ಜನವರಿ 18-ಮಹಿಳಾ ರೈತ ದಿನಾಚರಣೆಗೆ ಮಹಿಳಾ ಸಂಘಟನೆಗಳ ಬೆಂಬಲ

ದೆಹಲಿ; ಜ, 11 : ಸಂಯುಕ್ತ ಕಿಸಾನ್‍  ಮೋರ್ಚಾ ತೀವ್ರಗೊಳಿಸಿರುವ ಹೋರಾಟದ ಭಾಗವಾಗಿ ಜನವರಿ 18ರಂದು ಮಹಿಳಾ ರೈತ ದಿನಾಚರಣೆ ನಡೆಸಲು ಕರೆ ನೀಡಿದೆ. ದೇಶದ ಆರು ಮಹಿಳಾ ಸಂಘಟನೆಗಳು ರೈತರ ಹೋರಾಟದೊಂದಿಗೆ ಸೌಹಾರ್ದ ವ್ಯಕ್ತಪಡಿಸುತ್ತ ದೇಶಾದ್ಯಂತ ಅದನ್ನು ಆಚರಿಸಲು ನಿರ್ಧರಿಸಿವೆ.

ಈ ಕುರಿತು ಒಂದು ಜಂಟಿ ಹೇಳಿಕೆ ನೀಡಿರುವ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ(ಎ.ಐ.ಡಿ.ಡಬ್ಲ್ಯು.ಎ), ರಾಷ್ಟ್ರೀಯ ಭಾರತೀಯ ಮಹಿಳಾ ಒಕ್ಕೂಟ(), ಅಖಿಲ ಭಾರತ ಪ್ರಗತಿಪರ ಮಹಿಳಾ ಸಂಘ (ಎ.ಐ.ಪಿ.ಡಬ್ಲ್ಯು.ಎ.), ಪ್ರಗತಿಶೀಲ್‍ ಮಹಿಳಾ ಸಂಘಟನ(ಪಿ.ಎಂ.ಎಸ್.), ಅಖಿಲ ಭಾರತ ಅಗ್ರಗಾಮಿ ಮಹಿಳಾ ಸಮಿತಿ(ಎ.ಐ.ಎ.ಎಂ.ಎಸ್.) ಮತ್ತು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ(ಎ.ಐ.ಎಂ.ಎಸ್.ಎಸ್.)  ಇದರಲ್ಲಿ ಆಹಾರ ಭದ್ರತೆ, ನಿರುದ್ಯೋಗ, ಆರೋಗ್ಯ ಸೌಕರ್ಯಗಳ ಲಭ್ಯತೆ, ವಲಸೆ ಕಾರ್ಮಿಕರಿಗೆ ಮತ್ತು ಮಹಿಳೆಯರಿಗೆ ನಗದು ವರ್ಗಾವಣೆ, ಆಳಗೊಳ್ಳುತ್ತಿರುವ ಕೃಷಿ ಬಿಕ್ಕಟ್ಟು, ಮತ್ತು ಕಾರ್ಮಿಕ-ವಿರೋಧಿ ಕಾರ್ಮಿಕ ಸಂಹಿತೆಗಳ ಪ್ರಶ್ನೆಗಳನ್ನೂ ಎತ್ತುವುದಾಗಿ ಹೇಳಿವೆ.

ಎಲ್ಲ ರಾಜ್ಯಗಳಲ್ಲಿ ಸಾವಿರಾರು ಮಹಿಳೆಯರು  ಅಂದು ರಾಜಭವನಗಳಿಗೆ ಮೆರವಣಿಗೆ, ರಾಜ್ಯ ಮತ್ತು ಜಿಲ್ಲಾ ಮಟ್ಟಗಳಲ್ಲಿ ಧರಣಿ ನಡೆಸಲಿದ್ದಾರೆ ಎಂದು ಈ ಸಂಘಟನೆಗಳು ಹೇಳಿವೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆಯೇರಿಕೆಗಳಿಂದ ತತ್ತರಿಸುತ್ತಿರುವ ಮಹಿಳೆಯರಿಗೆ ಆವಶ್ಯಕ ಸರಕುಗಳ ಕಾಯ್ದೆಯ ತಿದ್ದುಪಡಿಯಿಂದಾಗಿ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ. ಮೊಟಕುಗೊಂಡಿರುವ ಸಾರ್ವಜನಿಕ ವಿತರಣಾ ವ್ಯವಸ್ಥೆ ಕೂಡ ಅಸ್ತವ್ಯಸ್ತಗೊಂಡಿದೆ. ಡಿಸೆಂಬರಿನಿಂದ ಉಚಿತ ಆಹಾರಧಾನ್ಯಗಳ ವಿತರಣೆಯೂ ನಿಂತಿದೆ.

5ನೇ ರಾಷ್ಟ್ರೀಯ ಕುಟುಂಬ  ಆರೋಗ್ಯ ಸರ್ವೆಯ ಪ್ರಕಾರ 22ರಲ್ಲಿ 13 ರಾಜ್ಯಗಳಲ್ಲಿ ಮಕ್ಕಳ ಕುಂಠಿತ ಬೆಳವಣಿಗೆಯ ಪ್ರಮಾಣ ಕಳೆದ ನಾಲ್ಕು ವರ್ಷಗಳಲ್ಲಿ ಹೆಚ್ಚಿದೆ. ಕೊರೊನಾದಿಂದಾಗಿ ಶಾಲೆಗಳು ಮುಚ್ಚಿರುವುದರಿಂದ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟ ಸಿಗುತ್ತಿಲ್ಲ. ಐಸಿಡಿಎಸ್‍ ಸೇವೆಗಳಿಗೂ  ಬಾಧೆ ಉಂಟಾಗಿದೆ. ಇದರಿಂದಾಗಿ ಅಪೌಷ್ಟಿಕತೆ, ಹಸಿವು ಹೆಚ್ಚಲಿವೆ.

ಸರಕಾರ ಭರವಸೆ ನೀಡಿದ್ದರೂ ಮನರೇಗದಲ್ಲಿ  ಉದ್ಯೋಗಗಳು ಸಿಗುತ್ತಿಲ್ಲ. ಉದ್ಯೋಗ ಖಾತ್ರಿ ಯೋಜನೆಯನ್ನು ನಗರಗಳಿಗೂ ವಿಸ್ತರಿಸಬೇಕೆಂಬ ಕೊರೊನದ ಲಾಕ್‍ಡೌನಿನಿಂದಾಗಿ ಜೀವನಾಧಾರಗಳನ್ನು ಕಳಕೊಂಡ ಅಸಂಘಟಿತ ವಲಯದ ಮಹಿಳೆಯರ ಬೇಡಿಕೆಗೆ ಸರಕಾರ ಕಿವಿಗೊಟ್ಟಿಲ್ಲ. ಆರೋಗ್ಯಪಾಲನೆಯ ವ್ಯವಸ್ಥೆಯ ಖಾಸಗೀಕರಣ ಮತ್ತಷ್ಟು ಹೊರೆಗಳನ್ನು ಹಾಕಿದೆ.

ಕೊರೊನ ಸೋಂಕಿನಿಂದಾಗಿ ಉಲ್ಬಣಗೊಂಡಿರುವ ಸಂಕಟಗಳನ್ನು ಪರಿಹರಿಸಲು ಕ್ರಮಗಳನ್ನು ಯೋಚಿಸುವ ಬದಲು ಸರಕಾರ ಪರಿಸ್ಥಿತಿಯ ದುರುಪಯೋಗ ಪಡಿಸಿಕೊಂಡು ಮೂರು ಕೃಷಿ ಕಾಯ್ದೆಗಳಂತಹ ಕಾರ್ಪೊರೇಟ್‍ -ಪರ , ಜನ-ವಿರೋಧಿ ಅಜೆಂಡಾವನ್ನು ಮುಂದೊತ್ತುತ್ತಿದೆ

ರೈತರು ಒಂದೂವರೆ ತಿಂಗಳುಗಳಿಂದ ಈ ಮಾರಕ ಕೃಷಿ ಕಾಯ್ದೆಗಳನ್ನು ರದ್ದು ಮಾಡಬೇಕು, ರೈತರ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆಗಳನ್ನು ಕಾನೂನಾತ್ಮಕಗೊಳಿಸಬೇಕು ಎಂದು ದಿಲ್ಲಿಯ ಐದು ಗಡಿಗಳಲ್ಲಿ ಕೊರೆಯುವ ಚಳಿಯನ್ನೂ ಲೆಕ್ಕಿಸದೆ ನಡೆಯುತ್ತಿರುವ ಸತ್ಯಾಗ್ರಹದಲ್ಲಿ ಸಾವಿರಾರು ಮಹಿಳೆಯರು ಕೂಡ ಭಾಗವಹಿಸುತ್ತಿದ್ದಾರೆ. ಇದುವರೆಗೆ 60ಕ್ಕೂ ಹೆಚ್ಚು ಪ್ರತಿಭಟನಾಕಾರರ ಸಾವುಗಳು ಸಂಭವಿಸಿದರೂ ಮೋದಿ ಸರಕಾರ ರೈತರು ಬೇಡವೇ ಬೇಡ ಎನ್ನುತ್ತಿರುವ ಕಾಯ್ದೆಗಳನ್ನು ರದ್ದು ಮಾಡಲು ನಿರಾಕರಿಸುತ್ತ ತನ್ನ ಹೃದಯಹೀನತೆಯನ್ನು ಪ್ರದರ್ಶಿಸುತ್ತಿದೆ. ಆದ್ದರಿಂದ ಈ ಆರು ಮಹಿಳಾ ಸಂಘಟನೆಗಳು ತಾವು ಮಹಿಳಾ ರೈತರ ದಿನಾಚರಣೆಯಲ್ಲಿ ಭಾಗವಹಿಸಲು ನಿರ್ಧರಿಸಿರುವುದಾಗಿ  ಹೇಳಿವೆ.

 

Donate Janashakthi Media

Leave a Reply

Your email address will not be published. Required fields are marked *