ಜೆಡಿಎಸ್‌ನ ಮತ್ತೊಂದು ವಿಕೆಟ್‌ ಪತನ

ಬೆಂಗಳೂರು: ಜೆಡಿಎಸ್ ಮುಖಂಡ, ಜಗಳೂರು ವಿಧಾನಸಭೆ ಕ್ಷೇತ್ರದ ಕಳೆದ ಬಾರಿ ಚುನಾವಣೆಯಲ್ಲಿ ಪರಾಜಿತ ಅಭ್ಯರ್ಥಿ ಬಿ. ದೇವೇಂದ್ರಪ್ಪ ಅವರು ತಮ್ಮ ಅಪಾರ ಬೆಂಬಲಿಗ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಜಾತ್ಯಾತೀತ ಜನತಾದಳ ತೊರೆದು ಕಾಂಗ್ರೆಸ್ ಸೇರುತ್ತಿರುವ  ಬಿ. ದೇವೇಂದ್ರಪ್ಪ ಹಾಗೂ ಇತರ ಮುಖಂಡರನ್ನು ನಮ್ಮ ಪಕ್ಷದ ಪರವಾಗಿ ಸ್ವಾಗತಿಸುತ್ತೇನೆ. ಅವರು ಸ್ವಯಿಚ್ಛೆಯಿಂದ ಕಾಂಗ್ರೆಸ್ ಸೇರಿ ಸೇವೆ ಮಾಡಲು ಮುಂದಾಗಿದ್ದಾರೆ ಎಂದು ಡಿ.ಕೆ.ಶಿವಕುಮಾರ್‌ ತಿಳಿಸಿದರು.

ಇದನ್ನು ಓದಿ: ಬೆಳಗಾವಿ ಚಳಿಗಾಲ ಅಧಿವೇಶನ ಕಲಾಪ ನೇರಪ್ರಸಾರ: ಹೊರಟ್ಟಿ

ಇದೇ ಸಂದರ್ಭದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್‌ ʻʻದೇಶಕ್ಕೆ ಕಾಂಗ್ರೆಸ್ ಪಕ್ಷ ಅನಿವಾರ್ಯ, ಕಾಂಗ್ರೆಸ್ ಇತಿಹಾಸವೇ ದೇಶದ ಇತಿಹಾಸ. ತ್ರಿವರ್ಣ ಧ್ವಜ ಹಾಕಿಕೊಳ್ಳುವ ಅವಕಾಶ ನೀಡಲಾಗಿದೆ. ಕಾಂಗ್ರೆಸ್ ಸಿದ್ಧಾಂತದ ಮೇಲೆ ನಂಬಿಕೆ ಇರುವವರು ಈ ಸದಸ್ಯತ್ವ ಪಡೆಯಬಹುದು. ಪಕ್ಷ ಬಿಟ್ಟು ಹೋಗಿರುವವರು, ಕಾಂಗ್ರೆಸ್ ಪಕ್ಷದ ಸಿದ್ಧಾಂತದ ಮೇಲೆ ನಂಬಿಕೆ ಇರುವವರು, ಪಕ್ಷ ಸೇರಲು ಬಯಸುವವರು – ಎಲ್ಲರಿಗೂ ಮುಕ್ತ ಅವಕಾಶ ಮಾಡಿಕೊಡಲಾಗುತ್ತದೆʼʼ ಎಂದು ಹೇಳಿದರು.

ಬಹಳ ದಿನಗಳಿಂದ ಬಿ. ದೇವೇಂದ್ರಪ್ಪ ಅವರ ಪಕ್ಷ ಸೇರ್ಪಡೆ ಮುಂದೂಡಿಕೆ ಆಗುತ್ತಲೇ ಬಂದಿತ್ತು. ಅಲ್ಲಂ ವೀರಭದ್ರಪ್ಪ ಅವರ ಸಮಿತಿ ಬೇಷರತ್ ಆಗಿ ದೇವೇಂದ್ರಪ್ಪ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕು ಎಂದು ಶಿಫಾರಸು ಮಾಡಿತ್ತು. ನಾನು, ರಾಜೇಶ್, ಜಯಸಿಂಹ, ಬಸವರಾಜ ಅವರು ಸೇರಿದಂತೆ ಎಲ್ಲ ಸ್ಥಳೀಯ ನಾಯಕರು ಸಮಾಲೋಚಿಸಿ, ಷರತ್ತು ಇಲ್ಲದೆ ಪಕ್ಷ ಸೇರುವವರನ್ನು ಸೇರಿಸಿಕೊಳ್ಳಬೇಕು ಎಂದು ತೀರ್ಮಾನಿಸಿದ್ದೆವು ಎಂದು ಇದೇ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಜೆಡಿಎಸ್ ಜಗಳೂರು ತಾಲೂಕು ಘಟಕದ ಅಧ್ಯಕ್ಷ ಕೆ. ಗುರುಸಿದ್ದಪ್ಪ, ಯುವ ಘಟಕದ ಅಧ್ಯಕ್ಷ ಕೃಷ್ಣ ಯಾದವ್, ಜಗಳೂರು ಬಿಜೆಪಿ ಅಧ್ಯಕ್ಷ ಹಾಗೂಎಪಿಎಂಸಿ ಮಾಜಿ ಅಧ್ಯಕ್ಷ ರಾಜಣ್ಣ ಮತ್ತಿತರರು ಕಾಂಗ್ರೆಸ್ ಸೇರಿದವರು. ಈ ಸಂದರ್ಭದಲ್ಲಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, 2018 ರ ಚುನಾವಣೆಯಲ್ಲಿ ಜಗಳೂರಿನ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಎಚ್‌.ಪಿ. ರಾಜೇಶ್ ಮತ್ತಿತರರು ಉಪಸ್ಥಿತರಿದ್ದರು.

Donate Janashakthi Media

Leave a Reply

Your email address will not be published. Required fields are marked *