ವಿಶೇಷ ವರದಿ : ಸಂಧ್ಯಾ ಸೊರಬ
ತಮ್ಮದೇನೂ ನಡೆಯುತ್ತಿಲ್ಲ, ನಡೆಯದೂ ಕೂಡಾ ಅನ್ನೋದು ಸ್ಪಷ್ಟವಾಗುತ್ತಿದ್ದಂತೆ ಮತ್ತೆಎನ್ಡಿಎ ಒಕ್ಕೂಟ ಸೇರಿರೋ ಜೆಡಿಎಸ್ ನಾಯಕರು ರಿವರ್ಸ್ ಗೇಮ್ ಆಡುತ್ತಿದ್ದಾರೆ. ಹಳೆ ಮೈಸೂರು ಭಾಗದಲ್ಲಿದ್ದ ಜೆಡಿಎಸ್ ಮುಗಿಸೋಕೆಹೊರಟಿದ್ದಾರೆ ಅಂತ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಮೇಲೆ ಹರಿಹಾಯ್ದಿದ್ದಾರೆ. ಅಂದ್ರೆ ಕಾಂಗ್ರೆಸ್ನತ್ತ ಬೊಟ್ಟು ಮಾಡಿದ್ದಾರೆ. ಚುನಾವಣೆ
ಮುಳುಗ್ತಾ ಇರೋನಿಗೆ ಹುಲ್ಲುಕಡ್ಡಿ ಆಸರೆ ಅನ್ನೋವಂತೆ ರಾಜ್ಯ ರಾಜಕೀಯದಲ್ಲಿ ಮುಳಗ್ತಾ ಇದ್ದ ತೆನೆಹೊತ್ತ ಮಹಿಳೆಗೆ ಗ್ಲೂಕೋಸ್ ಡ್ರಿಪ್ ನೀಡಿದ್ದು ಬಿಜೆಪಿ. ದೊಡ್ಡಗೌಡರ ಜಾತ್ಯಾತೀತ ಜನತಾದಳದ ರಾಜಕಾರಣಕ್ಕೆ ಆಸರೆಯನ್ನು ಬೇಡಿದ್ದು ಕಮಲವನ್ನ. ರೋಗಿ ಬಯಸಿದ್ದೂ ಹಾಲು ಅನ್ನ, ವೈದ್ಯ ಹೇಳಿದ್ದೂ ಹಾಲು ಅನ್ನ ಅನ್ನೋವಂತ ಪರಿಸ್ಥಿತಿಯಲ್ಲಿದ್ದ ಬಿಜೆಪಿಗೂ, ಹೆಚ್.ಡಿ.ದೇವೇಗೌಡ್ರ ಕುಟುಂಬ ರಾಜಕಾರಣಕ್ಕೂ ಬೇಕಾಗಿದ್ದಿದ್ದು ಇದೇ. ಅದಕ್ಕೆ ಕಾರಣ, ಲೋಕಸಭಾ ಚುನಾವಣೆ-2024. ಹೇಗಾದರೂ ಮಾಡಿ ಪಕ್ಷವನ್ನ ಉಳಿಸಿಕೊಳ್ಳಲೇಬೇಕೆಂಬ ಹಿಡನ್ ಅಜೆಂಡಾ. ಅದಕ್ಕೆ ಕಾಲಕ್ಕೆ ತಕ್ಕಂತೆ ಜೆಡಿಎಸ್ ಬದಲಾವಣೆ ಕಂಡೆಕೊಳ್ಳುತ್ತಾ ಬಂದಿರುವುದನ್ನು ಇವರ ರಾಜಕಾರಣದ ಇತಿಹಾಸ ಸಾರಿ ಸಾರಿ ಹೇಳಿದೆ.
ಎಚ್.ಡಿ.ದೇವೇಗೌಡರು ಒಕ್ಕಲಿಗರ ಪ್ರಶ್ನಾತೀತ ನಾಯಕರೇನು ಸರಿ. ಆರಂಭದಲ್ಲಿ ಈ ಪಕ್ಷವನ್ನು ಮುನ್ನಡೆಸಿ ರಾಜ್ಯದಲ್ಲಿ ಅಧಿಕಾರಕ್ಕೆ ತಂದು, ಹಲವು ಪ್ರಭಾವಿ ರಾಜಕಾರಣಿಗಳು ಬೆಳೆಯುವದರಲ್ಲಿ ಜೆಡಿಎಸ್ ಹಾಗೂ ದೇವೆಗೌಡರ ಕೊಡುಗೆ ದೊಡ್ಡದಿದೆ. ಇನ್ನೂ ತೆನೆಹೊತ್ತ ಮಹಿಳೆಯನ್ನು ಮುಂದುವರೆಸುವ ಜವಾಬ್ದಾರಿಯನ್ನು ಈ ಹಿಂದೆಯೇ ತಂದೆಯೊಂದಿಗೆ ತೆಗೆದುಕೊಂಡ ಹೆಚ್.ಡಿ.ಕುಮಾರಸ್ವಾಮಿ ಎರಡುಬಾರಿ ರಾಜ್ಯದ ಮುಖ್ಯಮಂತ್ರಿಯಾದರು. ಇನ್ನು ಹೆಚ್.ಡಿ.ರೇವಣ್ಣರ ಹಾಸನದ ರಾಜಕಾರಣವೆ ಬೇರೆ ಬೀಡಿ. ಆದ್ರೆ ಬದಲಾದ ಸನ್ನಿವೇಶದಲ್ಲಿ ಈಗ ಕರ್ನಾಟದಲ್ಲಿ ಪ್ರಾದೇಶಿಕ ಪಕ್ಷವೆಂಬ ಈ ಜೆಡಿಎಸ್ನ ಲೇಬಲ್ಗೆ ಸ್ವತಂತ್ರವಿಲ್ಲ ಅನ್ನೋದು ಖಚಿತವಾಗ್ತಾ ಇದೆ.
ಜೆಡಿಎಸ್ನ ಎನ್ಡಿಎ ಒಕ್ಕೂಟಕ್ಕೆ ಸೇರಿರೋ ಹೆಚ್.ಡಿ.ಕೆ, ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದೇನೂ, ನಂತರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪಾದಿಯಾಗಿ ಭೇಟಿ ಮಾಡಿದ್ದೇನೂ. ಪದೇಪದೇ ಎನ್ನುವಂತೆ ಹೆಚ್ಡಿಕೆ ಪುತ್ರ ನಿಖಿಲ್ ಕುಮಾರಸ್ವಾಮಿ ಬಿಜೆಪಿಯ ವರಿಷ್ಠರನ್ನು ದೆಹಲಿಗೆ ಹೋಗಿ ಭೇಟಿಯಾಗಿದ್ದೇನೂ!!!. ಅಷ್ಟೊಂದು ಬೇಗ ದೆಹಲಿಯ ಬಿಜೆಪಿ ವರಿಷ್ಠರಿಗೆ ಇವ್ರು ಹತ್ರಾನೇ ಆಗ್ಬಿಟ್ರು ಅನ್ನೋವಷ್ಟುರ ಮಟ್ಟಿಗೆ ವಾತಾವರಣ ಸೃಷ್ಟಿಸಿದರು. ಆದ್ರೆ ಅಸಲಿಯತ್ತೇ ಬೇರೆ. ಬಿಜೆಪಿಯ ಹೈ ನಾಯಕರಿಂದ ಮೈತ್ರಿಯೇನೋ ಆಯಿತು. ಅನಿವಾರ್ಯವೆನ್ನುವಂತೆ ಎನ್ಡಿಎ ಒಕ್ಕೂಟ ಸೇರಿಯೂ ಆಯ್ತು. ಹೀಗೆ ಮೈತ್ರಿಯಾಗೋ ಮೊದಲು ಕ್ಷೇತ್ರಗಳ ಹಂಚಿಕೆಯನ್ನ ಮಾಡಿಕೊಳ್ಳೋಣ ಅನ್ನೋ ಕಂಡೀಷನ್. ಹೀಗೆ 8 ಲೋಕಸಭಾ ಕ್ಷೇತ್ರಗಳನ್ನು ಜೆಡಿಎಸ್ಗೆ ಬಿಟ್ಟುಕೊಡಬೇಕನ್ನೋದಾಗಿತ್ತು. ಆಮೇಲೆ ಪ್ರಸಕ್ತ ಕರ್ನಾಟಕ ರಾಜ್ಯದ ರಾಜಕಾರಣ ಮತ್ತು ಜೆಡಿಎಸ್ನ ತೂಕವನ್ನೆಲ್ಲ ಪರಿಗಣಿಸಿ 3 ಕ್ಷೇತ್ರಗಳನ್ನಾದರೂ ಕೊಡಲೀ ಎಂದಾಗಿತ್ತು. ಆದರೆ ಆಗಿದ್ದೇ ಬೇರೆ. ಮೊದಲ ಪಟ್ಟಿಯನ್ನೇನೋ ಬಿಜೆಪಿ ಬಿಡುಗಡೆ ಮಾಡಿತು. ಅದೂ ಕೂಡ ತೀರಾ ಜೆಡಿಎಸ್-ಬಿಜೆಪಿ ಕಾರ್ಯಕರ್ತರ ನಡುವೆ ಗೊಂದಲ ಇರೋ ಕಾರಣಕ್ಕೆ ಬಾಕಿದನ್ನ ಹಾಗೆಯೇ ಉಳಿಸಿಕೊಳ್ತು. ದೊಡ್ಡಗೌಡರ ಕುಟುಂಬವನ್ನು ಅದರಲ್ಲಿಯೂ ಹೆಚ್.ಡಿ.ಕುಮಾರಸ್ವಾಮಿ ಅನ್ನು ಸಂತೈಸುವಂತಾಗಲೀ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ದೇವೇಗೌಡರ ಅಳಿಯ ಡಾ.ಸಿ.ಎನ್.ಮಂಜುನಾಥ ಅವ್ರನ್ನ ಎನ್ಡಿಎ ಅಭ್ಯರ್ಥಿ ಅಂತಾಗಲೀ ಅಥವಾ ಜೆಡಿಎಸ್ ಅಭ್ಯರ್ಥಿಯಂತಾಗಲೀ ಅಂತ ಘೋಷಿಸದೇ ಬಿಜೆಪಿಯ ಅಭ್ಯರ್ಥಿ ಅಂತ ಪ್ರಕಟಿಸ್ತು. ಹೀಗೆ ಜೆಡಿಎಸ್ ಅಭ್ಯರ್ಥಿಗೆ ಬಿಜೆಪಿ ಚಿಹ್ನೆಯಾಯಿತು.
ಆದರೀಗ ಜೆಡಿಎಸ್ನ ಬಗ್ಗೆ ಬಿಜೆಪಿಯ ದೆಹಲಿಯ ಮುಖಂಡರು ಪರಿಗಣಿಸುತ್ತಿಲ್ಲ ಎಂಬುದು ಗೊತ್ತಾಗುತ್ತಿದೆ. ಮೊದಲ ಪಟ್ಟಿ ಬಿಡುವಾಗ ಇವ್ರೊಂದಿಗೆ ಚರ್ಚಿಸಿಲ್ಲ ಅನ್ನೋದು ಒಂದು ಕಡೆಯಾದ್ರೆ, ದೇವೇಗೌಡ್ರು ಕೇಳಿದ ಕಡೆ ಜೆಡಿಎಸ್ ಅಭ್ಯರ್ಥಿಯನ್ನ ಹಾಕೋಕೆ ಬಿಜೆಪಿ ಹಿಂದೆಮುಂದೆ ನೋಡ್ತಾ ಇರೋದು. ಅದಕ್ಕಾಗಿಯೇ ಎರಡನೇ ಪಟ್ಟಿ ಬಿಡುಗಡೆಗೆ ಬಿಜೆಪಿ ತಡಮಾಡ್ತಿರೋದು. ಜೆಡಿಎಸ್ ವ್ಯಾಪ್ತಿಗೆ ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ ಬೇಕು ಅಂತ ಕುಮಾರಸ್ವಾಮಿ ಹೇಳ್ತಿರೋದು ಪಟ್ಟು ಹಿಡಿದಿರೋದು. ಇದಕ್ಕೆ ಬಿಜೆಪಿ ವರಿಷ್ಠ ಅಮಿತ್ ಷಾ ಆದಿಯಾಗಿ ಇನ್ನೂ ಕೆಲವರು ಸೊಪ್ಪು ಹಾಕುತ್ತಿಲ್ಲ. ಹೀಗಾಗಿ ಹೆಚ್.ಡಿ.ದೇವೇಗೌಡರು ಮತ್ತು ಎಚ್.ಡಿ.ಕುಮಾರಸ್ವಾಮಿ ಹೊಸ ವರಸೆಯನ್ನ ಶುರು ಮಾಡ್ಕೊಂಡಿದಾರೆ.
ತಮ್ಮದೇನೂ ನಡೆಯುತ್ತಿಲ್ಲ, ನಡೆಯದೂ ಕೂಡಾ ಅನ್ನೋದು ಸ್ಪಷ್ಟವಾಗುತ್ತಿದ್ದಂತೆ ಮತ್ತೆ ಎನ್ಡಿಎ ಒಕ್ಕೂಟ ಸೇರಿರೋ ಜೆಡಿಎಸ್ ನಾಯಕರು ರಿವರ್ಸ್ ಗೇಮ್ ಆಡುತ್ತಿದ್ದಾರೆ. ಹಳೆ ಮೈಸೂರು ಭಾಗದಲ್ಲಿದ್ದ ಜೆಡಿಎಸ್ ಮುಗಿಸೋಕೆ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಮೇಲೆ ಹರಿಹಾಯ್ದಿದ್ದಾರೆ. ಅಂದ್ರೆ ಕಾಂಗ್ರೆಸ್ನತ್ತ ಬೊಟ್ಟು ಮಾಡಿದ್ದಾರೆ. ಹಳೆ ಮೈಸೂರು ಭಾಗದಲ್ಲಿ ಸಧೃಡವಾಗಿದ್ದ ಜೆಡಿಎಸ್, ಬಿಜೆಪಿ ಜೊತೆ ಅಧಿಕೃತವಾಗಿ ಹೋಗೋಕೆ ಕಾರಣ ಕಾಂಗ್ರೆಸ್. ಕಾಂಗ್ರೆಸ್ ಜೊತೆ ಇದ್ದಾಗ ಯಾವ ರೀತಿ ನಡೆಸಿಕೊಂಡಿದ್ದೀರಾ ಎನ್ನುವುದು ಗೊತ್ತಿದೆ. ಜೆಡಿಎಸ್ ಪಕ್ಷ ಉಳಿದಿರೋದು ಬಿಜೆಪಿ ಜೊತೆ ಸರ್ಕಾರ ಮಾಡಿದಾಗ ಅಂತ ನೆಪ ಹೇಳುತ್ತಿದ್ದಾರೆ. ಇದ್ರಲ್ಲೇ ಗೊಂದಲ ಮೂಡಿಸುವ ಪ್ರಯತ್ನ ಎಚ್ಡಿಕೆಯದ್ದಾಗಿದೆ.
ಇನ್ನೊಂದು ಮುಖ್ಯ ಅಂದರೆ, ಜೆಡಿಎಸ್-ಬಿಜೆಪಿ ಕಾರ್ಯಕರ್ತರಿನ್ನೂ ಒಂದಾಗೇ ಇಲ್ಲ ಅನ್ನೋದು. ತಳಮಟ್ಟದಲ್ಲಿ ಎನ್ಡಿಎ ಸಂಘಟನೆಯೇ ಆಗಿಲ್ಲ. ಎಲ್ಲಾ ಕಡೆಯಲ್ಲೂ ತೆನೆಹೊತ್ತ ಮಹಿಳೆಗಿಂತ ಬಿಜೆಪಿ ಕಾರ್ಯಕರ್ತರ ಪ್ರಾಬಲ್ಯವೇ ಇದೆ. ಜೆಡಿಎಸ್ ಇದ್ದೂ ಇಲ್ಲದಂತಿದೆ ಎಂಬುದು ತಳಮಟ್ಟದಲ್ಲಿರುವ ಜೆಡಿಎಸ್ ಕಾರ್ಯಕರ್ತರ ಗೋಳು. ಎತ್ತಾ ಹೋಗಬೇಕು ಅನ್ನೋ ಗೊಂದಲದಲ್ಲಿ ಜೆಡಿಎಸ್ ಕಾರ್ಯಕರ್ತರಿದ್ದಾರೆ. ಅದಕ್ಕೆ ದೇವೇಗೌಡರು ಎಚ್ಡಿಕೆ ಆದಿಯಾಗಿ ಜೆಡಿಎಸ್- ಬಿಜೆಪಿ ಕಾರ್ಯಕರ್ತರು ಒಗ್ಗಟ್ಟಿನಿಂದ ಹೋಗೋಕೆ ಸಭೆ ಚರ್ಚೆ ನಡೆಸಿದ್ದಾರೆ ಅಂತ ಒತ್ತಿಒತ್ತಿ ಹೇಳಿದ್ದು.
ಈಗ ರಾಜಕಾರಣದಲ್ಲಿ ಜೆಡಿಎಸ್ದು ಅದ್ರಲ್ಲಿಯೂ ಎನ್ಡಿಎ ಒಕ್ಕೂಟ ಸೇರಿರುವ ದೇವೇಗೌಡರ ಕುಟುಂಬದ ರಾಜಕಾರಣಕ್ಕೆ ಅತ್ತ ಸ್ವಾತಂತ್ರ್ಯವೂ ಇಲ್ಲ, ಇತ್ತ ಏನು ಮಾಡಬೇಕು ಮಾಡಬಾರದು ಅನ್ನೋದೂ ಗೊತ್ತಾಗುತ್ತಿಲ್ಲ. ಗೂಬೆ ಕೂರಿಸೋ ಪ್ರಯತ್ನವೀಗ ನಡೆಯುತ್ತಿದೆ ಎಂದರೆ ಬಹುಶಃ ತಪ್ಪಾಗಲಾರದು. ಅದಕ್ಕೆ ಹೇಳಿದ್ದು, ಕಣ್ಣೀರು ಹಾಕುತ್ತಿರುವ ತೆನೆಹೊತ್ತ ಮಹಿಳೆ….ಚುನಾವಣೆಗೂ ಮೊದಲೇ ಮೈತ್ರಿಯಲ್ಲಿ ಬಿರುಕು… ಎನ್ಡಿಎ ಒಕ್ಕೂಟ ಸೇರಿದ್ದೇ ತಪ್ಪಾಯಿತಾ? ಅಂತ.