ಆಂದ್ರ ಮೂಲದ ಗುತ್ತಿಗೆದಾರರು ದೋಚಿದ್ದೆಷ್ಟು? ವಿಧಾನ ಸಭೆಯಲ್ಲಿ ಬಿಸಿ ಬಿಸಿ ಚರ್ಚೆ

  • ನಾಲ್ಕೇ ನಾಲ್ಕು ಗುತ್ತಿಗೆದಾರರು ರಾಜ್ಯವನ್ನು ಲೂಟಿ ಹೊಡೆದಿದ್ದಾರೆ
  • 2,000 ಕೋಟಿ ಇದ್ದ ಯೋಜನಾ ವೆಚ್ಚ 10,000 ಕೋಟಿಗೆ ಏರಿಕೆ ಆಗುತ್ತದೆ
  • ವಿಧಾನಸಭೆಯಲ್ಲಿ ಕಾಂಗ್ರೆಸ್ ಸದಸ್ಯ ಶಿವಾನಂದ ಪಾಟೀಲ್ ಗಂಭೀರ ಆರೋಪ
  • ನೀರಾವರಿ ಯೋಜನೆಗಳ ವೆಚ್ಚ ದುಪ್ಪಟ್ಟಾಗಿದ್ದು ಯಾಕೆ? ಅರವಿಂದ ಬೆಲ್ಲದ್‌ ಪ್ರಶ್ನೆ 

ಬೆಂಗಳೂರು: ಕಾಮಗಾರಿಗಳ ಯೋಜನಾ ವೆಚ್ಚ ಗಣನೀಯವಾಗಿ ಏರಿಕೆಯಾಗುತ್ತಿರುವ ಬಗ್ಗೆ ಸದನದಲ್ಲಿ ಬಿಸಿ ಬಿಸಿ ಚರ್ಚೆ ನಡೆಯಿತು. ವಿಧಾನಸಭೆಯಲ್ಲಿ ಈ ಬಗ್ಗೆ ವಿಷಯ ಪ್ರಸ್ತಾಪಿಸಿದ ಬಿಜೆಪಿ ಸದಸ್ಯ ಅರವಿಂದ ಬೆಲ್ಲದ್, ನೀರಾವರಿ ಯೋಜನೆಗಳ ವೆಚ್ಚ ಪರಿಷ್ಕರಣೆ ದುಪ್ಪಟ್ಟಾಗುತ್ತಿದೆ. ಬಹುತೇಕ ಆಂಧ್ರ ಮೂಲದ ಗುತ್ತಿಗೆದಾರರಿಗೆ ಗುತ್ತಿಗೆ ಸಿಗುತ್ತಿದೆ. ಗುತ್ತಿಗೆದಾರರಿಗೆ ಯಾರಿಗೆ ಎಷ್ಟು ಬಿಲ್ ಆಗಿದೆ ಎಂದು ಅಂಕಿಅಂಶ ನೀಡಿ ಎಂದು ಸಚಿವ ಕಾರಜೋಳಗೆ ಒತ್ತಾಯಿಸಿದರು.

ಈ ವೇಳೆ ಮಧ್ಯಪ್ರವೇಶಿಸಿದ ಕಾಂಗ್ರೆಸ್ ಸದಸ್ಯ ಶಿವಾನಂದ ಪಾಟೀಲ್, ನಾಲ್ಕೇ ನಾಲ್ಕು ಜನ ಗುತ್ತಿಗೆದಾರರು ಈ ರಾಜ್ಯವನ್ನು ಲೂಟಿ ಹೊಡೆದಿದ್ದಾರೆ.‌ ಯೋಜನಾ ವೆಚ್ಚ ಏಕಾಏಕಿ ದುಪ್ಪಟ್ಟು ಆಗುತ್ತದೆ. 2,000 ಕೋಟಿ ರೂ.‌ಯೋಜನಾ ವೆಚ್ಚ 10,000 ಕೋಟಿ ರೂ. ವೆಚ್ಚ ಏರಿಕೆ ಆಗುತ್ತದೆ ಎಂದು ಆರೋಪಿಸಿದರು.

ಇದನ್ನೂ ಓದಿ : ಕಮಿಷನ್‌ ಆರೋಪದ ತನಿಖೆ ನಡೆಸಿದರೆ 25ಕ್ಕೂ ಹೆಚ್ಚು ಶಾಸಕರು ರಾಜೀನಾಮೆ ನೀಡಬೇಕಾಗುತ್ತದೆ: ಡಿ.ಕೆಂಪಣ್ಣ

ಇದೇ ವೇಳೆ ಸದನದಲ್ಲಿ ಗುತ್ತಿಗೆದಾರರ ಹೆಸರು ಉಲ್ಲೇಖಿಸಿದರು. ನಂ.1 ಗುತ್ತಿಗೆದಾರ ಡಿವೈ ಉಪ್ಪಾರ್‌,  ನಂ.2 ಗುತ್ತಿಗೆದಾರ ಶೆಟ್ಟಿ, ಗುತ್ತಿಗೆದಾರ ಮಹಾಲಿಂಗ ಶಂಕರ್, ಗುತ್ತಿಗೆದಾರ ಮಾನಪ್ಪ ವಜ್ಜಲ್, ಗುತ್ತಿಗೆದಾರ ಮೆಗಾ ಇಂಜಿನಿಯರ್ಸ್. ಅವರಿಗೆ ಹೇಗೆ ಗುತ್ತಿಗೆ ಸಿಗುತ್ತದೆ ಎಂದು ನಾನು ಕೇಳಲು ಹೋಗುವುದಿಲ್ಲ. ಆದರೆ, ಯೋಜನೆ ಪ್ರಾರಂಭವಾದಾಗ ವೆಚ್ಚ 2,000 ಕೋಟಿ ರೂ. ಇದ್ದರೆ, ಯೋಜನೆ ಪೂರ್ಣವಾದಾಗ ಯೋಜನಾ ವೆಚ್ಚ 4,500 ಕೋಟಿ ರೂ. ಏರಿಕೆ ಆಗುತ್ತದೆ ಎಂದು ಆರೋಪಿಸಿದರು.

ಬೇಕಾಬಿಟ್ಟಿ ಯೋಜನಾ ವೆಚ್ಚ ಏರಿಕೆಗೆ ಅನುಮತಿ ಕೊಡುವವರು ಯಾರು ಎಂದು ಜೆಡಿಎಸ್ ಸದಸ್ಯ ಸಾ.ರಾ.ಮಹೇಶ್ ಪ್ರಶ್ನಿಸಿದರು. ಇದಕ್ಕೆ ಜೆಡಿಎಸ್ ಶಾಸಕ ಸುರೇಶ್ ಗೌಡ ಸಾತ್ ನೀಡಿದರು. ಈ ಬಗ್ಗೆ ಸದನದಲ್ಲಿ ವಿಸ್ತೃತ ಚರ್ಚೆ ನಡೆಸಲು ಅವಕಾಶ ನೀಡಬೇಕು ಎಂದು ಬೆಲ್ಲದ್ ಮನವಿ ಮಾಡಿದರು.

ಬಳಿಕ ಮಾತನಾಡಿದ ಸಚಿವ ಕಾರಜೋಳ, 4,000 ಸಣ್ಣ ಗುತ್ತಿಗೆದಾರರ ಬಿಲ್ ಪಾವತಿ ಮಾಡಿದ್ದೇವೆ. ದೊಡ್ಡ ಗುತ್ತಿಗೆದಾರರನ್ನು ಸೈಡಿಗಿಟ್ಟು ಸಣ್ಣ ಗುತ್ತಿಗೆದಾರರ ಬಿಲ್‌ಗೆ ಆದ್ಯತೆ ಕೊಡಲಾಗುತ್ತಿದೆ. ಒಂದು ಕೋಟಿ ರೂ.‌ಗಿಂತ ಕಡಿಮೆ ಬಿಲ್ ಇರುವ ಬಾಕಿ ಬಿಲ್ ಅನ್ನು ಪಾವತಿ ಮಾಡಲು ಸೂಚನೆ ನೀಡಲಾಗಿದೆ. ಬಿಲ್ ಪಾವತಿ ಸಂಬಂಧ ಯಾವುದೇ ತಾರತಮ್ಯ ಆಗದಂತೆ ಎಚ್ಚರವಹಿಸುತ್ತೇವೆ ಎಂದರು.

Donate Janashakthi Media

Leave a Reply

Your email address will not be published. Required fields are marked *