ಜಿಲ್ಲೆಗೊಂದು ಇಎಸ್ಐ ತೆರೆಯುವಂತೆ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್‌ ಕೇಂದ್ರಕ್ಕೆ ಮನವಿ

ಬೆಂಗಳೂರು: ಕರ್ನಾಟಕದಲ್ಲಿ ಜಿಲ್ಲೆಗೊಂದು ಇಎಸ್ಐ ಆಸ್ಪತ್ರೆ ತೆರೆಯುವಂತೆ ಕೇಂದ್ರಕ್ಕೆ ಕೋರಿದ್ದೇವೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ತಿಳಿಸಿದ್ದಾರೆ. ಕಾರ್ಮಿಕ ಇಲಾಖೆ ಮತ್ತು ಸ್ವಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ದೆಹಲಿ ಪ್ರವಾಸ ಕೈಗೊಂಡಿದ್ದ ಸಚಿವರ ನೇತೃತ್ವದ ನಿಯೋಗವು ಕೇಂದ್ರ ಸಚಿವರುಗಳನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದಾರೆ.

ಕೇಂದ್ರ ಕಾರ್ಮಿಕ ಸಚಿವ ಭೂಪೇಂದ್ರ ಸಿಂಗ್ ಯಾದವ್ ಅವರನ್ನು ಭೇಟಿ ಮಾಡಿ ಸಚಿವ ಹೆಬ್ಬಾರ್‌, ಇಎಸ್ಐ ಆಸ್ಪತ್ರೆಗಳಲ್ಲಿ ಅಸಂಘಟಿತ ಕಾರ್ಮಿಕರಿಗೂ ವೈದ್ಯಕೀಯ ಸೌಲಭ್ಯ ದೊರಕುವಂತೆ ಕ್ರಮವಹಿಸಬೇಕೆಂದು ಮನವಿ ಮಾಡಿದರು ಮತ್ತು ಇಎಸ್ಐ ಆಸ್ಪತ್ರೆಗಳಲ್ಲಿ ‘ಆಯುಷ್’ ವಿಭಾಗಗಳನ್ನು ತೆರೆಯಬೇಕು, ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಒಂದರಂತೆ ಇಎಸ್ಐ ಆಸ್ಪತ್ರೆಗಳನ್ನು ತೆರೆಯುವಂತೆ ಕ್ರಮವಹಿಸಬೇಕು ಎಂದು ವಿವರಿಸಿದ್ದಾರೆ.

ರಾಜ್ಯದಲ್ಲಿ ಕೋವಿಡ್ ಸಂದರ್ಭ ಸೇರಿದಂತೆ ಕಾರ್ಮಿಕ ಇಲಾಖೆ ಕಾರ್ಯವೈಖರಿ ಮತ್ತು ವಲಸೆ ಕಾರ್ಮಿಕರ ಕ್ಷೇಮಕ್ಕೆ ರಾಜ್ಯ ಕೈಗೊಂಡ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಭೂಪೇಂದ್ರ ಯಾದವ್, ರಾಜ್ಯದಲ್ಲಿ ಕಾರ್ಮಿಕ ಸ್ನೇಹಿ ವಾತಾವರಣ ಇರುವ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದರು. ಕೂಡಲೇ ಸ್ಥಳಕ್ಕೆ ಇಎಸ್ಐಸಿ ಪ್ರಧಾನ ನಿರ್ದೇಶಕ ಬಾಟಿಯಾ ಅವರನ್ನು ಕರೆಸಿದರು. ಇಎಸ್ಐಸಿ ಅಧಿಕಾರಿಗಳೊಂದಿಗೆ ಇಎಸ್ಐ ಆಸ್ಪತ್ರೆಗಳ ಸುಧಾರಣೆಗಳ ಬಗ್ಗೆ ಚರ್ಚಿಸಿದ ಸಚಿವ ಹೆಬ್ಬಾರ್, ಪ್ರಾದೇಶಿಕ ಮಂಡಳಿ ಕೈಗೊಂಡಿರುವ ನಿರ್ಧಾರಗಳ ಬಗ್ಗೆಯೂ ಮನವರಿಕೆ ಮಾಡಿಕೊಟ್ಟರು.

69 ಚಿಕಿತ್ಸಾಲಯಗಳಿಗೆ ಕೋರಿಕೆ

ರಾಜ್ಯ ಕಾರ್ಮಿಕ ಇಲಾಖೆಯು ರಾಜ್ಯದ ವಿವಿಧೆಡೆಗಳಲ್ಲಿ 69 ಚಿಕಿತ್ಸಾಲಯಗಳನ್ನು ತೆರೆಯಲು ಅನುಮತಿ ಕೋರಿದೆ. ಈ ಸಂಬಂಧ ಕೇಂದ್ರವು ಇದೀಗ 19ಕ್ಕೆ ಅನುಮತಿ ನೀಡಿದ್ದು, ಇನ್ನುಳಿದ 50 ಚಿಕಿತ್ಸಾಲಯಗಳನ್ನು ತೆರೆಯಲು ಅನುಮತಿ ನೀಡುವಂತೆ, ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಇಎಸ್‌ಐ ಆಸ್ಪತ್ರೆಗಳಿಗೆ ಸಿಬ್ಬಂದಿ ಮತ್ತು ಆಧುನಿಕ ಉಪಕರಣಗಳನ್ನು ನೀಡುವ ಮೂಲಕ ಸಶಕ್ತೀಕರಣಗೊಳಿಸಬೇಕೆಂಬ ಮನವಿ ಮಾಡಿಕೊಂಡಿದ್ದಾರೆ.

ಜಿಲ್ಲೆಗಳಲ್ಲಿ ಇರುವ ಚಿಕಿತ್ಸಾಲಯಗಳನ್ನು ‘ಆರೋಗ್ಯ ಕಲ್ಯಾಣ ಕೇಂದ್ರ’ಗಳಾಗಿ ಪರಿವರ್ತಿಸಬೇಕು. ರಾಜ್ಯದಲ್ಲಿ ಪ್ರಸ್ತುತ ಏಳು ಇಎಸ್ಐ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿದ್ದು, ಈ ಆಸ್ಪತ್ರೆಗಳಿಗೆ ಎಂ.ಐ.ಸಿ.ಯೂ (ಮೆಡಿಕಲ್ ಐಸಿಯು) ವ್ಯವಸ್ಥೆ ಮಾಡಬೇಕು ಮತ್ತು ರಾಜ್ಯದಲ್ಲಿರುವ ವಿಮಾ ಚಿಕಿತ್ಸಾಲಯಗಳಿಗೆ ಸಮರ್ಪಕ ಕಟ್ಟಡ ಇರುವುದಿಲ್ಲ ಹೀಗಾಗಿ ಈ ಚಿಕಿತ್ಸಾಲಯಗಳಿಗೆ ಆಧುನಿಕ ವ್ಯವಸ್ಥೆಗಳೊಂದಿಗೆ ಸ್ವಂತ ಕಟ್ಟಡ ಒದಗಿಸಲು ಕ್ರಮವಹಿಸುವಂತೆ ಕೇಂದ್ರದ ಇಎಸ್ಐ ಅಧಿಕಾರಿಗಳನ್ನು ರಾಜ್ಯ ನಿಯೋಗ ಆಗ್ರಹಪಡಿಸಿತು.

ತೆರಿಗೆ ರಿಯಾಯ್ತಿಗೆ ಮನವಿ:

ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ಸೆಸ್ ಸಂಗ್ರಹದ ಮೂಲಕ ಆರ್ಥಿಕ ಸಂಪನ್ಮೂಲ ಹೊಂದಿದ್ದು, ಈಗಾಗಲೇ ಇತರೆ ಮಂಡಳಿಗಳಾದ ಕಾಫಿ ಬೋರ್ಡ್, ತಂಬಾಕು ಮಂಡಳಿಗೆ ನೀಡಿರುವಂತೆ ಕಾರ್ಮಿಕ ಕಲ್ಯಾಣ ಮಂಡಳಿಗೂ ಸೆಸ್ ಮೇಲಿನ ತೆರಿಗೆ ರಿಯಾಯ್ತಿ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಕಾರ್ಮಿಕ ಇಲಾಖೆ ಅಪರ ಪ್ರಧಾನ ಕಾರ್ಯದರ್ಶಿ ಡಾ.ಜಿ.ಕಲ್ಪನಾ, ಕಾರ್ಮಿಕ ಕಲ್ಯಾಣ ಮಂಡಳಿ ಕಾರ್ಯದರ್ಶಿ ಎಂ.ಪಿ.ಗುರುಪ್ರಸಾದ್, ಸಚಿವರ ಆಪ್ತ ಕಾರ್ಯದರ್ಶಿ ಮಂಜುನಾಥ್ ಬಳ್ಳಾರಿ, ಮಂಡಳಿ ಜಂಟಿ ಕಾರ್ಯದರ್ಶಿ ಡಾ.ಶಿವಪುತ್ರ ಬಾಬುರಾವ್ ಸೇರಿದಂತೆ ಇಲಾಖೆ ಹಿರಿಯ ಅಧಿಕಾರಿಗಳು ನಿಯೋಗದಲ್ಲಿದ್ದರು.

ಹಾವೇರಿ ಎಂಬಿಬಿಎಸ್ ಅನುಮತಿಗೆ ಮನವಿ

ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರನ್ನು ಭೇಟಿ ಮಾಡಿದ ಶಿವರಾಂ ಹೆಬ್ಬಾರ್,  ಹಾವೇರಿ ವೈದ್ಯಕೀಯ ಕಾಲೇಜಿಗೆ (ಲೆಟರ್ ಆಫ್ ರ್ಮಿಷನ್) ಎಂಬಿಬಿಎಸ್ ಆರಂಭಿಸಲು ಅನುಮತಿ ಕೊಡಿಸಿಕೊಡುವಂತೆ ಮನವಿ ಮಾಡಿದರು.

Donate Janashakthi Media

Leave a Reply

Your email address will not be published. Required fields are marked *