ಬೆಂಗಳೂರು: ರಾಜ್ಯದ ವಿಧಾನಮಂಡಲದ ಬಜೆಟ್ ಅಧಿವೇಶನದಲ್ಲಿ ಚರ್ಚೆಯಲ್ಲಿ ಭಾಗವಹಿಸಿದ ಕಾಂಗ್ರೆಸ್ ಶಾಸಕ ಬಸವನಗೌಡ ತುರುವಿಹಾಳ್, ಹಲವು ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಇನ್ನೂ ಮಾಡದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಶ್ನೋತ್ತರ ಕಲಾಪದಲ್ಲಿ ಸರಕಾರಕ್ಕೆ ಕೇಳಿದರು.
ಕಾಂಗ್ರೆಸ್ ಶಾಸಕರ ಪ್ರಶ್ನೆಗೆ ಉತ್ತರಿಸಿದ ಕಂದಾಯ ಸಚಿವ ಆರ್ ಅಶೋಕ್, ರಾಜ್ಯದಲ್ಲಿ 3499 ದಾಖಲೆ ರಹಿತ ಜನವಸತಿ ಗ್ರಾಮಗಳ ಪೈಕಿ 632 ಗ್ರಾಮಗಳಿಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ. ಲಂಬಾಣಿ ತಾಂಡಾ, ಗೊಲ್ಲರಹಟ್ಟಿ, ವಡ್ಡರಹಟ್ಟಿ, ಕುರುಬರಹಟ್ಟಿ, ನಾಯಕರ ಹಟ್ಟಿ,ಮಜರೇ ಗ್ರಾಮ, ಹಾಡಿ, ದೊಡ್ಡಿ, ಪಾಳ್ಯ, ಕ್ಯಾಂಪ್ ಕಾಲೋನಿ ಇತರೆ ದಾಖಲೆ ರಹಿತ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಬೇಕು. ಕಂದಾಯ ಗ್ರಾಮಗಳೆಂದು ಘೋಷಿಸಲು 8-9 ತಿಂಗಳು ಹಿಡಿಯುತ್ತವೆ. 1041 ಗ್ರಾಮಗಳಿಗೆ ಅಂತಿಮ ಅಧಿಸೂಚನೆ ಹೊರಡಿಸಿ ಕಂದಾಯ ಗ್ರಾಮಗಳಾಗಿ ಘೋಷಣೆ ಮಾಡಲಾಗಿದೆ ಎಂದು ಆರ್.ಅಶೋಕ್ ತಿಳಿಸಿದರು.
ಈ ವೇಳೆ ವಡ್ಡರಪಾಳ್ಯ, ಮಾದಿಗರ ಹಳ್ಳಿಗಳಂತಹ ಜಾತಿಸೂಚಕ ಗ್ರಾಮಗಳ ಹೆಸರು ಬದಲಾಯಿಸುವಂತೆ ಶಾಸಕ ಕೆ.ಆರ್. ರಮೇಶ್ ಕುಮಾರ್ ಒತ್ತಾಯ ಮಾಡಿದರು. ಇದನ್ನು ತೆಗೆದು ಹಾಕಲು ನಿಮ್ಮ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ಕೊಡಿ . ಇದಕ್ಕೆ ಹೆಚ್ಚಿನ ಸಮಯ ಬೇಕಾಗುವುದಿಲ್ಲ. ಇದೆಲ್ಲ ಕೇವಲ ಕೆಲವೇ ದಿನಗಳು ನಡೆಯುವ ಪ್ರಕ್ರಿಯೆ ಎಂದರು.
ಇದೇ ವೇಳೆ, ಉಪಗ್ರಹ ಮೂಲಕ ನಕ್ಷೆ ತಯಾರಿಸಿ ಕಂದಾಯ ಗ್ರಾಮಗಳಾಗಿ ಗುರುತಿಸಲು ಶಾಸಕ ಅಶೋಕ್ ನಾಯ್ಕ ಸಲಹೆ ನೀಡಿದರು. ಶಾಸಕ ಪಿ.ರಾಜೀವ್, ಕೇಂದ್ರ ಸರ್ಕಾರ ಸ್ವಾಮಿತ್ವ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯನ್ನು ಬಳಸಿಕೊಂಡು ಕಂದಾಯ ಗ್ರಾಮಗಳನ್ನು ಗುರುತಿಸಬಹುದು. ಈಗಾಗಲೇ ರಾಯಚೂರು ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಇದು ಯಶಸ್ವಿಯಾಗಿದೆ. ಇದನ್ನು ರಾಜ್ಯಾದ್ಯಂತ ಬಳಸಿಕೊಳ್ಳಬೇಕು ಎಂದರು.
ಸದಸ್ಯರ ಸಲಹೆಯಂತೆ ಉಪಗ್ರಹ ನಕ್ಷೆ ಬಳಸುವ ಬಗ್ಗೆ ಹಾಗೂ ಜಾತಿಸೂಚಕ ಗ್ರಾಮಗಳ ಹೆಸರುಗಳ ಬದಲಾವಣೆಗೂ ಕ್ರಮ ಕೈಗೊಳ್ಳುವೆ. ನಾನು ಕಂದಾಯ ಸಚಿವನಾದ ಮೇಲೆ ರಾಜ್ಯದ ಯಾವುದೇ ಭಾಗದಲ್ಲೂ ಸ್ಮಶಾನಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಸಾಮಾನ್ಯರು ಹೀಗೆ ತಾರತಮ್ಯ ಮಾಡದೆ ಎಲ್ಲರಿಗೂ ಏಕರೀತಿಯ ಸ್ಮಶಾಸನವನ್ನು ನೀಡಿದ್ದೇವೆ ಎಂದು ಸ್ಪಷ್ಟಪಡಿಸಿದರು.