ಮಹದೇಶ್ವರ ಬೆಟ್ಟ ವ್ಯಾಪ್ತಿಯಲ್ಲಿ ಜಾನುವಾರುಗಳ ಸಾಕಾಣಿಕೆಗೆ ಕಡಿವಾಣ: ಅರಣ್ಯ ಇಲಾಖೆ ವಿರುದ್ಧ ರೈತರ ಆಕ್ರೋಶ

ಚಾಮರಾಜನಗರ : ಕೃಷಿಯೊಂದಿಗೆ ಹೈನುಗಾರಿಕೆ ಮಾಡಿಕೊಂಡು ಜೀವನ ಸಾಗಿಸುತ್ತಿರುವ ರೈತರಿಗೆ ಇದೀಗ ಸಮಸ್ಯೆಯೊಂದು ಎದುರಾಗಿದ್ದು, ಅರಣ್ಯ ಇಲಾಖೆ ನಿರ್ಧಾರದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿದಿದ್ದಾರೆ. ಮಹದೇಶ್ವರ ಬೆಟ್ಟದ ಸುತ್ತಲಿನ ಗ್ರಾಮಗಳಿಗೆ ಭೇಟಿ ನೀಡಿದ್ದ ಕೇಂದ್ರ ಹುಲಿ ಯೋಜನೆ ಅಧಿಕಾರಿಗಳು ಈ ಭಾಗದಲ್ಲಿ ಹೆಚ್ಚು ಜಾನುವಾರು ಇರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಇಲ್ಲಿ ಹೆಚ್ಚು ಹಸು ಸಾಕಬಾರದು. ತಪ್ಪಿದರೆ, ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದ್ದಾರೆ.

ಚಾಮರಾಜನಗರ ಜಿಲ್ಲೆ ಅಭಿವೃದ್ಧಿಯಲ್ಲಿ ಸಾಕಷ್ಟು ಹಿಂದುಳಿದ ಜಿಲ್ಲೆಯಾಗಿದ್ದು, ವ್ಯವಸಾಯ ಮಾಡಿಕೊಂಡಿರುವ ರೈತರಿಗೆ ವ್ಯವಸಾಯದಿಂದಲೇ ಆದಾಯದ ಕೊರತೆಯನ್ನು ಎದುರಿಸುತ್ತಿದ್ದಾರೆ. ಹಾಗಾಗಿ ಅಲ್ಲಿಇಲ್ಲಿ ಒಂದಷ್ಟು ಜಾನುವಾರುಗಳನ್ನು ಸಾಕುವ ಮೂಲಕ ಒಂದಷ್ಟು ಆದಾಯದ ಮೂಲ ಕಂಡುಕೊಂಡಿದ್ದಾರೆ. ಆದರೆ ಇದಕ್ಕೂ ಈಗ ಕಾನೂನುಗಳ ಮೂಲಕ ನಿಯಂತ್ರಣ ಮಾಡಲು ಮುಂದಾಗುತ್ತಿದ್ದಾರೆ.

ಸಾಗುವಳಿಗೆ ಬೇಕಾಗುವಷ್ಟು ಜಾನುವಾರುಗಳನ್ನು ಇಟ್ಟುಕೊಳ್ಳಬೇಕು ಹೆಚ್ಚುವರಿಯಾಗಿರುವ ಹಸುಗಳು ಸೇರಿದಂತೆ ಇತರ ಜಾನುವಾರಗಳನ್ನು ಸ್ಥಳಾಂತರ ಮಾಡಿ ಎಂದು ಅರಣ್ಯ ಇಲಾಖೆ ಆದೇಶ ಹೊರಡಿಸಿದೆ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಇಲ್ಲಿ ಹೆಚ್ಚು ಹಸು ಸಾಕಬಾರದು. ತಪ್ಪಿದರೆ, ಕಾನೂನು ಕ್ರಮ ಜರುಗಿಸಲಾಗುವುದು ಎಂಬ ಎಚ್ಚರಿಕೆಯನ್ನೂ ಸಹ ಅರಣ್ಯ ಇಲಾಖೆ ನೀಡಿದೆ. ಇದು ಯಾವ ರೀತಿಯ ಕಾನೂನು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಆತಂಕ ವ್ಯಕ್ತಪಡಿಸಿದ್ದಾರೆ.

ಮಲೈಮಹದೇಶ್ವರ ವನ್ಯಜೀವಿಧಾಮದ ಗೋಪಿನಾಥಂ ವಲಯದ ಅರಣ್ಯ ಅಧಿಕಾರಿಗಳು ಹೊರಡಿಸಿರುವ ಈ ಆದೇಶದ ಹಿಂದ ಎರಡು ದಿನಗಳ ಕಾಲ ಪ್ರವಾಸ ಕೈಗೊಂಡಿದ್ದ ಟಿಆರ್ (ಕೇಂದ್ರ ಹುಲಿ ಯೋಜನೆ ಅಧಿಕಾರಿಗಳು) ತಂಡದವರು ಹೆಚ್ಚು ಜಾನುವಾರು ಇರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದೇ ಕಾರಣವಾಗಿದೆ.

ಅರಣ್ಯ ಇಲಾಖೆ ನೀಡುವ ಕಾರಣವೆಂದರೆ, ತಮಿಳುನಾಡಿನ ಜನರು ಅತಿಕ್ರಮವಾಗಿ ಪ್ರವೇಶ ಪಡೆಯುತ್ತಿದ್ದು ಅವರ ಓಡಾಟ ನಿಯಂತ್ರಣಕ್ಕೆ ಈ ನಿಯಮ ಜಾರಿಗೊಳಿಸಲಾಗಿದೆ ಎಂದು ಸಮಜಾಯಿಶಿ ನೀಡಿದೆ. ನಮ್ಮ ರೈತರು ದನಕರುಗಳ ಸಾಕುವುದಕ್ಕೂ ತಮಿಳುನಾಡಿನವರ ಅತಿಕ್ರಮಣ ಪ್ರವೇಶ ತಡೆಗೂ ಏನು ಸಂಬಂಧ ಎಂಬುದೇ ಪ್ರಶ್ನೆಯಾಗಿದೆ. ಅರಣ್ಯ ಇಲಾಖೆ ಕೂಡಲೇ ಈ ಮೂರ್ಖತನದ ಆದೇಶ ವಾಪಸ್ಸು ಪಡೆಯಬೇಕಿದೆ.

Donate Janashakthi Media

Leave a Reply

Your email address will not be published. Required fields are marked *