ಜಮ್ಮು: ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರ ಮಗಳು ಇಲ್ತಿಜಾ, ‘ಹಿಂದುತ್ವ’ ಎಂಬುದು ಹಿಂದೂ ಧರ್ಮಕ್ಕೆ ಅಪಮಾನ ಮಾಡುವ ರೋಗವಿದ್ದಂತೆ. ಅದು ಅಲ್ಪಸಂಖ್ಯಾತರ ಮೇಲೆ, ಮುಖ್ಯವಾಗಿ ಮುಸ್ಲಿಮರ ಮೇಲಿನ ಗಲಭೆ ಮತ್ತು ಹಿಂಸೆಗೆ ದಾರಿ ಮಾಡಿಕೊಡುತ್ತದೆ. ಬಿಜೆಪಿಯು ಅದನ್ನು ಮತ ಬ್ಯಾಂಕ್ ಭದ್ರಪಡಿಸಿಕೊಳ್ಳಲು ಬಳಸಿಕೊಳ್ಳುತ್ತಿದೆ ಎಂದು ಭಾನುವಾರ ಹೇಳಿದ್ದಾರೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.
ಇಂತಹ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕೆ ಇಲ್ತಿಜಾ ಮುಫ್ತಿ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ ಎಂದು ವರದಿಯಾಗಿದೆ. ಮುಸ್ಲಿಂ ಬಾಲಕರಿಗೆ ಚಪ್ಪಲಿಯಿಂದ ಹೊಡೆಯುತ್ತಿರುವ ವಿಡಿಯೊವೊಂದನ್ನು ಎಕ್ಸ್/ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಇಲ್ತಿಜಾ, ‘ಭಗವಂತ ರಾಮನು, ಮುಸ್ಲಿಂ ಅಪ್ರಾಪ್ತ ಬಾಲಕರು ತಮ್ಮ ನಾಮ ಜಪ ಮಾಡಲಿಲ್ಲ ಎಂಬ ಕಾರಣಕ್ಕೆ ಚಪ್ಪಲಿಗಳಿಂದ ಹೊಡೆಸಿಕೊಳ್ಳುವುದನ್ನು ಅಸಹಾಯಕತೆಯಿಂದ ನೋಡಿ, ನಾಚಿಕೆಯಿಂದ ತಲೆ ತಗ್ಗಿಸುವಂತಾಗಿದೆ. ಹಿಂದುತ್ವ ಎಂಬುದು ಲಕ್ಷಾಂತರ ಭಾರತೀಯರನ್ನು ಬಾಧಿಸುತ್ತಿರುವ ಹಾಗೂ ದೇವರ ಹೆಸರನ್ನೂ ಕೆಡಿಸುತ್ತಿರುವ ರೋಗವಾಗಿದೆ’ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ : ಮಕ್ಕಳಿಗೆ ‘ಜೈ ಶ್ರೀರಾಮ್’ ಎಂದು ಜಪಿಸುವಂತೆ ಒತ್ತಾಯ: ನಿರಾಕರಿಸಿದಾಗ ಅವರಿಗೆ ಚಪ್ಪಲಿಯಲ್ಲಿ ಹೊಡೆದ ಯುವಕ
ಜಮ್ಮುವಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿರುವ ಇಲ್ತಿಜಾ, ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಹಾಗೆಯೇ, ಬಿಜೆಪಿಯು ದೇಶದಲ್ಲಿ ಇಂತಹ ಸ್ಥಿತಿ ನಿರ್ಮಾಣವಾಗುವಂತೆ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
‘ಹಿಂದುತ್ವ ಮತ್ತು ಹಿಂದೂ ಧರ್ಮದ ನಡುವೆ ದೊಡ್ಡ ಅಂತರವಿದೆ. ಹಿಂದುತ್ವ ಎಂಬುದು ದ್ವೇಷ ಭಾವನೆಯಾಗಿದೆ. ಭಾರತವು ಹಿಂದೂಗಳಿಗೆ ಸೇರಿದ್ದು ಎಂಬುದನ್ನು ಹರಡಲು ಹಾಗೂ ಹಿಂದೂಗಳ ಪ್ರಾಬಲ್ಯವನ್ನು ಸ್ಥಾಪಿಸುವ ಸಲುವಾಗಿ ವಿ.ಡಿ. ಸಾವರ್ಕರ್ 1940ರ ದಶಕದಲ್ಲಿ ಅದನ್ನು ಹರಡಿದರು. ಹಿಂದೂ ಧರ್ಮವೂ ಇಸ್ಲಾಂನಂತೆಯೇ ಒಂದು ಧರ್ಮವಾಗಿದ್ದು, ಜಾತ್ಯತೀತತೆ, ಪ್ರೀತಿ, ಸಹಾನುಭೂತಿಯನ್ನು ಸಾರುತ್ತದೆ. ಉದ್ದೇಶಪೂರ್ವಕವಾಗಿ ಅದನ್ನು ತಿರುಚಬೇಡಿ. ನಾನು ಏನೇ ಹೇಳಿದ್ದರೂ, ಮುಕ್ತವಾಗಿಯೇ ಹೇಳಿದ್ದೇನೆ. ಹಿಂದುತ್ವವನ್ನು ಟೀಕಿಸಿದ್ದೇನೆ. ಆ ಮಾತಿಗೆ ಬದ್ಧಳಾಗಿದ್ದೇನೆ. ಹಿಂದುತ್ವ ಒಂದು ರೋಗ. ಅದಕ್ಕೆ ನಾವು ಚಿಕತ್ಸೆ ನೀಡಬೇಕು’ ಎಂದು ಪುನರುಚ್ಚರಿಸಿದ್ದಾರೆ.
‘ಜೈ ಶ್ರೀ ರಾಮ್’ ಎಂಬುದು ‘ರಾಮ ರಾಜ್ಯ’ ಕುರಿತಾದುದಾಗಿ ಉಳಿದಿಲ್ಲ ಎಂದಿರುವ ಇಲ್ತಿಜಾ, ಈಗ ಗಲಭೆಗಳ ಸಂದರ್ಭದಲ್ಲಿ ಆ ಘೋಷಣೆ ಕೂಗಲಾಗುತ್ತಿದೆ ಎಂದು ಒತ್ತಿ ಹೇಳಿದ್ದಾರೆ.
ಇದಕ್ಕೆ ಜಮ್ಮು ಮತ್ತು ಕಾಶ್ಮೀರ ಬಿಜೆಪಿ ಮಾಜಿ ಅಧ್ಯಕ್ಷ ರವೀಂದರ್ ರೈನಾ ಪ್ರತಿಕ್ರಿಯಿಸಿದ್ದು, ‘ರಾಜಕೀಯದಲ್ಲಿ ಹಲವು ರೀತಿಯ ಅಭಿಪ್ರಾಯಗಳಿರುತ್ತವೆ. ಆದರೆ, ಜನರ ಧಾರ್ಮಿಕ ಭಾವನೆಗಳಿಗೆ ಘಾಸಿ ಮಾಡುವುದನ್ನು ಸಹಿಸಲಾಗದು. ಹಿಂದೂ ಮತ್ತು ಮುಸ್ಲಿಮರ ನಡುವೆ ಬಿರುಕು ಮೂಡಿಸುವ ಪಿತೂರಿಯ ಭಾಗವಾಗಿರುವ ವಿಡಿಯೊ ಕುರಿತು ಪ್ರತಿಕ್ರಿಯಿಸುವಾಗ ಅವರು (ಇಲ್ತಿಜಾ) ಅವಹೇಳನಕಾರಿ ಪದಗಳನ್ನು ಬಳಸಿದ್ದಾರೆ. ಆಕ್ಷೇಪಾರ್ಹ ಪದಗಳನ್ನು ಬಳಸಿದ್ದಕ್ಕಾಗಿ ಅವರು ಕ್ಷಮೆ ಯಾಚಿಸಬೇಕು’ ಎಂದು ಒತ್ತಾಯಿಸಿದ್ದಾರೆ.