ಆದಾಯ ಪಾವತಿದಾರರೆಂದು ತಪ್ಪಾಗಿ ಭಾವಿಸಿ ಬಡವರ ಅನ್ನ ಕಸಿದ ಸರ್ಕಾರದ ಕ್ರಮಕ್ಕೆ ಜನವಾದಿ ಮಹಿಳಾ ಸಂಘಟನೆಯ ಖಂಡನೆ

ಬೆಂಗಳೂರು : ಪ್ಯಾನ್ ಕಾರ್ಡಿಗೆ ಆಧಾರ್ ಲಿಂಕ್ ಮಾಡಲು ವಿಳಂಬವಾಗಿದ್ದಕ್ಕೆ 1000-00 ರೂ.ದಂಡ ಪಾವತಿಸಿ ಆಧಾರ್- ಪ್ಯಾನ್ ಜೋಡಣೆ ಮಾಡಿಸಿದ ಬಡಜನರನ್ನೂ ಆದಾಯ ತೆರಿಗೆದಾರರೆಂದು ತಪ್ಪಾಗಿ ಭಾವಿಸಿ ಅವರ ಬಿ.ಪಿ.ಎಲ್ ಕಾರ್ಡ್ ರದ್ದು ಪಡಿಸಿರುವುದು ಜನವಿರೋಧಿ ಕ್ರಮವಾಗಿದೆ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯಾಧ್ಯಕ್ಷೆ ಮೀನಾಕ್ಷಿ ಬಾಳಿ,  ಪ್ರಧಾನ ಕಾರ್ಯದರ್ಶಿ ದೇವಿ ತಿಳಿಸಿದ್ದಾರೆ.

ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್‌ಗಳ ಜೋಡಣೆಯನ್ನು ಬಿ.ಪಿ.ಎಲ್. ಕಾರ್ಡ್ ದಾರರಿಗೂ ಕಡ್ಡಾಯಗೊಳಿಸಿದ್ದಲ್ಲದೇ ಅದಕ್ಕೆ ಅಂತಿಮ ದಿನದ ಗಡುವು ವಿಧಿಸಿ, ಅವಧಿ ಮೀರಿದೆ ಎಂದು ದಂಡ ಪಾವತಿ ಮಾಡುವಂತೆ ಕೇಂದ್ರದ ಒಕ್ಕೂಟ ಸರಕಾರ ಮಾಡಿದ ಅಮಾನವೀಯ ಕ್ರಮವನ್ನೂ ಅಂದೇ ಮಹಿಳಾ ಸಂಘಟನೆ ವಿರೋಧಿಸಿತ್ತು.

ಆ ಸಂದರ್ಭದಲ್ಲಿ ದಂಡ ಮಾತ್ರವಲ್ಲದೇ ಸೈಬರ್ ಸೆಂಟರ್ ಗಳಲ್ಲಿ ಜೋಡಣೆಗಾಗಿ ಶುಲ್ಕ ತೆರುವ ಅನಿವಾರ್ಯತೆಗೆ ಕೂಡಾ ಇದೇ ಬಡಜನರು ಒಳಗಾಗಿದ್ದರು. ಪ್ಯಾನ್ ಕಾರ್ಡ್ ಜೋಡಣೆಯ ಕಾರಣಕ್ಕಾಗಿ ಕಟ್ಟಿದ ದಂಡ ಆದಾಯ ತೆರಿಗೆ ಇಲಾಖೆಗೆ ಸಂದಾಯವಾಗಿದ್ದು ಕಟ್ಟಿದವರನ್ನೆಲ್ಲ ಆದಾಯ ತೆರಿಗೆದಾರರೆಂದು ಪರಿಗಣಿಸಿದ ಮೂರ್ಖತನದ ಕೆಲಸವೀಗ ಬಯಲಿಗೆ ಬಂದಿದೆ.

ಈಗ‌ ಗಾಯದ ಮೇಲೆ ಬರೆ ಎಳೆದಂತೆ ಬಿ.ಪಿ.ಎಲ್ ಕಾರ್ಡ್‌ಗಳನ್ನ ರದ್ದುಪಡಿಸಲಾಗಿದೆ ಎಂದು ವರದಿಯಾಗಿದೆ. ಇದು ಖಂಡನೀಯ.

ಮೂಲದಲ್ಲಿ ಕೇಂದ್ರದ ಬಿ.ಜೆ.ಪಿ.ಸರಕಾರ ತೆಗೆದುಕೊಂಡ ಜನವಿರೋಧಿ‌ ಕ್ರಮವೇ ಅತ್ಯಂತ ಅಮಾನವೀಯವಾಗಿದ್ದುದಕ್ಕೆ ಈಗ ಬಿ.ಪಿ.ಎಲ್ ಕಾರ್ಡ್ ರದ್ದು ಮಾಡುವ ಮೂಲಕ ಕರ್ನಾಟಕ ರಾಜ್ಯ ಸರಕಾರ ಗಾಯಕ್ಕೆ ಇನ್ನಷ್ಟು ಉಪ್ಪು ಸುರಿದಿದೆ.

ಇದನ್ನು ಓದಿ : ಬಿಎಂಟಿಸಿ ಚಕ್ರದ ಅಡಿ ಸಿಲುಕಿ ಬೈಕ್ ಸವಾರ ಸಾವು

ಚುನಾವಣೆಯಲ್ಲಿ ಕೊಟ್ಟ ಗ್ಯಾರಂಟಿಗಳ ಭರವಸೆಗಳನ್ನು ಈಡೇರಿಸಿದ್ದೇವೆ ಎಂದು ಹೇಳಿಕೊಳ್ಳುತ್ತಿರುವ ಸರಕಾರ ಈಗ ಹಿತ್ತಿಲ ಬಾಗಿಲಿಂದ ಕಿತ್ತು ಕೊಳ್ಳುವ ಆದೇಶವನ್ನು ನೀಡುತ್ತಿದೆ.
ಬಿ.ಪಿ.ಎಲ್ ಕಾರ್ಡ್ ಇಲ್ಲದಿದ್ದರೆ ಸರಕಾರದ ಯಾವ ಯೋಜನೆಗಳ ಪ್ರಯೋಜನವನ್ನೂ ಪಡೆಯಲಾಗುವುದಿಲ್ಲ.

ತಕ್ಷಣದಲ್ಲೇ ಈ ಆದೇಶವನ್ನು ವಾಪಸ್ ಪಡೆದು ಈ ತಿಂಗಳಿಂದಲೇ 1, 06 152 ಬಿಪಿಲ್ ಕಾರ್ಡ್ ದಾರರಿಗೆ ರೇಷನ್ ವಿತರಣೆ ಮಾಡಬೇಕು ಮತ್ತು ಅವರಿಗೆ ಅರ್ಹ ಎಲ್ಲ ಸೌಲಭ್ಯಗಳನ್ನು ಒದಗಿಸಬೇಕೆಂದು ಅಖಿಲ ಭಾರತ‌ ಜನವಾದಿ ಮಹಿಳಾ ಸಂಘಟನೆ ಆಗ್ರಹಿಸುತ್ತದೆ.

ರಾಜ್ಯದಲ್ಲಿ ಬರಗಾಲದ ಬೇಗೆಯಿಂದ ಬಡ ಜನರು ತತ್ತರಿಸುತ್ತಿರುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ಬಿ.ಪಿ.ಎಲ್.ಕಾರ್ಡ್ ನಲ್ಲಿ ನೀಡುತ್ತಿದ್ದ ಪಡಿತರದಿಂದ ಲಕ್ಷಾಂತರ ಕುಟುಂಬಗಳು ಹೊಟ್ಟೆಯ ಹಸಿವನ್ನು ನೀಗಿಸಿಕೊಳ್ಳುತ್ತಿದ್ದರು.

ಬಿ.ಪಿ. ಎಲ್. ಕಾರ್ಡ್ ರದ್ದಾಗಿರುವ ಕಾರಣ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿಲ್ಲ.

ಕೇಂದ್ರ ದ ಬಿ.ಜೆ.ಪಿ.ಸರಕಾರದ ಜನವಿರೋಧೀ ಧೋರಣೆಯಿಂದ ಆದಾಯವೇ ಇಲ್ಲದಿರುವವರೂ ಆದಾಯ ತೆರಿಗೆ ಪಾವತಿದಾರರಾಗಿ ಪರಿಗಣಿಸಲ್ಪಟ್ಟ ನಗೆಪಾಟಲು ಸ್ಥಿತಿ ಉಂಟಾಗಿದೆ.

ಈಗ ಸಾವಿರಾರು ಜನರು ತಾವು ತೆರಿಗೆ ಪಾವತಿದಾರರಲ್ಲ ಎಂದು ತೆರಿಗೆ ಇಲಾಖೆಯಿಂದಎನ್. ಒ. ಸಿ. ತರಲು ಕೇಳುತ್ತಿದ್ದು ಅದು ಸುಲಭದ ಕೆಲಸವಲ್ಲವಾಗಿರುವುದರಿಂದ ಜನಸಾಮಾನ್ಯರು ಅಲೆದಾಡುವಂತಾಗಿದೆ. ರೇಷನ್ ಇಲ್ಲ, ಚಿಕಿತ್ಸೆಗೆ ಅವಕಾಶವಿಲ್ಲ ಪರದಾಡುತ್ತಿದ್ದಾರೆ.

ಹಾಗಾಗಿ ಕೂಡಲೇ ರಾಜ್ಯ ಸರಕಾರ ಈ ಕೆಳಗಿನ ಅಂಶಗಳನ್ನು ಜಾರಿ ಮಾಡಲು ಮುಂದಾಗಬೇಕು ಎಂದು ಜನವಾದಿ ಮಹಿಳಾ ಸಂಘಟನೆ ಅಗ್ರಹಿಸಿದೆ.

1. ತತ್ ಕ್ಷಣ ರಾಜ್ಯ ಸರಕಾರ ಮಧ್ಯಪ್ರವೇಶ ಮಾಡಬೇಕು.
2. ಯಾವುದೇ ಪೂರ್ವ ಷರತ್ತುಗಳಿಲ್ಲದೇ ಬಿ.ಪಿ.ಎಲ್ ಕಾರ್ಡ್ ದಾರರಿಗೆ ರೇಷನ್, ಆಸ್ಪತ್ರೆ ಚಿಕಿತ್ಸೆ ಮತ್ತಿತರ ಸೌಲಭ್ಯಗಳನ್ನು ಒದಗಿಸಬೇಕು.
3. 1000/ ರೂಪಾಯಿ ಸಂದಾಯ ಮಾಡಿದವರ್ಯಾರೂ ಆದಾಯ ತೆರಿಗೆದಾರರಲ್ಲ ಎಂದು ಪ್ರಕಟಣೆ ಹೊರಡಿಸಬೇಕು.
4. ಇಂತಹ ಅಸಮಂಜಸ ಆದೇಶಕ್ಕೆ ಕಾರಣರಾದವರ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕು.
5. ಸಾರ್ವಜನಿಕ ಆರೋಗ್ಯ ರಂಗವನ್ನು ಸಾರ್ವತ್ರಿಕರಣಗೊಳಿಸಬೇಕು.ಯಾರೊಬ್ಬರು ರೇಷನ್ ಕಾರ್ಡ್ಇಲ್ಲವೆಂದು ಚಿಕಿತ್ಸೆಗಳಿಂದ ನಿರಾಕರಣೆಗೆ ಒಳಗಾಗದಂತೆ ರಾಜ್ಯ ಸರ್ಕಾರ ಕ್ರಮಕೈಗೊಳ್ಳಬೇಕು.

 

ಇದನ್ನು ನೋಡಿ : ಜೀವ ತೆಗೆದವನು ತಾನೂ ಸತ್ತ…ಸಿಕ್ಕೀತೆ ನ್ಯಾಯ…? – ಕೆ.ಎಸ್ ವಿಮಲಾ Janashakthi Media

Donate Janashakthi Media

Leave a Reply

Your email address will not be published. Required fields are marked *