ಜೆಡಿಎಸ್ – ಬಿಜೆಪಿ ಸೀಟು ಮಾತುಕತೆ | ಯಾವುದೆ ಕಾರಣಕ್ಕೂ ಮಂಡ್ಯ ಬಿಟ್ಟುಕೊಡಲ್ಲ ಎಂದ ಸುಮಲತಾ

ಬೆಂಗಳೂರು: ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆ ಕುರಿತ ಮಾತುಕತೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡುವ ಬಗ್ಗೆ ವರದಿ ಹರಡಿರುವ ವೇಳೆ ಮಂಡ್ಯದ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಅವರು ಗುರುವಾರ ಇಲ್ಲಿ ತಮ್ಮ ಬೆಂಬಲಿಗರ ಕ್ಷಿಪ್ರ ಸಭೆ ನಡೆಸಿ ಮಂಡ್ಯ ಕ್ಷೇತ್ರವನ್ನು ಯಾವುದೆ ಕಾರಣಕ್ಕೂ ಕೈ ಬಿಡುವುದಿಲ್ಲ ಎಂದು ಘೋಷಿಸಿದ್ದಾರೆ.

ಬಿಜೆಪಿಯು ತನ್ನ ಕ್ಷೇತ್ರವನ್ನು ಉಳಿಸಿ ತನ್ನನ್ನು ಅಭ್ಯರ್ಥಿಯನ್ನಾಗಿ ಮಾಡಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಅದು ಆಗದಿದ್ದರೆ, ತಾನು ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಅಥವಾ ಕಾಂಗ್ರೆಸ್‌ನ ಪ್ರಸ್ತಾಪವನ್ನು ಪರಿಗಣಿಸುವುದಾಗಿ ಅವರು ಸೂಚಿಸಿದ್ದಾರೆ. ಈ ಮೂಲಕ ತಾನು ಕಾಂಗ್ರೆಸ್ ಪಕ್ಷದಿಂದ ಆಹ್ವಾನ ಸ್ವೀಕರಿಸಿದ್ದಾಗಿ ಅವರು ಒಪ್ಪಿಕೊಂಡಿದ್ದಾರೆ ಎಂದು TNIE ವರದಿ ಹೇಳಿದೆ.

ಇದನ್ನೂ ಓದಿ: ಗಾಂಧಿ ಹುತಾತ್ಮ ದಿನ | ಸೌಹಾರ್ದ ಕರ್ನಾಟಕದಿಂದ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಮಾನವ ಸರಪಳಿ

“ರಾಜಕೀಯ ನನಗೆ ಅನಿವಾರ್ಯವಲ್ಲ, ಆದರೆ ನಾಲ್ಕು ಚುನಾವಣೆಗಳಲ್ಲಿ ಭಾರಿ ಅಂತರದಿಂದ ಗೆದ್ದ ನನ್ನ ಪತಿ ಅಂಬರೀಶ್ ಅವರ ಪರಂಪರೆಯನ್ನು ನಾನು ಮುಂದುವರಿಸಬೇಕಾಗಿದೆ. ನಾನೂ ಕೂಡ ಮಂಡ್ಯ ಜನತೆಯ ಪ್ರೀತಿಯಿಂದ ಭಾರಿ ಅಂತರದಿಂದ ಗೆದ್ದಿದ್ದೇನೆ. ನಾನು ಬೇರೆ ಕ್ಷೇತ್ರಕ್ಕೆ ತೆರಳಿದರೆ ಅದು ಅರ್ಥಹೀನ. ಹಾಲಿ ಸಂಸದರನ್ನೇ ಟಿಕೆಟ್‌ಗೆ ಪರಿಗಣಿಸಬೇಕು, ಈ ರೀತಿಯ ಸಂಪ್ರದಾಯ ಎಲ್ಲಾ ರಾಜಕೀಯ ಪಕ್ಷದ ರೂಢಿಗತ ಅಭ್ಯಾಸವಾಗಿದೆ. ನನ್ನ ಕ್ಷೇತ್ರವನ್ನು ಬಿಜೆಪಿ ಉಳಿಸಿಕೊಳ್ಳುತ್ತದೆ” ಎಂದು ಅವರು ಹೇಳಿದ್ದಾರೆ.

ಬಿಜೆಪಿ ಜಿಲ್ಲಾಧ್ಯಕ್ಷ ಇಂದ್ರೇಶ್, ಮಾಜಿ ಸಚಿವ ಡಾ.ನಾರಾಯಣಗೌಡ ಸೇರಿದಂತೆ ಹಲವರು ಈ ಸಭೆಯಲ್ಲಿ ಭಾಗವಹಿಸಿದ್ದರು ಎಂದು ವರದಿಯಾಗಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ನಾರಾಯಣ ಗೌಡ ಅವರು, ಜೆಡಿಎಸ್ ಮಂಡ್ಯ ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟುಕೊಡಬೇಕು. ವಿಧಾನಸಭೆ ಚುನಾವಣೆಯಲ್ಲಿ ತನ್ನ ಮತಗಳಿಕೆಯನ್ನು ಸುಧಾರಿಸುವ ಮೂಲಕ ಪಕ್ಷವು ಇಲ್ಲಿ ಬೆಳೆಯುತ್ತಿದೆ ಎಂದು ಹೇಳಿದ್ದಾರೆ. “ಸುಮಲತಾ ಅವರು ಮಂಡ್ಯದಿಂದ ಸ್ಪರ್ಧಿಸಲು ಮನಸ್ಸು ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಅಭಿವೃದ್ಧಿಯ ಸಾಧನೆಗಳು ಮತ್ತು ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನೆಯಿಂದಾಗಿ ಅವರ ಗೆಲುವು 1,000% ರಷ್ಟು ಖಚಿತವಾಗಿದೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಇಂಡಿಯಾ ಮೈತ್ರಿ ಕೂಟದಿಂದ ನಿತೀಶ್ ಕುಮಾರ್ ಹೊರಕ್ಕೆ? ಮತ್ತೆ ಬಿಜೆಪಿ ಜೊತೆ ದೋಸ್ತಿ ಸಾಧ್ಯತೆ!

2019 ರಲ್ಲಿ, ಸುಮಲತಾ ಅವರು ಸ್ವತಂತ್ರವಾಗಿ ಸ್ಪರ್ಧಿಸಿದ್ದರು, ಜೊತೆಗೆ ಬಿಜೆಪಿ ಅವರ ವಿರುದ್ಧ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸಿರಲಿಲ್ಲ. ಆದರೆ ಅಂದಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಅವರು ಸುಮಲತ ಅವರ ವಿರುದ್ಧ ಸ್ಪರ್ಧಿಸಿ ಸೋತಿದ್ದರು. ಈ ವೇಳೆ ಕೆಲವು ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು, ಅದರಲ್ಲೂ ವಿಶೇಷವಾಗಿ ಅವರ ಅಂಬರೀಶ್ ಅವರ ಅಭಿಮಾನಿಗಳು ಕೂಡಾ ಸುಮಲತಾ ಅವರಿಗೆ ಬೆಂಬಲ ನೀಡಿದ್ದರು.

ಇತ್ತೀಚಿನ ವಿಧಾನಸಭಾ ಚುನಾವಣೆಗೆ ಮುನ್ನ ಸುಮಲತಾ ಅವರು ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಅಲ್ಲದೆ ಮಂಡ್ಯದ ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳಿಗೆ ತಮ್ಮ ಬೆಂಬಲ ನೀಡಿದ್ದರು. ಇದೀಗ ಬಿಜೆಪಿ ಜೊತೆಗಿನ ಮೈತ್ರಿಯ ಭಾಗವಾಗಿ ಜೆಡಿಎಸ್ ಮೂರು ಸ್ಥಾನ ಗಿಟ್ಟಿಸಿಕೊಳ್ಳಲು ಮುಂದಾಗಿದೆ. ಆಂತರಿಕ ಸಮೀಕ್ಷಾ ವರದಿಯಲ್ಲಿ ತನ್ನ ಅಭ್ಯರ್ಥಿಗಳಿಗೆ ಗೆಲುವು ಖಚಿತವಾಗಿಸಿಕೊಳ್ಳಲು, ಒಕ್ಕಲಿಗ ಭದ್ರಕೋಟೆಯಾದ ಹಾಸನ ಹೊರತುಪಡಿಸಿ ಮಂಡ್ಯ ಕ್ಷೇತ್ರವನ್ನು ಕೇಳುತ್ತಿದೆ. ಮೂಲಗಳ ಪ್ರಕಾರ ಕುಮಾರಸ್ವಾಮಿ ಕೂಡ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಲು ಬಯಸಿದ್ದಾರೆ ಎಂದು ವರದಿಯಾಗಿದೆ.

ವಿಡಿಯೊ ನೋಡಿ: ಗಣತಂತ್ರ 75 : ಎತ್ತ ಚಲಿಸುತ್ತಿದೆ ಭಾರತ – ಸಾಂವಿಧಾನಿಕ ಸಂಸ್ಥೆಗಳ ಪಾತ್ರ – ಡಾ. ಎಲ್ ಹನುಮಂತಯ್ಯ

Donate Janashakthi Media

Leave a Reply

Your email address will not be published. Required fields are marked *