ಜೀತ ಪದ್ಧತಿ ವಿರುದ್ಧ ಹೋರಾಡಿದ ಕೂಲಿಕಾರ ಬಾಳಪ್ಪ

ಒಬ್ಬ ದೇವದಾಸಿಯ ಮಗ, ಜೀವನದಲ್ಲಿ ಬಹುಪಾಲು ಜೀತಗಾರನಾಗಿ ಕ್ರೂರ ಶಿಕ್ಷೆಗೆ ಒಳಗಾಗಿ ಬದುಕು ಸವೆಸಿದ ಬಾಳಪ್ಪ. ಅತ್ಯಂತ ಕಡುಬಡತನದಲ್ಲಿ ಹುಟ್ಟಿ ಜೀವವನ್ನು ಸವೆಸಿದ ಬಾಳಪ್ಪನವರು ಕೂಲಿಕಾರರನ್ನು ಸಂಘಟಿಸುವ ಮೂಲಕ ದಬ್ಬಾಳಿಕೆಗಳನ್ನು ಮೆಟ್ಟಿನಿಲ್ಲುವಂತಹ ಪ್ರಭಾವವನ್ನು‌ ಬೆಳೆಸಿಕೊಂಡ ಬಾಳಪ್ಪನವರ ಬಗ್ಗೆ ಕರ್ನಾಟಕ ರಾಜ್ಯ ಕೃಷಿ ಕೂಲಿಕಾರರ ಸಂಘಟನೆಯ ರಾಜ್ಯ ಉಪಾಧ್ಯಕ್ಷರಾದ ಜಿ.ಎನ್.ನಾಗರಾಜ್‌ ಅವರ ಲೇಖನ.

ಒಬ್ಬ ಜೀತಗಾರ ದೇವದಾಸಿಯ ಮಗ ಕೇವಲ ತನ್ನ ಪ್ರಾಮಾಣಿಕತೆಯಿಂದ ಹಲವು ಕೋಟ್ಯಾಧಿಪತಿಗಳನ್ನು ನಡುಗಿಸಿದ ಒಂದು ಕಥನ.

ಪೊಲೀಸರು, ಶ್ರೀಮಂತರ ಗೂಂಡಾಗಳನ್ನು ಎದುರಿಸಿ ಸಾವಿರಾರು_ಕೂಲಿಕಾರರ ನೆಮ್ಮದಿಯ ಬದುಕಿಗೆ ಕಾರಣವಾದ ನಾಯಕನ ಹೋರಾಟದ ‌ಬದುಕಿನ ರೋಚಕ ಪ್ರಸಂಗಗಳು.

ಒಬ್ಬ ಕಾಲಿಗೆ ಚಪ್ಪಲಿ ಇಲ್ಲದ ಮನುಷ್ಯ ನಡೆದು ಹೋಗುತ್ತಿದ್ದಾನೆ ಗಂಗಾವತಿಯ ಮುಖ್ಯರಸ್ತೆಯಲ್ಲಿ. ಅವನ ಪಕ್ಕದಲ್ಲಿ ಒಂದು ಲಕ್ಸೂರಿ ಕಾರು ನಿಲ್ಲುತ್ತದೆ. ಅದರಿಂದ ಒಬ್ಬ ಶ್ರೀಮಂತ ಇಳಿದು ಅವನಿಗೆ ನಮಸ್ಕಾರ ಬಾಳಪ್ಪ ಎನ್ನುತ್ತಾರೆ. ಬಾಪ್ಪ, ಕಾರಿನಲ್ಲಿ‌ ಬಿಡುತ್ತೇನೆ, ಕಾಲಿಗೆ ಚಪ್ಪಲಿಯಿಲ್ಲದೆ ಈ ಬೇಸಿಗೆ ಸುಡುಬಿಸಿಲಿನಲ್ಲಿ ನಡೆದು ಹೋಗುತ್ತಿದ್ದೀಯ ಎಂದು ಕರೆಯುತ್ತಾರೆ. ಈ ಬಾಳಪ್ಪ, ಇಲ್ಲ ನೀವು ಹೋಗಿ ಬನ್ನಿ. ನಾನು ನಡೆದೇ ಹೋಗುತ್ತೇನೆ ಎನ್ನುತ್ತಾನೆ. ಆ ಶ್ರೀಮಂತ ವರ್ಷಕ್ಕೆ ಹಲವಾರು ಕೋಟಿ ಸಾಲ ಕೊಡುತ್ತಿರುವವನು.

ಮತ್ತೊಮ್ಮೆ ಪೊಲೀಸರು ಶ್ರೀಮಂತರ ಸುಳ್ಳು ದೂರಿನ ಮೇಲೆ ಬಾಳಪ್ಪನನ್ನು ಅವನ ಗುಡಿಸಿಲಿನಿಂದ
ರಾತ್ರಿ ಎಂಟು ಗಂಟೆಗೆ ಬಂಧಿಸಿ ಗಂಗಾವತಿಯ ಪೊಲೀಸ್ ಠಾಣೆಗೆ ಒಯ್ಯುತ್ತಾರೆ. ಈ ಸುದ್ದಿ ಹಳ್ಳಿಗಳಿಂದ ಹಳ್ಳಿಗಳ ಕೂಲಿಕಾರರಿಗೆ ಹಬ್ಬುತ್ತದೆ.

ಮಂಗಳೂರಿನಲ್ಲಿದ್ದ ನನಗೆ ಫೋನ್ ಬರುತ್ತದೆ. ಆಗ ನಾನು ʻʻಆಗಿಂದಾಗ್ಗೆ ಎಲ್ಲ ಕೂಲಿಕಾರರೂ ಪೊಲೀಸ್‌ ಠಾಣೆಯ ಮುಂದೆ ನೆರೆಯಬೇಕು. ಬಾಳಪ್ಪನನ್ನು ಬಿಡುವವರೆಗೆ ಹೋಗುವುದಿಲ್ಲ ಎಂದು ಠಾಣೆಯ ಮುಂದೆಯೇ ಕುಳಿತುಕೊಳ್ಳಬೇಕು. ಇಲ್ಲದಿದ್ದರೆ ಪೊಲೀಸರು ಹೊಡೆದು, ಮತ್ತಿತರ ಕ್ರೂರ ಶಿಕ್ಷೆಗಳಿಗೆ ಒಳಪಡಿಸಿ ಮುಂದೆ ನಡೆಯಲಾಗದಂತೆ ಘಾಸಿ ಮಾಡುವ ಸಂಭವ ಇದೆ. ಏಕೆಂದರೆ ಅವರಿಗೆ ಅಷ್ಟು ಕೋಪ ಇದೆ ಬಾಳಪ್ಪನ‌ ಮೇಲೆ. ಜೊತೆಗೆ ತಾಲೂಕಿನ‌ ಹಲವಾರು ಶ್ರೀಮಂತರು ಮೂಳೆ ಎಸೆದಿದ್ದಾರೆ.

ತಕ್ಷಣವೇ ಹಲವು ಕಿಲೋ ಮೀಟರ್‌ ದೂರದ ಹತ್ತಾರು ಹಳ್ಳಿಗಳಿಂದ ಗಂಡಸರು, ಮಹಿಳಾ ಕೂಲಿಕಾರರು ನಡೆದುಕೊಂಡೇ ಪೊಲೀಸ್ ಠಾಣೆ ಮುಟ್ಟುತ್ತಾರೆ. ಇದರಿಂದ ದಿಗಿಲುಗೊಂಡ ಪೊಲೀಸರು ಠಾಣೆಯ ಕಾಂಪೌಂಡ್ ಬಾಗಿಲಿಗೆ ಅಡ್ಡವಾಗಿ ಪೊಲೀಸ್ ವಾಹನಗಳನ್ನು ನಿಲ್ಲಿಸುತ್ತಾರೆ.

ಠಾಣೆಯನ್ನು ತಲುಪಿದ ಕೂಲಿಕಾರು ಅದೇ ಪೊಲೀಸ್ ವಾಹನಗಳ ಮೇಲೆ ಹತ್ತಿ ಆ ಕಡೆ ಧುಮುಕಿ ಠಾಣೆಯ ಬಾಗಿಲಿಗೆ ಅಡ್ಡವಾಗಿ ಕೂರುತ್ತಾರೆ‌. ಅಲ್ಲಿಯ ಡಿವೈಎಸ್‌ಪಿ ಮೊದಲಾದ ಅಧಿಕಾರಿಗಳು ಏನೇ ಬೆದರಿಸಿದರೂ, ಮನವೊಲಿಸಲು ಪ್ರಯತ್ನಿಸಿದರೂ ಜಗ್ಗಲಿಲ್ಲ.

ಕೊನೆಗೆ ಅಂದು ರಾಯಚೂರು ಜಿಲ್ಲೆಗೆ ಸೇರಿದ್ದ ಗಂಗಾವತಿಗೆ ರಾಯಚೂರಿನಿಂದ ಎಸ್‌ಪಿ ಎದ್ದು ಬಿದ್ದು ಓಡಿ ಬರುತ್ತಾರೆ. ಮಧ್ಯ ರಾತ್ರಿಯೆ ಬಾಳಪ್ಪನನ್ನು ಬಿಡುಗಡೆ ಮಾಡಲಾಗುತ್ತದೆ.

ಒಬ್ಬ ಸಣ್ಣ ರೈತನ ಜಮೀನನ್ನು ಶ್ರೀಮಂತ ಭೂಮಾಲಿಕರು ವಶಪಡಿಸಿಕೊಂಡು ದೌರ್ಜನ್ಯ ನಡೆಸುತ್ತಿದ್ದಾಗ ಅವನ ನೆರವಿಗೆ ಹೋದ ಬಾಳಪ್ಪ ಮತ್ತು ಇತರ ಕೂಲಿಕಾರರಿಗೆ ಆ ಭೂಮಾಲೀಕರ ಗೂಂಡಾಗಳಿಂದ ಮಾರಣಾಂತಿಕ ಪೆಟ್ಟು ಬಿದ್ದು ಬಾಳಪ್ಪ ಸತ್ತು ಹೋದನೆಂದು ತಿಳಿದು ಬಿಟ್ಟು ಹೋಗುತ್ತಾರೆ. ಆಮೇಲೆ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆಯಿಂದ ತಲೆಗೆ ಪೆಟ್ಟು ಬಿದ್ದು ಬಹಳ ರಕ್ತ ಹೋಗಿದ್ದ ಬಾಳಪ್ಪ ಮತ್ತೆ ಬದುಕಿ ಉಳಿಯುತ್ತಾನೆ. ಅವನಿಗೂ ಜೊತೆಗೆ ಪೆಟ್ಟು ಬಿದ್ದ ಹಲವು ಕೂಲಿಕಾರರನ್ನು ಇಡೀ ತಾಲೂಕಿನ ಕೂಲಿಕಾರರು ತಮ್ಮ ಹಣದಿಂದ ರಕ್ಷಿಸಿಕೊಳ್ಳುತ್ತಾರೆ. ಎಳನೀರು, ಕೋಳಿ, ಆಹಾರ ಧಾನ್ಯ ತಂದುಕೊಡುತ್ತಾರೆ.

ಇಂತಹುದೇ ಹಲವು ಗೂಂಡಾ ಧಾಳಿಗೆ ಒಳಗಾದ ಹೋರಾಟಗಳ ಕಲಿ ಬಾಳಪ್ಪ ದಿಟ್ಟತನದಿಂದ ಮುನ್ನುಗ್ಗುವುದರಲ್ಲಿ ಮಾದರಿ.

ಒಂದಕ್ಷರವೂ ಓದಲು ಬರದ ಬಾಳಪ್ಪ ಗಂಟೆಗಟ್ಟಲೆ ಭಾಷಣ ಮಾಡುತ್ತಿದ್ದವನು. ದೇಶದ, ರಾಜ್ಯದ ರಾಜಕೀಯ ಮಾತ್ರವಲ್ಲ, ಗ್ಯಾಟ್ ಒಪ್ಪಂದ, ವಿಶ್ವ ವ್ಯಾಪಾರ ಸಂಸ್ಥೆ, ವಿಶ್ವ ಬ್ಯಾಂಕ್ ಭಾರತದ ರೈತ, ಕೂಲಿಕಾರರ ಬದುಕನ್ನು ನಾಶಗೊಳಿಸುತ್ತಿರುವ ಬಗ್ಗೆ ಮಾತನಾಡುವ ಸಾಮರ್ಥ್ಯ ಇದ್ದವನು. ಐಕ್ಯರಂಗ, ಜನಶಕ್ತಿ ಪತ್ರಿಕೆಗಳನ್ನು ತಪ್ಪದೆ ಪ್ರತಿವಾರವೂ ಮಕ್ಕಳಿಂದ ಓದಿಸಿ ತಿಳಿದು ಭಾಷಣಗಳಿಗೆ ಹೂರಣ ಪಡೆಯುತ್ತಿದ್ದವನು.

ಇಡೀ ತಾಲ್ಲೂಕಿನ ಕೂಲಿಕಾರರ ಸಮಸ್ಯೆಗಳ ಬಗ್ಗೆ ಅವರ ಭೂಮಿಯ ಸಮಸ್ಯೆಗಳ ಬಗ್ಗೆ ಸರ್ವೆ ನಂಬರ್ ಸಮೇತ‌ ನೆನಪಿನಲ್ಲಿಟ್ಟುಕೊಂಡು ತಹಸೀಲ್ದಾರ್, ಎಸಿ ಮುಂತಾದವರು ಬೆರಗುಪಡುವಂತೆ ವಾದಿಸುವ ಆಸಕ್ತಿ, ಬದ್ಧತೆ.

ಇಂದು ಅವರು ನಿಧನರಾಗಿ 14 ವರ್ಷದ ನೆನಪಿನ ದಿನ. ಬಾಳಪ್ಪನ ಬಗ್ಗೆ ಕನಿಷ್ಟ ಐವತ್ತು-ಅರವತ್ತು ಬಾರಿ ವಿವಿಧ‌ ಸಂದರ್ಭಗಳಲ್ಲಿ ಮಾತನಾಡಿದರೂ ಎರಡು ಬಾರಿ ಪತ್ರಿಕೆಯಲ್ಲಿ ಬರೆದಿದ್ದರೂ ಸಹ ಮತ್ತೆ ಮತ್ತೆ ಬಾಳಪ್ಪನ ನೆನಪು ಬಂದೇ ಬರುತ್ತದೆ.

Donate Janashakthi Media

Leave a Reply

Your email address will not be published. Required fields are marked *