- ವಿದ್ಯಾರ್ಥಿಗಳ ಆರೋಗ್ಯ ಸುರಕ್ಷತೆ
ಬೆಂಗಳೂರು : ದೇಶದೆಲ್ಲೆಡೆ ಕೊರೋನಾ ಸೋಂಕು ವೇಗವಾಗಿ ಹರಡುತ್ತಿರುವ ಸಂದರ್ಭದಲ್ಲಿ ವಿದ್ಯಾರ್ಥಿಗಳ ಆರೋಗ್ಯ ಸುರಕ್ಷತೆಯನ್ನು ಪರಿಗಣಿಸದೆ ವೃತ್ತಿಪರ ಪ್ರವೇಶ ಪರೀಕ್ಷೆಗಳಾದ ಜೆ.ಇ.ಇ, ಎನ್.ಇ.ಇ.ಟಿ ನಡೆಸಬಾರದೆಂದು ಎಸ್ ಎಫ್ ಐ ಮತ್ತು ಎ.ಐಎಸ್.ಎಫ್ ವಿದ್ಯಾರ್ಥಿ ಸಂಘಟನೆಗಳು ನಗರದ ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ದೇಶವೀಗ ಕೋರೊನಾ ಸೋಂಕಿನಿಂದ ಬಳಲುತ್ತಿದೆ. ಕೋವಿಡ್ ನಿಂದಾಗಿ ಸಾವಿರಾರು ಜನ ಸಾವಿಗೀಡಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರ ಹೆಚ್ಚು ಜನರು ಒಂದು ಕಡೆ ಸೇರದೆ ಆರೋಗ್ಯ ಕಾಪಾಡಿಕೊಳ್ಳುವಂತೆ ಮನವಿ ಮಾಡಿಕೊಳ್ಳುತ್ತಿದೆ. ಇದರ ನಡುವೆಯೇ ಪರೀಕ್ಷೆಗಳನ್ನು ನಡೆಸುವ ಘೋಷಣೆ ಮಾಡುತ್ತಿದೆ. ಇದು ವಿದ್ಯಾರ್ಥಿಗಳ ಆರೋಗ್ಯ ಸುರಕ್ಷತೆಯ ಮೇಲೆ ದುಷ್ಪರಿಣಾಮ ಬೀರಲಿದೆ. ಹಾಗಾಗಿ ಸರ್ಕಾರ ಪರಿಸ್ಥಿತಿ ಸುಧಾರಣೆ ಆಗುವವರೆಗೂ ಪರೀಕ್ಷೆಗಳನ್ನು ನಡೆಸಬಾರದು. ವಿದ್ಯಾರ್ಥಿಗಳಿಗೆ ಸಮಸ್ಯೆಯಾಗದಂತೆ ವಿದ್ಯಾರ್ಥಿಗಳ ಶೈಕ್ಷಣಿಕ ವರ್ಷದ ವೇಳಾಪಟ್ಟಿಯನ್ನು ಮರುಹೊಂದಾಣಿಕೆ ಮಾಡಬೇಕೆಂದು ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ಎಸ್ಎಫ್ಐನ ರಾಜ್ಯ ಕಾರ್ಯದರ್ಶಿ ವಾಸುದೇವರೆಡ್ಡಿ, ಕೋರೊನಾದಿಂದಾಗಿ ದೇಶವು ತೀವ್ರ ಆರೋಗ್ಯ ಮತ್ತು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಈ ವಿದ್ಯಾರ್ಥಿ ವಿರೋಧಿ ನೀತಿಗಳನ್ನು ಕೈ ಬಿಡಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ ನೀಟ್, ಜೆಇಇ ಪರೀಕ್ಷೆ ನಡೆಸಲು ಸರಕಾರದ ಹಠ : ಪರೀಕ್ಷೆ ಮುಂದೂಡುವಂತೆ ಹಲವರ ಆಗ್ರಹ
ಈ ಸಂದರ್ಭದಲ್ಲಿ ಮಾತನಾಡಿದ ಎಐಎಸ್ಎಫ್ನ ರಾಜ್ಯಾಧ್ಯಕ್ಷೆ ಜ್ಯೋತಿ, ಕೋವಿಡ್ ಮತ್ತು ಲಾಕ್ ಡೌನ್ ನಿಂದಾಗಿ ಆರ್ಥಿಕ ಪರಿಸ್ಥಿತಿ ಹದೆಗೆಟ್ಟಿದೆ. ದೇಶವಿಗ ಸಂಕಷ್ಟವನ್ನು ಎದುರಿಸುತ್ತಿದೆ. ಇಂತಹ ಸಮಯದಲ್ಲಿ ವಿದ್ಯಾರ್ಥಿಗಳ ಆರೋಗ್ಯ ಮುಖ್ಯ. ಈ ಪರಿಸ್ಥಿತಿಯಲ್ಲಿ ವೃತ್ತಿಪರ ಪರೀಕ್ಷೆಗಳನ್ನು ನಡೆಸುವುದು ಸರಿಯಾದ ಕ್ರಮವಲ್ಲ. ಸರ್ಕಾರ ವಿದ್ಯಾರ್ಥಿಗಳ ಜೀವನ ಜೊತೆ ಆಟವಾಡದೆ ಪರೀಕ್ಷೆಗಳನ್ನು ಮುಂದೂಡಬೇಕು ಎಂದು ಒತ್ತಾಯಿಸಿದರು.
ಈ ಪ್ರತಿಭಟನೆಯಲ್ಲಿ ಎಸ್ ಎಫ್ಐನ ರಾಜ್ಯಾಧ್ಯಕ್ಷ ಅಮರೇಶ ಕಡಗದ್, ಜಂಟಿ ಕಾರ್ಯದರ್ಶಿ ಭೀಮನಗೌಡ ಸುಂಕೇಶ್ವರ ಹಾಳ, ಬೆಂಗಳೂರು ಜಿಲ್ಲಾ ಸಮಿತಿ ಕಾರ್ಯದರ್ಶಿ ದಿಲೀಪ್ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ಅಭಿಷೇಕ್ ಇತರರು ಮಾತನಾಡಿದರು. ಎಆರ್‍ಡಿಯುನ ಪ್ರಧಾನ ಕಾರ್ಯದರ್ಶಿ ಸಿ.ಎನ್.ಶ್ರೀನಿವಾಸ್ ಬೆಂಬಲಿಸಿ ಮಾತನಾಡಿದರು.