ಕ್ವಿಟ್‌ ಇಂಡಿಯಾ ನೆನಪು ; ಕೇಂದ್ರ ಸರ್ಕಾರದ ಕಾರ್ಮಿಕ – ರೈತ ವಿರೋಧಿ ನೀತಿಗಳ ವಿರುದ್ಧ ಜೆಸಿಟಿಯು ಪ್ರತಿಭಟನೆ

ಬೆಂಗಳೂರು: ಆಗಸ್ಟ್ 9 ರ ಕ್ವಿಟ್ ಇಂಡಿಯಾ ಚಳವಳಿ ನೆನಪಿನಲ್ಲಿ ಕಾರ್ಮಿಕರು, ರೈತರು, ಕೂಲಿಕಾರ ಸಂಘಟನೆಗಳು ಕೇಂದ್ರ ಸರ್ಕಾರದ ವಿರುದ್ಧ ರಾಷ್ಟ್ರವ್ಯಾಪಿ ಧರಣಿ ನಡೆಸಿದ್ದಾರೆ.

ಅಖಿಲ ಭಾರತ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ರಾಷ್ಟ್ರ ವ್ಯಾಪಿ ಮಹಾಧರಣಿಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಕರ್ನಾಟಕದಲ್ಲೂ ಈ ಮಹಾಧರಣಿಯನ್ನು ಬೆಂಬಲಿಸಿ ಮೆರವಣಿಗೆ, ಪ್ರತಿಭಟನೆಗಳು ನಡೆದಿವೆ. ಮೋದಿ ಸರ್ಕಾರ ಜನವಿರೋಧಿಯಾಗಿದ್ದು, ಆ ಸರ್ಕಾರವನ್ನು 2024ರ ಲೋಕಸಭಾ ಚುನಾವಣೆಯಲ್ಲಿ ಸೋಲಿಸಬೇಕು. ಆ ಮೂಲಕ ದೇಶವನ್ನು ಹಾಗೂ ದೇಶದ ಜನರನ್ನು ನಾವು ರಕ್ಷಿಸಲು‌ ಮುಂದಾಗಬೇಕು ಎಂದು ಧರಣಿನಿರತರು ಪ್ರತಿಜ್ಞೆಗೈದಿದ್ದಾರೆ.

ಕರ್ನಾಟಕದಲ್ಲಿ ಜೆಸಿಟಿಯು ನೇತೃತ್ವದಲ್ಲಿ ಹಾಸನ, ಬೆಂಗಳೂರು, ಉತ್ತರ ಕನ್ನಡ, ವಿಜಯಪುರ, ಬಳ್ಳಾರಿ, ತುಮಕೂರು, ರಾಯಚೂರು ಜಿಲ್ಲೇ ಸೇರಿದಂತೆ ಅನೇಕ ಕಡೆಗಳಲ್ಲಿ ಪ್ರತಿಭಟನೆ ನಡೆದಿದೆ. ಕೇಂದ್ರದ 9 ವರ್ಷಗಳ ಬಿಜೆಪಿ ಸರ್ಕಾರದ ಕಡೆ ಹೊರಳಿ ನೋಡಿದರೆ ಜನಸಾಮಾನ್ಯರ ಜೀವನ ಮತ್ತು ಜೀವನೋಪಾಯದ ಮೇಲೆ ಮರಣಾಂತಿಕ ದಾಳಿಯನ್ನು ಎಸೆಗಿರುವುದು ನಮಗಿಂದು ವೇದ್ಯವಾಗುತ್ತಿದೆ. ಸಂಕಷ್ಟಗಳ ಸರಮಾಲೆಯನ್ನೇ ಜನರಿಗೆ ಉಡುಗೊರೆಯಾಗಿ ಕೇಂದ್ರ ಸರ್ಕಾರ ನೀಡಿದೆ ಎಂದು ಪ್ರತಿಭಟನೆಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಅಖಿಲ ಭಾರತ ಮುಷ್ಕರ: ರಾಜ್ಯದ ವಿವಿಧೆಡೆ ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನೆ

ನಿರುದ್ಯೋಗ ಪೆಡಂಭೂತದಂತೆ ಹೆಚ್ಚುತ್ತಿದೆ. ನೋಟುಗಳ ಅಮಾನ್ಯಕರಣದ ತರುವಾಯ ಜನರು ಅಂಚಿಗೆ ತಳ್ಳಲ್ಪಟ್ಟರು ಕಪ್ಪು ಹಣ ಬಿಳಿಯಾಯಿತೇ ವಿನಹ ಇನ್ನೇನು ಆಗಿಲ್ಲ ಈ ಕುರಿತು ಸತ್ಯ ಹೊರಬರಲು ಕೇಂದ್ರ ಸರಕಾರ ಶ್ವೇತಾ ಪತ್ರ ಹೊರಡಿಸಬೇಕಾಗಿದೆ. ಬಡತನದ ಹೆಚ್ಚಳವಾಗಿ ಆರ್ಥಿಕ ಕುಸಿತ ತಲೆದೋರಿದ್ದು ನಿರುದ್ಯೋಗ ಹೆಚ್ಚಳದಿಂದಾಗಿ ಯುವಕರು ಹತಾಶರಾಗಿದ್ದಾರೆ. ಅಸಹನೀಯವಾದ ಬೆಲೆ ಏರಿಕೆ ಒಂದೆಡೆಯಾದರೆ ವೇತನ ಹೆಚ್ಚಳವಿಲ್ಲದೆ ನಿರ್ಗತಿಕತನದಿಂದಾಗಿ ಹಸಿವಿನ ಸೂಚ್ಯಂಕ ಅಪಾಯಕಾರಿ ಮಟ್ಟಕ್ಕೆ ಕುಸಿದಿದೆ. ಕೇಂದ್ರ ಸರ್ಕಾರದ ಅಧೀನದಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿ ಬಿದ್ದಿವೆ. ಸಾರ್ವಜನಿಕ ಉದ್ದಿಮೆಗಳನ್ನು ಬಿಡಿಗಾಸಿಗೆ ಖಾಸಗಿಯವರಿಗೆ ಮಾಡಲಾಗುತ್ತಿದ್ದು ಅವರು ದೊಡ್ಡ ಸಂಖ್ಯೆಯಲ್ಲಿ ನೌಕರರನ್ನು ವಜಾಗೊಳಿಸುತ್ತಿದ್ದಾರೆ ಎಂದು ಪ್ರತಿಭಟನೆಕಾರರು ದೂರಿದ್ದಾರೆ.

ಗುತ್ತಿಗೆ ಆಧಾರದಲ್ಲಿ ನೇಮಕಾತಿಯನ್ನು ಮಾಡಿಕೊಂಡು ಶಾಸನಬದ್ಧ ಸೌಲಭ್ಯ ಗಳಾದ ಪಿಎಫ್‌, ಇಎಸ್‌ಐ ಮತ್ತು ಕನಿಷ್ಠ ವೇತನ ನೀಡದೆ ಕಾರ್ಮಿಕರನ್ನು ವಂಚಿಸಲಾಗುತ್ತಿದೆ. ಕೋಪಿಡ್ ಸಾಂಕ್ರಾಮಿಕ ಪಿಡುಗಿನ ತರುವಾಯ ಜೀವನೋಪಾಯವೇ ಸಂಕಷ್ಟದಲ್ಲಿರುವಾಗ ಮತ್ತೆ ಸರಿದಾರಿಗೆ ತರಲು ಮದ್ಯ ಪ್ರವೇಶಿಸಬೇಕಾದ ಸರ್ಕಾರ ಕೈ ಚೆಲ್ಲಿದೆ. ದೆಹಲಿಯ ಹೊರವಲಯದಲ್ಲಿ ಒಂದು ವರ್ಷಗಳ ಕಾಲ ನಡೆದ ರೈತರ ಹೋರಾಟಕ್ಕೆ ಮಣಿದ ಕೇಂದ್ರ ಸರ್ಕಾರ ಅವರಿಗೆ ಕೊಟ್ಟ ಮಾತಿನಿಂದ ಹಿಂದೆ ಸರಿದು ನಂಬಿಕೆ ದ್ರೋಹ ಮಾಡಿ ವಚನಭ್ರಷ್ಟವಾಗಿದೆ ಎಂದು ಆರೋಪಿಸಿದ್ದರೆ.

ಸಮಸ್ಯೆಗಳು ಮುಗಿಲೆತ್ತರಕ್ಕೆ ಬೆಳೆದಿರುವಾಗ ಕಾರ್ಮಿಕ ವರ್ಗದ ಬೇಡಿಕೆಗಳಿಗೆ ಸ್ಪಂದಿಸದೆ ಕೇಂದ್ರ ಸರ್ಕಾರ ಬಹಿರಂಗವಾಗಿ ಕಾರ್ಪೊರೇಟ್ ಕಂಪನಿಗಳ ಪರವಾಗಿ ನಿಂತಿದೆ. ಅವ ರಿಗೆ ಸಹಾಯ ಮಾಡಲು ಇತ್ತೀಚೆಗೆ ಫ್ಯಾಕ್ಟರಿ ಕಾಯ್ದೆಗೆ ತಿದ್ದುಪಡಿ ತಂದು ದಿನದ ದುಡಿತದ ಅವಧಿಯನ್ನು 12 ಗಂಟೆಗಳಿಗೆ ಹೆಚ್ಚಿಸಿದೆ. ಕಾರ್ಮಿಕ ಸಮುದಾಯ ಹಲವಾರು ತ್ಯಾಗ ಬಲಿದಾನ ಹೋರಾಟಗಳಿಂದ ಗಳಿಸಿರುವ ಕಾರ್ಮಿಕ ಕಾಯ್ದೆಗಳನ್ನು ರದ್ದುಗೊಳಿಸಿ, ಲೇಬರ್ ಕೋಡನ್ನು ತರಲಾಗಿದೆ. ಇದು ಕಾರ್ಮಿಕ ವರ್ಗಕ್ಕೆ ಮಾರಕವಾಗಿದೆ. ಕಾರ್ಪೊರೇಟ್ ಕಂಪನಿಗಳಿಗೆ ಲಕ್ಷಾಂತರ ಕೋಟಿ ರೂಪಾಯಿಗಳ ರಿಯಾಯಿತಿಗಳನ್ನು ಘೋಷಿಸಲಾಗಿದ್ದು, ಅವರ ಸಾಲಗಳನ್ನು ಮನ್ನಾಮಾಡಲಾಗಿದೆ ಎಂದು ಪ್ರತಿಭಟನೆಕಾರರು ಆರೋಪಿಸಿದರು.

 

 

Donate Janashakthi Media

Leave a Reply

Your email address will not be published. Required fields are marked *