ಪೂಂಚ್: ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನಲ್ಲಿ ಭಾರತೀಯ ಸೈನಿಕರು ಮತ್ತು ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಒಬ್ಬ ಸೇನಾ ಅಧಿಕಾರಿ ಮತ್ತು ನಾಲ್ವರು ಸೈನಿಕರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಉಗ್ರರ ಒಳನುಸುಳುವಿಕೆ ತಡೆಯುವ ನಿಟ್ಟಿನಲ್ಲಿ ಈ ಘಟನೆ ಸಂಭವಿಸಿದ್ದು, ಪೂಂಚ್ ಜಿಲ್ಲೆಯ ಸುರಂಕೊಟೆಯ ಡಿಕೆಜಿ ಹತ್ತಿರ ಗ್ರಾಮವೊಂದರಲ್ಲಿ ಸೇನಾ ಕಾರ್ಯಾಚರಣೆ ವೇಳೆ ಉಗ್ರರು ಮತ್ತು ಯೋಧರ ನಡುವೆ ಗುಂಡಿನ ಚಕಮಕಿ ನಡೆದಿದೆ. ಇಂದು ನಸುಕಿನ ಜಾವದಿಂದ ತೀವ್ರ ಪ್ರಮಾಣದ ಗುಂಡಿನ ದಾಳಿ ನಡೆದಿದೆ.
ಇದನ್ನು ಓದಿ: ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿ: 7 ಜನರ ಸಾವು
ಗುಪ್ತಚರ ಇಲಾಖೆಯ ಮಾಹಿತಿ ಮೇರೆಗೆ ಉಗ್ರರ ಇರುವಿಕೆ ಬಗ್ಗೆ ಮಾಹಿತಿ ಪಡೆದ ಯೋಧರು ಪ್ರದೇಶವನ್ನು ಸುತ್ತುವರಿದು ಶೋಧ ಕಾರ್ಯ ಆರಂಭಿಸಿದರು. ಈ ವೇಳೆ ಎನ್‌ಕೌಂಟರ್ ನಡೆದಿದೆ ಎಂದು ರಕ್ಷಣಾ ಇಲಾಖೆ ವಕ್ತಾರರು ತಿಳಿಸಿದ್ದಾರೆ.
ಸುರಂಕೋಟೆಯಲ್ಲಿ ಉಗ್ರರು ಅಡಗಿದ್ದರೆಂದು ಮಾಹಿತಿ ಹಿನ್ನೆಲೆಯಲ್ಲಿ ಸೇನೆ ಕಾರ್ಯಾಚರಣೆ ಶುರು ಮಾಡಿತು ಮೂರ್ನಾಲ್ಕು ಉಗ್ರರು ಅಲ್ಲಿ ಅಡಗಿ ಕುಳಿತಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದರಿಂದ ಸೇನೆಯು ಆ ಪ್ರದೇಶವನ್ನು ಸುತ್ತುವರಿದವು. ಸೇನಾ ಕಾರ್ಯಾಚರಣೆ ಚುರುಕುಗೊಳ್ಳುತ್ತಿದ್ದಂತೆಯೇ ಉಗ್ರರು ಮನಸೋ-ಇಚ್ಛೆ ಗುಂಡಿನ ದಾಳಿ ನಡೆಸಿದರು. ಇದರಿಂದಾಗಿ ಹಿರಿಯ ಅಧಿಕಾರಿ ಸೇರಿದಂತೆ ನಾಲ್ವರು ಇತರೆ ಶ್ರೇಣಿ ಯೋಧರು ಗಂಭೀರವಾಗಿ ಗಾಯಗೊಂಡು ಪ್ರಾಣ ಬಿಟ್ಟಿದ್ದಾರೆ.
ಸುರಂಕೋಟೆ ಉಪವಿಭಾಗದ ಅರಣ್ಯ ಪ್ರದೇಶದಿಂದ ಉಗ್ರರು ಒಳನುಸುಳಿರುವ ಶಂಕೆಯಿದೆ ಎಂದು ಭದ್ರತಾ ಪಡೆಗಳು ಶಂಕಿಸಿವೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ನಿಯಂತ್ರಣ ರೇಖೆ (ಎಲ್‌ಒಸಿ) ಯಿಂದ ನುಸುಳಲು ಯಶಸ್ವಿಯಾದ ನಂತರ ಚಾಮರ್ ಅರಣ್ಯದಲ್ಲಿ ಭಾರೀ ಶಸ್ತ್ರಸಜ್ಜಿತ ಭಯೋತ್ಪಾದಕರ ಗುಂಪು ಇರುವುದರ ಬಗ್ಗೆ ವರದಿಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದಕ್ಕೂ ಮುನ್ನ ಅನಂತ್ ನಾಗ್ ಮತ್ತು ಬಂಡಿಪೊರಾ ಜಿಲ್ಲೆಗಳಲ್ಲಿ ನಡೆದಿದ್ದ ಎನ್ ಕೌಂಟರ್ ಗಳಲ್ಲಿ ಇಬ್ಬರು ಉಗ್ರರ ಹತ್ಯೆಯಾಗಿತ್ತು.