– ಅಪಾಯಕಾರಿ ಸನ್ನಿವೇಶದಲ್ಲಿ ದೇಶ
ಕೋಲಾರ:- ಕೇಂದ್ರ ಸರ್ಕಾರ ರಾಜ್ಯದ ಪಾಲಿನ ಜಿಎಸ್ಟಿ ಬಾಕಿ ಬಿಡುಗಡೆ ಮಾಡದೇ ಆರ್ಬಿಐನಿಂದ ಸಾಲ ಪಡೆಯಲು ಸಲಹೆ ನೀಡುವ ಮೂಲಕ ಗಣರಾಜ್ಯ ವ್ಯವಸ್ಥೆಗೆ ಧಕ್ಕೆ ಎಸಗಿದೆ, ಇಂದು ಅಪಾಯಕಾರಿ ಸನ್ನಿವೇಶದಲ್ಲಿ ದೇಶವಿದೆ ಎಂದು ಕಾಂಗ್ರೆಸ್ ರಾಜ್ಯ ಮಾಧ್ಯಮ ಸಂವಹನ ವಿಭಾಗದ ಸಹ ಅಧ್ಯಕ್ಷ ಹಾಗೂ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಟೀಕಿಸಿದರು.
ಸೋಮವಾರ ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ರಾಜ್ಯ ಸರ್ಕಾರದ 2019-20ನೇ ಸಾಲಿನ ಜಿಎಸ್ಟಿ ಪಾಲು 31674 ಕೋಟಿರೂ, ಹಾಗೂ ಹಿಂದಿನ ಬಾಕಿ 13764 ಕೋಟಿರೂ ಇದ್ದು, ಈ ಹಣವನ್ನು ಕೇಳಲು ರಾಜ್ಯದ ರಾಜಹುಲಿ ಸರ್ಕಾರಕ್ಕೆ ಏಕೆ ಹಿಂಜರಿಕೆ ಎಂದು ವ್ಯಂಗ್ಯ ಮಾಡಿದ್ದಾರೆ.
ರಾಜ್ಯ ಸರ್ಕಾರ ಜನರಿಗಾಗಿ ಆಡಳಿತ ನಡೆಸುತ್ತಿಲ್ಲ, ರಾಜ್ಯ ದಿವಾಳಿಯಾದರೂ ತನ್ನ ಪಾಲಿನ ಹಣ ಕೇಳದೇ ಕೇಂದ್ರ ಸರ್ಕಾರವನ್ನು ಮೆಚ್ಚಿಸಲು ಆಡಳಿತ ನಡೆಸಿದಂತಿದೆ, ‘ಒಂದು ದೇಶ ಒಂದು ತೆರಿಗೆ’ ಎಂದೆಲ್ಲಾ ನೀಡಿದ ಭರವಸೆ ಈಡೇರಿಲ್ಲ, ನಮ್ಮ ಪಾಲಿನ ಹಣ ನೀಡದೇ ನೀವು ಸಾಲ ಮಾಡಿ ಎಂದು ಹೇಳುವುದು ನೈತಿಕ ಜವಾಬ್ದಾರಿಯೇ ಎಂದು ಪ್ರಶ್ನಿಸಿದರು.
ಆರ್ಥಿಕ ಸಚಿವರಿಂದ ಬೇಜವಾಬ್ದಾರಿ ಹೇಳಿಕೆ
ದೇಶದ ಆರ್ಥಿಕ ಸ್ಥಿತಿ ಕುರಿತು ವಿತ್ತ ಸಚಿವರು ದೇವರೇ ಕಾಪಾಡಬೇಕು ಎಂದು ನೀಡಿರುವ ಹೇಳಿಕೆ ದಿವಾಳಿ ತನಕ್ಕೆ ಸಾಕ್ಷಿಯಾಗಿದೆ, ಇಂತಹ ಬೇಜಾವಬ್ದಾರಿ ಹೇಳಿಕೆ ಎಷ್ಟು ಸರಿ ಎಂದು ಪ್ರಶ್ನಿಸಿದರು.
ರಾಜ್ಯ ಹಾಗೂ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ತನ್ನ ವೈಫಲ್ಯಗಳನ್ನು ಮರೆಮಾಚಲು ಭಾವನಾತ್ಮಕ ವಿಷಯಗಳನ್ನು ಕೆದಕುವ ಮೂಲಕ ಜನರ ದಿಕ್ಕು ತಪ್ಪಿಸುತ್ತಿದೆ ಎಂದು ಸುದರ್ಶನ್ ಟೀಕಿಸಿದರು.
ಸಮಗ್ರ ಶ್ವೇತಪತ್ರ ಹೊರಡಿಸಲು ಆಗ್ರಹ
ಇಡೀ ಆರ್ಥಿಕ ವ್ಯವಸ್ಥೆ ದಿವಾಳಿಯಾಗಿದೆ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡೂ ಕೂಡಲೇ ಸಮಗ್ರ ಶ್ವೇತಪತ್ರ ಹೊರಡಿಸಬೇಕು, ಅಧೀವೇಶನಗಳಲ್ಲಿ ಈ ಕುರಿತು ಚರ್ಚೆಯಾಗಬೇಕು, ಜಿಎಸ್ಟಿ ವಿಷಯದಲ್ಲಿ ‘ಕೊಟ್ಟೋನ್ ಕೋಡಂಗಿ, ಇಸಕೊಂಡೋನು ವೀರಭದ್ರ’ ಎಂಬಂತಾಗಿದೆ ಎಂದು ಕಿಡಿಕಾರಿದ್ದಾರೆ.
ಸಂಬಳಕ್ಕೂ ಹಣವಿಲ್ಲ, ಅಭಿವೃದ್ದಿಯಲ್ಲೂ ಹಿನ್ನಡೆಯಾಗಿದೆ, ಸುಸ್ಥಿತಿಯಲ್ಲಿದ್ದ ರಾಜ್ಯ ಸರ್ಕಾರ ಆರ್ಥಿಕವಾಗಿ ಹಿಂದುಳಿಯುವಂತಾಗಿದೆ, ಈ ದುಸ್ಥಿತಿ ಸರಿಪಡಿಸುವ ಆಲೋಚನೆಯೂ ಮುಖ್ಯಮಂತ್ರಿಗಳು, ಪ್ರಧಾನ ಮಂತ್ರಿಗಳಿಗೆ ಇದ್ದಂತಿಲ್ಲ ಎಂದರು.
ಒಳ ಮೀಸಲಾತಿ ತೀರ್ಪುಬೇಗ ಬರಲಿ
ಒಳ ಮೀಸಲಾತಿ ಕುರಿತ ಪ್ರಕರಣ ಸುಪ್ರೀಂಕೋರ್ಟ್ ಮುಂದಿದೆ, ಕೋರ್ಟ್ ಶೀಘ್ರ ಇತ್ಯರ್ಥಪಡಿಸಲಿ ಎಂದು ಮನವಿ ಮಾಡಿದ ಅವರು, ರಾಜಕೀಯ, ಸಾಮಾಜಿಕವಾಗಿ ಕೇಂದ್ರ, ರಾಜ್ಯ ಸರ್ಕಾರಗಳು ತನ್ನ ಅಭಿಪ್ರಾಯವನ್ನು ಜನರ ಮುಂದೆ ಹೇಳಬೇಕು ಎಂದು ಆಗ್ರಹಿಸಿದರು.
ಡ್ರಗ್ಸ್ ದಂಧೆಗೆ ಉನ್ನತ ತನಿಖೆಗೆ
ಡ್ರಗ್ಸ್ನಿಂದ ಯುವಜನತೆ, ಸಮಾಜದ ಸ್ವಾಸ್ಥ್ಯ ನಾಶವಾಗುವುದರಿಂದ ಇದನ್ನು ಬೇರು ಸಮೇತ ಕಿತ್ತೋಗೆಯಬೇಕು, ಉನ್ನತ ಮಟ್ಟದ ತನಿಖೆಗೆ ಸರ್ಕಾರ ಮುಂದಾಗಬೇಕು, ಇಲ್ಲಿ ರಾಜಕಾರಣದ ಪ್ರಶ್ನೆ ಬರಬಾರದು, ಸಚಿವರುಗಳು ತನಿಖೆಗೆ ಸೂಚಿಸಿದ ನಂತರ ಮನಬಂದಂತೆ ಹೇಳಿಕೆ ನೀಡುವುದು ಎಷ್ಟು ಸರಿ ಎಂದುಪ್ರಶ್ನಿಸಿದ ಅವರು, ರಾಜಕೀಯವಾಗಿ ಹೇಳಲು ಅವರ ಪಕ್ಷದ ಅಧ್ಯಕ್ಷರು ವಕ್ತಾರರು ಇಲ್ಲವೇ ಎಂದು ಪ್ರಶ್ನಿಸಿದರು.
ವೇಮಗಲ್ ರೈತರಿಗೂ ಕೋಟಿ ರೂ ನೀಡಿ
ಕೆಜಿಎಫ್ನಲ್ಲಿ 3200 ಎಕರೆ ವಶ,ಕೈಗಾರಿಕೆಗಳ ಅಭಿವೃದ್ದಿ ಕುರಿತ ಪ್ರಯತ್ನ ಸ್ವಾಗತಾರ್ಹ, ಮಾಲೂರು ತಾಲ್ಲೂಕಿನ ಮಿಂಡಹಳ್ಳಿ ಸಮೀಪ ಕೈಗಾರಿಕೆಗಳಿಗೆ ವಶಪಡಿಸಿಕೊಂಡ ರೈತರ ಜಮೀನಿಗೆ 1.20 ಕೋಟಿ ಎಕರೆಗೆ ನೀಡಲು ಡಿಸಿ ಶಿಫಾರಸ್ಸು ಮಾಡಿದ್ದಾರೆ.
ಹಾಗೆಯೇ ನರಸಾಪುರ,ವೇಮಗಲ್ನಲ್ಲಿ ಎರಡನೇ ಹಂತದ ಕೈಗಾರಿಕಾ ವಲಯಕ್ಕೆ ಜಮೀನು ಪಡೆಯುತ್ತಿದ್ದು ಇಲ್ಲಿಯೂ ರೈತರಿಗೆ ಅಷ್ಟೇ ಹಣ ನೀಡಲು ಕೆಐಡಿಬಿಗೆ ಶಿಫಾರಸ್ಸು ಮಾಡಬೇಕು,ತಾರತಮ್ಯ ಮಾಡಬಾರದು ಎಂದು ಒತ್ತಾಯಿಸಿದರು.
ಸ್ಥಳೀಯರಿಗೆ ಉದ್ಯೋಗ ನೀಡಲಿ
ಕೈಗಾರಿಕೆಗಳನ್ನು ವೀಕ್ಷಿಸಲು ಜಗದೀಶಶೆಟ್ಟರು ಬಂದು ಹೋಗಿದ್ದಾರೆ, ಆದರೆ ಇಲ್ಲಿ ಸ್ಥಳೀಯರಿಗೆ ನಿರೀಕ್ಷಿಸಿದಂತೆ ಉದ್ಯೋಗ ಸಿಕ್ಕಿಲ್ಲ, ಜಮೀನು ಕಳೆದುಕೊಂಡ ರೈತನ ಕುಟಂಬಕ್ಕೂ ನ್ಯಾಯ ಸಿಕ್ಕಿಲ್ಲ, ಈ ಬಗ್ಗೆ ಅಧಿಕಾರಿಗಳು, ಕಂಪನಿಗಳ ಮಾಲೀಕರ ಸಭೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದರು.
ಕಂಪನಿಗಳ ಸಿಎಸ್ಆರ್ನಿಧಿ ಸಿಎಂ,ಪಿಎಂ ಪರಿಹಾರ ನಿಧಿಗೆ ಹೊರತುಪಡಿಸಿ ಉಳಿದ ಸಂದರ್ಭದಲ್ಲಿ ಕೈಗಾರಿಕೆಗಳಿರುವ ವ್ಯಾಪ್ತಿಯ ಗ್ರಾಮಗಳಿಗೆ ಬಳಕೆಯಾಗಬೇಕು, ಗ್ರಾ.ಪಂಗಳಿಗೆ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಕೈಗಾರಿಕೆಗಳು ಕೂಡಲೇ ತೆರಿಗೆ ಹಣ ನೀಡಬೇಕು ಎಂದು ಆಗ್ರಹಿಸಿದರು.
ಪಟ್ಟಣಪಂಚಾಯಿತಿಗೆ ಪ್ರಸ್ತಾವನೆ ಸಲ್ಲಿಕೆ
ಜಿಲ್ಲೆಯ ಕುರಗಲ್ ಸೇರಿದಂತೆ ವೇಮಗಲ್ ಹಾಗೂ ಬೇತಮಂಗಲವನ್ನು ಪಟ್ಟಣ ಪಂಚಾಯಿತಿಯನ್ನಾಗಿಸಲು ಪ್ರಸ್ತಾವನೆ ಹೋಗಿದೆ, ಸಂಸದರು, ಶಾಸಕರು,ಉಸ್ತುವಾರಿ ಸಚಿವರು ಗಮನಹರಿಸಬೇಕು ಎಂದು ಮನವಿ ಮಾಡಿ, ರಾಜ್ಯದಲ್ಲಿ 10 ಸಾವಿರ ಜನಸಂಖ್ಯೆ ಇರುವ ಕಂದಾಯ ಹೋಬಳಿಗಳನ್ನು ಪಟ್ಟಣ ಪಂಚಾಯಿತಿ ಮಾಡುವ ಸಂಬಂಧ ಕ್ರಮವಹಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. ಈ ವೇಳೆ ಪತ್ರಿಕಾ ಗೋಷ್ಠಿಯಲ್ಲಿ ಕೋಲಾರದ ಕಾಂಗ್ರೆಸ್ ಮುಖಂಡರು ಹಾಜರಿದ್ದರು.