ಜಾತಿ ಆಧಾರದಲ್ಲಿ ಮೀಸಲಾತಿಗೆ ವಿರೋಧವಿದೆ – ಕೇಂದ್ರ ಸಚಿವ ಸದಾನಂದಗೌಡ

ಪುತ್ತೂರು,ಫೆ.22: ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡುವ ವಿಚಾರ ಕುರಿತಂತೆ ಈ ತನಕ ಕೇಂದ್ರದ ಗಮನಕ್ಕೆ ಬಂದಿಲ್ಲ. ಜಾತಿ ಆಧಾರದಲ್ಲಿ ಮೀಸಲಾತಿ ಕೊಡುವುದಕ್ಕೆ ವೈಯಕ್ತಿಕವಾಗಿ ನನ್ನ ವಿರೋಧವಿದೆ ಎಂದು ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಡಿ. ವಿ.ಸದಾನಂದ ಗೌಡ ಪ್ರತಿಕ್ರಿಯೆ ನೀಡಿದ್ದಾರೆ.

ಅವರು ಪುತ್ತೂರಿನಲ್ಲಿ ನಡೆದ ರಾಯಲ್ ಸಹಕಾರಿ ಸಂಘದ ಸನ್ಮಾನ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಲು ಆಗಮಿಸಿದ್ದರು. ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡುವ ವಿಚಾರ ಈವರೆಗೆ ಕೇಂದ್ರದ ಗಮನಕ್ಕೆ ಬಂದಿಲ್ಲ. ಅಲ್ಲದೆ ಈ ವಿಚಾರದ ಬಗ್ಗೆ ಕೇಂದ್ರ ನಾಯಕರು ಈವರೆಗೂ ಚರ್ಚೆಯನ್ನೂ ನಡೆಸಿಲ್ಲ. ಯಾರು ಆರ್ಥಿಕವಾಗಿ ಹಿಂದುಳಿದಿದ್ದಾರೋ ಅವರಿಗೆ ಅವಕಾಶಗಳು ದೊರೆಯಬೇಕಿದೆ ಎನ್ನುವುದು ನನ್ನ ಅಪೇಕ್ಷೆಯಾಗಿದೆ. ಪ್ರಸ್ತುತ ಸನ್ನಿವೇಶದಲ್ಲಿ ಜಾತಿ ಆಧಾರದಲ್ಲಿ ಮೀಸಲಾತಿ ನೀಡಿದಲ್ಲಿ ಸಾಮಾಜಿಕ ಪರಿವರ್ತನೆ ಕಷ್ಟಸಾಧ್ಯ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಜಾತಿ ಆಧಾರಿತ ಮೀಸಲು ಕೇಳುವ ಹೊಸ ಪ್ರಕ್ರಿಯೆ ಶುರುವಾಗಿದ್ದು, ಈ ವ್ಯವಸ್ಥೆ ಸಾಮಾಜಿಕ ಪರಿವರ್ತನೆಗೆ ಮಾರಕವಾಗಿದೆ ಎಂದರು. ಮೀಸಲು ಪಡೆದು ಉನ್ನತ ಸ್ಥಾನಕ್ಕೆ ತಲುಪಿದವರು ತನ್ನ ಸಮಾಜದ ಏಳಿಗೆಯನ್ನು ಮರೆಯುತ್ತಾರೆ. ಸಮಾಜ ಹಿಂದೆ ಬಿದ್ದು, ವ್ಯಕ್ತಿ ಮಾತ್ರ ಮುಂದೆ ಹೋಗುವಂತಹ ವ್ಯವಸ್ಥೆಗಳು ಆಗುತ್ತಿವೆ. ಇಂಥಹ ಘಟನೆಗಳು ಸಾಕಷ್ಟು ನಮ್ಮ ಮುಂದಿದೆ. ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರದ ಹಿರಿಯರು ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಜಾತಿ ಆಧಾರದಲ್ಲಿ ಮೀಸಲಾತಿ ನೀಡುವುದಕ್ಕೆ ನನ್ನ ವಿರೋಧವಿದೆ ಎಂದು ಅವರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು. ನನ್ನ ಅಭಿಪ್ರಾಯವನ್ನು ಕೇಂದ್ರ ನಾಯಕರ ಗಮನಕ್ಕೂ ತರಲಿದ್ದೇನೆ ಎಂದರು.

ಮೀಸಲಾತಿ ಬದಲಾವಣೆ ವಿಚಾರಕ್ಕೆ ರಾಜ್ಯದಲ್ಲಿ ಎರಡು ಪ್ರಭಲ ಜಾತಿಗಳು ನಿರಂತರವಾಗಿ ಹೋರಾಟ ನಡೆಸುತ್ತಿವೆ. ಪಂಚಮಸಾಲಿ ಮೀಸಲಾತಿ ಬದಲಾವಣೆಗೆ ಬಿಜೆಪಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವ ನೀಡಿದ್ದರೆ, ಕುರುಬರ ಮೀಸಲಾತಿ ಬದಲಾವಣೆಗೆ ಸಚಿವ ಕೆ.ಎಸ್. ಈಶ್ವರಪ್ಪ ನೇತೃತ್ವ ವಹಿಸಿದ್ದಾರೆ. ಈಗ ಅವರದ್ದೆ ಪಕ್ಷದ ಕೇಂದ್ರ ಸಚಿವರು ಈ ರೀತಿ ಹೇಳಿಕೆ ನೀಡುತ್ತಿರುವುದು ಅಚ್ಚರಿಯುಂಟು ಮಾಡಿದೆ. ಮೀಸಲಾತಿ ಬದಲಾವಣೆ ಹೋರಾಟ ಸ್ಥಾನಮಾನಕ್ಕಾಗಿ ಅಲ್ಲ, ರಾಜಕೀಯ ಲಾಭಕ್ಕಾಗಿ ಎಂಬುದು‌ ಸದಾನಂದಗೌಡರ ಹೇಳಿಕೆಯಿಂದ ಸ್ಪಷ್ಟವಾಗಿದೆ.

Donate Janashakthi Media

Leave a Reply

Your email address will not be published. Required fields are marked *