- ಜಾತಿ, ಧರ್ಮ ಲೆಕ್ಕಿಸದೆ ಮದುವೆಯಾಗುವುದು ವಯಸ್ಕ ವ್ಯಕ್ತಿಯ ಮೂಲಭೂತ ಹಕ್ಕು
ಬೆಂಗಳೂರು: ತನಗಿಷ್ಟವಾದ ಯುವಕ/ಯುವತಿಯನ್ನು ಜಾತಿ, ಧರ್ಮ ಲೆಕ್ಕಿಸದೆ ಮದುವೆಯಾಗುವುದು ವಯಸ್ಕ ವ್ಯಕ್ತಿಯ ಮೂಲಭೂತ ಹಕ್ಕು, ಇಂತಹುದ್ದೊಂದು ಸ್ವಾತಂತ್ರ್ಯವನ್ನು ನಮ್ಮ ಸಂವಿಧಾನ ನೀಡುತ್ತದೆ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.
ಜಸ್ಟೀಸ್ ಎಸ್. ಸುಜಾತಾ ಹಾಗೂ ಸಚಿನ್ ಶಂಕರ್ ಮಗದಮ್ ನೇತೃತ್ವದ ದ್ವಿಸದಸ್ಯ ಪೀಠ ವಜೀದ್ ಖಾನ್ ಎಂಬಾತ ತನ್ನ ಪ್ರೇಯಸಿ ರಮ್ಯಾರನ್ನು ಬಂಧನದಿಂದ ಮುಕ್ತಗೊಳಿಸುವಂತೆ ಕೋರಿ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ವೇಳೆ ಇಂತಹುದ್ದೊಂದು ತೀರ್ಪು ನಿಡಿದ್ದಾರೆ.
ಒಂದೆಡೆ ಕರ್ನಾಟಕ ಸರ್ಕಾರ ಲವ್ ಜಿಹಾದ್ ತಡೆಯುವ ಸಲುವಾಗಿ ಕಾನೂನು ಜಾರಿಗೊಳಿಸುವ ಸಿದ್ಧತೆಯಲ್ಲಿರುವಾಗಲೇ ನ್ಯಾಯಾಲಯ ಇಂತಹುದ್ದೊಂದು ತೀರ್ಪು ನೀಡಿರುವುದು ಭಾರೀ ಮಹತ್ವ ಪಡೆದುಕೊಂಡಿದೆ.
ಸದ್ಯ ವಿದ್ಯಾರಣ್ಯಪುರದ ಮಹಿಳಾ ದಕ್ಷತಾ ಸಮಿತಿಯಲ್ಲಿ ಉಳಿದುಕೊಂಡಿರುವ ರಮ್ಯಾ, ತನ್ನ ಹೆತ್ತವರು ತಾನಿಷ್ಟಪಟ್ಟ ಹುಡುಗ(ಅರ್ಜಿದಾರ)ನೊಂದಿಗೆ ಮದುವೆಯಾಗಲು ಬಿಡದೆ ತನಗೆ ಸಂವಿಧಾನ ನೀಡುವ ಸ್ವಾತಂತ್ರ್ಯದ ಹಕ್ಕಿಗೆ ಅಡ್ಡಿಯಾಗುತ್ತಿದ್ದಾರೆ ಎಂದು ದೂರಿದ್ದಾರೆ. ಅಲ್ಲದೇ ತಾನು ಅರ್ಜಿದಾರ ಹಾಗೂ ತನ್ನ ಸಹೋದ್ಯೋಗಿಯೂ ಆಗಿರುವ ವಜೀದ್ ಖಾನ್ರನ್ನು ಮದುವೆಯಾಗಲು ಇಚ್ಛಿಸಿದ್ದೇನೆ. ಇದಕ್ಕೆ ವಜೀದ್ ಖಾನ್ ತಾಯಿಯೂ ಒಪ್ಪಿಗೆ ನೀಡಿದ್ದಾರೆ. ಆದರೆ ತನ್ನ ತಂದೆ ತಾಯಿ ಇದಕ್ಕರೆ ಅಡ್ಡಿಪಡಿಸುತ್ತಿದ್ದಾರೆಂದು ತಿಳಿಸಿದ್ದಾರೆ.
ಹೀಗಿರುವಾಗ ಕೋರ್ಟ್ ರಮ್ಯಾ ಓರ್ವ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದು, ಆಕೆ ತನ್ನ ಜೀವನದ ಬಗ್ಗೆ ನಿರ್ಧರಿಸುವ ಕ್ಷಮತೆ ಹಾಗೂ ಹಕ್ಕು ಹೊಂದಿದ್ದಾಳೆಂದು ತಿಳಿಸಿದೆ ಹಾಗೂ ಮಹಿಳಾ ದಕ್ಷತಾ ಸಮಿತಿಗೆ ಆಕೆಯನ್ನು ಬಿಡುವತೆ ಸೂಚಿಸಿದೆ.
ಇತ್ತೀಚೆಗಷ್ಟೇ ಅಲಹಾಬಾದ್ ಕೋರ್ಟ್ ಕೂಡಾ ಪ್ರಕರಣವೊಂದರ ವಿಚಾರಣೆ ನಡೆಸುತ್ತಾ ಧರ್ಮವನ್ನು ಲೆಕ್ಕಿಸದೆ ವಪ್ರತಿಯೊಬ್ಬ ವಯಸ್ಕ ವ್ಯಕ್ತಿಗೂ ತನ್ನ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಮೂಲಭೂತ ಹಕ್ಕು ಇದೆ ಎಂದಿತ್ತು.