 ರ ಶುಕ್ರವಾರದಂದು ಎರಡು ಹಂತಗಳಲ್ಲಿ – ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ರವರೆಗೆ ಮತ್ತು ಮಧ್ಯಾಹ್ನ 2.30 ರಿಂದ ಸಂಜೆ 5.30 ರವರೆಗೆ – ಮತದಾನ ನಡೆಯಲಿದೆ. ಆ ರಾತ್ರಿ 9 ಗಂಟೆಗೆ ಮತ ಎಣಿಕೆ ಆರಂಭವಾಗಲಿದೆ. 2016 ರಿಂದ ಜೆಎನ್‌ಯು ವಿದ್ಯಾರ್ಥಿ ರಾಜಕೀಯದಲ್ಲಿ ಪ್ರಾಬಲ್ಯ ಹೊಂದಿದ್ದ ಯುನೈಟೆಡ್ ಲೆಫ್ಟ್ ಮೈತ್ರಿಕೂಟದಲ್ಲಿ ಈ ಬಾರಿ ವಿಭಜನೆ ಕಂಡಿದೆ. ಎಐಎಸ್‌ಎ ಮತ್ತು ಡಿಎಸ್‌ಎಫ್ ಪ್ರತ್ಯೇಕ ಮೈತ್ರಿಕೂಟವನ್ನು ರಚಿಸಿ ತಮ್ಮ ಅಭ್ಯರ್ಥಿಗಳನ್ನು ಘೋಷಿಸಿವೆ, ಆದರೆ ಎಸ್‌ಎಫ್‌ಐ, ಬಿಎಪಿಎಸ್‌ಎ, ಎಐಎಸ್‌ಎಫ್ ಮತ್ತು ಪಿಎಸ್‌ಎ ಹೊಸ ರಂಗವನ್ನು ರಚಿಸಿದೆ.
ಈ ವರ್ಷ ಒಟ್ಟು 7,906 ವಿದ್ಯಾರ್ಥಿಗಳು ಮತ ಚಲಾಯಿಸಲು ನೋಂದಾಯಿಸಿಕೊಂಡಿದ್ದಾರೆ. ಚುನಾವಣಾ ಸಮಿತಿ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ನೋಂದಾಯಿತ ಮತದಾರರಲ್ಲಿ ಶೇ. 57 ರಷ್ಟು ಪುರುಷ ವಿದ್ಯಾರ್ಥಿಗಳು ಮತ್ತು ಶೇ. 43 ರಷ್ಟು ಮಹಿಳಾ ವಿದ್ಯಾರ್ಥಿಗಳು ಇದ್ದಾರೆ.
ರಂಗ ಮತ್ತು ಅಭ್ಯರ್ಥಿಗಳು
ABVP ತನ್ನ ಪೂರ್ಣ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸಿದೆ – ಅಧ್ಯಕ್ಷ ಸ್ಥಾನಕ್ಕೆ ಶಿಖಾ ಸ್ವರಾಜ್, ಉಪಾಧ್ಯಕ್ಷ ಸ್ಥಾನಕ್ಕೆ ನಿಟ್ಟು ಗೌತಮ್, ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಕುನಾಲ್ ರೈ ಮತ್ತು ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ವೈಭವ್ ಮೀನಾ.
AISA-DSF ಮೈತ್ರಿಕೂಟವು ತನ್ನ ಅಭ್ಯರ್ಥಿಗಳನ್ನು – ಅಧ್ಯಕ್ಷ ಸ್ಥಾನಕ್ಕೆ ನಿತೀಶ್ ಕುಮಾರ್ (AISA), ಉಪಾಧ್ಯಕ್ಷ ಸ್ಥಾನಕ್ಕೆ ಮನಿಷಾ (DSF), ಕಾರ್ಯದರ್ಶಿ ಸ್ಥಾನಕ್ಕೆ ನರೇಶ್ ಕುಮಾರ್ (AISA) ಸಹ ಘೋಷಿಸಿದೆ.
SFI-AISF-BAPSA-PSA ಮೈತ್ರಿಕೂಟವು ಅಧ್ಯಕ್ಷ ಸ್ಥಾನಕ್ಕೆ ತಯ್ಯಬಾ (ಎಸ್‌ಎಫ್‌ಐ), ಉಪಾಧ್ಯಕ್ಷ ಸ್ಥಾನಕ್ಕೆ-ಸಂತೋಷ್ (ಎಐಎಸ್‌ಎಫ್), ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ – ರಾಮ್‌ನಿವಾಸ್ (ಬಿಎಪಿಎಸ್‌ಎ), ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ – ನಿಗಮ್ ಕುಮಾರಿ (ಪಿಎಸ್‌ಎ) ಅಭ್ಯರ್ಥಿಗಳನ್ನಾಗಿ ಘೋಷಿಸಿದೆ.
ಎಡ ಪಂಥದ ಭದ್ರಕೋಟೆ
ಜೆಎನ್‌ಯು ಅನ್ನು ಯಾವಾಗಲೂ ಎಡಪಂಥೀಯ ಸಿದ್ಧಾಂತದ ಭದ್ರಕೋಟೆ ಎಂದು ಪರಿಗಣಿಸಲಾಗಿದೆ. ಎಐಎಸ್‌ಎ, ಎಸ್‌ಎಫ್‌ಐ, ಡಿಎಸ್‌ಎಫ್ ಮತ್ತು ಎಐಎಸ್‌ಎಫ್ ಸೇರಿದಂತೆ ಪ್ರಮುಖ ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳು ಜೆಎನ್‌ಯುವಿನ ವಿದ್ಯಾರ್ಥಿ ರಾಜಕೀಯದಲ್ಲಿ ದೀರ್ಘಕಾಲ ಪ್ರಾಬಲ್ಯ ಸಾಧಿಸಿವೆ, ಆಗಾಗ್ಗೆ ಶುಲ್ಕ ಹೆಚ್ಚಳ, ವಿದ್ಯಾರ್ಥಿವೇತನ ವಿಳಂಬ, ಹಾಸ್ಟೆಲ್ ಶುಲ್ಕಗಳು ಮತ್ತು ಹಾಸ್ಟೆಲ್ ಕೊರತೆಯಂತಹ ವಿಷಯಗಳ ಕುರಿತು ಹೋರಾಟಗಳನ್ನು ಮಾಡಿವೆ. ರಾಷ್ಟ್ರ, ಅಂತರಾಷ್ಟ್ರೀಯ ರಾಜಕೀಯ ವಿಷಯಗಳ ಕುರಿತು ಚರ್ಚೆ, ವಿಮರ್ಶೆ, ಸಂವಾದಗಳ ಮೂಲಕ ಜೆಎನ್‌ಯುನಲ್ಲಿ ವಿದ್ಯಾರ್ಥಿಗಳು ರಾಜಕೀಯ ಜ್ಞಾನವನ್ನು ಪಡೆಯುತ್ತಾರೆ. ವಿದ್ಯಾರ್ಥಿ ಸಂಘದ ಚುನಾವಣೆ ಅಭಿಯಾನದ ಸಮಯದಲ್ಲಿ ರಾಷ್ಟ್ರೀಯ ಸಮಸ್ಯೆಗಳು ಸಹ ಪ್ರಮುಖವಾಗಿ ಕಾಣಿಸಿಕೊಳ್ಳುತ್ತವೆ.
ಕಮ್ಯುನಿಸ್ಟ್ ಸಿದ್ಧಾಂತದ ಪ್ರತಿಪಾದಕರಾದ ಪ್ರಕಾಶ್ ಕಾರಟ್, ಸೀತಾರಾಮ್ ಯಚೂರಿಯವರಂಥ ನಾಯಕರು ಇದೇ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು. ತಮ್ಮ ವಿದ್ಯಾಭ್ಯಾಸದ ಅವಧಿಯಲ್ಲಿ ವಿಶ್ವವಿದ್ಯಾಲಯಕ್ಕೆ ಶೈಕ್ಷಣಿಕವಾಗಿ ಸಾಕಷ್ಟು ಕೊಡುಗೆ ನೀಡಿದ ಕಾರಣಕ್ಕೆ ಈಗಲೂ ಪ್ರಕಾಶ್ ಕಾರಟ್, ಸೀತಾರಾಂ ಯೆಚೂರಿಯವರ ಹೆಸರು ಜೆಎನ್‌ಯುವಿನಲ್ಲಿ ಪ್ರಸ್ತುತವಾಗಿದೆ. ಇತ್ತೀಚೆಗೆ ನಿಧನರಾದ ಸೀತಾರಾಂ ಯೆಚೂರಿಯವರ ದೇಹ ದರ್ಶನಕ್ಕೆ ಸಾವಿರಾರು ವಿದ್ಯಾರ್ಥಿಗಳು ಸೇರಿದ್ದೆ ಸಾಕ್ಷಿ. ಸಾಮಾಜಿಕ ಅನಿಷ್ಟಗಳ ವಿರುದ್ಧ ಧ್ವನಿ, ಸ್ತ್ರೀವಾದಕ್ಕೆ ಬೆಂಬಲ, ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಹೋರಾಟ ಈ ಎಲ್ಲಾ ಕಾರಣಗಳಿಂದಾಗಿ ಜೆಎನ್‌ಯು ಎಡಪಂಥದ ಭದ್ರಕೋಟೆಯಾಗಿದೆ.
ಇದನ್ನೂ ಓದಿ : JNU ವಿದ್ಯಾರ್ಥಿ ಸಂಘದ ಚುನಾವಣೆ : ಎಡ ವಿದ್ಯಾರ್ಥಿ ಒಕ್ಕೂಟಕ್ಕೆ ಭರ್ಜರಿ ಗೆಲುವು, ಮಖಾಡೆ ಮಲಗಿದ ABVP ಜೆಎನ್‌ಯು
ಜೆಎನ್‌ಯು ಚುನಾವಣೆಗೆ ಯಾಕಷ್ಟು ಪ್ರಾಮುಖ್ಯ?
ಜೆಎನ್‌ಯುವಿನಲ್ಲಿ ಚುನಾವಣೆ ನಡೆಯಬೇಕೆಂದರೆ ಅದು ಯಾವ ಲೋಕಸಭೆ, ವಿಧಾನಸಭೆ ಚುನಾವಣೆಗೂ ಕಡಿಮೆ ಇರುವುದಿಲ್ಲ. ಜೆಎನ್‌ಯುವಿನಲ್ಲಿ ನಡೆಯುವ ಚುನಾವಣೆ ರಾಜಕೀಯವೇ ಹಲವು ರಾಜಕಾರಣಿಗಳ ರಾಜಕೀಯ ಭವಿಷ್ಯಕ್ಕೆ ಬುನಾದಿಯಾಗಿದೆ. ಆ ಕಾರಣದಿಂದಲೇ ಇಲ್ಲಿನ ಚುನಾವಣೆಗೆ ಸಾಕಷ್ಟು ಪ್ರಾಮುಖ್ಯವಿದೆ. 2008 ರಲ್ಲಿ ಜೆಎನ್ ಯುವಿನಲ್ಲಿ ನಡೆಯಬೇಕಿದ್ದ ವಿದ್ಯಾರ್ಥಿ ಸಂಘಟನೆಯ ಚುನಾವಣೆಯನ್ನು ಸುಪ್ರೀಂ ಕೋರ್ಟ್ ಬ್ಯಾನ್ ಮಾಡುವ ಮೂಲಕ, ವಿಶ್ವವಿದ್ಯಾಲಯವೊಂದರ ಚುನಾವಣೆಗೆ ಇರುವ ಗಾಂಭೀರ್ಯವನ್ನು ಅರ್ಥ ಮಾಡಿಸಿತ್ತು. ಮುಖ್ಯ ಚುನಾವಣಾ ಆಯುಕ್ತರಾಗಿದ್ದ ಜೆ ಎಮ್ ಲಿಂಗದೋಹ್(ನಿ.) ಅವರ ನೇತೃತ್ವದ ಲಿಂಗದೋಹ್ ಸಮಿತಿ ನೀಡಿದ ಮಾರ್ಗಸೂಚಿ ಆಧಾರದ ಮೇಲೆ ಜೆಎನ್ ಯುವಿನಲ್ಲಿ ಚುನಾವಣೆಯ ಮೇಲೆ ನಿರ್ಬಂಧ ಹೇರಲಾಗಿತ್ತು. ಚುನಾವಣಾ ವೆಚ್ಚದ, ಪಾರದರ್ಶಕತೆಯ ಬಗ್ಗೆ ಈ ಸಮಿತಿ ವರದಿ ನೀಡಿತ್ತು. ಆದರೆ ನಂತರ 2011 ರಲ್ಲಿ ಈ ನಿರ್ಬಂಧವನ್ನು ತೆರವುಗೊಳಿಸಿದ ಮೇಲೆ ಮತ್ತೆ ಚುನಾವಣೆಗಳು ಆರಂಭವಾದವು.
ಜೆಎನ್‌ಯು ನ ಪ್ರಮುಖ ವಿದ್ಯಾರ್ಥಿಗಳು
ಜೆಎನ್ ಯು ದೇಶಕ್ಕೆ ಹಲವು ಖ್ಯಾತನಾಮರನ್ನು ನೀಡಿದೆ. ನೊಬೆಲ್ ಪುರಸ್ಕೃತರಿಂದ ಹಿಡಿದು ಸಾಮಾಜಿಕ ಚಿಂತಕರವರೆಗೆ ಜೆಎನ್‌ಯು ದೇಶಕ್ಕೆ ಕೊಡುಗೆ ನೀಡಿದೆ. ಅವರಲ್ಲಿ ಪ್ರಮುಖ ಹೆಸರುಗಳನ್ನು ನೋಡುವುದಾದರೆ.. ಅರ್ಥಶಾಸ್ತ್ರಕ್ಕಾಗಿ ನೊಬೆಲ್ ಪ್ರಶಸ್ತಿ ಗೆದ್ದ ಕೊಲ್ಕತ್ತಾದ ಅಭಿಜಿತ್ ಬ್ಯಾನರ್ಜಿ, ಪ್ರಸ್ತುತ ಕೇಂದ್ರ ಸರ್ಕಾರದಲ್ಲಿ ಹಣಕಾಸು ಸಚಿವೆಯಾಗಿರುವ ನಿರ್ಮಲಾ ಸೀತಾರಾಮನ್, ವಿದೇಶಾಂಗ ಸಚಿವ ಎಸ್.ಜೈಶಂಕರ್, ಸಿಪಿಐ(ಎಂ) ಮುಖಂಡರಾದ ಪ್ರಕಾಶ್ ಕಾರಟ್, ಸೀತಾರಾಮ್ ಯೆಚೂರಿ, ನಟಿ ಸ್ವರಾ ಭಾಸ್ಕರ್, ಭದ್ರತಾ ಇಲಾಖೆಗೆ ಉಪಸಲಹಗಾರರಾಗಿದ್ದ ಅರವಿಂದ್ ಗುಪ್ತ, ಆರ್ ಬಿಐ ನ ಮಾಜಿ ಉಪಗವರ್ನರ್ ಹಾರುನ್ ರಶಿದ್ ಖಾನ್, ರೈತ ನಾಯಕ ವಿಜೂ ಕೃಷ್ಣನ್, ಯುವ ನಾಯಕರಾದ ಕನ್ನಯ್ಯ ಕುಮಾರ್, ಮುಹಾಮದ್ ಮುಶಿನ್, ಚಿಂತಕ ಯೋಗೇಂದ್ರ ಯಾದವ್ ಮುಂತಾದವರು ಇದೇ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು.
ಜವಾಹರಲಾಲ್ ನೆಹರೂ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿದ್ದ ಮೊಹಮ್ಮದ್ ಅಲಿ ಚಗ್ಲಾ, ವಿಶ್ವವಿದ್ಯಾಲಯಗಳು ಹೇಗಿರಬೇಕು ಎಂಬ ಬಗ್ಗೆ ತಮ್ಮದೇ ಆದ ಒಂದು ಪರಿಕಲ್ಪನೆಯನ್ನು ಪ್ರಮಂಡಿಸಿದರು. ಅದು ಸ್ವತಂತ್ರ ಚಿಂತನೆಗೆ ಅವಕಾಶ ನೀಡುವಂಥ ವಾತಾವರಣ ನಿರ್ಮಿಸಿ ಒಂದು ಮಾದರಿ ಸಂಸ್ಥೆಯಾಗಬೇಕು ಎಂಬ ಕನಸು ಕಂಡಿದ್ದರು. ಅವರ ಆ ಕನಸಿನ ಸಾಕಾರ ರೂಪ ಎಂಬಂತೆ ನಾಲ್ಕು ವರ್ಷದ ನಂತರ, ಅಂದರೆ 1969 ರಲ್ಲಿ ದೆಹಲಿಯಲ್ಲಿ “ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ” ಆರಂಭವಾಯ್ತು. ಚಗ್ಲಾ ಅಂದುಕೊಂಡಂತೆ ಈ ವಿಶ್ವವಿದ್ಯಾಲಯ ನೂರಾರು ಸ್ವತಂತ್ರ ಚಿಂತಕರ ಹುಟ್ಟಿಗೆ ಕಾರಣವಾಯ್ತು… ದೇಶಕ್ಕೆ ಅತ್ಯುತ್ತಮ ರಾಜಕಾರಣಿಗಳನ್ನೂ, ಹೋರಾಟಗಾರರನ್ನೂ ನೀಡಿತು. ಸಂಶೋಧನಾ ಕ್ಷೇತ್ರದಲ್ಲಿ ಅಸಂಖ್ಯ ಕೊಡುಗೆಗಳನ್ನು ನೀಡಿತು. ಹಾಗಾಗಿಯೇ ಜೆಎನ್‌ಯು ಎಂದರೆ ಎಲ್ಲರಿಗೂ ಅಚ್ಚುಮೆಚ್ಚು.
******
ಇದನ್ನೂ ನೋಡಿ : “ಛಾವಾ” ಸಿನಿಮಾದಲ್ಲಿನ ಸುಳ್ಳುಗಳು! Janashakthi Media ಜೆಎನ್‌ಯು