ಖ್ಯಾತ ಕಾದಂಬರಿಕಾರ ಸಲ್ಮಾನ್ ರಶ್ದಿ ಮೇಲಿನ ದಾಳಿ; ಸಾಹಿತಿಗಳು-ಗಣ್ಯರು  ಖಂಡನೆ

ನವದೆಹಲಿ: ಭಾರತ ಮೂಲದ ಖ್ಯಾತ ಕಾದಂಬರಿಕಾರ ಸಲ್ಮಾನ್ ರಶ್ದಿ ಮೇಲಿನ ದಾಳಿಯ ಬಗ್ಗೆ ಹಲವು ಗಣ್ಯರು ಸಾಮಾಜಿಕ ಜಾಲತಾಣಗಳಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ. ಪಶ್ಚಿಮ ನ್ಯೂಯಾರ್ಕ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಶುಕ್ರವಾರ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿತಗೊಳಿಸಿದನು. ತಕ್ಷಣವೇ ರಶ್ದಿ ನೆಲಕ್ಕೆ ಕುಸಿದುಬಿದ್ದಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ.

ದಾಳಿ ಘಟನೆಯನ್ನು ಖಂಡಿಸಿರುವ ಚಿತ್ರ ಸಾಹಿತಿ ಜಾವೇದ್ ಅಖ್ತರ್ ಟ್ವೀಟ್‌ ಮಾಡಿ ‘ಸಲ್ಮಾನ್ ರಶ್ದಿಯವರ ಮೇಲೆ ಕೆಲವು ಮತಾಂಧರು ನಡೆಸಿದ ದಾಳಿಯನ್ನು ನಾನು ಖಂಡಿಸುತ್ತೇನೆ. ನ್ಯೂಯಾರ್ಕ್‌ ಪೊಲೀಸರು ಮತ್ತು ನ್ಯಾಯಾಲಯವು ದಾಳಿಕೋರನ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ’ ಎಂದಿದ್ದಾರೆ.

ಬಾಂಗ್ಲಾದೇಶದ ಲೇಖಕಿ ತಸ್ಲೀಮಾ ನಸ್ರೀನ್‌ ‘ಸಲ್ಮಾನ್ ರಶ್ದಿ ಅವರ ಮೇಲೆ ನ್ಯೂಯಾರ್ಕ್‌ನಲ್ಲಿ ದಾಳಿ ನಡೆದಿದೆ ಎಂಬ ಸಂಗತಿ ತಿಳಿದು ನನಗೆ ಆಘಾತವಾಗಿದೆ. ಹೀಗಾಗುತ್ತದೆ ಎಂದು ನಾನು ಎಂದಿಗೂ ಯೋಚಿಸಿರಲಿಲ್ಲ. ಅವರು ಪಶ್ಚಿಮ ನ್ಯೂಯಾರ್ಕ್‌ನಲ್ಲಿ ವಾಸಿಸುತ್ತಿದ್ದರು. 1989ರಿಂದ ಅವರಿಗೆ ರಕ್ಷಣೆ ನೀಡಲಾಗಿತ್ತು. ಅವರ ಮೇಲೆ ನಡೆದಿರುವ ದಾಳಿಯ ಅರ್ಥ ಇಸ್ಲಾಂ ಧರ್ಮವನ್ನು ಟೀಕಿಸುವವರ ಮೇಲಿನ ದಾಳಿ ಎಂದರ್ಥ. ಈ ಬಗ್ಗೆ ನಾನು ಚಿಂತಿತಳಾಗಿದ್ದೇನೆ’ ಎಂದು ಟ್ವೀಟ್ ಮಾಡಿದ್ದಾರೆ.

‘ಚಾಕು ಇರಿತದಿಂದ ಸಂಪೂರ್ಣವಾಗಿ ಗಾಯಗೊಂಡಿರುವ ಸಲ್ಮಾನ್ ರಶ್ದಿ ಅವರು ಶೀಘ್ರ, ಸಂಪೂರ್ಣ ಚೇತರಿಸಿಕೊಳ್ಳಲಿ. ಅವರ ಮುಂದಿನ ಜೀವನ ಮೊದಲಿನಂತೆ ಇರುವುದಿಲ್ಲ. ಸೃಜನಾತ್ಮಕ ಅಭಿವ್ಯಕ್ತಿಯು ಇನ್ನು ಮುಂದೆ ಮುಕ್ತವಾಗಿರುವುದಿಲ್ಲ ಎಂಬುದು ದುಃಖಕರ ಸಂಗತಿ’ ಎಂದು ಸಂಸದ ಶಶಿ ತರೂರ್ ಟ್ವೀಟ್ ಮಾಡಿದ್ದಾರೆ.

ಸಲ್ಮಾನ್ ರಶ್ದಿ ಅವರ ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥನೆ ಮಾಡೋಣ. ರಶ್ದಿ ಅವರ ಮೇಲಿನ ದಾಳಿ ಖಂಡನೀಯ ಎಂದು ನಟಿ ಸ್ವರಾ ಭಾಸ್ಕರ್ ಟ್ವೀಟ್ ಮಾಡಿದ್ದಾರೆ.

ಷಟೌಕ್ವಾ ಇನ್‌ಸ್ಟಿಟ್ಯೂಟ್‌ನ ವೇದಿಕೆಗೆ ಸಲ್ಮಾನ್‌ ರಶ್ದಿ ಭಾಷಣಕ್ಕೆ ಆಗಮಿಸುತ್ತಿದ್ದಂತೆಯೇ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದನು. ಸಲ್ಮಾನ್ ರಶ್ದಿ ಅವರನ್ನು ಕೃತಕ ಉಸಿರಾಟ ವ್ಯವಸ್ಥೆಯಲ್ಲಿ ಇರಿಸಲಾಗಿದೆ. ಅವರು ಒಂದು ಕಣ್ಣನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ಮತ್ತು ಅವರ ಯಕೃತ್ತು ಸಹ ಹಲ್ಲೆಯಿಂದ ಹಾನಿಗೊಳಗಾಗಿದೆ ಎಂದು ಅವರ ಏಜೆಂಟ್ ತಿಳಿಸಿದ್ದಾರೆ.

ಸಲ್ಮಾನ್ ರಶ್ದಿ ಅವರನ್ನು ಚಾಕುವಿನಿಂದ ಇರಿದಿದ್ದ ಹದಿ ಮತರ್‌ ಎಂಬಾತನನ್ನು ನ್ಯೂಯಾರ್ಕ್ ಪೊಲೀಸರು ಬಂಧಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *