ತ್ರಿವರ್ಣ ಧ್ವಜ ನಿರಾಕರಿಸಿ ವಿವಾದಕ್ಕೆ ಸಿಲುಕಿದ ಜೈಶಾ

ನವದೆಹಲಿ:  ಪಾಕಿಸ್ತಾನ ಮತ್ತು ಭಾರತದ ನಡುವಿನ ಪಂದ್ಯಾವಳಿಯ ಗೆಲುವಿನ ಸಂಭ್ರಮಾಚರಣೆಯಲ್ಲಿ ಬಿಸಿಸಿಐ ಕಾರ್ಯದರ್ಶಿ ಜೈ ಶಾ ಭಾರತೀಯ ತ್ರಿವರ್ಣ ಧ್ವಜ ಹಿಡಿಯಲು ನಿರಾಕರಿಸಿರುವುದು ವಿವಾದಕ್ಕೀಡಾಗಿದೆ.

ಆಗಸ್ಟ್ 28 ರಂದು ದುಬೈನಲ್ಲಿ ನಡೆದ ಏಷ್ಯಾ ಕಪ್-2022ರ ಪಂದ್ಯಾವಳಿಯಲ್ಲಿ ರವೀಂದ್ರ ಜಡೇಜಾ ಮತ್ತು ಹಾರ್ದಿಕ್ ಪಾಂಡ್ಯ ಅವರ ಜೋಡಿಯ ಸಹಾಯದಿಂದ ಭಾರತ ಪಾಕಿಸ್ತಾನವನ್ನು ಐದು ವಿಕೆಟ್‍ಗಳಿಂದ ಸೋಲಿಸಿದಾಗ ಕ್ರೀಡಾಂಗಣದಲ್ಲಿ ಭಾರೀ ಕರತಾಡನ ಕೇಳಿ ಬಂತು.

ಅಭಿಮಾನಿಗಳು ಚಪ್ಪಾಳೆ ತಟ್ಟಿ ತಮ್ಮ ಅಭಿಮಾನವನ್ನು ಮೆರೆದರು. ಈ ಸಂದರ್ಭದಲ್ಲಿ ಜೈ ಶಾ ಕೂಡ ಎದ್ದು ನಿಂತು ಚಪ್ಪಾಳೆ ತಟ್ಟುತ್ತಿರುವಾಗ ಪಕ್ಕದಲ್ಲಿದ್ದ ವ್ಯಕ್ತಿಯೊಬ್ಬರು ಭಾರತದ ತ್ರಿವರ್ಣ ಧ್ವಜವನ್ನು ಜೈ ಶಾ ಅವರಿಗೆ ನೀಡಲು ಮುಂದಾಗಿದ್ದಾರೆ. ಆದರೆ ಧ್ವಜ ಹಿಡಿಯಲು ನಿರಾಕರಿಸಿದ ಜೈ ಶಾ ಚಪ್ಪಾಳೆ ತಟ್ಟುತ್ತಾ ಸಂಭ್ರಮಾಚರಣೆಯನ್ನು ಮುಂದುವರೆಸಿದ್ದಾರೆ. ಆ ಕ್ಷಣಕ್ಕೆ ಜೈ ಶಾ ಮೇಲೆ ಪೋಕಸ್ ಆಗಿದ್ದ ಕ್ಯಾಮರಾ ಅಲ್ಲಿಂದ ಪಕ್ಕಕ್ಕೆ ತಿರುಗಿದ್ದು, ಅಲ್ಲಿ ಯುವತಿಯೊಬ್ಬರು ತ್ರಿವರ್ಣ ಧ್ವಜವನ್ನು ಹೊದ್ದು ಸಂಭ್ರಮಿಸುತ್ತಿರುವುದು ಕಾಣುತ್ತಿದೆ.

ಈ ವಿಡಿಯೋವನ್ನು ಕಾಂಗ್ರೆಸ್ ಮತ್ತು ಟಿಆರ್‌ಎಸ್ ಪಕ್ಷಗಳು ಟ್ವೀಟ್ ಮಾಡುವ ಮೂಲಕ ಆಕ್ರೋಶ ಹೊರಹಾಕಿವೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಹಲವು ನೆಟ್ಟಿಗರು ಜೈ ಶಾ ವರ್ತನೆಯನ್ನು ಖಂಡಿಸಿದ್ದಾರೆ.

ಕಾಂಗ್ರೆಸ್‍ನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ವಿಡಿಯೋ ಷೇರ್ ಮಾಡಿದ್ದು, ನನ್ನ ಬಳಿ ಅಪ್ಪ ಇದ್ದಾರೆ. ತ್ರಿವರ್ಣ ಧ್ವಜ ನಿಮ್ಮ ಬಳಿಯೇ ಇಟ್ಟುಕೊಳ್ಳಿ ಎಂದು ಕ್ಯಾಪ್ಷನ್ ನೀಡಿದ್ದಾರೆ.

ಟಿಆರ್‌ಎಸ್ ಸಾಮಾಜಿಕ ಮಾಧ್ಯಮ ಮುಖ್ಯಸ್ಥ ಕೃಷ್ಣನ್ ಟ್ವೀಟ್ ಮಾಡಿ, ಆರ್‌ಎಸ್ಎಸ್ 52 ವರ್ಷಗಳ ಕಾಲ ಧ್ವಜವನ್ನು ಒಪ್ಪದೆ ತಿರಸ್ಕಾರ ಮಾಡಿತ್ತು. ಈಗ 75 ವರ್ಷಗಳ ಬಳಿಕವೂ ಜೈ ಶಾ ತ್ರಿವರ್ಣ ಧ್ವಜ ಹಿಡಿಯಲು ನಿರಾಕರಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಬಹಳಷ್ಟು ಜನ ನೆಟ್ಟಿಗರು ಈ ಘಟನೆಯನ್ನು ಖಂಡಿಸಿದ್ದು, ಒಂದು ವೇಳೆ ಬಿಜೆಪಿಯೇತರ ವ್ಯಕ್ತಿಗಳು ಈ ರೀತಿ ತ್ರಿವರ್ಣ ಧ್ವಜವನ್ನು ನಿರಾಕರಿಸಿದ್ದರೆ ಗೋದಿ ಮಿಡಿಯಾಗಳು ಈ ವೇಳೆಗಾಗಲೇ, ಅಬ್ಬರಿಸುತ್ತಿದ್ದವು. ಭಾರೀ ಟೀಕೆಗಳು ಕೇಳಿ ಬರುತ್ತಿದ್ದವು. ಧ್ವಜ ನಿರಾಕರಿಸಿದ ವ್ಯಕ್ತಿಯನ್ನು ದೇಶ ದ್ರೋಹಿ, ದೇಶ ವಿರೋಧಿ ಎಂದು ಬಿಂಬಿಸಲಾಗುತ್ತಿತ್ತು. ಮಾಧ್ಯಮಗಳಲ್ಲಿ ಗಂಟೆಗಟ್ಟಲೆ ಪ್ಯಾನಲ್ ಚರ್ಚೆಗಳು ನಡೆಯುತ್ತಿದ್ದವು ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *