ರಾಷ್ಟ್ರಗಳನ್ನು ನಿರ್ಮಿಸುವವರು ರಾಜಕಾರಣಿಗಳಲ್ಲ, ಕಲಾವಿದರು ಮತ್ತು ಕವಿಗಳು – ಡಾ. ಮೂಡ್ನಾಕೂಡು ಚಿನ್ನಸ್ವಾಮಿ

ಬೆಂಗಳೂರು: ರಾಷ್ಟ್ರಗಳನ್ನು ನಿರ್ಮಿಸುವವರು ರಾಜಕಾರಣಿಗಳಲ್ಲ, ಕಲಾವಿದರು ಮತ್ತು ಕವಿಗಳು ಎಂದು  ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಹೇಳಿದರು.

ಅವರು, ನಗರದ ಕೆ.ಆರ್.‌ ವೃತ್ತದಲ್ಲಿರುವ ಅಲುಮ್ನಿ ಅಸೋಸಿಯೇಷನ್‌ ಸಭಾಂಗಣದ ಪ್ರಧಾನ ವೇದಿಕೆಯಾದ ಚಂಪಾ ವೇದಿಕೆಯಲ್ಲಿ ಜನಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತ, ನಾವು ಇಂದು ಸ್ವಾತಂತ್ರ್ಯೋತ್ತರ ಭಾರತದಲ್ಲಿ ಹಿಂದೆಂದೂ ಕಾಣದ ದುರಿತಕಾಲವನ್ನು ಎದುರಿಸುತ್ತಿದ್ದೇವೆ. ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ಬಿಕ್ಕಟ್ಟುಗಳು ಉಮ್ಮಳಿಸಿ ಏಳುತ್ತಿವೆ. ಇದಕ್ಕೆ ಕಾರಣಗಳು ಸ್ಪಷ್ಟವಾಗಿವೆ. ಕನ್ನಡ ಸಾಹಿತ್ಯ ಪರಿಷತ್ತು ಎಲ್ಲಾ ಕನ್ನಡಿಗರ ಪ್ರಾನಿಧಿಕ ಸಂಸ್ಥೆ. ಎಲ್ಲರ ಆಶೋತ್ತರಗಳಿಗೂ ಪೂರ್ವಗ್ರಹಗಳಿಂದ ಮುಕ್ತವಾಗಿ, ಸಮಾನವಾಗಿ ಸ್ಪಂದಿಸಬೇಕಾದ ಸಂಸ್ಥೆ. ದುರದೃಷ್ಟವಶಾತ್‌ ಪ್ರಸ್ತುತ ಅವಧಿಯ ಅಧ್ಯಕ್ಷರ ಮೊದಲ ಸಮ್ಮೇಳನದಲ್ಲಿಯೇ ಅತೃಪ್ತಿ ಕಾಣಿಸಿಕೊಂಡಿದೆ. ಸಾಹಿತ್ಯವೆಂದರೆ, ಜನ, ಜನರ ಬದುಕಿನ ಪ್ರತಿಫಲನ. ಜನರ ಬದುಕಿಗೆ ಸಂಬಂಧಿಸಿದ ಕುಟುಂಬ, ಸಮಾಜ, ದೇಶ, ಭಾಷೆ, ನೆಲ, ಜಲ, ಇತಿಹಾಸ, ಧರ್ಮ, ಪರಂಪರೆ ಇವೆಲ್ಲವೂ ರೂಪುಗೊಳ್ಳುವುದು ಸಾಹಿತ್ಯದ ಮುಖಾಂತರ. ಪುಸ್ತಕಗಳೆಂದರೆ ಆಯಾ ಕಾಲಘಟ್ಟದಲ್ಲಿ ಪ್ರಾಝ್ಞಾರಿಂದ ನಿರ್ಮಿಸಲ್ಪಟ್ಟ ಅಕ್ಷರ ಸೌಧಗಳು. ಸಾರ್ವಜನಿಕ ಮನ್ನಣೆಯೇ ಅವುಗಳಿಗೆ ಅಧಿಕೃತ ಮುದ್ರೆ.

ಸಾಹಿತ್ಯ ಪರಿಷತ್ತು ಹಳಿ ತಪ್ಪಿದಾಗಲೆಲ್ಲಾ ಜನರೇ ಎಚ್ಚರಿಸುತ್ತಾ ಬಂದ ಪರಿಪಾಠವಿದೆ. ಇಂದು ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನದ ಆಹ್ವಾನ ಪತ್ರಿಕೆಯಲ್ಲಿ ಗಂಭೀರವಾದ ಲೋಪವೊಂದು ಎಲ್ಲರ ಕಣ್ಣಿಗೆ ರಾಚುವಂತಿದೆ. ಒಂದು ಪಂಥ ತಮ್ಮ ಸ್ವಾರ್ಥ ಸಾಧನೆಗೆ ಧರ್ಮವನ್ನು ಗುರಾಣಿಯಾಗಿಸಿಕೊಂಡು ಮುಗ್ಧ ಬಹುಜನರನ್ನು ಮರುಳುಮಾಡಿ ʻನಾವು ಮತ್ತು ಅವರುʼ ಎಂಬ ಸ್ಪಷ್ಟ ಗೆರೆ ಎಳೆದುಬಿಟ್ಟಿದೆ. ಆ ಪಂಥ ತನ್ನ‌ ಕಬಂಧ ಬಾಹುಗಳನ್ನು ಎಲ್ಲೆಡೆ ಚಾಚಿದೆ. ರಾಜಕೀಯವಾಗಿ ಅವರು ಮುಸಲ್ಮಾನರ ಪ್ರತ್ಯೇಕೀಕರಣವನ್ನು ಮಾಡುತ್ತಾ ಬಂದಿದ್ದಾರೆ. ಅದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಆದರೆ ಅಂತಹ ಒಂದು ಅಜೆಂಡಾ ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯಕ್ಕೆ ನುಸುಳಿರುವುದು ಅಘಾತಕಾರಿಯಾದದ್ದು. ಆದ್ದರಿಂದ ಈ ಪ್ರತಿರೋಧ ನ್ಯಾಯಸಮ್ಮತವಾದದ್ದು ಎಂದು ನಾನು ತಿಳಿಸುಕೊಂಡಿದ್ದೇನೆ ಎಂದರು.

ಭಾರತವೆಂದರೆ ವೈವಿಧ್ಯತೆಯ ಗೂಡ, ಧರ್ಮ, ಜಾತಿ, ಭಾಷೆ, ಬಣ್ಣ, ಆಹಾರ, ಉಡುಗೆ ತೊಡುಗೆಗಳು ಇವೆಲ್ಲವೂ ಬೇರೆ ಬೇರೆಯಾಗಿದ್ದು ಒಂದುಗೂಡಿದ ಜನವುಳ್ಳ ಭೂಪ್ರದೇಶ ಭಾರತ. ಸಂವಿಧಾನ ಕರ್ತೃಗಳು ಈ ನಾಡಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ದೃಷ್ಟಿಯಲ್ಲಿಟ್ಟುಕೊಂಡೇ ಸಂವಿಧಾನದ ಮೂಲಭೂತ ಆಶಯಗಳನ್ನು ಕಟ್ಟಿಕೊಟ್ಟಿದ್ದಾರೆ. ಜಾತಿಗ್ರಸ್ತ ಸಮಾಜದಲ್ಲಿ ಪ್ರಜಾಭುತ್ವ ನೆಲೆಗೊಳ್ಳಲು ಏನೆಲ್ಲ ಪರಿಕರಗಳು ಅಗತ್ಯವಿತ್ತೋ ಅವುಗಳನ್ನು ಸಂವಿಧಾನದಲ್ಲಿ ಸ್ಥಾಪಿಸಿದ್ದಾರೆ ಎಂದರು.

ಹಿಂದಿ, ಹಿಂದೂ, ಹಿಂದೂಸ್ಥಾನ್‌

ಒಂದು ಭಾಷೆ, ಒಂದು ಧರ್ಮ, ಒಂದು ರಾಷ್ಟ್ರದ ಪರಿಕಲ್ಪನೆಯನ್ನು ತೇಲಿಬಿಡಲಾಗಿದೆ. ಇದರ ಮಥಿಗಾರ್ಥ ಏನೆಂದರೆ ಹಿಂದಿ, ಹಿಂದೂ, ಹಿಂದೂಸ್ಥಾನ್‌. ಇವು ಪರ್ಷಿಯನ್‌ ಪದಗಳು ಎಂಬುದು ಬೇರೆ ಮಾತು. ಇದು ಭಾರತದಂತ ವೈವಿಧ್ಯತೆ ಇರುವ ದೇಶಕ್ಕೆ ಮಾರಕವಾದ ನಿಲುವು ಎಂದರು.

ತಮಿಳು, ಕನ್ನಡ, ತೆಲುಗು, ಒರಿಯಾ ಭಾಷೆಗಳು ಅಭಿಜಾತ ಭಾಷೆಗಳಾಗಿದ್ದು ಶಾಸ್ತ್ರೀಯ ಸ್ಥಾನಮಾನದ ಮನ್ನಣೆ ಪಡೆದಿರುವುದು ಇದಕ್ಕೆ ಸಾಕ್ಷಿಯಾಗಿದೆ. ಹಿಂದಿಯೇತರ ಭಾಷೆಗಳನ್ನು ಮಾತನಾಡುವವರ ಸಂಖ್ಯೆ 2011ರ ಜನಗಣತಿಯಂತೆ 69 ಕೋಟಿಯಷ್ಟಿದೆ. ಈ ಹಿನ್ನೆಲೆಯಲ್ಲಿ ಹಿಂದಿ ಹೇರಿಕೆ ಅಪ್ರಸ್ತುತ ಮತ್ತು ಅಸಂಜಸ ಎನಿಸಿಕೊಳ್ಳುತ್ತದೆ. ಬಹಳ ಮುಖ್ಯವಾಗಿ ಗಮನಿಸಬೇಕಾದ ಅಂಶವೇನೆಂದರೆ ಸಾಮಾಜಿಕವಾಗಿ, ಆರ್ಥಿಕವಾಗಿ, ಸಾಂಸ್ಕೃತಿಕವಾಗಿ, ಸಾಹಿತ್ಯಕವಾಗಿ ಮುನ್ನಡೆ ಸಾಧಿಸಿರುವ ದಕ್ಷಿಣದ ದ್ರಾವಿಡ ಜನಾಂಗ, ದ್ರಾವಿಡ ಸಂಸ್ಕೃತಿ, ದ್ರಾವಿಡ ಭಾಷೆಗಳ ಮೇಲೆ ಹಿಂದಿ ಹೇರಿಕೆ ಮಾರಣಾಂತಿಕ ಹೊಡೆತ ಎಂಬ ಸತ್ಯವನ್ನು ನಾವು ಮನಗಾಣಬೇಕಿದೆ ಎಂದು ತಿಳಿಸಿದರು.

ಜನಸಾಹಿತ್ಯ ಸಮ್ಮೇಳನದ ಮುಖ್ಯ ಅತಿಥಿಗಳಾಗಿ ಪ್ರೊ.ಎಸ್.ಜಾಫೆಟ್, ಪ್ರಕಾಶ್ ರಾಜ್, ಜಾಣಗೆರೆ ವೆಂಕಟರಾಮಯ್ಯ, ಚೆನ್ನಿ ಜನಾರ್ದನ್, ಅಗ್ನಿಶ್ರೀಧರ್, ಅಕ್ಕೈ ಪದ್ಮಶಾಲಿ, ವಡ್ಡಗೆರೆ ನಾಗರಾಜಯ್ಯ ಭಾಗವಹಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *