ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ಮಹಿಳಾ ಸ್ವಸಹಾಯ ಗುಂಪು ಕಡ್ಡಾಯ: ಜನವಾದಿ ಮಹಿಳಾ ಸಂಘಟನೆ ಖಂಡನೆ

ಬೆಂಗಳೂರು: ಮಂಗಳೂರಿನಲ್ಲಿ ಹಮ್ಮಿಕೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿ ಯೋಜನೆಗಳ ಉದ್ಘಾಟನೆಗೆ ಪ್ರಧಾನ ಮಂತ್ರಿ ನರೇಂದ್ರಮೋದಿ ಭಾಗವಹಿಸುವ ಕಾರ್ಯಕ್ರಮಕ್ಕೆ ಸ್ತ್ರೀಶಕ್ತಿ ಸ್ವಸಹಾಯ ಗುಂಪಿನ ಮಹಿಳೆಯರನ್ನು ಸರ್ಕಾರಿ ಆದೇಶ ಹೊರಡಿಸಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ(ಎಐಡಿಡಬ್ಲ್ಯೂಎ) ತೀವ್ರ ಖಂಡಿಸಿ ಇದು ರಾಜಕೀಯ ದುರ್ಬಳಕೆ ಎಂದು ಟೀಕಿಸಿದೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ರಾಜ್ಯ ಅಧ್ಯಕ್ಷೆ ಮೀನಾಕ್ಷಿ ಬಾಳಿ, ಪ್ರಧಾನಮಂತ್ರಿ ಭಾಗವಹಿಸುವ ಕಾರ್ಯಕ್ರಮಕ್ಕೆ ಸ್ತ್ರೀಶಕ್ತಿ ಸ್ವಸಹಾಯ ಗುಂಪಿನ ಮಹಿಳೆಯರು ಕಡ್ಡಾಯವಾಗಿ ಭಾಗವಹಿಸಬೇಕು. ಮಹಿಳೆಯರನ್ನು ಪಾಲ್ಗೊಳಿಸಲು ಪಂಚಾಯಿತಿ ವ್ಯಾಪ್ತಿಯಲ್ಲಿ ಒಕ್ಕೂಟಗಳಿಗೆ ಬಸ್ ವ್ಯವಸ್ಥೆಯನ್ನು ಮಾಡಲಾಗುವುದೆಂದು ಮಂಗಳೂರು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿರುವುದು, ಸ್ತ್ರೀಶಕ್ತಿ ಸ್ವಸಹಾಯ ಗುಂಪಿನ ಮಹಿಳೆಯರನ್ನು ಬಿ.ಜೆ.ಪಿ ಪಕ್ಷದ ಮತಬ್ಯಾಂಕ್‌ ರಾಜಕಾರಣಕ್ಕೆ ಬಳಸುವ ಹುನ್ನಾರವಾಗಿದೆ ಎಂದಿದ್ದಾರೆ.

ಕೋವಿಡ್ ಸಾಂಕ್ರಾಮಿಕತೆಯ ಸಂದರ್ಭದಲ್ಲಿ ಜೀವ ಮತ್ತು ಜೀವನಾಧಾರಗಳನ್ನು ಕಳೆದುಕೊಂಡು ತೆಗೆದುಕೊಂಡ ಸಾಲಗಳ ಕಂತುಗಳನ್ನು ಮಹಿಳೆಯರು ಪಾವತಿಸಲಾಗದ ಸಂದರ್ಭದಲ್ಲಿ ಸಾಲಮನ್ನಾಗೆ ಒತ್ತಾಯಿಸಿ ದೇಶವ್ಯಾಪಿ ಹೋರಾಟಗಳು ನಡೆದರು ಲೆಕ್ಕಿಸದೇ ಕಾರ್ಪೋರೇಟ್ ವಲಯಕ್ಕೆ ಕೋಟ್ಯಾಂತರ ತೆರಿಗೆಯನ್ನು ಕೇಂದ್ರ ಸರ್ಕಾರ ಮನ್ನಾ ಮಾಡಿತು. ಮಹಿಳೆಯರು ಈಗಲೂ ರಾಜ್ಯವ್ಯಾಪಿಯಾಗಿ ಎಂ.ಎಫ್.ಐಗಳ ಅಪಮಾನ, ದೌರ್ಜನ್ಯಗಳನ್ನು ಎದುರಿಸಿದ್ದಾರೆ. ಅವರ ಸಮಸ್ಯೆಗಳಿಗೆ ಕವಡೆ ಕಿಮ್ಮತ್ತನ್ನು ನೀಡದ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಇಂದು ಅದೇ ಮಹಿಳೆಯರನ್ನು ರಾಜಕೀಯವಾಗಿ ದುರ್ಬಳಕೆ ಮಾಡಲೊರಟಿದೆ. ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳಲ್ಲಿರುವ ಅದೆಷ್ಟೋ ಮನೆಕೆಲಸ ಮಾಡುವ ಮಹಿಳೆಯರಿಗೆ, ಬೀದಿಬದಿ ವ್ಯಾಪಾರಿಗಳಿಗೆ ಇನ್ನಿತರೆ ಅಸಂಘಟಿತ ಮಹಿಳೆಯರಿಗೆ ಕೋವಿಡ್ ಪರಿಹಾರವೇ ಸಿಕ್ಕಿಲ್ಲ ಎಂದಿದ್ದಾರೆ.

ಈ ಹಿನ್ನಲೆಯಲ್ಲಿ ನರೇಂದ್ರಮೋದಿಯವರ ಕಾರ್ಯಕ್ರಮಕ್ಕೆ ಬಿ.ಜೆ.ಪಿಯ ಏಜೆಂಟರಂತೆ ಮಹಿಳೆಯರನ್ನು ಅಣಿನೆರೆಸುವ ರಾಜಕೀಯ ಪ್ರೇರಿತ ಆದೇಶವನ್ನು ಜಿಲ್ಲಾಡಳಿತದ ಮಾಡಿರುವುದು ಖಂಡಿಸಲಾಗಿದೆ. ಜಿಲ್ಲಾಧಿಕಾರಿಗಳು ಈ ದೇಶದ ಸಂವಿಧಾನ ಮತ್ತು ಕಾನೂನಿಗೆ ಬದ್ಧರಾಗಿರಬೇಕೇ ಹೊರತು ಆಳುವ ಸರ್ಕಾರಗಳಿಗಲ್ಲ ಎಂಬುದನ್ನು ನೆನಪಿಸಬಯಸುತ್ತೇವೆ ಮತ್ತು ಯಾವುದೇ ಕಾರಣಕ್ಕು ಮಹಿಳೆಯರನ್ನು ರಾಜಕೀಯ ದುರ್ಬಳಕೆ ಮಾಡಬಾರದೆಂದು ಎಚ್ಚರಿಸಿದೆ. ರಾಜಕೀಯ ಪ್ರೇರಿತ ಆದೇಶ ಹೊರಡಿಸಿರುವ ಜಿಲ್ಲಾಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಕರ್ನಾಟಕ ರಾಜ್ಯ ಸಮಿತಿಯು ಒತ್ತಾಯಿಸಿದೆ.

Donate Janashakthi Media

Leave a Reply

Your email address will not be published. Required fields are marked *