ಬೆಂಗಳೂರು, ಜ 07 : ಜಾತಿ ವ್ಯವಸ್ಥೆಯಲ್ಲಿ ಬೆವರು ಹರಿಸದವರಿಗೆ ಮಣೆ ಹಾಕಲಾಗುತ್ತಿದೆ ಎಂದು ನಿವೃತ್ತ ನ್ಯಾಯಮೂರ್ತಿ ಜಸ್ಟೀಸ್ ಎಚ್.ಎನ್ ನಾಗಮೋಹನ್ ದಾಸ ಆಕ್ರೋಶ ವ್ಯಕ್ತಪಡಿಸಿದರು. ಅವರು ಬೆಂಗಳೂರಿನ ಕೊಂಡಜ್ಜಿ ಬಸ್ಸಪ್ಪ ಸಭಾಂಗಣದಲ್ಲಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಹಮ್ಮಿಕೊಂಡಿದ್ದ ” ಜಾತಿ ದಮನ ವಿರೋಧಿಸಿ ದಲಿತರ ಹಕ್ಕುಗಳಿಗಾಗಿ ಒತ್ತಾಯಿಸಿ” ರಾಜ್ಯ ಮಟ್ಟದ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಜಾತಿ ವ್ಯವಸ್ಥೆಯಲ್ಲಿ ವರ್ಗ ಅಸಮಾನತೆ ಜೊತೆಗೆ ಸಾಮಾಜಿಕ, ಆರ್ಥಿಕ, ರಾಜಕೀಯ ಸೇರಿದಂತೆ ಎಲ್ಲ ರಂಗದಲ್ಲೂ ಅಸಮಾನತೆ ಕಾಣುತ್ತಿದ್ದೇವೆ ಇದರಿಂದ ಕೆಲವರಿಗೆ ಲಾಭವಿದೆ. ಬೆವರು ಸುರಿಸಿ ದುಡಿಯವ ಜನರು ಒಂದೋತ್ತಿನ ಊಟಕ್ಕಾಗಿ ಪರದಾಡಿದರೆ, ಬೆವರನ್ನೇ ಸುರಿಸದ, ಯಾವುದೇ ರೀತಿಯ ಕಷ್ಟವನ್ನೇ ನೋಡೊದ ಜನರು ಇಂತಹ ವ್ಯವಸ್ಥೆಯ ಲಾಭ ಪಡೆಯುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ವ್ಯವಸ್ಥೆಯನ್ನು ಮುಂದುವರೆಸುವುದಕ್ಕಾಗಿ ಈ ಬೆವರು ಹರಿಸದ ವರ್ಗ ಇಂತಹ ವ್ಯವಸ್ಥೆಯನ್ನು ನಿರಂತರವಾಗಿ ಹುನ್ನಾರ ನಡೆಸುತ್ತಿದ್ದಾರೆ. ಈ ಅಸಮಾನತೆಗೆ ಅನೇಕ ರೀತಿಯ ಕಂದಾಚಾರ ಮೂಢನಂಬಿಕೆಯ ಬಣ್ಣ ಬಳಿದು ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಇದಕ್ಕೆ ಧರ್ಮ ಜಾತಿಯ ಲೇಪನ ಬಳಿದು ಜನತೆಯ ಮೇಲೆ ಬಲವಂತವಾಗಿ ಜಾತಿಯ ಅಫೀಮುನ್ನು ಹೇರುತ್ತಿದ್ದಾರೆ. ಇನ್ನು ಈ ವ್ಯವಸ್ಥೆಯಿಂದ ತೊಂದರೆಗಳನ್ನು ಅನುಭವಿಸಿದ ವರ್ಗ ನಿರಂತರವಾಗಿ ಇತಿಹಾಸದುದ್ದಕ್ಕೂ ಧ್ವನಿ ಎತ್ತಿದ್ದಾರೆ. ಜಾತಿ ಅಸಮಾನತೆ ವಿರುದ್ದವಾಗಿ ಬುದ್ದನ ಕಾಲದಲ್ಲಿ, ಬಸವಣ್ಣನ ಕಾಲದಲ್ಲಿ, ಭಕ್ತಿ ಪಂಥ, ದಾಸ ಪಂಥಗಳಲ್ಲಿ ಇದರ ವಿರುದ್ದ ದೊಡ್ಡ ಪ್ರಮಾಣದಲ್ಲಿ ಧ್ವನಿ ಎತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಎಐಎಡಬ್ಯೂಯು (AIAWU) ನ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಬಿ.ವೆಂಕಟ್ ಮಾತನಾಡಿ ನಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಮತ್ತು ನ್ಯಾಯವನ್ನು ಪಡೆದುಕೊಳ್ಳಲು ಚಳುವಳಿ ಬಲಗೊಳಿಸಬೇಕು. ಕೂಲಿಕಾರರು ಮತ್ತು ದಲಿತರ ಹಕ್ಕುಗಳನ್ನು ರಕ್ಷಿಸಲು ಪ್ರಭಲ ಚಳುವಳಿಯನ್ನು ಕಟ್ಟಿ ಆಳುವ ಸರಕಾರಗಳ ಮೇಲೆ ಒತ್ತಡ ಹೇರಬೇಕು. ನಾವು ನೆಮ್ಮದಿಯಾಗಿ ಇರುವಂತೆ ಮಾಡುವ ಶಕ್ತಿ, ಬಲ ಚಳುವಳಿಗೆ ಇದೆ ಎಂದು ಅವರು ಕರೆ ನೀಡಿದರು.
ಸಂಘದ ರಾಜ್ಯಾಧ್ಯಕ್ಷ ನಿತ್ಯಾನಂದ ಸ್ವಾಮಿ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯ ಮೇಲೆ ಮುಖಂಡರಾದ ಚಂದ್ರಪ್ಪ ಹೊಸ್ಕೇರಾ, ಬಿ. ಮಾಳಮ್ಮ, ಗೋಪಾಲಕೃಷ್ಣ ಅರಳಹಳ್ಳಿ, ಜಿ.ಎನ್. ನಾಗರಾಜ, ಪಟ್ಟಮಾದು, ಮಲ್ಲಮ್ಮ ಕೊಡ್ಲಿ, ಹನುಮೇಗೌಡ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಪ್ರತಿನಿಧಿಗಳ ಭಾಗವಹಿಸಿದ್ದರು.