ಬೆಂಗಳೂರು : ಕೊರೊನಾ ಸೋಂಕು ಹರಡದಂತೆ ನಿಯಂತ್ರಿಸುವುದು ಸೇರಿದಂತೆ ಸಾರ್ವತ್ರಿಕ ಉಚಿತ ಚಿಕಿತ್ಸೆ, ಔಷಧಿ, ಲಸಿಕೆಗಾಗಿ, ಕೋವಿಡ್ ಪರಿಹಾರ ನಗದು ನೇರ ವರ್ಗಾವಣೆ ಹಾಗೂ ಉಚಿತ ರೇಷನ್ಗಾಗಿ, ರೈತ-ಕಾರ್ಮಿಕ ವಿರೋಧಿ ಕಾನೂನುಗಳ ರದ್ದತಿಗಾಗಿ, ಒತ್ತಾಯಿಸಿ ರಾಜ್ಯಾದ್ಯಂತ ಏಳು ಪಕ್ಷಗಳು ಜಂಟಿಯಾಗಿ ಹಮ್ಮಿಕೊಂಡಿದ್ದ ಪ್ರತಿಭಟನೆಯ ಮೂಲಕ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಜನತೆಯ ಜೀವ ಉಳಿಸಲು ಮತ್ತು ಪರಿಹಾರ ಒದಗಿಸುವಂತೆ ಒತ್ತಾಯಿಸಿ ಸಿಪಿಐ(ಎಂ), ಸಿಪಿಐ, ಎಸ್ಯುಸಿಐ(ಸಿ), ಸಿಪಿಐ(ಎಂಎಲ್) ಲಿಬರೇಷನ್, ಎಐಎಫ್ಬಿ, ಆರ್ಪಿಐ, ಸ್ವರಾಜ್ ಇಂಡಿಯಾ ಪಕ್ಷಗಳ ರಾಜ್ಯ ಘಟಕಗಳ ವತಿಯಿಂದ ಜಂಟಿಯಾಗಿ ಮನೆಗಳ ಪ್ರತಿಭಟನೆ ನಡೆಸಿದರು.
ಕೋವಿಡ್ 2ನೇ ಅಲೆ ವೇಳೆ ಜೀವ ಉಳಿಸಿ ಜೀವನ ರಕ್ಷಿಸಿ 3ನೇ ಅಲೆಗೆ ಸನ್ನದ್ಧರಾಗಿ ಎಂಬ ಘೋಷಣೆಯೊಂದಿಗೆ ನಡೆದಿರುವ ಪ್ರತಿಭಟನೆಯಲ್ಲಿ ಜಿಲ್ಲೆಯಲ್ಲಿ ಸಾವಿರಾರು ಕಾರ್ಯಕರ್ತರು ಮನೆಮನೆಗಳಿಂದಲೇ ಊರೂರುಗಳಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಎಲ್ಲರ ಜೀವ ಉಳಿಸಬೇಕು ಎಂಬುದು ಬೇಡಿಕೆಯಾಗಿದೆ. ಲಾಕ್ಡೌನ್ ಸಂಕಷ್ಟದ ಹಿನ್ನೆಲೆಯಲ್ಲಿ ರಾಜ್ಯದಲ್ಲಿನ ಆದಾಯ ತೆರಿಗೆಯಿಂದ ಹೊರಗಿರುವ ಎಲ್ಲಾ ಕುಟುಂಬಗಳಿಗೆ 6 ತಿಂಗಳು ಮಾಸಿಕ ರೂ.10,000 ನೇರ ನಗದು ವರ್ಗಾವಣೆ ಮಾಡಬೇಕು, ತಲಾ 1೦ ಕೆ.ಜಿ ಉಚಿತ ಆಹಾರಧಾನ್ಯ ವಿತರಿಸಬೇಕು, ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕೆಲಸಗಳನ್ನು ವಾರ್ಷಿಕ 200 ದಿನಗಳಿಗೆ ಹೆಚ್ಚಿಸಿ ದಿನಕ್ಕೆ ರೂ.600 ಕೂಲಿಯೊಂದಿಗೆ ನಗರ ಪ್ರದೇಶಗಳಿಗೂ ವಿಸ್ತರಿಸಬೇಕೆಂದು ಪ್ರತಿಭಟನೆಯ ಮೂಲಕ ಒತ್ತಾಯಿಸಲಾಯಿತು.
ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ಜನತೆಯು ಹೊರಬರಲಾಗದ, ಪ್ರತಿಭಟಿಸಲಾಗದ ಸಂದರ್ಭವನ್ನು ಬಳಸಿ ರೈತ ವಿರೋಧಿ ಕೃಷಿ ಕಾಯ್ದೆಗಳು ಮತ್ತು ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆಗಳನ್ನು ಕೇಂದ್ರ ರಾಜ್ಯ ಸರ್ಕಾರಗಳು ಅಂಗೀಕರಿಸಿವೆ. ರಾಜ್ಯ ಸರ್ಕಾರವು ತರಾತುರಿಯಲ್ಲಿ ಕಾರ್ಮಿಕ ಸಂಹಿತೆಗಳಿಗೆ ನಿಯಮಾವಳಿಗಳನ್ನು ರೂಪಿಸಿ ಜಾರಿಗೊಳಿಸಲು 2ನೇ ಅಲೆಯ ಸಂದರ್ಭದ ಲಾಕ್ಡೌನ್ ಅನ್ನು ಬಳಸಿಕೊಳ್ಳುತ್ತಿದೆ. ಇದನ್ನು ಪ್ರತಿಭಟನೆಯ ಮೂಲಕ ತೀವ್ರವಾಗಿ ಖಂಡಿಸಿದೆ. ಕೋವಿಡ್ ವಿರುದ್ಧದ ಸಮರದಲ್ಲಿ ಮುಂಚೂಣಿ ಕಾರ್ಯಕರ್ತರು ಸೇನಾನಿಗಳಾಗಿ ಸೆಣೆಸುತ್ತಿದ್ದಾರೆ. ಅಂತಹ ಮುಂಚೂಣಿ ಕಾರ್ಯಕರ್ತರಿಗೆ ಅಗತ್ಯ ಜೀವ ರಕ್ಷಕ ವಯಕ್ತಿಕ ಸಲಕರಣೆಗಳನ್ನು ನೀಡಬೇಕು, ಅವರ ವೇತನ ಮತ್ತಿತರೆ ಸೌಲಭ್ಯಗಳನ್ನು ನಿಗದಿತವಾಗಿ ಖಾತರಿಪಡಿಸಬೇಕೆಂದು ಎಂದು ಒತ್ತಾಯಿಸಿದರು.
ಕೋವಿಡ್ ಎರಡನೇ ಅಲೆ ಸಾವಿರಾರು ಜನರನ್ನು ಆಹುತಿ ತೆಗೆದುಕೊಂಡಿದೆ. ಕುಟುಂಬಕ್ಕೆ ಆಧಾರವಾಗಿ ಇದ್ದವರನ್ನು ಕಳೆದುಕೊಂಡಿದ್ದಾರೆ. ಕೇಂದ್ರ, ರಾಜ್ಯ ಸರ್ಕಾರ ಸಕಾಲದಲ್ಲಿ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದೆ ಜನರನ್ನು ಸಾವಿನ ದವಡೆಗೆ ನೂಕಿವೆ. ದೇಶಪ್ರೇಮ, ದೇಶಭಕ್ತಿ ಬಗ್ಗೆ ಭಾಷಣ ಮಾಡುವ ನಾಯಕರು, ಜನರ ಜೀವ ಉಳಿಸಲು ಅಗತ್ಯವಾದ ಆಸ್ಪತ್ರೆಗಳು, ಆಮ್ಲಜನಕ ಸಹಿತ ಹಾಸಿಗೆ ವ್ಯವಸ್ಥೆ ಮಾಡಲಿಲ್ಲ. ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಇನ್ನೊಂದಿಲ್ಲ ಎಂದು ಆರೋಪಿಸಿದ್ದಾರೆ.
ದೇಶದಲ್ಲಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಎಡಪಕ್ಷಗಳು ಕರೆಯ ಭಾಗವಾಗಿ ಕೊರೊನಾ ಸಂದರ್ಭದಲ್ಲಿ ಸರಕಾರದ ಜವಾಬ್ದಾರಿಯಾಗಿದ್ದರೂ ಸರಕಾರ ಜನರ ಬಡವರ ಪರವಾಗಿ ನಿಲ್ಲುತ್ತಾ ಇಲ್ಲ. ಕೋವಿಡ್ ಹೆಸರಿನಲ್ಲಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದರು ಜನಕ್ಕೆ ಸಾಲದಾಗಿದೆ ಇದನ್ನು ಖಂಡಿಸಿ ಮನೆಗಳ ಮುಂದೆ, ಕೋವಿಡ್ ಸುರಕ್ಷತಾ ಕ್ರಮಗಳನ್ನು ಪಾಲಿಸಿ ತಮ್ಮ ಕುಟುಂಬದೊಂದಿಗೆ ಪ್ರತಿಭಟನೆ ನಡೆಸಿ ಸರಕಾರಕ್ಕೆ ಇ ಮೇಲ್ ಮೂಲಕ ಮನವಿ ಮಾಡಿದರು.
ರಾಜ್ಯದ ವಿವಿದೆಡೆ ನಡೆದ ಪ್ರತಿಭಟನೆ ಮೂಲಕ ಏಳು ಪಕ್ಷಗಳ ಕಾರ್ಯಕರ್ತರು, ಸಾರ್ವಜನಿಕರು, ರೈತರು, ಕಾರ್ಮಿಕರು, ಮಹಿಳೆಯರೂ ಸೇರಿದಂತೆ ವಿದ್ಯಾರ್ಥಿ-ಯುವಜನರು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯ ಮೂಲಕ ರಾಜ್ಯ ಸರಕಾರದ ವಿರುದ್ಧ ತಮ್ಮ ಹಕ್ಕೊತ್ತಾಯಗಳನ್ನು ಸಲ್ಲಿಸಿದರು.
ಏಳು ಪಕ್ಷಗಳ ಹಕ್ಕೊತ್ತಾಯಗಳು ಹೀಗಿವೆ:
1) ರಾಜ್ಯದ ಎಲ್ಲಾ 18 ವರ್ಷ ಮೇಲ್ಪಟ್ಟ ಜನತೆಗೆ ಉಚಿತ ಸಾರ್ವತ್ರಿಕ ಲಸಿಕೀಕರಣಕ್ಕೆ ವಿಳಂಬಿಸದೇ ತಕ್ಷಣವೇ ಕ್ರಮವಹಿಸಬೇಕು.
2) ಆದಾಯ ತೆರಿಗೆ ವ್ಯಾಪ್ತಿಗೊಳಪಡದ ಎಲ್ಲಾ ಕುಟುಂಬಗಳಿಗೆ ಮಾಸಿಕ ತಲಾ 10 ಕೇಜಿ ಸಮಗ್ರ ಆಹಾರಧಾನ್ಯಗಳ ಮತ್ತು ಆರೋಗ್ಯ ಸುರಕ್ಷತಾ ಸಾಮಗ್ರಿಗಳಿರುವ ಪೊಟ್ಟಣವನ್ನು ಮತ್ತು 10 ಸಾವಿರ ರೂಪಾಯಿಗಳ ನೆರವನ್ನು ಕೋವಿಡ್ ಸಮಸ್ಯೆ ನಿಯಂತ್ರಣಕ್ಕೆ ಬಂದು ಯಥಾ ಸ್ಥಿತಿ ಮುಂದುವರೆಯುವವರೆಗೆ ನೀಡಬೇಕು. ಪ್ರತಿ ಗ್ರಾಮ/ ನಗರಗಳ ದಲಿತರು ಮತ್ತು ಬಡವರು ಕಾರ್ಯನಿರ್ವಹಿಸುವ ಪ್ರದೇಶಗಳಲ್ಲಿ ಇಂದಿರಾ ಕ್ಯಾಂಟೀನ್ ಗಳನ್ನು ವಿಸ್ತರಿಸಬೇಕು ಮತ್ತು ಅವುಗಳನ್ನು ಬಲಗೊಳಿಸಬೇಕು.
3) ಹೊಲಗಳಲ್ಲಿಯೇ ಕೊಳೆತು ಹೋದ ಹೂ, ಹಣ್ಣು, ಆಲುಗಡ್ಡೆ, ಈರುಳ್ಳಿ ಮುಂತಾದ ವಿವಿಧ ತರಕಾರಿ ಬೆಳೆಗಳಿಗೆ ತಲಾ ಎಕರೆಗೆ ಕನಿಷ್ಠ 25,000 ರೂಪಾಯಿಗಳನ್ನು ಒದಗಿಸಬೇಕು ಮತ್ತು ರಾಜ್ಯದ ಎಲ್ಲಾ ರೈತರು, ಕೂಲಿಕಾರರು, ಕಾರ್ಮಿಕರು, ಕಸುಬುದಾರರು, ದಲಿತರು, ಆದಿವಾಸಿಗಳು, ಅಲ್ಪಸಂಖ್ಯಾತರು ಮತ್ತು ಮಹಿಳೆಯರ ಎಲ್ಲ ರೀತಿಯ ಸಾಲಗಳನ್ನು ಒಂದು ಬಾರಿ ಕೇರಳದ ಋಣ ಮುಕ್ತ ಕಾಯ್ದೆ ಮಾದರಿಯಲ್ಲಿ ಮನ್ನಾ ಮಾಡಬೇಕು.
4) ಕೇಂದ್ರ ಸರಕಾರ ಜಾರಿಗೆ ತರುತ್ತಿರುವ ಲೂಟಿಕೋರ ಕಾರ್ಪೋರೇಟ್ ಕಂಪನಿಗಳ ಪರವಾದ ರೈತ ಹಾಗೂ ಕಾರ್ಮಿಕರ ಮತ್ತು ಗ್ರಾಹಕರ ವಿರೋಧಿಗಳಾದ ತಿದ್ದುಪಡಿ ಕೃಷಿ ಕಾಯ್ದೆಗಳು ಹಾಗೂ ಕಾರ್ಮಿಕ ಸಂಹಿತೆಗಳು, ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ-2020, ವಿದ್ಯುತ್ ತಿದ್ದುಪಡಿ ಮಸೂದೆ-2020 ಹಾಗೂ ರಾಜ್ಯ ಸರಕಾರದ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ-2020, ಎಪಿಎಂಸಿ ತಿದ್ದುಪಡಿ ಕಾಯ್ದೆ-2020, ಜಾನುವಾರು ಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆ-2020 ಇವುಗಳನ್ನು ತಕ್ಷಣವೇ ವಾಪಾಸು ಪಡೆಯಬೇಕು. ಅದೇ ರೀತಿ ಸಾರ್ವಜನಿಕ ರಂಗದ ಉದ್ದಿಮೆಗಳು ಮತ್ತು ಸಂಸ್ಥೆಗಳ ಖಾಸಗೀಕರಣವನ್ನು ತಡೆಯಬೇಕು.
5) ಕನಿಷ್ಟ ಬೆಂಬಲ ಬೆಲೆಯ ಖಾತ್ರಿಪಡಿಸಲು ಬೆಂಬಲ ಬೆಲೆ ಕಾಯ್ದೆ ಮತ್ತು ಪ್ರಕೃತಿ ವಿಕೋಪಗಳಿಂದ ರೈತರ ಸಂರಕ್ಷಣೆಗೆ ಋಣ ಮುಕ್ತ ಕಾಯ್ದೆಗಳನ್ನು ಜಾರಿಗೊಳಿಸಬೇಕು.
6) ಉದ್ಯೋಗ ಖಾತ್ರಿ ಯೋಜನೆಯನ್ನು ನಗರ ಪ್ರದೇಶಗಳಿಗೂ ಹಾಗೂ 200 ದಿನಗಳಿಗೆ ವಿಸ್ತರಿಸಬೇಕು. ಕೂಲಿಯನ್ನು ವೇತನದಂತೆ ಈ ಕೂಡಲೇ 424 ರೂ.ಗಳಿಗೆ ಹೆಚ್ಚಿಸಬೇಕು.
7) ಕೋವಿಡ್ ಮುಂಚೂಣಿಯ ಎಲ್ಲಾ ಕಾರ್ಯಕರ್ತರಿಗೆ ವಿಮೆ ಸೌಲಭ್ಯಗಳೊಂದಿಗೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಮಸಣ ಕೆಲಸಗಾರರು, ಮುನಿಸಿಪಲ್ ಕೆಲಸಗಾರರು ಮುಂತಾದ ಶುಚಿ ಕಾರ್ಯದಲ್ಲಿ ತೊಡಗಿದವರಿಗೂ ಸೌಲಭ್ಯಗಳನ್ನು ವಿಸ್ತರಿಸಬೇಕು.