ಬೆಂಗಳೂರು: ಇದೇ ಶನಿವಾರ(ಸೆಪ್ಟಂಬರ್ 10)ದಂದು ರಾಜ್ಯದ ಬಿಜೆಪಿ ಸರ್ಕಾರ ಹಮ್ಮಿಕೊಂಡಿರುವ ಜನಸ್ಪಂದನ ಕಾರ್ಯಕ್ರಮ ದೊಡ್ಡಬಳ್ಳಾಪುರದಲ್ಲಿ ನಡೆಯಲಿದೆ. ಕಾರ್ಯಕ್ರಮಕ್ಕೆ ಯಾವುದೇ ರೀತಿಯಲ್ಲಿ ಭಂಗ ಬರದಿರಲೆಂದು ಮುಖ್ಯ ಸಮಾರಂಭದ ವೇದಿಕೆ ಮೇಲೆ ಇಂದು ಮಹಾಗಣಪತಿ ಹೋಮ ನಡೆದಿದೆ.
ಕಾರ್ಯಕ್ರಮದ ಉಸ್ತುವಾರಿ ವಹಿಸಿಕೊಂಡಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಈ ಕಾರ್ಯದಲ್ಲಿ ಭಾಗಿದ್ದರು. ಅಲ್ಲದೆ, ತಲಾ ಒಬ್ಬ ಬ್ರಹ್ಮವರ್ಣಿ, ಆಚಾರ್ಯ ವರ್ಣಿ ನೇತೃತ್ವದಲ್ಲಿ ಎಂಟು ಜನ ಋತ್ವಿಜರು ಹೋಮ ನಿರ್ವಹಣೆಗೆ ನೆರವಾಗಿದ್ದಾರೆ.
ರಾಜ್ಯದ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅಧಿಕಾರ ವಹಿಸಿಕೊಂಡು ಒಂದು ವರ್ಷವಾದ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ವಾರ್ಷಿಕ ಸಮಾರಂಭವನ್ನು ಆಯೋಜಿಸುತ್ತು. ನಿಗದಿಯಂತೆ ಈಗಾಗಲೇ ಕಾರ್ಯಕ್ರಮ ನಡೆದಿರಬೇಕಾಗಿತ್ತು. ಆದರೆ, ಹಲವು ಕಾರಣಗಳಿಂದಾಗಿ ನಿಗದಿತ ದಿನಾಂಕದಂದು ಕಾರ್ಯಕ್ರಮ ನಡೆಯಲಿಲ್ಲ.
ಜುಲೈ 28ರಂದು ಮೊದಲಿಗೆ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ, ಬಿಜೆಪಿ ಯುವ ಪ್ರವೀಣ್ ನೆಟ್ಟಾರು ಸಾವಿನ ಹಿನ್ನೆಲೆಯಲ್ಲಿ ಕಾರ್ಯಕ್ರಮ ಮುಂದೂಡಿಕೆಯಾಯಿತು. ನಂತರ ಬಯಲುಸೀಮೆ ಕಾರ್ಯಕರ್ತರು, ಮುಖಂಡರ ಒತ್ತಾಸೆ ಮೇರೆಗೆ ಸೆಪ್ಟಂಬರ್ 8ರಂದು ಸಮಾವೇಶ ಆಯೋಜಿಸಲು ಒಪ್ಪಿಗೆ ನೀಡಲಾಗಿತ್ತು. ಎಲ್ಲ ಸಿದ್ಧಗೊಂಡಿದ್ದವು. ಆದರೆ ಸೆಪ್ಟಂಬರ್ 6ರಂದು ಸಚಿವ ಉಮೇಶ್ ಕತ್ತಿ ನಿಧನದಿಂದ ಎರಡನೇ ಬಾರಿ ಮುಂದೂಡಿಕೆಯಾಯಿತು.
ಈ ನಡುವೆ ಆಗಸ್ಟ್ 28ರಂದು ಕಾರ್ಯಕ್ರಮ ನಡೆಸಲು ತೀರ್ಮಾನವಾಗಿದ್ದರೂ ಬಿಜೆಪಿ ಕೇಂದ್ರ ವರಿಷ್ಠರು ಸೆಪ್ಟಂಬರ್ 8ಕ್ಕೆ ಅಸ್ತು ಎಂದರು. ಸಚಿವ ಉಮೇಶ್ ಕತ್ತಿ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ಸೆಪ್ಟಂಬರ್ 11ಕ್ಕೆ ಮುಂದೂಡಿಕೆಯಾಯಿತು. ಆದರೆ ಸೆಪ್ಟಂಬರ್ 11ರಿಂದ ಪಿತೃಪಕ್ಷ ಆರಂಭವಾಗಲಿದೆ. ಹೀಗಾಗಿ ಈ ದಿನದ ಮುಂಚಿತವಾಗಿ ಅಂದರೆ, ಸೆಪ್ಟಂಬರ್ 10ರಂದೇ ಕಾರ್ಯಕ್ರಮ ಮಾಡುವುದೆಂದು ನಿಗದಿಯಾಗಿ ಭಾನುವಾರದ ಬದಲಿಗೆ ಶನಿವಾರವೇ ಕಾರ್ಯಕ್ರಮ ನಡೆಯುತ್ತಿದ್ದು, ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ.
ಇದೀಗ ಕಾರ್ಯಕ್ರಮದ ಹೆಸರನ್ನು ಸಹ ಬದಲಾವಣೆ ಮಾಡಲಾಗಿದೆ. ಈ ಹಿಂದೆ ‘ಬಿಜೆಪಿ ಜನೋತ್ಸವ’ ಹೆಸರಿನಲ್ಲಿ ಸಾಧನಾ ಸಮಾವೇಶ ನಡೆಸಲು ಸರ್ಕಾರ ಮುಂದಾಗಿತ್ತು. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಪ್ರವಾಹ ಪರಿಸ್ಥಿತಿ ತಲೆದೋರಿದ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಹೆಸರನ್ನು ಜನೋತ್ಸವದ ಬದಲು, ಜನಸ್ಪಂದನ ಎಂದು ಬದಲಿಸಿದ ಸರ್ಕಾರ ತೀರ್ಮಾನಿಸಿತು.
ಒಂದಿಲ್ಲೊಂದು ಕಾರಣದಿಂದಾಗಿ ಪದೇಪದೆ ಮುಂದಕ್ಕೆ ಹೋದ ಹಿನ್ನೆಲೆಯಲ್ಲಿ ಮತ್ತೆ ವಿಘ್ನ ಉಂಟಾಗದಿರಲೆಂದು ಮಹಾ ಗಣಪತಿ ಹೋಮ ನಡೆಸಲಾಯಿತು ಎಂದು ಮೂಲಗಳು ತಿಳಿಸಿವೆ.
ಕೋಟ್ಯಂತರ ರೂಪಾಯಿ ನಷ್ಟ
ಎರಡು ಬಾರಿ ಜನೋತ್ಸವ ಕಾರ್ಯಕ್ರಮ ಮುಂದೂಡಿಕೆಯಿಂದಾಗಿ ಎರಡೂ ಬಾರಿಯೂ ಉತ್ಸವಕ್ಕಾಗಿ ಊಟೋಪಚಾರ ಸಿದ್ಧಪಡಿಸಿಕೊಂಡಿದ್ದರಿಂದ ಕೋಟ್ಯಂತರ ರೂಪಾಯಿ ನಷ್ಟವಾಯಿತು. ಸೆಪ್ಟಂಬರ್ 8ರಂದು ನಿಗದಿಯಾಗಿದ ಜನೋತ್ಸವ ಮುಂದೂಡಿಕೆಯಿಂದ ₹ 1.5 ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಅಂದಿನ ಕಾರ್ಯಕ್ರಮಕ್ಕೆ ಸೆಪ್ಟಂಬರ್ 7ರ ಮಧ್ಯಾಹ್ನ 1 ಗಂಟೆಯವರೆಗೂ ಜನೋತ್ಸವಕ್ಕಾಗಿ ಅಗತ್ಯ ಸಿದ್ಧತೆ ನಡೆದಿತ್ತು. ಬಂದೋಬಸ್ತ್ಗಾಗಿ ಸುಮಾರು 2,000 ಪೊಲೀಸ್ ಸಿಬ್ಬಂದಿಯೂ ದೊಡ್ಡಬಳ್ಳಾಪುರಕ್ಕೆ ತಲುಪಿದ್ದರು.
ಊಟಕ್ಕಾಗಿ ಹಿಂದಿನ ದಿನದಿಂದಲೇ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿತ್ತು. ಇವೆಲ್ಲವೂ ವ್ಯರ್ಥವಾದವು. ಕಳೆದ ಬಾರಿ ಜನೋತ್ಸವ ಮುಂದೂಡಿದಾಗಲೂ ಸಿದ್ಧಪಡಿಸಿಟ್ಟಿದ್ದ ಅಪಾರ ಪ್ರಮಾಣದ ಅಡುಗೆ ಹಾಳಾಗಿತ್ತು.
ರಸ್ತೆ ಸವಾರರಿಗೆ ತೊಂದರೆ…
ಜನಸ್ಪಂದನ ಕಾರ್ಯಕ್ರಮ ನಡೆಯುವ ಸ್ಥಳದಿಂದ ಬೆಂಗಳೂರಿನ ಯಲಹಂಕದವರೆಗೆ ಹಾಗೂ ದೇವನಹಳ್ಳಿ ವಿಮಾನ ನಿಲ್ದಾಣದಿಂದ ಕಾರ್ಯಕ್ರಮದ ಸ್ಥಳದವರೆಗೂ ರಸ್ತೆಯ ಎರಡೂ ಬದಿಗಳಲ್ಲಿ ಬೃಹತ್ ಬ್ಯಾನರ್ ಗಳನ್ನು ಕಟ್ಟಲಾಗಿದೆ. ಬ್ಯಾನರ್ ಹಾಗೂ ಬಿಜೆಪಿ ಬಾವುಟ ಕಟ್ಟುವುದಕ್ಕಾಗಿಯೇ ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗಿದೆ. ಊರಿನ ಹೆಸರು ಸೂಚಿಸುವ ಹಾಗೂ ಟ್ರಾಫಿಕ್ ನಿರ್ವಹಣೆಗೆ ಅಳವಡಿಸಿರುವ ಬಹುತೇಕ ಫಲಕಗಳ ಮೇಲೆ ಬಿಜೆಪಿ ಬ್ಯಾನರ್ ಗಳು ರಾರಾಜಿಸುತ್ತಿವೆ. ಹೆಚ್ಚು ಟ್ರಾಫಿಕ್ ಇರುವ ಸ್ಥಳಗಳಲ್ಲೂ ಬ್ಯಾನರ್ ಗಳು ಚಾಚಿಕೊಂಡಂತೆ ಅಡ್ಡಾದಿಡ್ಡಿಯಾಗಿ ಅಳವಡಿಸಿರುವ ಅವೈಜ್ಞಾನಿಕತೆಯಿಂದಾಗಿ ಅಪಘಾತಗಳಿಗೆ ಕಾರಣವಾಗಬಹುದು ಎಂಬ ಆತಂಕವೂ ವ್ಯಕ್ತವಾಗಿದೆ.