ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಚಿವರಿಗೆ ಜಿಲ್ಲೆಗಳನ್ನು ಉಸ್ತುವಾರಿ ನೇಮಕಕ್ಕೆ ಭರ್ಜರಿ ಪ್ರಕ್ರಿಯೆ ಮಾಡಿದ್ದ ಬೆನ್ನಲ್ಲೇ ಸಚಿವರುಗಳಲ್ಲಿ ತೀವ್ರತರ ಅಸಮಾಧಾನಕ್ಕೆ ಕಾರಣವಾಗಿದೆ. ಕೆಲವು ತಮ್ಮ ಸ್ವಂತ ಜಿಲ್ಲೆಗೆ ಉಸ್ತುವಾರಿ ಮಾಡದಿರುವುದು ಒಂದೆಡೆಯಾದರೆ, ಮತ್ತೊಂದೆಡೆ ನಿರೀಕ್ಷಿತ ಜಿಲ್ಲೆ ಕೈ ತಪ್ಪಿರುವ ಬಗ್ಗೆ ಪರಿತಪಿಸುತ್ತಿದ್ದಾರೆ.
ಜಿಲ್ಲಾ ಉಸ್ತುವಾರಿ ಮತ್ತು ಕೋವಿಡ್ ಉಸ್ತುವಾರಿ ಸಚಿವರುಗಳ ನೇಮಕ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಯಾವುದೇ ಸಚಿವರುಗಳಿಗೆ ತವರು ಜಿಲ್ಲೆಯನ್ನು ನೀಡಿಲ್ಲ. ಇದು ಸಚಿವರುಗಳ ಸಿಟ್ಟಿಗೆ ಕಾರಣವಾಗಿದೆ.
ಬಹಿರಂಗವಾಗಿ ಅಸಮಾಧಾನ ಹೇಳಿಕೊಳ್ಳಲು ಆಗದೆ, ಕೊಟ್ಟಿರುವ ಜಿಲ್ಲೆಯ ಉಸ್ತುವಾರಿಯನ್ನು ವಹಿಸಿಕೊಳ್ಳಲು ಆಗದ ಅನೇಕ ಸಚಿವರಿಗೆ ಅಸಮಾಧಾನ ಉಂಟಾಗಿದೆ. ಏಕಾಏಕಿ ಉಸ್ತುವಾರಿ ಬದಲಾವಣೆ ಮಾಡಿರುವುದಕ್ಕೆ ಮುನಿಸಿಕೊಂಡರೆ ಮುಂದೆ ಸಂಪುಟ ಪುನಾರಚನೆಯಾಗುವ ವೇಳೆ ನಮ್ಮನ್ನು ಕೈಬಿಟ್ಟರೆ ಭವಿಷ್ಯದ ಗತಿಯೇನು ಎಂಬ ಚಿಂತೆಯೂ ಅನೇಕರನ್ನು ಕಾಡುತ್ತಿದೆ.
ಇದು ಒಂದೆಡೆಯಾದರೆ, ಸದ್ಯ ನಾಲ್ಕು ಸಚಿವ ಸ್ಥಾನಗಳು ಹಲವು ದಿನಗಳಿಂದ ಖಾಲಿ ಇವೆ. ಸಂಪುಟ ಪುನರ‍್ರಚನೆ ಬಗ್ಗೆ ಬಿಜೆಪಿ ಶಾಸಕರಾದ ಎಂ ಪಿ ರೇಣುಕಾಚಾರ್ಯ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ವರಿಷ್ಠರೊಂದಿಗೆ ಚರ್ಚಿಸಲು ಪ್ರತ್ಯೇಕ ಸಭೆಗಳು ಕೂಡ ಸರಣಿ ರೂಪದಲ್ಲಿ ನಡೆಸುತ್ತಿದ್ದಾರೆ.
ತಮಗೆ ಬೇಕಾದ ಜಿಲ್ಲೆಗಳ ಉಸ್ತುವಾರಿ ಸಿಗದೆ ಇರುವುದಕ್ಕೆ ಅಸಮಾಧಾನಗೊಂಡಿರುವ ಸಚಿವ ಎಂ.ಟಿ.ಬಿ ನಾಗರಾಜ್‌ಹಾಗೂ ಡಾ. ಕೆ. ಸುಧಾಕರ್ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ್ದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿಯಾಗಿ ನೇಮಕಗೊಂಡಿರುವ ಸಣ್ಣ ಕೈಗಾರಿಕಾ ಸಚಿವ ಎಂ.ಟಿ.ಬಿ.ನಾಗರಾಜ್ ಅವರು ಮೊದಲಿದ್ದ ಜಿಲ್ಲೆಯನ್ನೇ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ. ಈಗಾಗಲೇ ಎಂಟಿಬಿ ನಾಗರಾಜ್ ಪರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅವರ ಅಭಿಮಾನಿಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆ ಉಸ್ತುವಾರಿ ನೀಡಬೇಕೆಂದು ಅಭಿಯಾನವನ್ನು ಆರಂಭಿಸಿದ್ದಾರೆ.
ತುಮಕೂರು ಜಿಲ್ಲೆ ಉಸ್ತುವಾರಿ ಜೊತೆಗೆ ಯಾವುದೇ ಜಿಲ್ಲೆಗೂ ಉಸ್ತುವಾರಿಯಾಗಿ ನೇಮಕಗೊಳ್ಳದೆ ಬರೀ ಸಚಿವ ಸ್ಥಾನಕ್ಕೆ ಸೀಮಿತಗೊಂಡಿರುವ ಮಾಧುಸ್ವಾಮಿ ಕೂಡ ಪರೋಕ್ಷವಾಗಿ ಅಸಮಾಧಾನವನ್ನೇ ವ್ಯಕ್ತಪಡಿಸಿದ್ದಾರೆ.
ತುಮಕೂರು ಜಿಲ್ಲೆ ಕೈ ತಪ್ಪಿದ್ದಕ್ಕೆ ಅಸಮಾಧಾನವಿದೆ. ಏಕಾಏಕಿ ಬದಲಾವಣೆ ಮಾಡಿರುವುದು ನನಗೆ ಗೊತ್ತಿಲ್ಲ. ನನಗೆ ನೋವಿಲ್ಲ ಎಂದು ಹೇಳಿದರೆ ತಪ್ಪಾಗುತ್ತದೆ. ನಾನು ಯಾರನ್ನೂ ದೂರುವುದಿಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ತಮ್ಮ ನೋವನ್ನು ಹೊರ ಹಾಕಿದ್ದಾರೆ.
ವಿಜಯನಗರ ಜಿಲ್ಲೆ ಕೈತಪ್ಪಿದ್ದರಿಂದ ಮುನಿಸಿಕೊಂಡಿರುವ ಸಚಿವ ಆನಂದ್ ಸಿಂಗ್ ಈಗಲೂ ಕೂಡ ತವರು ಜಿಲ್ಲೆಯನ್ನೇ ನೀಡಬೇಕೆಂದು ಒತ್ತಾಯ ಮಾಡಿದ್ದಾರೆ. ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದೇನೆ. ಅದರಲ್ಲೂ ವಿಜಯನಗರವನ್ನು ಜಿಲ್ಲಾ ಕೇಂದ್ರ ಮಾಡಬೇಕೆಂದು ಹೋರಾಟ ಮಾಡಿದ್ದೆ. ಈಗ ಉಸ್ತುವಾರಿ ಕೈ ತಪ್ಪಿರುವುದು ನೋವು ತಂದಿದೆ ಎಂದು ತಮ್ಮ ಬೆಂಬಲಿಗರ ಬಳಿ ನೋವು ಹಂಚಿಕೊಂಡಿದ್ದಾರೆ ಎಂದು ಗೊತ್ತಾಗಿದೆ.
ಬೆಂಗಳೂರು ನಗರದ ಮೇಲೆ ಕಣ್ಣಿಟ್ಟಿದ್ದ ಅಶೋಕ್ ಸದ್ಯಕ್ಕೆ ತಮ್ಮ ಅಸಮಾಧಾನವನ್ನು ಬಹಿರಂಗವಾಗಿ ಹೇಳಿಕೊಂಡಿಲ್ಲವಾದರೂ ಮುಖ್ಯಮಂತ್ರಿ ತೀರ್ಮಾನವನ್ನು ಪ್ರಶ್ನಿಸಲಾರೆ ಎಂದು ಆಪ್ತರ ಬಳಿ ಹೇಳಿಕೊಂಡಿದ್ದಾರೆ.
ಇದೇ ರೀತಿ ಸಿ.ಸಿ.ಪಾಟೀಲ್, ಶಶಿಕಲಾ ಜೊಲ್ಲೆ, ಗೋವಿಂದ ಕಾರಜೋಳ, ಶಂಕರ್ ಪಾಟೀಲ ಮುನೇನಕೊಪ್ಪ, ಮುರುಗೇಶ್ ನಿರಾಣಿ, ಕೆ.ಸಿ.ನಾರಾಯಣಗೌಡ, ಕೆ.ಎಸ್.ಈಶ್ವರಪ್ಪ ಸೇರಿದಂತೆ ಅನೇಕರು ತಮ್ಮ ತವರು ಜಿಲ್ಲೆ ಕೈ ತಪ್ಪಿದ್ದರಿಂದ ಮುನಿಸಿಕೊಂಡಿದ್ದಾರೆ.