ಪಿ.ಆರ್. ವೆಂಕಟೇಶ್
ನನ್ನ ಮನೆಯ ಪಶ್ಚಿಮದ ಮಾಡು
ಜೇಡನ ಗೂಡು.
ಅದರೊಡಲ ಸಪ್ತ ಸರೋವರದ ಜೋಗುಳದಲ್ಲಿ ಕಪ್ಪು ಜನರ ದನಿಯಿಲ್ಲ.
ಸಾವು ನಿದ್ರಿಸಿದೆ.
ತೊಟ್ಟ ಕಿರೀಟದ ಸಪ್ತ ಕಿರಣದ ತಂತಿಯಲಿ ಪ್ರೀತಿ ಮಿಡಿತವಿಲ್ಲ
ಕರಳು ಕೊಯ್ವ ಗರಗಸದ ಸದ್ದಿದೆ.
ಜಾಢಿಸಿದಷ್ಟೂ ಅಂಟಿಕೊಳ್ಳುತ್ತೆ ಜೇಡ
ಕಣ್ಣಿಗೆ ಮೆದುಳಿಗೆ ಕೈಗೆ ಮೈತೊಟ್ಟ ಬಟ್ಟೆಗೆ
ಮುನ್ನಡೆವ ಕಾಲಿಗೆ.
ಅಡುಗೆ ಮನೆಯಿಂದ ಅಂಗಳದ ರಂಗೋಲಿಯವರೆಗೆ
ಬಲೆಯ ಬಿಗಿತ,
ಪ್ರತಿ ಬಿಗಿತದಲ್ಲೂ ವೈರಸ್‌ಗಳ ಕಡಿತ, ಧಿಗ್ಬಬಂಧನಗಳ ಕೊರೆತ.
ಹುಳು ಹುಪ್ಪಟೆ ಬೇಕಿಲ್ಲ ಇದಕೆ
ಮನೆಯ ಬಿರುಕೆಂದರೆ, ಯುದ್ಧದ ಬಯಲೆಂದರೆ, ಎಣ್ಣೆಯ ಬಾವಿಗಳೆಂದರೆ, ವಿಸ್ತಾರದ ಸಂತೆಯೆಂದರೆ
ಅಮೃತದ ಹಿಗ್ಗು.
ತಾನೆ ತನ್ನ ಶತ್ರುಗಳ ಹೆತ್ತು ಬಲೆ ಬೀಸುವ ಆಟ
ಪ್ರವಾದಿ ಟೆಂಟಲಿ ಹೊಕ್ಕ ಒಂಟೆಯ ನೋಟ.
ಅಂತಿಂಥದಲ್ಲವಿದು ಗೆಳೆಯ,
ಅಮೆಜಾನ್ ಮೊಹಬತ್ತಿನ ಮೋಹದ ಜೇಡ,
ಜನರಲ್ ಮೋಟಾರ್ಸಿನ ವಯೊಲಿನ್ ನಾದಕ್ಕೆ ನಡು ತಿರುವಿ,
ಫೋರ್ಡ್ ಡೋಲಿನ ತಾಳಕೆ ಕುಣಿದು ಕುಪ್ಪಳಿಸಿ
ತುಟಿ ಸವರಿ ತುಪ್ಪಿದ ಮಾರ್ಜಾಲ ನಗೆಯಲ್ಲಿ
ಹಿಟ್ಲರ್ ಬಾಟಿಸ್ಟಾ ಲಾಡೆನ್ ತಾಲಿಬಾನ್ ಗಳ ಹುಟ್ಟು.
ಕಾಲು ಮೀಟಿ ಮೈ ನಿಮುರಿಸಿದರೆ
ಮನೆಯಲ್ಲ ಬಿರುಕು
ನನ್ನ ಮನೆಗೆ ನಾನೇ ಪರಕೀಯ, ನಿಮ್ಮಂತೆ.
ಗೆಳೆಯ
ಜೇಡನ ಉಸುರಿದ ಡಾಲರ್ ಉಸುರಿಗೆ
ಮನೆಯ ಕಡಲೆಲ್ಲ ಯಾತನೆಯ ಹೊಂಡ.
ಹೆಪ್ಪಾದ ದುಖ:ಗಳು ,
ಮಕ್ಕಳ ಕಳಕೊಂಡ ಅರ್ಜೆಂಟೀನಾ ತಾಯಿ ಸಂಕಟ
“ಡೆ ಪ್ಲಾಜಾ ಡೆ ಮಾಯೋ ”
ಉಯಿಲಿಟ್ಟಿದೆ.
ಪ್ಯಾಲೆಸ್ತೇನ್ ವಿಧವೆಯರ ಅಳಲು ,
ಅಪಘಾನಿನ ಆಕ್ರಂದನ,
ಹಸಿದ ಮೆಕ್ಸಿಕೊ ಹೊಟ್ಟೆಯ ತಾಳ
ಜೀವ ಹಿಂಡುವ ಕಾಲನ ಕಹಿ ಕೂಗು
ಎಲ್ಲ ಹೆಪ್ಪಾಗಿವೆ ಗೆಳೆಯ.
ಕುದಿವ ಹೊಂಡದೊಡಲ ಸುನಾಮಿ ಸದ್ದು ಕೇಳುತ್ತಿದೆಯೇ ಗೆಳೆಯ,
ಬುಲುವಿಯಾದ ದಟ್ಟಡವಿಯಲ್ಲಿ ಮತ್ತೆ ಮೊಳಗಿದೆ “ಚೇ” ನ ಹೆಜ್ಜೆ ಸಪ್ಪಳ,
ಅವನೆದೆಯ ಗುಲಾಬಿಯ ನಗು,
ಹೆಗಲುಹೊತ್ತ ಬಂಧೂಕದ ಹಾಡು,
ಚಿಲಿಯ ಎದೆಗಂಟಿದ ರಕ್ತದ ಕರುಳಲ್ಲಿ
ನೆರೂದಾನ ಕವಿತೆ,
ದಿಗ್ಭಂದನ ಕುಲುವೆಯಲರಳಿದ ಸಕ್ಕರೆ ಬಟ್ಟಲ ಪಿಸುಮಾತು
ಕೇಳುತ್ತಿದೆಯೇ ಗೆಳೆಯ.
ಗೆಳೆಯ
ಬೆಳಕಿಗಂಟಿದ ಕುರುಡಿಗೆ ಬೆಂಕಿ ಇಡಬೇಕು
ಕತ್ತಲಿಗಂಟಿದ ಬೆಂಕಿಗೆ ನೀರೆರೆದು ಹಣತೆ ಹಚ್ಚಬೇಕು,
ಕಪ್ಪು ಕೆಂಪು ಹಳದಿ ನೀಲಿ ಬಾವುಟದ ವುಡಿಗೆ
ದೀಪದಲೆ ಎಸಳುಗಳ ಪೊರಕೆ ಕಟ್ಟಬೇಕು
ಬೆವರ ಸೂರ್ಯನ ಚರಿತ್ರೆ ಅರಳುವಂತೆ
ನಮ್ಮೆದೆಯ ಹಾಡಂತೆ.