ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆಗೆ ಆಕ್ಷೇಪ ವ್ಯಕ್ತಪಡಿಸಿದ್ದ ಜಿಯೋ ಮತ್ತು ಏರ್ಟೆಲ್

ಅದರ ಜೊತೆ ಒಪ್ಪಂದ ಮಾಡಿಕೊಂಡಿರುವ ಮರ್ಮವೇನು?

ಭಾರತೀಯ ದೂರಸಂಪರ್ಕ ವಲಯದಲ್ಲಿ ಇತ್ತೀಚಿನ ಒಪ್ಪಂದಗಳಿಗೆ ಭೂಮಿಕೆ ಏನಿದೆ? ಯಾವ ಆಧಾರದ ಮೇಲೆ, ಯಾರ ಪ್ರಯೋಜನಕ್ಕಾಗಿ ಈ ಒಪ್ಪಂದ ನಡೆಯಿತು? ಇದು ಯಾವ ಬೆಳವಣಿಗೆಗಳಿಗೆ ಕಾರಣವಾಗುತ್ತದೆ? ನಿನ್ನೆಯವರೆಗೂ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಕಂಪನಿಗಳು ಒಂದರ ನಂತರ ಒಂದರಂತೆ ಒಪ್ಪಂದಗಳನ್ನು ಮಾಡಿಕೊಳ್ಳುವುದರಲ್ಲಿನ ಮರ್ಮವೇನು? ಇವು ಬಾಹ್ಯಾಕಾಶದ ಮೇಲಿನ ಏಕಸ್ವಾಮ್ಯಕ್ಕೆ ಕಾರಣವಾಗುತ್ತಿವೆಯೇ? ಹಾಗೇನಾದರೂ ನಡೆದರೆ, ರಾಷ್ಟ್ರೀಯ ಭದ್ರತೆ ಮತ್ತು ದೇಶದ ಸಾರ್ವಭೌಮತ್ವ ಎಂಬುದಕ್ಕೆ ಅರ್ಥವೇನಿದೆ? ಸ್ಟಾರ್‌ಲಿಂಕ್ ಜೊತೆ ಜಿಯೋ ಮತ್ತು ಏರ್‌ಟೆಲ್‌ನ ಒಪ್ಪಂದಗಳು ಎತ್ತಿರುವ ಪ್ರಶ್ನೆಗಳಿವು.

-ಸಿಚಿ

ದೇಶದಲ್ಲಿ ಉಪಗ್ರಹ ಆಧಾರಿತ ಅತಿ ವೇಗದ (ಹೈ-ಸ್ಪೀಡ್) ಇಂಟರ್ ನೆಟ್ ಸೇವೆಗಳನ್ನು ನೀಡಲು ಜಿಯೋ ಮತ್ತು ಏರ್ಟೆಲ್, ಎಲೋನ್ ಮಸ್ಕ್ ಅವರ ಸ್ಟಾರ್ ಲಿಂಕ್ ಜೊತೆಗಿನ ಒಪ್ಪಂದವು, ಟ್ರಂಪ್ ಮತ್ತು ಅವರ ಭಾರತೀಯ ಮಿತ್ರ ನರೇಂದ್ರ ಮೋದಿ ಇಬ್ಬರೂ ತೆರೆಮರೆಯಲ್ಲಿ ನಡೆಸಿರುವ ತಂತ್ರವಾಗಿದ್ದು, ಟ್ರಂಪ್ ಅವರನ್ನು ಸಮಾಧಾನಪಡಿಸಲು ಸ್ಟಾರ್‌ ಲಿಂಕ್ ಮಾಲೀಕ ಎಲೋನ್ ಮಸ್ಕ್ ಮೂಲಕ ಪ್ರಧಾನಿ ಮೋದಿ ಸ್ವತಃ ಈ ಪಾಲುದಾರಿಕೆಗಳನ್ನು ಏರ್ಪಾಡು ಮಾಡಿದ್ದಾರೆ ಎಂಬ ಅನುಮಾನಗಳನ್ನು ಹುಟ್ಟುಹಾಕಿದೆ.

ಎಲೋನ್ ಮಸ್ಕ್ ರಿಂದ ಹಲವು ಸಮಯದಿಂದ ಪ್ರಯತ್ನ

ಸ್ಟಾರ್‌ಲಿಂಕ್ ಎಂಬುದು ಅಮೇರಿಕನ್ ಏರೋಸ್ಪೇಸ್ ಕಂಪನಿ ಸ್ಪೇಸ್‌ಎಕ್ಸ್ ಅಭಿವೃದ್ಧಿಪಡಿಸಿದ ಇಂಟರ್ ನೆಟ್ ಸೇವೆಗಳನ್ನು ಒದಗಿಸುವ ಉಪಗ್ರಹ ಆಧಾರಿತ ಇಂಟರ್ ನೆಟ್ ವ್ಯವಸ್ಥೆ. ವಿಶ್ವದದಲ್ಲೇ ಅತ್ಯಂತ ಶ್ರೀಮಂತ ವ್ಯಕ್ತಿ ಎಲೋನ್ ಮಸ್ಕ್ ಗೆ ಸೇರಿದ ಈ ಕಂಪನಿಯು ಭಾರತದಲ್ಲಿ ತನ್ನ ಇಂಟರ್ ನೆಟ್ ಸೇವೆಗಳನ್ನು ವಿಸ್ತರಿಸುವುದಕ್ಕಾಗಿ  ಹಲವು ಸಮಯದಿಂದ ಪ್ರಯತ್ನಿಸುತ್ತಿರುವ ಸಂಗತಿ ಗೊತ್ತೇ ಇದೆ.

ಇದನ್ನೂ ಓದಿ: ಮಂಗಳೂರು| ಪಿಜಿಗೆ ಹೆಚ್ಚಿನ ಗೂಗಲ್ ರೇಟಿಂಗ್ ನೀಡುವಂತೆ ವಿದ್ಯಾರ್ಥಿಯ ಮೇಲೆ ಹಲ್ಲೆ

ಏತನ್ಮಧ್ಯೆ, ಭಾರತದ ಕುಬೇರರುಗಳಾದ ಮುಖೇಶ್ ಅಂಬಾನಿಗೆ ಸೇರಿದ ಜಿಯೋ ಮತ್ತು ಸುನಿಲ್ ಮಿತ್ತಲ್ ಗೆ ಸೇರಿದ ಏರ್ಟೆಲ್ ಕಂಪನಿಗಳು ಇದನ್ನು ತೀವ್ರವಾಗಿ ವಿರೋಧಿಸುತ್ತಾ ಬಂದಿದ್ದವು. ಅಂತಹ ಕಂಪನಿಗಳು ಇದ್ದಕ್ಕಿದ್ದಂತೆ ತಮ್ಮ ಎಲ್ಲಾ ಆಕ್ಷೇಪಣೆಗಳನ್ನು ಬದಿಗಿಟ್ಟು, ಸ್ಟಾರ್‌ಲಿಂಕ್‌ ಜೊತೆಗೆ ಸೇರುವುದಕ್ಕೆ ಸಿದ್ದರಾಗಿ ಒಪ್ಪಂದಗಳನ್ನು ಮಾಡಿಕೊಂಡಿರುವುದು ಅನುಮಾನಗಳಿಗೆ ಕಾರಣವಾಗುತ್ತಿವೆ.

ಸರ್ಕಾರದ ನಿಯಂತ್ರಣದಲ್ಲಿಯೇ ಇರಬೇಕು

ದೇಶದಲ್ಲಿ ಕ್ಲಿಷ್ಟವಾದ ಪರಿಸ್ಥಿತಿ ಉಂಟಾಗಿ ಅದನ್ನು ಎದುರಿಸುವಾಗ ಸಂಪರ್ಕವನ್ನು ಯಾರು ನಿಯಂತ್ರಿಸುತ್ತಾರೆ? ಅಮೇರಿಕ್ಕೆ ಸೇರಿದ ಸ್ಟಾರ್‌ಲಿಂಕ್ ಅಥವಾ ಅದರ ಭಾರತೀಯ ಪಾಲುದಾರರಾದ ಏರ್‌ಟೆಲ್, ಜಿಯೋ ಸಂಸ್ಥೆಗಳಾ? ಸ್ಟಾರ್‌ಲಿಂಕ್ ಜೊತೆಗಿನ ಈ ಒಪ್ಪಂದಗಳು ಸ್ಪೆಕ್ಟ್ರಮ್ ಹಂಚಿಕೆಗಳು ಮತ್ತು ರಾಷ್ಟ್ರೀಯ ಭದ್ರತಾ ಅಂಶಗಳ ಮೇಲೆ ಕೂಡಾ ಇಂತಹ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ.

ತಂತ್ರಜ್ಞಾನದ ಬೆಳವಣಿಗೆಯು ಉತ್ತುಂಗದಲ್ಲಿರುವ ಈ ಯುಗದಲ್ಲಿ, ಉಪಗ್ರಹ ಸ್ಪೆಕ್ಟ್ರಮ್ ದೇಶದ ರಕ್ಷಣೆಗೆ ಬಹಳ ಮಹತ್ವದ್ದಾಗಿದೆ. ಇದು ಎಲ್ಲಾ ದೇಶಗಳಿಗೂ ಒಂದು ಅಭೂತಪೂರ್ವ ಸಂಪನ್ಮೂಲವಾಗಿ ಲಭ್ಯವಾಗುತ್ತಾ ಬಂದಿದೆ. ಇಂದಿನ ಆಧುನಿಕ ಪ್ರಪಂಚದಲ್ಲಿ ಇದು ಅದು ಒದಗಿಸುವ ಪ್ರಯೋಜನಗಳು ಯಾವುದೇ ದೇಶಕ್ಕೆ ಅನಿವಾರ್ಯವಾದ ಅವಶ್ಯಕತೆಯಾಗಿದೆ. ಪ್ರಸಾರ ಮತ್ತು ಮೊಬೈಲ್ ನೆಟ್‌ವರ್ಕ್‌ ಗಳು, ಸಂಚರಣೆ ವ್ಯವಸ್ಥೆಗಳಂತಹ ಮಾಹಿತಿ ಸೇವೆಗಳ ಜೊತೆಗೆ, ಹವಾಮಾನ ಸಂಶೋಧನೆ, ಬೆಳೆಗಳ ಸ್ಥಿತಿ , ನೈಸರ್ಗಿಕ ಸಂಪನ್ಮೂಲಗಳ ನಕಾಶೆಗಳನ್ನು ತಯಾರಿಸಲು, ರಾಷ್ಟ್ರೀಯ ರಕ್ಷಣೆ ಮತ್ತು ಸುರಕ್ಷಿತ ಮಿಲಿಟರಿ ಸಂವಹನಗಳಿಗೆ ಅದು ಒದಗಿಸುವ ಸೇವೆಗಳು ಅಸಾಧಾರಣವಾಗಿವೆ.

ಅದಕ್ಕಾಗಿಯೇ ಇದು ಸರ್ಕಾರದ ನಿಯಂತ್ರಣದಲ್ಲಿಯೇ ಇದೆ ಎಂದು, ಇದನ್ನು ಖಾಸಗಿ ಸಂಸ್ಥೆಗಳಿಗೆ ಕೇವಲ ಪಾರದರ್ಶಕವಾದ, ಬಹಿರಂಗ ಹರಾಜಿನ ಮೂಲಕ ಮಾತ್ರವೇ ತರಂಗಾಂತರ ಹಂಚಿಕೆ ಮಾಡಬೇಕೆಂದು 2ಜಿ ಸ್ಪೆಕ್ಟ್ರಮ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಇದಕ್ಕೆ ವ್ಯತಿರಿಕ್ತವಾಗಿ, ಖಾಸಗಿ ಒಪ್ಪಂದಗಳ ಮೂಲಕ ಸ್ಪೆಕ್ಟ್ರಮ್ ಹಂಚಿಕೆ ಮಾಡುವುದು ಕಾನೂನುಬಾಹಿರ. ಹೀಗಿರುವಾಗ, ಯಾವ ಆಧಾರದ ಮೇಲೆ ಈ ಒಪ್ಪಂದಗಳು ನಡೆದಿವೆ? ನಡೆಯುತ್ತಿದ್ದರೂ ಸರ್ಕಾರ ಏನು ಮಾಡುತ್ತಿದೆ? ರಾಷ್ಟ್ರೀಯ ಭದ್ರತೆಗೆ ಸಹಾ ಧಕ್ಕೆ ತರುವ ಹಂತಕ್ಕೆ ಸರ್ಕಾರ ಹೋಗಬೇಕಾದ ಅನಿವಾರ್ಯತೆ ಏನಿದೆ? ಈ ಪ್ರಶ್ನೆಗಳಿಗೆ ಕೇಂದ್ರ ಉತ್ತರಿಸಬೇಕು.

ಸ್ಪೆಕ್ಟ್ರಮ್ ಹಂಚಿಕೆಗಾಗಿ ಯಾವುದೇ ಖಾಸಗಿ ಒಪ್ಪಂದವು ದೇಶದ ಕಾನೂನಿನ ಉಲ್ಲಂಘನೆಯಾಗುತ್ತದೆ ಎಂದು ಸಿಪಿಐ(ಎಂ) ಹೇಳಿದೆ. ಉಪಗ್ರಹ ಸ್ಪೆಕ್ಟ್ರಮ್ ಬಳಕೆಯಲ್ಲಿ ಪ್ರಾಬಲ್ಯ ಹೊಂದಲು ಜಿಯೋ, ಏರ್‌ಟೆಲ್ ಮತ್ತು ಸ್ಟಾರ್‌ಲಿಂಕ್ ಒಂದು ಕೂಟ ರಚಿಸಿಕೊಳ್ಳಲು ಒಂದುಗೂಡಿರುವುದಕ್ಕೆ ಭಾರತದಲ್ಲಿ ಕೋಟ್ಯಂತರ ಟೆಲಿಕಾಂ ಚಂದಾದಾರರು ಬೆಲೆ ತೆರಬೇಕಾಗುತ್ತದೆ ಅದು ಎಚ್ಚರಿಸಿದೆ.

ಅದನ್ನವರು ಮಿಲಿಟರಿ ಮತ್ತು ರಕ್ಷಣಾ ದತ್ತಾಂಶ ಸಂಗ್ರಹಿಸಲು ಬಳಸಿದರೆ?

ಇದು ಭಾರತ ದೇಶದ ಕಕ್ಷೆಯ ಸ್ಲಾಟ್‌ ಗಳ (orbital slots) ಮೇಲೂ ಗಂಭೀರ ಪರಿಣಾಮ ಬೀರುವ ಅಂಶವಾಗಿದೆ. ಈ ಒಪ್ಪಂದದ ಮೂಲಕ ವಿದೇಶಿ ಕಂಪನಿಯೊಂದು ತನ್ನ ಉಪಗ್ರಹಗಳನ್ನು ನಮ್ಮ ನೈಸರ್ಗಿಕ ಸಂಪನ್ಮೂಲಗಳನ್ನು ನಕ್ಷೆ ಮಾಡುವುದು, ವಾಣಿಜ್ಯಿಕವಾಗಿ ಮೌಲ್ಯಯುತವಾದ ದತ್ತಾಂಶ ಸಂಗ್ರಹಣೆ, ವಿಶೇಷವಾಗಿ ನಮ್ಮ ಆಯಕಟ್ಟಿನ ಮಿಲಿಟರಿ ಮತ್ತು ರಕ್ಷಣಾ ದತ್ತಾಂಶ ಸಂಗ್ರಹಿಸಲು ಬಳಸಿದರೆ, ಅದು ನಮ್ಮ ರಾಷ್ಟ್ರೀಯ ಭದ್ರತೆಗೆ ದೊಡ್ಡ ಬೆದರಿಕೆಯಾಗುತ್ತದೆ. ಒಂದು ವಿದೇಶಿ ಕಂಪನಿಯನ್ನು ನಮ್ಮ ಉಪಗ್ರಹ ಸ್ಪೆಕ್ಟ್ರಮ್ ಅನ್ನು ಮತ್ತು ಆರ್ಬಿಟಲ್ ಸ್ಲಾಟ್‌ ಗಳನ್ನು ಸ್ವಾಧೀನ ಪಡಿಸಿಕೊಳ್ಳಲು ಅನುಮತಿ ನೀಡುವುದೆಂದರೆ, ಅದು ಬಾಹ್ಯಾಕಾಶದ ಮೇಲೆ ಏಕಸ್ವಾಮ್ಯಕ್ಕೆ ಅವಕಾಶ ನೀಡಿದಂತಾಗುತ್ತದೆ. ನಮ್ಮ ಸಾರ್ವಭೌಮತ್ವ ಮತ್ತು ರಾಷ್ಟ್ರೀಯ ಭದ್ರತೆಯ ಕುರಿತು ರಾಜಿ ಮಾಡಿಕೊಂಡಂತಾಗುತ್ತದೆ.

ಉಕ್ರೇನ್ ಮೇಲೆ ಒತ್ತಡ ಹೇರಲು ಬಳಸಿಕೊಳ್ಳಲಾಯಿತು

ಇತ್ತೀಚೆಗೆ ರಷ್ಯಾದೊಂದಿಗೆ ಮಾತುಕತೆ ನಡೆಸುವಂತೆ ಉಕ್ರೇನ್ ಮೇಲೆ ಒತ್ತಡ ಹೇರಲು, ಉಕ್ರೇನಿನ ಖನಿಜ ಸಂಪನ್ಮೂಲಗಳನ್ನು ತನಗೆ ಹಸ್ತಾಂತರಿಸುವ ಬೇಡಿಕೆಗಳನ್ನು ಒಪ್ಪಿಕೊಳ್ಳುವಂತೆ ಮಾಡುವುದಕ್ಕೆ ಸ್ಟಾರ್‌ಲಿಂಕ್ ಸೇವೆಗಳನ್ನು ಸ್ಥಗಿತಗೊಳಿಸುವುದಾಗಿ ಉಕ್ರೇನ್ ಸೇನೆಗೆ ಅಮೆರಿಕ ಎಚ್ಚರಿಕೆ ನೀಡಿದ್ದು, ಆ ಬೆದರಿಕೆಗಳಿಗೆ ಉಕ್ರೇನಿನ ಶರಣಾಗತಿ ಇದಕ್ಕೆ ಒಂದು ಉದಾಹರಣೆಯಾಗಿದೆ.

ಸಮಾಜದ ಹಿತಕ್ಕಾಗಿ ಬಳಸಬೇಕು

ಭೂ ಕಕ್ಷೆಯನ್ನು ಸುತ್ತುತ್ತಿರುವ ದೊಡ್ಡ ಉಪಗ್ರಹ ಸಮೂಹ (Mega Constellation) ಎನ್ನುವುದು ಒಂದು ಅದ್ಭುತ ಆವಿಷ್ಕಾರ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಇದರಿಂದ ಲೆಕ್ಕವಿಲ್ಲದಷ್ಟು ಪ್ರಯೋಜನಗಳಿವೆ ಎಂಬುದು ನಿಜವಾದರೂ, ಅದರ ಮೇಲೆ ನಿಯಂತ್ರಣ ಕಳೆದುಕೊಂಡರೆ ಅದಕ್ಕೂ ಮಿಗಿಲಾದ ಅಪಾಯಗಳೂ ಇವೆ ಎನ್ನುವುದು ಅಷ್ಟೇ ಸತ್ಯ. ತಂತ್ರಜ್ಞಾನವು ಒದಗಿಸುವ ಅದ್ಭುತ ಫಲಿತಾಂಶಗಳನ್ನು ಶ್ರೀಮಂತರ ಸ್ವಾರ್ಥ ಹಿತಾಸಕ್ತಿಗಳಿಗಾಗಿ ಬಳಸಬಾರದು, ಬದಲಾಗಿ ಸಮಾಜದ ಹಿತಕ್ಕಾಗಿ ಬಳಸಬೇಕು.

ಶಾಶ್ವತ ಅಧಿಕಾರಕ್ಕಾಗಿ, ಪ್ರಾಬಲ್ಯ ಸಾಧಿಸುವುದಕ್ಕಾಗಿ ಆಧುನಿಕತೆಯ ಹೆಸರಿನಲ್ಲಿ ಬಂಡವಾಳಶಾಹಿ ಅನಾಗರಿಕ ರೀತಿಯಲ್ಲಿ ವರ್ತಿಸುತ್ತಿದೆ. ಅದು ಲಭ್ಯವಿರುವ ತಂತ್ರಜ್ಞಾನವನ್ನು ಆಯುಧವಾಗಿ ಬಳಸುತ್ತಿದೆ. ಸರ್ಕಾರಗಳು ಇವರಿಗೆ ಸಹಾಯ ಮಾಡುತ್ತಿವೆ. ಇದಕ್ಕೆ ಈ ಟೆಲಿಕಾಂ ಒಪ್ಪಂದಗಳು ಇತ್ತೀಚಿನ ಸಾಕ್ಷಿಯಾಗಿದೆ. ಇದನ್ನು ತಡೆಯುವುದು ಮತ್ತು ನಿಯಂತ್ರಿಸುವುದು ಸಾರ್ವಜನಿಕ ಜಾಗೃತಿಯಿಂದ ಮಾತ್ರ ಸಾಧ್ಯ.

ಇದನ್ನೂ ನೋಡಿ: ರಾಜ್ಯ ಬಜೆಟ್ ನಲ್ಲಿ ಶಿಕ್ಷಣಕ್ಕೆ ಸಿಕ್ಕಿದ್ದೇನು? – ಬಿ.ಶ್ರೀಪಾದ್ ಭಟ್ Janashakthi Media

Donate Janashakthi Media

Leave a Reply

Your email address will not be published. Required fields are marked *