ನವದೆಹಲಿ: ಬಿಜೆಪಿ ನಾಯಕರು ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಮೈಸೂರಿಗೆ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಆದರೆ, ಇದಕ್ಕೆ ಜೆಡಿಎಸ್ ಬೆಂಬಲ ಇಲ್ಲ ಎಂದು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಕಡ್ಡಿಮುರಿದಂತೆ ಹೇಳಿದ್ದಾರೆ. ದೆಹಲಿಯಲ್ಲಿ ಮಾತನಾಡಿದ ಅವರು, ಪಾದಯಾತ್ರೆ ವಿಚಾರದಲ್ಲಿ ನಮ್ಮನ್ನು (ಜೆಡಿಎಸ್) ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಹೀಗಾಗಿ ಅದಕ್ಕೆ ನಮ್ಮ ಬೆಂಬಲವಿಲ್ಲ ಎಂದರು.
ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷರು ಪಾದಯಾತ್ರೆಗೆ ಬೆಂಬಲ ನೀಡದೇ ಇರುವ ಬಗ್ಗೆ ಮಂಗಳವಾರದ ಸಭೆಯಲ್ಲಿ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಅವರು ತಿಳಿಸಿದರು. ರಾಜೀನಾಮೆ
ಕೇರಳದಲ್ಲಿ ಮಳೆಯಿಂದ ನೂರಾರು ಜನರ ಜೀವಕ್ಕೆ ಹಾನಿಯಾಗಿದೆ. ರಾಜ್ಯದಿಂದ ಹೋದವರು ವಾಪಸ್ ಬರಲು ಸಮಸ್ಯೆ ಎದುರಿಸುತ್ತಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಯೆಲ್ಲೋ, ರೆಡ್ ಅಲರ್ಟ್ ಘೋಷಣೆ ಆಗಿದೆ. ಮತ್ತೊಂದೆಡೆ, ಈಗ ಎಲ್ಲರೂ ಕೃಷಿ ಚಟುವಟಿಕೆಯಲ್ಲಿ ಭಾಗವಹಿಸುವ ಸಮಯ. ಹೀಗಾಗಿ ಪಾದಯಾತ್ರೆಯಲ್ಲಿ ಜೆಡಿಎಸ್ ಭಾಗವಹಿಸುವುದಿಲ್ಲ ಎಂದು ಅವರು ತಿಳಿಸಿದರು. ರಾಜೀನಾಮೆ
ಇದನ್ನೂ ಓದಿ: ವಯನಾಡ್ ಭೂಕುಸಿತದಲ್ಲಿ 150ಕ್ಕೂ ಹೆಚ್ಚು ಮಂದಿ ಸಾವು, ಹಲವರು ನಾಪತ್ತೆ
ಬಿಜೆಪಿಯ ಪಾದಯಾತ್ರೆ ಬಗ್ಗೆ ಅವರೇ ತೀರ್ಮಾನ ತೆಗೆದುಕೊಂಡು ಮಾಡುತ್ತಿದ್ದಾರೆ. ಈ ಸಮಯದಲ್ಲಿ ಪಾದಯಾತ್ರೆ ಸೂಕ್ತವಲ್ಲ ಎಂಬುದು ನಮ್ಮ ನಿಲುವು. ಹೀಗಾಗಿ ಅದರಿಂದ ಹಿಂದೆ ಸರಿದಿದ್ದೇವೆ. ಆ ಭಾಗದ ಜನರ ಭಾವನೆ ಮುಖ್ಯ. ಹಾಗಾಗಿ ಪಾದಯಾತ್ರೆಯಲ್ಲಿ ಭಾಗಿಯಾಗಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ಈ ಹಿಂದೆ ಲೋಕಸಭೆ ಚುನಾವಣೆ ಟಿಕೆಟ್ ಹಂಚಿಕೆ ಸಂದರ್ಭದಲ್ಲಿಯು ಬಿಜೆಪಿ ಬಗ್ಗೆ ಕುಮಾರಸ್ವಾಮಿ ತುಸು ಅಸಮಾಧಾನ ವ್ಯಕ್ತಪಡಿಸಿದ್ದರು. ಕೇವಲ 2 ಸೀಟಿಗಾಗಿ ಇಷ್ಟೆಲ್ಲ ಒದ್ದಾಡಬೇಕಾ ಎಂದಿದ್ದು ಬಹಳಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಅವರು ಕೇಂದ್ರ ಸಚಿವರಾಗಿದ್ದುಕೊಂಡು ಮೈತ್ರಿ ಪಕ್ಷದ ಬಗ್ಗೆ ಅಸಮಾಧಾನದ ಹೇಳಿಕೆ ನೀಡಿದ್ದಾರೆ.
ಪ್ರೀತಂ ಗೌಡ ವಿರುದ್ಧ ಆಕ್ರೋಶ
ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಶಾಸಕ ಪ್ರೀತಂ ಗೌಡ ವಿರುದ್ಧವೂ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರೀತಮ್ ಗೌಡ ಯಾರು. ಹಾಸನದಲ್ಲಿ ಬೀದಿ ಬೀದಿಗಳಲ್ಲಿ ಪೆನ್ಡ್ರೈವ್ ಸಿಗಲು ಕಾರಣನಾದ ವ್ಯಕ್ತಿ ಆತ. ಆತನ ಜತೆಗೆ ನಾನು ವೇದಿಕೆ ಹಂಚಿಕೊಳ್ಳಬೇಕಾ? ನಮ್ಮ ಕುಟುಂಬಕ್ಕೆ ವಿಷ ಹಾಕಿದವರ ಜತೆಗೆ ಪಾದಯಾತ್ರೆಯಲ್ಲಿ ಭಾಗಿಯಾಗಬೇಕಾ? ಎಂದು ಕೇಳಿದ್ದಾರೆ.
ಬಿಜೆಪಿ ನಾಯಕರಿಂದಲೂ ಅಪಸ್ವರ
ಅತ್ತ ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಸಹ ಪಾದಯಾತ್ರೆಗೆ ಅಪಸ್ವರ ತೆಗೆದಿದ್ದರು. ಅಲ್ಲದೆ, ಯತ್ನಾಳ್ ಹಾಗೂ ರಮೇಶ್ ಜಾರಕಿಹೊಳಿ ಪ್ರರ್ಯಾಯ ಪಾದಯಾತ್ರೆಯ ಬಗ್ಗೆ ಚರ್ಚೆ ನಡೆಸಿದ್ದು, ಕೂಡಲಸಂಗಮ ಅಥವಾ ಹುಬ್ಬಳ್ಳಿಯಿಂದ ಬಳ್ಳಾರಿಯವರೆಗೆ ಹೆಜ್ಜೆ ಹಾಕಲು ಸಮಾಲೋಚನೆ ನಡೆಸುತ್ತಿದ್ದಾರೆ.
ಈ ಎಲ್ಲ ಬೆಳವಣಿಗೆಗಳು ರಾಜ್ಯ ಬಿಜೆಪಿ ಪಾದಯಾತ್ರೆ ಯಶಸ್ವಿಯಾಗುವ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿವೆ.
ಇದನ್ನೂ ನೋಡಿ: ನಿರಂಜನರ ಮರು ಓದು ಇಂದಿನ ತುರ್ತು ಅಗತ್ಯ – ತೇಜಸ್ವಿನಿ ನಿರಂಜನJanashakthi Media