ಹಾಸನ: ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ರಾಮನಾಥಪುರ ಹೋಬಳಿಯ ಗಂಗೂರಿನ ಜೀತ ವಿಮುಕ್ತ, ಭೂಮಿ ವಂಚಿತ ದಲಿತರು ಕಳೆದ 40 ವರ್ಷಗಳಿಂದಲೂ ಉಳುಮೆ ಮಾಡುತ್ತಿದ್ದ ಭೂಮಿ ಮರಳಿ ಸಿಗುವವರೆಗೂ ಹೋರಾಟ ಮುಂದುವರೆಸುವುದಾಗಿ ಪ್ರತಿಭಟನಾಕಾರರು ತೀರ್ಮಾನಿಸಿದ್ದಾರೆ.
ಸ್ಥಳದಲ್ಲಿಯೇ ಗುಡಿಸಲುಗಳಲ್ಲಿ ವಾಸವಿರುವ ಅಲ್ಲಿಯ ದಲಿತ ಕುಟುಂಬಗಳು ನಮಗೆ ಭೂಮಿ ಹಕ್ಕು ನೀಡುವವರೆಗೂ ಹೋರಾಟವನ್ನು ಹಿಂಪಡೆಯುವುದಿಲ್ಲ ಎಂದು ಆಗ್ರಹಿಸಿದ್ದಾರೆ. ಹಲವು ವರ್ಷಗಳಿಂದ ತಾವು ಉಳುಮೆ ಮಾಡಿಕೊಂಡು ಬರುತ್ತಿರುವ ಭೂಮಿಯನ್ನು ಏಕಾಏಕಿಯಾಗಿ ಇತ್ತೀಚೆಗೆ ಅರಣ್ಯ ಇಲಾಖೆಯು ಅಮಾನವೀಯವಾಗಿ ಒಕ್ಕಲೆಬ್ಬಿಸಿತ್ತು.
ಇದನ್ನು ಓದಿ: ಜೀತಕ್ಕಷ್ಟೇ ವಿಮುಕ್ತಿ, ಸೆರೆಯಲ್ಲೇ ಉಳಿದ ಬದುಕು
ಜೀತ ವಿಮುಕ್ತರೆಂದು ಪಟ್ಟಿ ಮಾಡಿ, 27 ವರ್ಷಗಳಾದರೂ ಇಲ್ಲಿನ ದಲಿತರಿಗೆ ಇದುವರೆಗೂ ಭೂಮಿ, ಶಾಶ್ವತ ಪರಿಹಾರ ನೀಡದಿರುವುದು ಹಾಸನ ಜಿಲ್ಲಾಡಳಿತ, ಸರ್ಕಾರ ಮತ್ತು ಪ್ರತಿನಿಧಿಗಳಿಗಳಿಗೆ ನಾಚಿಗೆ ಗೇಡಿನ ಸಂಗತಿ ಹಾಗೂ ಅತ್ಯಂತ ದಲಿತ ವಿರೋಧಿ ದೋರಣೆಯಾಗಿದೆ ಎಂದು ಜಿಲ್ಲೆಯ ದಲಿತ ಮತ್ತು ಜನಪರ ಸಂಘಟನೆಗಳು ಆರೋಪಿಸಿವೆ.
ಗಂಗೂರಿನ ದಲಿತರು ಭೂಮಿಯ ಹಕ್ಕಿಗಾಗಿ ಅವರು ಗುಡಿಸಲು ನಿರ್ಮಿಸಿಕೊಂಡು ವಾಸಿಸುತ್ತಿರುವ ಪ್ರದೇಶದಲ್ಲಿ ಹಾಸನ ಜಿಲ್ಲೆಯ ದಲಿತ ಮತ್ತು ಜನಪರ ಸಂಘಟನೆಗಳ ಮುಖಂಡರು ಬುಧವಾರದಂದು ಅಲ್ಲಿಯ ಭೂಹೀನ ದಲಿತರೊಂದಿಗೆ ಸಭೆ ನಡೆಸಿ, ಗಂಗೂರು ಜೀತ ವಿಮುಕ್ತ, ಭೂಹೀನ ದಲಿತರಿಗೆ ಉಳುಮೆ ಭೂಮಿ ಮುಂಜೂರು ಮಾಡುವವರೆಗೂ ಹೋರಾಟವನ್ನು ತೀವ್ರಗೊಳಿಸಲು ನಿರ್ಣಯಿಸಿದೆ.
ಯಾವುದೇ ಕಾರಣಕ್ಕೂ ಅರಣ್ಯ ಇಲಾಖೆಯು ಗಂಗೂರಿನ ದಲಿತರು ಉಳಮೆ ಮಾಡುತ್ತಿದ್ದ ಜಾಗದಿಂದ ತೆರವುಗೊಳಿಸದಂತೆ, ಗಿಡಗಳನ್ನು ನೆಡದಂತೆ ಹೋರಾಟ ನಡೆಸುವುದು ಮತ್ತು ಅಲ್ಲಿಯ ಭೂಮಿಯಲ್ಲಿ ಸಾಮೂಹಿಕವಾಗಿ ಉಳುಮೆ ಬೇಸಾಯ ಮಾಡಿಸಲು ನಿರ್ಧರಿಸಿರುವರು. ಇಲ್ಲಿನ ದಲಿತರಿಗೆ ಸೂಕ್ತ ರಕ್ಷಣೆ ಮತ್ತು ಅವರಿಗೆ ಭೂಮಿ ಕೊಡಿಸಲು ಹೋರಾಟ ನಡೆಸುವಂತೆ ಅರಕಲಗೂಡು ಶಾಸಕರಾದ ಎ.ಟಿ.ರಾಮಸ್ವಾಮಿಯವರನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ. ತಮ್ಮನ್ನು ಇಲ್ಲಿಂದ ಬಲವಂತವಾಗಿ ಒಕ್ಕಲೆಬ್ಬಿಸಲು ಮತ್ತು ದೌರ್ಜನ್ಯ ನಡೆದರೆ ಅದಕ್ಕೆ ಕ್ಷೇತ್ರದ ಶಾಸಕರು, ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತವೇ ನೇರ ಹೊಣೆಗಾರಿಕೆ ಹೊರಬೇಕಾಗುತ್ತದೆ ಎಂದು ಸಂಘಟನೆಗಳ ಮುಖಂಡರು ತಿಳಿಸಿದ್ದಾರೆ.
ಇದನ್ನು ಓದಿ: ಖಾಸಗೀಕರಣದಿಂದ ದಲಿತರ ಪರಿಸ್ಥಿತಿ ಮತ್ತಷ್ಟು ಶೋಷನೀಯವಾಗಲಿದೆ
ಸಭೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಯೋಜಕರಾದ ರಾಜಶೇಖರ್ ಹುಲಿಕಲ್, ಜಿಲ್ಲೆಯ ಹಿರಿಯ ದಲಿತ ಮುಖಂಡರಾದ ಎಚ್.ಕೆ ಸಂದೇಶ್, ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಧರ್ಮೇಶ್., ದಲಿತ ಹಕ್ಕುಗಳ ಸಮಿತಿ-ಕರ್ನಾಟಕ(ಡಿಎಚ್ಎಸ್) ಜಿಲ್ಲಾ ಸಂಚಾಲಕರಾದ ಪೃಥ್ವಿ ಎಂ.ಜಿ., ಮಾದಿಗ ದಂಡೋರ ಜಿಲ್ಲಾಧ್ಯಕ್ಷರಾದ ಟಿ.ಆರ್ ವಿಜಯ್ ಕುಮಾರ್., ಡಿಎಸ್ಎಸ್ ಮುಖಂಡರಾದ ದುಮ್ಮಿ ಕೃಷ್ಣ, ದಲಿತ ಹಕ್ಕುಗಳ ಸಮಿತಿ ಮುಖಂಡರುಗಳಾದ ಮಂಜುನಾಥ್ ಕೆರಗೋಡು, ಅಶೋಕ್ ಅತ್ನಿ ಮತ್ತು ಮಾದಿಗ ದಂಡೋರ ಮುಖಂಡರುಗಳಾದ ತೆವಡಳ್ಳಿ ಮಂಜುನಾಥ್, ರಾಜು ಕೊಣನೂರು, ನಟರಾಜ್, ರವಿ ಉಪಸ್ಥಿತರಿದ್ದರು.