ದಲಿತ ಪರ ಹೋರಾಟಗಳ ಮುಂಚೂಣಿ ನಾಯಕ ಜಿಗಣಿ ಶಂಕರ್‌ ನಿಧನ

ಬೆಂಗಳೂರು: ಕರ್ನಾಟಕ ರಿಪಬ್ಲಿಕ್‌ ಸೇನೆಯ ರಾಜ್ಯಾಧ್ಯಕ್ಷರೂ ಆಗಿದ್ದ ಹಿರಿಯ ಹೋರಾಟಗಾರ, ದಲಿತ ಪರ ಹೋರಾಟಗಳ ಮುಂಚೂಣಿ ನಾಯಕರಲ್ಲಿ ಒಬ್ಬರಾದ ಜಿಗಣಿ ಶಂಕರ್‌ (67) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಚಿಂತಕರು ಹಾಗೂ ವಿಚಾರವಾದಿ ಎಂದು ಖ್ಯಾತರಾಗಿದ್ದ ಜಿಗಣಿ ಶಂಕರ್‌  ಜಿಗಣಿ ಬಳಿಯ ಬಂಡೇನಲ್ಲಸಂದ್ರ ಗ್ರಾಮದ ನಿವಾಸಿ. ಅವರು ಖಾಸಗಿ ಕಾರ್ಯಕ್ರಮವೊಂದರ ನಿಮಿತ್ತ ಕೋಲಾರಕ್ಕೆ ಹೋಗಿದ್ದಾಗ ಹೃದಯಾಘಾತ ಸಂಭವಿಸಿದೆ.

ಇದನ್ನೂ ಓದಿ:ಕವಿ ಡಾ. ಸಿದ್ದಲಿಂಗಯ್ಯ ನಿಧನ

ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಜಿಗಣಿ ಬಳಿಯ ಬಂಡೇನಲ್ಲಸಂದ್ರ ಗ್ರಾಮದ ನಿವಾಸದ ಬಳಿ ವ್ಯವಸ್ಥೆ ಮಾಡಲಾಗಿದ್ದು, ಸಂಜೆ ನಾಲ್ಕು ಗಂಟೆಯ ಸುಮಾರಿಗೆ ಬಂಡೇನಲ್ಲಸಂದ್ರ ಗ್ರಾಮದ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಸಲಿರುವುದಾಗಿ ಕುಟುಂಬದವರು ತಿಳಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್‌ ತಾಲೂಕಿನ ಜಿಗಣಿಯವರಾದ ಶಂಕರ್‌ ಅವರು ದಲಿತ ಸಂಘರ್ಷ ಸಮಿತಿ ಚಳುವಳಿಯ ಸಂದರ್ಭದಲ್ಲಿ ಮತ್ತು ಆ ನಂತರವೂ ನಿಷ್ಠುರ ಹೋರಾಟ ಮಾಡಿಕೊಂಡು ಬಂದಿದ್ದು, ಆಳವಾದ ಒಳನೋಟ ಉಳ್ಳವರಾಗಿದ್ದರು ಎಂದು ಸ್ನೇಹಿತರು ನೆನಪಿಸಿಕೊಂಡಿದ್ದಾರೆ.

ಜಿಗಣಿ ಶಂಕರ್‌ ಅವರು ತಮ್ಮ ಬದುಕಿನುದ್ದಕ್ಕೂ ದಲಿತ ಸಂಘಟನೆ ಮತ್ತು ದಲಿತ ಪಕ್ಷಕಟ್ಟಿ ಹೋರಾಟ ಮಾಡಿದವರು. ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯಗಳ ಪರವಾಗಿ ಅಪಾರ ಕಾಳಜಿ ಹೊಂದಿದ್ದರು. ಶಂಕರ್‌ ಯುವ ಪೀಳಿಗೆಗೆ ಸ್ಪೂರ್ತಿದಾಯಕವಾಗಿ ಹೋರಾಟದ ಕಿಚ್ಚು ಹಚ್ಚಿದ್ದರು ಎನ್ನುವುದು ಅವರ ಗೆಳೆಯರ ನುಡಿ.

ಜಿಗಣಿ ಶಂಕರ್‌ ಅವರ ನಿಧನಕ್ಕೆ ದಲಿತ ಮುಖಂಡರೆಲ್ಲರೂ ಕಂಬನಿ ಮಿಡಿದಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *