ತಿರುವನಂತಪುರಂ: ಜೆಡಿಎಸ್ ಪಕ್ಷದ ಕೇರಳ ಘಟಕದ ಹಿರಿಯ ನಾಯಕ, ಮಾಜಿ ಸಚಿವ ಸಿ.ಕೆ. ನಾಣು ನೇತೃತ್ವದ ಒಂದು ಬಣ ನವೆಂಬರ್ 15ರಂದು ಇಲ್ಲಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಕರೆದಿದ್ದಾರೆ. ಬಿಜೆಪಿ ನೇತೃತ್ವದ ಎನ್ಡಿಎಗೆ ಸೇರುವ ನಿರ್ಧಾರವನ್ನು ಪಕ್ಷದ ರಾಷ್ಟ್ರೀಯಾಧ್ಯಕ್ಷ ಎಚ್.ಡಿ. ದೇವೇಗೌಡ ಕಳೆದ ತಿಂಗಳು ಘೋಷಿಸಿದ್ದರು. ಇದರ ನಂತರ ಪಕ್ಷದ ಕೇರಳ ಘಟಕದಲ್ಲಿ ಭಿನ್ನಾಭಿಪ್ರಾಯ ಉದ್ಭವಿಸಿದ್ದು ಇದನ್ನು ಬಗೆಹರಿಸಲು ಈ ಸಭೆ ಕರೆಯಲಾಗಿದೆ ಎಂದು ವರದಿಯಾಗಿದೆ.
ಪಕ್ಷವೂ ಬಿಜೆಪಿ ನೇತೃತ್ವದ ಎನ್ಡಿಎ ಸೇರುವ ನಿರ್ಧಾರವನ್ನು ಎಚ್.ಡಿ. ದೇವೇಗೌಡ ಘೋಷಿಸಿದ ನಂತರ ಪಕ್ಷದ ಕೇರಳ ಘಟಕವು ಅವರೊಂದಿಗೆ ಅಂತರ ಕಾಯ್ದುಕೊಂಡಿತ್ತು. ಕೇರಳದಲ್ಲಿ ಸಿಪಿಐ(ಎಂ) ನೇತೃತ್ವದ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ ಸರ್ಕಾರದ ಮಿತ್ರಪಕ್ಷವಾದ ಜೆಡಿ(ಎಸ್)ನ ಘಟಕವು ದೇವೇಗೌಡ ಅವರ ನಿರ್ಧಾರವನ್ನು ವಿರೋಧಿಸಿದ್ದು, ತಾವು ಹಾಗೆಯೇ ಇರುವುದಾಗಿ ಹೇಳಿದೆ.
ಇದನ್ನೂ ಓದಿ: ಅಧಿಕಾರ ದುರ್ಬಳಕೆ ಆರೋಪ | ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ವರ್ಗಾವಣೆ
ದೇವೇಗೌಡ ಅವರು ತಮ್ಮ ಪಕ್ಷವೂ ಎನ್ಡಿಎ ಸೇರುವುದಾಗಿ ಘೋಷಿಸಿದಾಗಿನಿಂದಲೂ ಕೇರಳದ ಪ್ರತಿಪಕ್ಷಗಳು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಕಾಂಗ್ರೆಸ್ ಅವರನ್ನು ಬಿಜೆಪಿಯ ಬಿ ತಂಡದ ನಾಯಕ ಎಂದು ಬಣ್ಣಿಸಿದೆ. ಈ ನಡುವೆ ರಾಜ್ಯ ಬಿಜೆಪಿ ನಾಯಕತ್ವವು ಜೆಡಿಎಸ್ನ ಇಬ್ಬರು ಶಾಸಕರು ಆಡಳಿತರೂಢ ಎಲ್ಡಿಎಫ್ ಮೈತ್ರಿಯಿಂದ ಹೊರಬರಲು ಕೇಳಿಕೊಳ್ಳುತ್ತಿದೆ.
ಕೇರಳದಲ್ಲಿ, ಜೆಡಿ(ಎಸ್) ಆಡಳಿತಾರೂಢ ಸಿಪಿಐ(ಎಂ) ನೇತೃತ್ವದ ಎಡಪಕ್ಷಗಳ ಪೂರ್ಣ ಪ್ರಮಾಣದ ಮಿತ್ರ ಪಕ್ಷವಾಗಿದೆ. ಪಕ್ಷದ ಶಾಸಕರಾದ ಕೆ. ಕೃಷ್ಣನ್ಕುಟ್ಟಿ ಅವರು ರಾಜ್ಯದ ವಿದ್ಯುತ್ ಸಚಿವರಾಗಿದ್ದಾರೆ. ಜೆಡಿಎಸ್ ಕೇರಳ ರಾಜ್ಯ ಅಧ್ಯಕ್ಷ ಮ್ಯಾಥ್ಯೂ ಟಿ ಥಾಮಸ್ ಅವರು ಆಡಳಿತ ಪಕ್ಷದ ಶಾಸಕರಾಗಿದ್ದಾರೆ. ಆದರೆ ದೇವೇಗೌಡರ ನಿರ್ಧಾರವನ್ನು ಇಬ್ಬರೂ ನಾಯಕರು ಸಾರಾಸಗಟಾಗಿ ತಳ್ಳಿಹಾಕಿದ್ದು, ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಬಿಜೆಪಿಯವರು ಪಕ್ಷಕ್ಕೆ ಸೇರಿಸಿಕೊಳ್ಳುವಾಗ ಜಾಮೂನು ಕೊಡ್ತಾರೆ, ನಂತರ ವಿಷ ಕೊಡ್ತಾರೆ | ಶಾಸಕ ಎಸ್.ಟಿ.ಸೋಮಶೇಖರ್
ಎನ್ಡಿಎ ಸೇರುವ ಜೆಡಿ(ಎಸ್) ನಿರ್ಧಾರಕ್ಕೆ ಕೇರಳ ಸಿಎಂ ಒಪ್ಪಿಗೆ ಇದೆ ಎಂದು ದೇವೇಗೌಡರು ಪತ್ರಿಕಾಗೋಷ್ಠಿಯಲ್ಲಿ ಹೇಳಿಕೊಂಡಿದ್ದು ಕಳೆದ ತಿಂಗಳು ಮತ್ತೊಂದು ವಿವಾದಕ್ಕೆ ಕಾರಣವಾಗಿತ್ತು. ಆದರೆ ಈ ಹೇಳಿಕೆಯನ್ನು ಪಿಣರಾಯಿ ವಿಜಯನ್ ತೀವ್ರವಾಗಿ ಖಂಡಿಸಿದ್ದರು ಮತ್ತು ನಿರಾಕರಿಸಿದ್ದರು.
ಕರ್ನಾಟಕದಲ್ಲಿ ಜೆಡಿಎಸ್ನ ರಾಜ್ಯ ನಾಯಕತ್ವದ ಕೆಲವು ಸಭೆಗಳ ಹೊರತಾಗಿಯೂ, ದೇವೇಗೌಡರ ನಿರ್ಧಾರವನ್ನು ಪಕ್ಷದ ಕರ್ನಾಟಕ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ವಿರೋಧಿಸಿದ್ದರು. ಇದರ ನಂತರ ದೇವೇಗೌಡ ಅವರು ಕರ್ನಾಟಕದ ರಾಜ್ಯ ಘಟಕದ ಸಮಿತಿಯನ್ನು ವಿಸರ್ಜಿಸಿದ್ದರು. ಈ ಎಲ್ಲಾ ಬೆಳವಣಿಗೆಯಿಂದ ಅಸಮಾಧಾನಗೊಂಡಿರುವ ಸಿಕೆ ನಾಣು ನ.15ರಂದು ತಿರುವನಂತಪುರದಲ್ಲಿ ಸಭೆ ಕರೆದಿದ್ದಾರೆ.
ಸಿ.ಕೆ. ನಾಣು ಅವರು ಕರೆದಿರುವ ಸಭೆಯ ಬಗ್ಗೆ ನನಗೆ ತಿಳಿದಿಲ್ಲ ಎಂದು ಮ್ಯಾಥ್ಯೂ ಟಿ. ಥಾಮಸ್ ಹೇಳಿದ್ದಾರೆ. ಹೀಗಾಗಿ ಕೇರಳ ಜೆಡಿಎಸ್ ಘಟಕದಲ್ಲಿ ಕೃಷ್ಣನ್ಕುಟ್ಟಿ ನೇತೃತ್ವದ ಬಣ ಮತ್ತು ನಾಣು ನೇತೃತ್ವದ ಬಣ ಬೇರೆ ಬೇರೆ ವಿರುದ್ಧ ದಿಕ್ಕಿನಲ್ಲಿದೆ ಎಂಬುವುದು ಬಹಿರಂಗವಾಗಿದೆ.
ವಿಡಿಯೊ ನೋಡಿ: ನಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸಿಸಿಡಿದೆದ್ದ ಗ್ರಾಮ ಪಂಚಾಯಿತಿ ನೌಕರರು Janashakthi Media