ಬೆಂಗಳೂರು: ಹಾಲಿನ ದರ ಪ್ರತಿ ಲೀಟರ್ ಗೆ 2 ರಿಂದ 3 ರೂ. ಏರಿಕೆ ಮಾಡಲು ಕೆಎಂಎಫ್ ಚಿಂತನೆ ನಡೆಸುತ್ತಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಾಮಾನ್ಯ ಜನತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವಾಗಲೇ, ಹಾಲಿನ ದರ ಏರಿಕೆಯಿಂದ ಮತ್ತಷ್ಟು ಹೊರೆ ಬೀಳಲಿದೆ. ಕೋವಿಡ್ ಸಾಂಕ್ರಾಮಿಕತೆ ಆರ್ಥಿಕ ಸಂಕಷ್ಟದಿಂದ ಮತ್ತೆ ಹೊರಬರಲಾಗದ ಸ್ಥಿತಿಯಲ್ಲಿರುವ ಜನರಿಗೆ ಬೆಲೆ ಏರಿಕೆಯ ಬಿಸಿ ತಟ್ಟಲಿದೆ.
ಕರ್ನಾಟಕ ಹಾಲು ಒಕ್ಕೂಟದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ದರ ಏರಿಕೆ ಬಗ್ಗೆ ಪ್ರಸ್ತಾಪ ಮುಂದಿಡಲಾಗಿದೆ. ಹಾಲಿನ ದರವನ್ನು 2 ರಿಂದ 3 ರೂ.ವರೆಗೆ ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ. ಒಕ್ಕೂಟಗಳ ಸಭೆ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯು ಜೊತೆ ಚರ್ಚಿಸುವುದಾಗಿ ಹೇಳಿದ್ದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದರೆ, ನಂದಿನಿ ಹಾಲಿನ ದರ ರಾಜ್ಯದಲ್ಲಿ ಅತಿ ಕಡಿಮೆ ಇದೆ. ಪ್ರತಿ ಲೀಟರ್ ಗೆ 3 ರೂ. ದರ ಏರಿಕೆ ಮಾಡುವಂತೆ 14 ಹಾಲು ಒಕ್ಕೂಟಗಳಿಂದ ಮನವಿ ಮಾಡಿದ್ದಾರೆ.
ನಿರ್ವಹಣೆ, ಉತ್ಪಾದನಾ ವೆಚ್ಚ, ನೌಕರರ ಸಂಬಳ ಸೇರಿದಂತೆ ಹಲವು ಕಾರಣಗಳನ್ನು ನೀಡಿ ಬೆಲೆ ಏರಿಕೆಗೆ ಪ್ರಸ್ತಾಪ ಸಲ್ಲಿಸಲಾಗಿದೆ. ಈ ಹಿನ್ನಲೆ, ಹಾಲಿನ ದರ ಏರಿಕೆ ಮಾಡುವ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ, ದರ ಪರಿಷ್ಕರಣೆ ಆಗಲಿದೆ.
ರಾಜ್ಯದಲ್ಲಿ ಕಳೆದ 3 ವರ್ಷಗಳಿಂದ ಹಾಲಿನ ದರ ನಿರಂತರವಾಗಿ ಏರಿಕೆಯಾಗುತ್ತಿದೆ. 2019ರಲ್ಲಿ 3 ಬಾರಿ ಹಾಲಿನ ದರ ಏರಿಕೆ ಮಾಡಲಾಗಿತ್ತು. ಮೊದಲು 2019ರ ಫೆಬ್ರವರಿಯಲ್ಲಿ ₹1.50, ಆಗಸ್ಟ್‌ನಲ್ಲಿ ₹1.50 ಏರಿಕೆ ಹಾಗೂ ನವೆಂಬರ್‌ನಲ್ಲಿ 3ನೇ ಬಾರಿಗೆ 1 ರೂಪಾಯಿ ಏರಿಕೆ ಮಾಡಲಾಗಿತ್ತು. ಬಳಿಕ 2020ರಲ್ಲಿ 1 ರೂಪಾಯಿ 50 ಪೈಸ್ ಏರಿಕೆ ಮಾಡಲಾಗಿತ್ತು. 2021ರ ಫೆಬ್ರವರಿಯಲ್ಲಿ ಹಾಲಿನ ದರ ₹2 ಏರಿಕೆ ಮಾಡಲಾಗಿತ್ತು. ಈಗ ಮತ್ತೆ ಬೆಲೆ ಏರಿಕೆಗೆ ಕೆಎಂಎಫ್ ಮುಂದಾಗಿದೆ.